
ನವದೆಹಲಿ; ನವೆಂಬರ್ 30 ರಿಂದ ಡಿಸೆಂಬರ್ 4 ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಕುರಿತ ಸಂವಿಧಾನ (132ನೇ ತಿದ್ದುಪಡಿ) ಮಸೂದೆ 2026 ಮಂಡನೆಯಾಗುತ್ತಿದ್ದು, 20 ಬಂಡಾಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದರ ನಡೆ ತೀವ್ರ ಕುತೂಹಲ ಮೂಡಿಸಿದೆ. ಜೂನ್ 2026 ರಲ್ಲಿ ಪಕ್ಷ ತೊರೆದು ಎನ್ಸಿಪಿಯೊಂದಿಗೆ ವಿಲೀನಗೊಂಡಿರುವುದಾಗಿ ಹೇಳಿಕೊಂಡಿರುವ ಸುದೀಪ್ ಬಂಡೋಪಾಧ್ಯಾಯ ಮತ್ತು ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಈ ಬಣ, ಕೇಂದ್ರ ಸರ್ಕಾರದ ಮಸೂದೆಗೆ ಬೆಂಬಲ ಘೋಷಿಸಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಈ 20 ಸಂಸದರು ಪಕ್ಷದ ವಿಪ್ ಧಿಕ್ಕರಿಸಿ ಮಸೂದೆ ಪರ ಮತ ಚಲಾಯಿಸಿದ ಬಳಿಕ, ಸ್ಪೀಕರ್ ಓಂ ಬಿರ್ಲಾ ಅಥವಾ ನ್ಯಾಯಾಲಯದಿಂದ ಅನರ್ಹಗೊಂಡರೆ ಮಸೂದೆಯ ಫಲಿತಾಂಶಕ್ಕೆ ಧಕ್ಕೆಯಾಗುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ. ಸುಪ್ರೀಂ ಕೋರ್ಟ್ನ ಸುಭಾಷ್ ದೇಸಾಯಿ ತೀರ್ಪು ಮತ್ತು ಸಂಸದೀಯ ಕಾನೂನಿನ ಪ್ರಕಾರ, ಅನರ್ಹತೆಯ ಆದೇಶ ಪೂರ್ವಾನ್ವಯವಲ್ಲ, ಬದಲಾಗಿ ಭವಿಷ್ಯದ ದಿನಾಂಕದಿಂದ ಅನ್ವಯಿಸುತ್ತದೆ. ಆದ್ದರಿಂದ ಅನರ್ಹತೆ ಆದೇಶಕ್ಕೆ ಮುನ್ನ ಚಲಾಯಿಸಿದ ಮತಗಳು ಮಾನ್ಯವಾಗಿರುತ್ತವೆ. 2008 ರ ಲೋಕಸಭಾ ವಿಶ್ವಾಸ ಮತ, 1993 ರ ಅವಿಶ್ವಾಸ ನಿರ್ಣಯ, 2019 ರ ಕರ್ನಾಟಕ ಬಿಕ್ಕಟ್ಟು ಮತ್ತು 2022–23 ರ ಮಹಾರಾಷ್ಟ್ರ ಶಿವಸೇನಾ ಪ್ರಕರಣದಲ್ಲೂ ಇಂತಹ ಮತಗಳು ಅಮಾನ್ಯವಾಗಿಲ್ಲ.
ಟಿಎಂಸಿಯ 29 ಸಂಸದರಲ್ಲಿ 20 ಮಂದಿ ಇರೋದ್ರಿಂದ, ಮೂರನೇ ಎರಡರಷ್ಟು (2/3rd) ಸದಸ್ಯರು ಸೇರಿ ವಿಲೀನ ಆದ್ರೆ ಸದಸ್ಯತ್ವ ಕ್ಯಾನ್ಸಲ್ ಆಗಲ್ಲ ಅನ್ನೋ ನಿಯಮದ (ಹತ್ತನೇ ಅನುಸೂಚಿಯ ನಾಲ್ಕನೇ ಪ್ಯಾರಾ) ರಕ್ಷಣೆ ನಮಗಿದೆ ಅಂತ ಬಂಡಾಯ ಸಂಸದರು ನವೆಂಬರ್ 24 ರಂದು ಸ್ಪೀಕರ್ ನೋಟಿಸ್ಗೆ ಉತ್ತರ ಕೊಟ್ಟಿದ್ದಾರೆ. ಆದ್ರೆ ಸುಭಾಷ್ ದೇಸಾಯಿ ಕೇಸ್ ಪ್ರಕಾರ, ಬರೀ ಸದನದ ಸಂಖ್ಯೆ ಇದ್ರೆ ಸಾಲದು, ಮೂಲ ಪಕ್ಷದ ಮಟ್ಟದಲ್ಲೇ ವಿಲೀನ ಆಗಿದೆ ಅಂತ ಪ್ರೂವ್ ಮಾಡಬೇಕು. ಸದ್ಯಕ್ಕೆ ಸ್ಪೀಕರ್ ಇನ್ನೂ ಫೈನಲ್ ತೀರ್ಮಾನ ತಗೊಂಡಿಲ್ಲ, ಹಾಗಾಗಿ ಈ 20 ಸಂಸದರು ವೋಟ್ ಹಾಕೋಕೆ ಅರ್ಹರಾಗಿದ್ದಾರೆ ಎನ್ನಲಾಗಿದೆ.
ಲೋಕಸಭೆಯಲ್ಲಿ ಹಾಲಿ 540 ಸದಸ್ಯರಿದ್ದು, ಕಲ್ಯಾಣ್ ಬ್ಯಾನರ್ಜಿ ಅಮಾನತು ಜಾರಿಯಲ್ಲಿದ್ದರೆ ಸ್ಪೀಕರ್ ಸೇರಿ 538 ಮಂದಿ ಮತ ಚಲಾಯಿಸಬಹುದು; ಆಗ ಮೂರನೇ ಎರಡರಷ್ಟು ಬಹುಮತಕ್ಕೆ 359 ಮತಗಳು ಬೇಕಾಗುತ್ತವೆ. ಏಪ್ರಿಲ್ನಲ್ಲಿ 131ನೇ ತಿದ್ದುಪಡಿ ಮಸೂದೆ ಬಿದ್ದಿದ್ದರೂ, ಈ ಬಾರಿ ಎನ್ಡಿಎ ಬಲ ಸುಮಾರು 320 ಕ್ಕೆ ಏರಿದ್ದು, 20 ಬಂಡಾಯ ಸಂಸದರು ಮತ್ತು ಇತರ ಬೆಂಬಲದ ಲೆಕ್ಕಾಚಾರ ನಿರ್ಣಾಯಕವಾಗಿದೆ.
132ನೇ ಮಸೂದೆಯು 2027 ರ ಜನಗಣತಿಗೆ ಕಾಯದೆ, ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಸೀಟುಗಳನ್ನು ಏಕರೂಪವಾಗಿ ಶೇ. 50 ರಷ್ಟು ಹೆಚ್ಚಿಸಿ ತಕ್ಷಣವೇ ಶೇ. 33 ಮಹಿಳಾ ಮೀಸಲಾತಿ ಜಾರಿಗೆ ತರುವ ಗುರಿ ಹೊಂದಿದೆ; ಲೋಕಸಭಾ ಗರಿಷ್ಠ ಮಿತಿಯನ್ನು 850 ಕ್ಕೆ (ರಾಜ್ಯಗಳಿಗೆ 815, ಕೇಂದ್ರಾಡಳಿತ ಪ್ರದೇಶಗಳಿಗೆ 35) ಏರಿಸಿ, 2051 ರವರೆಗೆ ಸ್ಥಿರತೆ ಕಾಯ್ದುಕೊಳ್ಳುವ ಪ್ರಸ್ತಾವವಿದೆ. ಡಿಸೆಂಬರ್ 2 ರಿಂದ ರಾಜ್ಯಸಭೆಯಲ್ಲಿ ಮತದಾನ ನಡೆಯಲಿದ್ದು, ಅಲ್ಲಿ 164 ಮತಗಳ ಅಗತ್ಯವಿದೆ. ನಂತರ 368ನೇ ವಿಧಿಯ ಪ್ರಕಾರ ಕನಿಷ್ಠ 14 ರಾಜ್ಯಗಳ ವಿಧಾನಸಭೆಗಳ ಅನುಮೋದನೆ ಅಗತ್ಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ