ಕಳೆದ ಒಂದು ದಶಕದಲ್ಲಿ ಶೇ. 30 ರಷ್ಟು ಕಡಿಮೆಯಾಗಿರುವ ಭಾರತದ ಶಸ್ತಾಸ್ತ್ರ ಆಮದು
2025ರ ವೇಳೆಗೆ 35 ಸಾವಿರ ಕೋಟಿ ಮೌಲ್ಯದ ರಕ್ಷಣಾ ರಫ್ತು ಗುರಿ ನೀತಿ ಅನುಸರಿಸಿದೆ ಭಾರತ
ಎಸ್-400 ಕ್ಷಿಪಣಿಗಾಗಿ ರಷ್ಯಾದೊಂದಿಗೆ 5 ಬಿಲಿಯನ್ ಯುಎಸ್ ಡಾಲರ್ ಮೊತ್ತಕ್ಕೆ ಸಹಿ ಹಾಕಿರುವ ಭಾರತ
ನವದೆಹಲಿ (ಮಾ.6): ರಷ್ಯಾ-ಉಕ್ರೇನ್ ಸಂಘರ್ಷವು (Russia and Ukraine War) ಜಗತ್ತು ಪ್ರಸ್ತುತ ಎದುರಿಸುತ್ತಿರುವ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ರಷ್ಯಾದೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಮೇಲೆ ನಿರ್ಬಂಧಗಳನ್ನು ವಿಧಿಸಲು ಅಥವಾ ಮಿತಿಗೊಳಿಸಲು ಅನೇಕ ದೇಶಗಳು ಮುಂದಾಗಿವೆ. ಇದರಿಂದಾಗಿ ಉಕ್ರೇನ್ ದೇಶದ ಮೇಲೆ ರಷ್ಯಾದ ಆಕ್ರಮಣವು ದೀರ್ಘಾವಧಿಯ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಅಂದಾಜಿಸಬಹುದಾಗಿದೆ. ಇನ್ನೊಂದೆಡೆ ಭಾರತದ ಪಾಲಿಗೂ ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘರ್ಷ ಸಂಕಷ್ಟ ಒಡ್ಡಿದೆ. ರಷ್ಯಾದ ಮೇಲೆ ಅನೇಕ ರಾಷ್ಟ್ರಗಳು ನಿರ್ಬಂಧ ವಿಧಿಸಿರುವ ಪರಿಣಾಮ, ಇದು ಭಾರತದ ರಕ್ಷಣಾ ಆಮದಿನ (Defence Imports) ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಗಳೇ ದಟ್ಟವಾಗಿವೆ.
ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ನೇರವಾಗಿ ಭಾರತಕ್ಕೆ ಸಂಬಂಧಪಡದೇ ವಿಚಾರವಾಗಿದ್ದರೂ, ರಕ್ಷಣಾ ಉಪಕರಣಗಳು, ಶಸ್ತ್ರಾಸ್ತ್ರಗಳ (Arms)ವಿಚಾರದಲ್ಲಿ ಹೆಚ್ಚಾಗಿ ರಷ್ಯಾ ಮೇಲೆ ಅವಲಂಬನೆಯಲ್ಲಿರುವ ಭಾರತ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಬಿಕ್ಕಟ್ಟು ರಕ್ಷಣಾ ಸಾಧನಗಳ ವಿತರಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಅಥವಾ ವಿಳಂಬವಾಗುವುದಿಲ್ಲ ಎಂದು ಭಾರತೀಯ ಮತ್ತು ರಷ್ಯಾದ ಅಧಿಕಾರಿಗಳು ಹೇಳಿದ್ದಾರೆ, ಆದರೆ, ರಷ್ಯಾದ ಮೇಲಿನ ನಿರ್ಬಂಧಗಳು ಮತ್ತು ಉಕ್ರೇನ್‌ನಲ್ಲಿ ಸುದೀರ್ಘ ಯುದ್ಧದ ಸಾಧ್ಯತೆಯ ಇರುವ ಕಾರಣ ಭಾರತದ ಕಳವಳ ಮುಂದುವರಿದಿದೆ.
ಇದರ ಬೆನ್ನಲ್ಲಿಯೇ ಭಾರತದ ಮೂರೂ ಸೇನಾಪಡೆಗಳು (Indian Army) ರಷ್ಯಾದಿಂದ ಬರಬೇಕಾಗಿರುವ ಯುದ್ಧ ಉಪಕರಣಗಳು, ಶಸ್ತ್ರಾಸ್ತ್ರಗಳ ಬಗ್ಗೆ ಮೌಲ್ಯಮಾಪವನ್ನೂ ಆರಂಭಿಸಿವೆ. ರಷ್ಯಾವನ್ನು ಹೊರತುಪಡಿಸಿ, ಮುಂಬರುವ ವರ್ಷಗಳಲ್ಲಿ ಹಲವಾರು ಇತರ ಪೂರೈಕೆದಾರರಿಂದ ಆಮದು ಮಾಡಿಕೊಂಡ ಶಸ್ತ್ರಾಸ್ತ್ರಗಳ ವಿತರಣೆಯ ನಿರೀಕ್ಷೆಯಲ್ಲಿ ಭಾರತವಿದೆ. ಕಳೆದ ದಶಕದಲ್ಲಿ, ಭಾರತದ ಶಸ್ತ್ರಾಸ್ತ್ರ ಆಮದು ಶೇಕಡಾ 30 ಕ್ಕಿಂತ ಕಡಿಮೆಯಾಗಿದೆ. ರಷ್ಯಾದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವುದು ಸೇರಿದಂತೆ ಇತರ ಹಲವಾರು ಕಾರಣಗಳು ಇದರ ಹಿಂದಿದೆ. ಹಾಗಿದ್ದರೂ ಇಂದಿಗೂ ದೇಶಕ್ಕೆ ಹೆಚ್ಚಿನ ರಕ್ಷಣಾ ಉಪಕರಣದ ಬಿಡಿಭಾಗಗಳನ್ನು ನೀಡುವುದರಲ್ಲಿ ರಷ್ಯಾವೇ ಮುಂದಿದೆ.
ಶಸ್ತ್ರಾಸ್ತ್ರ ಸಂಗ್ರಹಣೆ ಪ್ರಕ್ರಿಯೆಯ ಸಂಕೀರ್ಣತೆಯೊಂದಿಗೆ, ರಷ್ಯಾದ ಶಸ್ತ್ರಾಸ್ತ್ರಗಳ ಮೇಲಿನ ಅವಲಂಬನೆ ಕಡಿಮೆ ಮಾಡುವ ಪ್ರಯತ್ನಗಳ ಹಿನ್ನಡೆಯಲ್ಲಿ ಭಾರತೀಯ ಶಸ್ತ್ರಾಸ್ತ್ರ ಆಮದು ಕುಸಿತ ಕಂಡಿದೆ ಎಂದು ಅಂತಾರಾಷ್ಟ್ರೀಯ ಶಸ್ತಾಸ್ತ್ರ ವರ್ಗಾವಣೆಯ ಕುರಿತು ಸಿಪ್ರಿ (SIPRI) ಕಳೆದ ವರ್ಷ ನೀಡಿದ ವರದಿಯಲ್ಲಿ ತಿಳಿಸಿದೆ. ಆದಾಗ್ಯೂ, ರಷ್ಯಾದಿಂದ ಆಮದು ಮಾಡಿಕೊಳ್ಳುವ ಕಡಿಮೆ ಅವಲಂಬನೆಯ ಹೊರತಾಗಿಯೂ 2016 ಮತ್ತು 2020 ರ ನಡುವೆ ಭಾರತವು ರಷ್ಯಾದ ರಕ್ಷಣಾ ಸಾಧನಗಳ ಅತಿದೊಡ್ಡ ಖರೀದಿದಾರ ಎನಿಸಿಕೊಂಡಿದೆ.
Ukraine Crisis: ಹತ್ತು ದಿನಗಳ ಯುದ್ಧ, ಈವರೆಗಾದ ಯುದ್ಧದಲ್ಲಿ ರಷ್ಯಾಗೆ ಸಿಕ್ಕಿದ್ದೇನು?
ಡಿಸೆಂಬರ್ 2021 ರಲ್ಲಿ ಮೊದಲ 2+2 ಸಂವಾದದ ಸಮಯದಲ್ಲಿ ಭಾರತ ಮತ್ತು ರಷ್ಯಾ ಮಿಲಿಟರಿ ತಂತ್ರಜ್ಞಾನ ಸಹಕಾರ ಒಪ್ಪಂದ 2021-2031 ಗೆ ಸಹಿ ಹಾಕಿದವು. ಈ ಒಪ್ಪಂದವು ಮುಂದಿನ ದಶಕದಲ್ಲಿ ರಕ್ಷಣಾ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಮತ್ತು9 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಸೇನಾ ಉಪಕರಣಗಳ ಆರ್ಡರ್ ಅನ್ನೂ ಒಳಗೊಂಡಿದೆ. ಭಾರತವು ರಷ್ಯಾದೊಂದಿಗೆ ಮಾಡಿದ ಅತ್ಯಂತ ಮಹತ್ವದ ಮಿಲಿಟರಿ ಒಪ್ಪಂದಗಳಲ್ಲಿ ಒಂದಾಗಿರುವುದು ಎಸ್-400 (S-400) ಏರ್ ಡಿಫೆನ್ಸ್ ಸಿಸ್ಟಮ್. ವಾಯು ಕ್ಷಿಪಣಿ ವ್ಯವಸ್ಥೆಯ ಐದು ಘಟಕಗಳನ್ನು ಖರೀದಿಸಲು ಭಾರತವು ಅಕ್ಟೋಬರ್ 2018 ರಲ್ಲಿ ರಷ್ಯಾದೊಂದಿಗೆ 5 ಶತಕೋಟಿ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ. ಐದು ಘಟಕಗಳಲ್ಲಿ ಒಂದನ್ನು ಈಗಾಗಲೇ ಭಾರತೀಯ ವಾಯುಪಡೆಗೆ (ಐಎಎಫ್) ತಲುಪಿಸಲಾಗಿದೆ.
ರಷ್ಯಾ- ಉಕ್ರೇನ್ ಯುದ್ಧ ಎಫೆಕ್ಟ್, ಭಾರತದಲ್ಲಿ ಅಡುಗೆ ಎಣ್ಣೆ ಬೆಲೆ ಭಾರಿ ಏರಿಕೆ!
ಅದರೊಂದಿಗೆ ಫಿಲಿಪ್ಪಿನ್ಸ್ ದೇಶಕ್ಕೆ ಭಾರತ ಹಾಗೂ ರಷ್ಯಾ ಜಂಟಿಯಾಗಿ ನಿರ್ಮಾಣ ಮಾಡಿರುವ ಬ್ರಹ್ಮೋಸ್ ಕ್ಷಿಪಣಿಯ ರಫ್ತು ಆರ್ಡರ್, 6 ಲಕ್ಷ ಎಕೆ-203 ಅಸಾಲ್ಟ್ ರೈಫಲ್ ಒಪ್ಪಂದ, ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ, ನಾಲ್ಕು ಗ್ರಿಗೊರೊವಿಚ್ ವರ್ಗದ ಯುದ್ಧನೌಕೆಗಳು, 12 Su-30 MKI ಮತ್ತು 21 MiG 29 ಯುದ್ಧ ವಿಮಾನಗಳನ್ನು ಖರೀದಿ ಸೇರಿದಂತೆ ಇನ್ನೂ ಹಲವಾರು ಶಸ್ತಾಸ್ತ್ರ ಒಪ್ಪಂದಗಳನ್ನು ಭಾರತ ರಷ್ಯಾದೊಂದಿಗೆ ಹೊಂದಿದ್ದು ಪ್ರಸ್ತುತ ಪರಿಸ್ಥಿತಿಯು ಇದರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.