
ಹೊಸದಿಲ್ಲಿ (ಜು.2): ದೆಹಲಿ ಪೊಲೀಸರ ವಿಶೇಷ ದಳ (Special Cell) ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮೂಲದ ISI ಹ್ಯಾಂಡ್ಲರ್ ಶಹಜಾದ್ ಭಟ್ಟಿ ಎಂಬುವವನ ಸೂಚನೆಯಂತೆ ದೆಹಲಿಯಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ಶುಭದೀಪ್ ಸಿಂಗ್ (23), ಗುರ್ಜಂತ್ ಸಿಂಗ್ (22), ಸಜನ್ ಸಿಂಗ್ (28) ಮತ್ತು ಗಗನ್‌ಪ್ರೀತ್ (24) ಎಂದು ಗುರುತಿಸಲಾಗಿದೆ. ಇವರಲ್ಲಿ ಮೂವರು ಪಂಜಾಬ್‌ನವರಾಗಿದ್ದು, ಒಬ್ಬನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಆರೋಪಿಗಳಿಂದ ಎರಡು ವಿದೇಶಿ ನಿರ್ಮಿತ ಪಿಸ್ತೂಲ್‌ಗಳು, ಒಂಬತ್ತು ಜೀವಂತ ಗುಂಡುಗಳು ಜೊತೆಗೆ ಐದು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಎಸಿಪಿ ವಿವೇಕ್ ಕುಮಾರ್ ತ್ಯಾಗಿ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಸತೀಶ್ ರಾಣಾ, ಅಶೋಕ್ ಅವರ ಟೀಂ ದೆಹಲಿ ಮತ್ತು ಪಂಜಾಬ್‌ನಲ್ಲಿ ದಾಳಿ ನಡೆಸಿತು. ಅಮೃತಸರದಲ್ಲಿ ಮೊದಲಿಗೆ ಶುಭದೀಪ್ ಸಿಂಗ್‌ನನ್ನು ಪೊಲೀಸರು ಬಂಧಿಸಿದರು. ಆತನಿಂದ ಒಂದು ಪಿಸ್ತೂಲ್, ಗುಂಡುಗಳು, ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಯಿತು.
ಶುಭದೀಪ್ ವಿಚಾರಣೆ ವೇಳೆ ಬಯಲಾಯ್ತು ಉಗ್ರರ ಸಂಚು!
ಶುಭದೀಪ್ ಬಂಧಿಸಿ ವಿಚಾರಣೆ ನಡೆಸಿದಾಗ ಆತನ ಸಹಚರರಾದ ಗುರ್ಜಂತ್ ಸಿಂಗ್ ಮತ್ತು ಸಜನ್ ಸಿಂಗ್ ಬಗ್ಗೆ ಮಾಹಿತಿ ಸಿಕ್ಕಿತು. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಉಳಿದಿಬ್ಬರು ಉಗ್ರರನ್ನ ಪಂಜಾಬ್‌ನಲ್ಲೇ ಬಂಧಿಸಿದರು. ಏಪ್ರಿಲ್ 24 ರಂದು ನಾಲ್ಕನೇ ಆರೋಪಿ ಗಗನ್‌ಪ್ರೀತ್‌ನನ್ನು ದೆಹಲಿಯಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದರು.
ವಿಚಾರಣೆ ವೇಳೆ ಆರೋಪಿಗಳು ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾರೆ. ಪೊಲೀಸರಿಗೆ ಸಿಕ್ಕಿಬೀಳಬಾರದು ಅಂತ ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಜೊತೆ ವಿದೇಶಿ ಫೋನ್ ನಂಬರ್‌ಗಳನ್ನು ಬಳಸಿ ಸಂಪರ್ಕದಲ್ಲಿದ್ದರು. ಗಡಿಯಾಚೆಯಿಂದ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ಪಡೆಯುತ್ತಿದ್ದರು. ಆರೋಪಿಗಳಲ್ಲೊಬ್ಬನಾದ ಗಗನ್‌ಪ್ರೀತ್, ದೆಹಲಿಯ ಪೊಲೀಸ್ ಠಾಣೆಗಳು ಮತ್ತು ಧಾರ್ಮಿಕ ಸ್ಥಳಗಳ ಮೇಲೆ ನಿಗಾ ಇಟ್ಟಿದ್ದ. ಅಲ್ಲಿ ಗುಂಡಿನ ದಾಳಿ ನಡೆಸುವ ಜವಾಬ್ದಾರಿಯನ್ನು ಆತನಿಗೆ ವಹಿಸಲಾಗಿತ್ತು.
ಶುಭದೀಪ್ ಸಿಂಗ್ ಅಲಿಯಾಸ್ ವಿಶಾಲ್, ಪಾಕಿಸ್ತಾನ ಗಡಿಗೆ ಹತ್ತಿರವಿರುವ ತರನ್ ತಾರನ್ ನಿವಾಸಿ. ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಈತ ಅರೆಸ್ಟ್ ಆಗಿದ್ದ. ಡ್ರೋನ್‌ಗಳ ಮೂಲಕ ಕಳುಹಿಸುತ್ತಿದ್ದ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ಈತನೇ ರಿಸೀವ್ ಮಾಡಿಕೊಳ್ಳುತ್ತಿದ್ದ.
ಬಂಧಿತ ಆರೋಪಿ ಶುಭದೀಪ್ ಸಿಂಗ್
ಗುರ್ಜಂತ್ ಸಿಂಗ್ ಅಲಿಯಾಸ್ ರಿಷಿ ಕೂಡ ತರನ್ ತಾರನ್ ಮೂಲದವನು. ಆತನ ಸಂಬಂಧಿ ಸಜನ್ ಸಿಂಗ್ ಅಲಿಯಾಸ್ ಹನಿ, ಅಮೃತಸರದವನು. ಇವರಿಬ್ಬರೂ ಡ್ರೋನ್‌ಗಳ ಮೂಲಕ ಬಂದ ಶಸ್ತ್ರಾಸ್ತ್ರಗಳನ್ನು ಸ್ವೀಕರಿಸುವ ಕೆಲಸ ಮಾಡುತ್ತಿದ್ದರು. ಇಬ್ಬರ ಮೇಲೂ ಈ ಹಿಂದೆ ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದವು.
ಬಂಧಿತ ಆರೋಪಿ ಗುರ್ಜಂತ್ ಸಿಂಗ್
ಫತೇಘರ್ ಸಾಹಿಬ್‌ನ ಗಗನ್‌ಪ್ರೀತ್, ಸೋಶಿಯಲ್ ಮೀಡಿಯಾ ಮೂಲಕ ಹ್ಯಾಂಡ್ಲರ್‌ಗಳ ಸಂಪರ್ಕದಲ್ಲಿದ್ದ. ದೆಹಲಿಯ ಪೊಲೀಸ್ ಠಾಣೆಗಳ ವಿಡಿಯೋ ಮಾಡಿ ಕಳುಹಿಸುವಂತೆ ಆತನಿಗೆ ಸೂಚನೆ ನೀಡಲಾಗಿತ್ತು.
ಬಂಧಿತ ಆರೋಪಿ ಗಗನ್‌ಪ್ರೀತ್
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಶೇಷ ದಳವು ಈ ಜಾಲದಲ್ಲಿರುವ ಇನ್ನಷ್ಟು ಸದಸ್ಯರನ್ನು ಪತ್ತೆಹಚ್ಚಲು ತನಿಖೆಯನ್ನು ಮುಂದುವರಿಸಿದೆ. (ANI)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ