BSF ಕ್ಯಾಂಪ್‌ನಲ್ಲಿ ಯೋಧನಿಂದ ಗುಂಡಿನ ದಾಳಿ, ಐವರು ಸೈನಿಕರು ಬಲಿ, ಅನೇಕರಿಗೆ ಗಾಯ!

By Precilla Olivia DiasFirst Published Mar 6, 2022, 2:18 PM IST
Highlights

* ಪಂಜಾಬ್‌ನ ಅಮೃತಸರದಲ್ಲಿ ಶಾಕಿಂಗ್ ಘಟನೆ

* ಜೊತೆಗಿದ್ದ ಸೈನಿಕರಿಗೆ ಗುಂಡು ಹಾರಿಸಿ, ತನ್ನ ಮೇಲೂ ಫೈರಿಂಗ್ ನಡೆಸಿದ ಬಿಎಸ್‌ಎಫ್‌ ಯೋಧ

* ದಾಳಿಯಲ್ಲಿ ಒಟ್ಟು ಐವರು ಯೋಧರು ಬಲಿ, ಹಲವರಿಗೆ ಗಾಯ

ಚಂಡೀಗಢ(ಮಾ.06): ಪಂಜಾಬ್‌ನ ಅಮೃತಸರದಲ್ಲಿ ಶಾಕಿಂಗ್ ಘಟನೆಯೊಂದು ಬೆಳಕಿಗೆ ಬಂದಿದೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕೇಂದ್ರ ಕಚೇರಿಯಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ. ಶಿಬಿರದೊಳಗೆ ಬಿಎಸ್‌ಎಫ್ ಯೋಧ ಮನಬಂದಂತೆ ಗುಂಡು ಹಾರಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ಹಲವು ಯೋಧರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಖಾಸಾದಲ್ಲಿರುವ ಬಿಎಸ್‌ಎಫ್ ಕೇಂದ್ರ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಶಿಬಿರದಲ್ಲಿ ಬಿಎಸ್‌ಎಫ್ ಯೋಧನೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ಈ ವೇಳೆ ಸುತ್ತಲಿದ್ದ ಇತರ ಸೈನಿಕರಿಗೆ ಗಾಯಗಳಾಗಿವೆ. ಹೇಗೋ ಆಕ್ರೋಶಿತ ಕಾನ್‌ಸ್ಟೇಬಲ್‌ನನ್ನು ನಿಯಂತ್ರಿಸಲಘಾಇದೆ. ಬಳಿಕ ಗುಂಡು ತಗುಲಿದವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಕ್ಯಾಂಟಿನ್‌ನಲ್ಲಿ ಫೈರಿಂಗ್

144 ಬಿಎನ್ ಹೆಡ್ ಕ್ವಾರ್ಟರ್ಸ್‌ನ ಮೆಸ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಗುಂಡು ಹಾರಿಸಿದ ಜವಾನನ ಹೆಸರು ಸಿ. ಟಿ. ಸತ್ತಪ್ಪ ಎಸ್. ಗುಂಡಿನ ದಾಳಿಯ ವೇಳೆ ಯೋಧರು ಮೆಸ್‌ನಲ್ಲಿ ಆಹಾರ ಸೇವಿಸುತ್ತಿದ್ದರು.

ನ್ಯಾಯಾಲಯದ ವಿಚಾರಣೆಗೆ ಆದೇಶ

ಘಟನೆಯಲ್ಲಿ ಸಿ.ಟಿ.ಸತ್ತಪ್ಪ ಎಸ್ ಕೂಡ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗುಂಡಿನ ಘಟನೆಯ ಸತ್ಯಾಸತ್ಯತೆ ತಿಳಿಯಲು ಸೇನಾ ಅಧಿಕಾರಿಗಳು ನ್ಯಾಯಾಲಯದ ವಿಚಾರಣೆಗೆ ಆದೇಶಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಸೇನಾ ಅಧಿಕಾರಿಗಳು ಮತ್ತು ಪೊಲೀಸರು 

ಆಸ್ಪತ್ರೆಯಲ್ಲಿ, ಐವರು ಜವಾನರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಇದೇ ವೇಳೆ ಹತ್ತಕ್ಕೂ ಹೆಚ್ಚು ಸೈನಿಕರನ್ನು ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಯಿತು. ದಾಖಲಾದ ಯೋಧರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಹಿರಿಯ ಸೇನಾಧಿಕಾರಿಗಳೂ ಆಗಮಿಸಿದ್ದಾರೆ. ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಗಿದೆ.

click me!