ಸ್ಟಾಲಿನ್ ಮನವೊಲಿಸಲು ಚೆನ್ನೈಗೆ ಬಂದ ಸೋನಿಯಾ, ಖರ್ಗೆ, ರಾಹುಲ್; ನಿವಾಸದ ಮುಂದೆ Go Back Congress ಪೋಸ್ಟರ್!

Published : Nov 29, 2026, 05:02 PM IST
DMK vs India Block

ಸಾರಾಂಶ

ಕ್ಷೇತ್ರ ಮರುವಿಂಗಡಣೆ ಬಿಲ್ ವಿವಾದ. ಎಂ.ಕೆ. ಸ್ಟಾಲಿನ್ ಮನವೊಲಿಸಲು ಚೆನ್ನೈಗೆ ಬಂದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ. ಸಿಎಂ ನಿವಾಸದ ಮುಂದೆಯೇ ರಾರಾಜಿಸಿದ 'Go Back Congress' ಪೋಸ್ಟರ್‌ಗಳು. ತಮಿಳುನಾಡು ರಾಜಕೀಯದ ಸಂಪೂರ್ಣ ಹೈಡ್ರಾಮಾ ಇಲ್ಲಿದೆ.

ನಾಳೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡನೆಯಾಗಲಿರುವ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಸಂಬಂಧಿಸಿದಂತೆ ಚೆನ್ನೈನಲ್ಲಿ ಭಾರಿ ರಾಜಕೀಯ ಹೈಡ್ರಾಮಾ ನಡೆದಿದೆ. ಮಸೂದೆ ವಿರೋಧಿಸಲು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರ ಮನವೊಲಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಒಕ್ಕೂಟದ ದಿಗ್ಗಜರು ಚೆನ್ನೈಗೆ ಆಗಮಿಸುತ್ತಿದ್ದಂತೆಯೇ, ಸ್ಟಾಲಿನ್ ಅವರ ಚೆನ್ನೈ ನಿವಾಸದ ಎದುರು ಕಾಂಗ್ರೆಸ್ ಗೋ ಬ್ಯಾಕ್ ಪೋಸ್ಟರ್ ಮತ್ತು ಪ್ಲೇಕಾರ್ಡ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸಲಾಗಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಚೆನ್ನೈಗೆ ಬಂದಿಳಿದ 21 ವಿಪಕ್ಷ ನಾಯಕರ ದಂಡು!

ಸ್ಟಾಲಿನ್ ಅವರ ನಿರ್ಧಾರ ಬದಲಿಸಲು ದೆಹಲಿಯಿಂದ 21 ಇಂಡಿಯಾ ಒಕ್ಕೂಟದ ನಾಯಕರ ನಿಯೋಗ ಎರಡು ಚಾರ್ಟರ್ಡ್ ವಿಮಾನಗಳಲ್ಲಿ ಚೆನ್ನೈಗೆ ಬಂದಿಳಿದಿದೆ. ಈ ನಿಯೋಗದಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ, ಕಪಿಲ್ ಸಿಬಲ್, ಕೆ.ಸಿ. ವೇಣುಗೋಪಾಲ್ ಜೊತೆಗೆ ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತು ಕೇರಳದ ವಿಪಕ್ಷ ನಾಯಕ ವಿ.ಡಿ. ಸತೀಶನ್ ಕೂಡ ಇದ್ದಾರೆ. ಚೆನ್ನೈ ಭೇಟಿಯ ಬಳಿಕ ಇಂದು ಸಂಜೆ ಇದೇ ನಿಯೋಗ ಮುಂಬೈಗೆ ತೆರಳಿ, ಆಸ್ಪತ್ರೆಯಲ್ಲಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಲಿದೆ.

ಸ್ಟಾಲಿನ್ ನಿವಾಸದ ಮುಂದೆ ಗೋ ಬ್ಯಾಕ್‌ ಕಾಂಗ್ರೆಸ್‌ ಪ್ರತಿಭಟನೆ ಯಾಕೆ?

2026ರ ತಮಿಳುನಾಡು ವಿಧಾನಸಭಾ ಚುನಾವಣೆ ನಂತರ ದಶಕಗಳ ಮೈತ್ರಿ ಮುರಿದು ಕಾಂಗ್ರೆಸ್ ನಟ ವಿಜಯ್ ಅವರ ಪಕ್ಷಕ್ಕೆ ಬೆಂಬಲ ನೀಡಿತ್ತು. ಅಂದಿನಿಂದಲೂ ಡಿಎಂಕೆ ಕಾರ್ಯಕರ್ತರಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶವಿದೆ. ಇಂದು ರಾಹುಲ್ ಗಾಂಧಿ ಅವರು ಸ್ಟಾಲಿನ್ ಅವರನ್ನು ಸಹೋದರ ಎಂದು ಕರೆದು ಮಸೂದೆ ವಿರೋಧಿಸಲು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಡಿಎಂಕೆ ಯುವ ಘಟಕ ಮತ್ತು ಬೆಂಬಲಿಗರು ಸ್ಟಾಲಿನ್ ನಿವಾಸದ ಹೊರಗೆ ಜಮಾಯಿಸಿ, "ತಮಿಳುನಾಡಿಗೆ ದ್ರೋಹ ಬಗೆದ ಕಾಂಗ್ರೆಸ್ ವಾಪಸ್ ಹೋಗಲಿ" ಎಂದು ಘೋಷಣೆ ಕೂಗಿ ಪೋಸ್ಟರ್ ಪ್ರದರ್ಶಿಸಿದ್ದಾರೆ.

ಭೇಟಿಗೂ ಮುನ್ನವೇ 'ನಿರ್ಧಾರ ಬದಲಾಗಲ್ಲ' ಎಂದ ಸ್ಟಾಲಿನ್!

ವಿಪಕ್ಷ ನಾಯಕರು ಚೆನ್ನೈಗೆ ಬರುವ ಮುನ್ನವೇ ಟ್ವೀಟ್ ಮಾಡಿದ್ದ ಸ್ಟಾಲಿನ್, ಸಹೋದರ ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳು. ಆದರೆ ತಮಿಳುನಾಡು ಮತ್ತು ತಮಿಳರ ಹಿತಾಸಕ್ತಿಯೇ ನಮಗೆ ಮುಖ್ಯ. ಈ ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಇತಿಹಾಸ ನಮ್ಮನ್ನು ವೀರ ಕಟ್ಟಬೊಮ್ಮನ್‌ಗಳಾಗಿ ಗುರುತಿಸುತ್ತದೆಯೇ ಹೊರತು ದ್ರೋಹಿ ಎಟ್ಟಪ್ಪನ್‌ಗಳಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಬಲಕ್ಕೆ ಕಾರಣವನ್ನು ಹುಡುಕಿ ಹೊರಟರೆ, 1971ರ ಜನಗಣತಿಯ ಆಧಾರದ ಮೇಲೆ ತಮಿಳುನಾಡಿನ ಸ್ಥಾನಗಳ ಪಾಲನ್ನು (ಶೇ. 7.18) ಮುಂದಿನ 25 ವರ್ಷಗಳವರೆಗೆ (2051ರವರೆಗೆ) ಬದಲಾಯಿಸಬಾರದು ಎಂಬ ಡಿಎಂಕೆಯ ಬೇಡಿಕೆಯನ್ನು ಕೇಂದ್ರ ಸರ್ಕಾರ ಮಸೂದೆಯಲ್ಲಿ ಸೇರಿಸಿದೆ. ಇದರಿಂದ ತಮಿಳುನಾಡಿನ ಲೋಕಸಭಾ ಸ್ಥಾನಗಳು 39 ರಿಂದ 59ಕ್ಕೆ ಏರಲಿವೆ. ಆದ್ದರಿಂದ ಬೆಂಬಲ ವ್ಯಕ್ತಪಡಿಸಿದೆ ಎನ್ನುವುದು ಕೆಲ ಮೂಲಗಳಿಂದ ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರಾದೇಶಿಕ ಪಕ್ಷದ ತಾಕತ್ತು ತೋರಿಸಿದ್ರಾ ಸ್ಟಾಲಿನ್? ಅಂದು ಕ್ಯಾರೆ ಅನ್ನದ ಸೋನಿಯಾ, ರಾಹುಲ್, ಖರ್ಗೆ ಇಂದು ಮನೆ ಬಾಗಿಲಿಗೆ ಬಂದ್ರು!
ಭಾರಿ ವಿವಾದದ ಸುತ್ತ ಪಾಕಿಸ್ತಾನದ ವೆಬ್​ ಸೀರೀಸ್​: ಏನಿದೆ ಇದರಲ್ಲಿ? - ನಟಿ ಖುಷ್ಬು ಸುಂದರ್​ ಖಂಡನೆ