ತಾಯಿ ಮಗನ ಬಲಿ ಪಡೆದ ತೆರೆದ ಚರಂಡಿ : ಮಗನ ಕೈ ಹಿಡಿದುಕೊಂಡ ಸ್ಥಿತಿಯಲ್ಲೇ ತಾಯಿ ಶವಪತ್ತೆ

By Anusha Kb  |  First Published Aug 2, 2024, 9:53 AM IST

ಮಳೆಯ ರೌದ್ರನರ್ತನಕ್ಕೆ ಉತ್ತರ ಭಾರತ ಸಂಪೂರ್ಣ ತತ್ತರಿಸಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿಯೂ ಅನೇಕ ಸಾವು ನೋವು ಸಂಭವಿಸಿದೆ. ಈ ಮಧ್ಯೆ ನಿನ್ನೆ ದೆಹಲಿಯಲ್ಲಿ ತೆರೆದ ಚರಂಡಿಯೊಂದಕ್ಕೆ ಬಿದ್ದು ತಾಯಿ ಮಗು ಸಾವನ್ನಪ್ಪಿದ್ದಾರೆ.


ನವದೆಹಲಿ:  ಮಳೆಯ ರೌದ್ರನರ್ತನಕ್ಕೆ ಉತ್ತರ ಭಾರತ ಸಂಪೂರ್ಣ ತತ್ತರಿಸಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿಯೂ ಅನೇಕ ಸಾವು ನೋವು ಸಂಭವಿಸಿದೆ. ಈ ಮಧ್ಯೆ ನಿನ್ನೆ ದೆಹಲಿಯಲ್ಲಿ ತೆರೆದ ಚರಂಡಿಯೊಂದಕ್ಕೆ ಬಿದ್ದು ತಾಯಿ ಮಗು ಸಾವನ್ನಪ್ಪಿದ್ದಾರೆ. ಘಟನೆ ನಡೆದು ಹಲವು ಗಂಟೆಗಳ ಬಳಿಕ ತಾಯಿ ಮಗನ ಶವ ಸಿಕ್ಕಿದ್ದು, ಈ ವೇಳೆ ಮಗನ ಕೈ ಹಿಡಿದುಕೊಂಡ ಸ್ಥಿತಿಯಲ್ಲಿ ತಾಯಿ ಶವ ಪತ್ತೆಯಾಗಿದ್ದು ನೋಡುಗರನ್ನು ಕಣ್ಣೀರುಗೆರೆಯುವಂತೆ ಮಾಡಿದೆ.

ಅವರಿಬ್ಬರಿಗೂ ಸಾಯುವ ವಯಸ್ಸಂತೂ ಅಲ್ಲ, ತನುಜಾ ಬಿಷ್ತ್ ಹೆಸರಿನ 23 ವರ್ಷದ ಗೃಹಿಣಿ ತಮ್ಮ 3 ವರ್ಷದ ಮಗ ಪ್ರಿಯಾಂಶು ಜೊತೆಗೆ ಈ ಮಳೆ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಗಾಜಿಪುರದಲ್ಲಿ ನಡೆಯುವ ವಾರದ  ಮಾರ್ಕೆಟ್‌ಗೆ ತರಕಾರಿ ತರಲು ತೆರಳಿದ್ದ ಈ ಅಮ್ಮ ಮಗ ವಾಪಸ್ ಬರುವ ವೇಳೆ ಮಳೆ ಧಾರಕಾರವಾಗಿ ಸುರಿಯಲು ಆರಂಭಿಸಿದೆ. ಇದರಿಂದ ರಸ್ತೆಗಳೆಲ್ಲಾ ತುಂಬಿ ಹೋಗಿದ್ದು, ತಾಯಿ ತನುಜಾ ತನ್ನ 3 ವರ್ಷದ ಮಗನೊಂದಿಗೆ ತೆರೆದ ಚರಂಡಿಗೆ ಬಿದ್ದಿದ್ದಾರೆ. ಘಟನೆ ನಡೆದ ಸ್ಥಳದಿಂದ 500 ಮೀಟರ್ ದೂರದಲ್ಲಿ ತಾಯಿ ಮಗನ ಶವ ಪತ್ತೆಯಾಗಿದೆ. ಈ ವೇಳೆ ತಾಯಿ ತನ್ನ ಕಂದನ ಕೈಹಿಡಿದುಕೊಂಡೆ ಇದ್ದಂತಹ ಸ್ಥಿತಿಯಲ್ಲಿ ಕಂಡು ಬಂದಿದ್ದು, ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸಿದೆ. 

Tap to resize

Latest Videos

ಮಮ್ಮಿ… 10 ನಿಮಿಷದಲ್ಲಿ ಬಂದೆ ಅಂತ ಮುಂದೆ ಹೋಗ್ತಿದ್ದಂತೆ ಸಾವು, ಒಣಹುಲ್ಲಿನಂತೆ ಮಳೆ ನೀರಿನಲ್ಲಿ ಮುಳುಗಿದ ಬಾಲಕ!

ರಕ್ಷಣಾ ಕಾರ್ಯಾಚರಣೆ ಕ್ಷಿಪ್ರವಾಗಿ ನಡೆದಿದ್ದರೆ ತಾಯಿ ಮಗನನ್ನು ರಕ್ಷಿಸಬಹುದಿತ್ತು ಎಂದು ಮೃತ ಮಹಿಳೆ ಹಾಗೂ ಮಗುವಿನ ಕುಟುಂಬದವರು ಅಳಲು ತೋಡಿಕೊಂಡಿದ್ದಾರೆ. ತನುಜಾ ಬಿಷ್ತ್ ಪತಿ ಗೋವಿಂದ್ ಸಿಂಗ್ ನೋಯ್ಡಾದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಘಟನೆ ನಡೆಯುವ ವೇಳೆ ಅವರು ಕೆಲಸಕ್ಕೆ ಹೋಗಿದ್ದರು.  ರಕ್ಷಣಾ ಕಾರ್ಯಾಚರಣೆ ವೇಗವಾಗಿ ನಡೆದಿದ್ದರೆ ನನ್ನ ಪತ್ನಿ ಮಗು ಬದುಕುಳಿಯುತ್ತಿದ್ದರು, ಪ್ರತಿವರ್ಷವೂ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಆದರೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

ಚರಂಡಿ ತುಂಬಿ ಹರಿಯುತ್ತಿದ್ದುದ್ದರಿಂದ ಆಕೆಗೆ ಅದು ತೆರೆದ ಚರಂಡಿ ಎಂಬುದು ತಿಳಿಯದೇ ಕಾಲಿರಿಸಿದ್ದಾರೆ. ನಮಗೆ ಸಂಜೆ 7.30ಕ್ಕೆ ವಿಚಾರ ತಿಳಿದಿದೆ. ನಾವು ತುರ್ತು ಸಹಾಯವಾಣಿಗೆ 100 ಗೆ ಕರೆ ಮಾಡಿದೆವು. ಪೊಲೀಸರು ರಕ್ಷಣಾ ತಂಡದೊಂದಿಗೆ ಆಗಮಿಸಿದರು. ಆದರೆ ಅವರ ಬಳಿ  ಅಗತ್ಯವಾದ ಉಪಕರಣಗಳಿರಲಿಲ್ಲ, ಅವರು ಪ್ರಯತ್ನಿಸುತ್ತಲೇ ಇದ್ದರು ಆದರೆ ಅವರಿಂದ ಜೀವ ಉಳಿಸಲಾಗಲಿಲ್ಲ, ಸುಮಾರು ಎರಡು ಗಂಟೆಗಳ ನಂತರ ಅವರು ಶವ ಹೊರತೆಗೆದರು ಎಂದು ತನುಜಾ ಅವರ ಮಾವ ಹರೀಶ್ ರಾವತ್ ಹೇಳಿದ್ದಾರೆ. 

ಉಚಿತ ಸ್ಕೀಂಗೆ ಹಣವಿದೆ, ಚರಂಡಿ ನಿರ್ಮಾಣಕ್ಕೆ ಇಲ್ಲವೆ? ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

ಕೂಡಲೇ ತನುಜಾ ಹಾಗೂ ಪ್ರಿಯಾಂಶು ಅವರನ್ನು ಬದುಕಬಹುದು ಎಂಬ ಭರವಸೆಯೊಂದಿಗೆ ಖಾಸಗಿ ವಾಹನದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ಸಾಗಿಸಲಾಯ್ತು. ನಮಗೆ ಆಂಬ್ಯುಲೆನ್ಸ್ ಕೂಡ ಸಿಗಲಿಲ್ಲ. ತನುಜಾ ತನ್ನ ಸಾವಿನಲ್ಲೂ ತನ್ನ ಕಂದನ ಕೈ ಬಿಟ್ಟಿರಲಿಲ್ಲ, ಅವರ ಶವ ಸಿಕ್ಕಾಗಲೂ ಆಕೆ ತನ್ನ ಕಂದನ ಕೈ ಹಿಡಿದುಕೊಂಡೆ ಇದ್ದಳು ಎಂದು ಅವರು ಕಣ್ಣೀರು ಸುರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳು ಸ್ಥಳೀಯಾಡಳಿತದ ವಿರುದ್ಧ ಆಕ್ರೋಶ  ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ತಿಂಗಳಿನಿಂದಲೂ ಈ ಚರಂಡಿ ತೆರೆದ ಸ್ಥಿತಿಯಲ್ಲಿಯೇ ಇದೆ. ಪ್ರತಿ ಮಳೆಗೂ ಇದು ತುಂಬಿ ಹರಿಯುತ್ತಿತ್ತು. ನಾವು ಹಲವು ಬಾರಿ ಈ ಬಗ್ಗೆ ಆಡಳಿತಕ್ಕೆ ದೂರು ನೀಡಿದ್ದರೂ ಅವವರು ಸ್ಪಂದಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!