ಕೇಂದ್ರದ ಸಹಕಾರ, ಮೋದಿ ಆಶೀರ್ವಾದ ಬೇಕು, ಪಾಲಿಕೆ ಗೆಲುವಿನ ಬಳಿಕ ಕೇಜ್ರಿವಾಲ್‌ ಮಾತು!

Published : Dec 07, 2022, 06:05 PM ISTUpdated : Dec 07, 2022, 06:18 PM IST
ಕೇಂದ್ರದ ಸಹಕಾರ, ಮೋದಿ ಆಶೀರ್ವಾದ ಬೇಕು, ಪಾಲಿಕೆ ಗೆಲುವಿನ ಬಳಿಕ ಕೇಜ್ರಿವಾಲ್‌ ಮಾತು!

ಸಾರಾಂಶ

ದೆಹಲಿ ಪಾಲಿಕೆ ಚುನಾವಣೆಯಲ್ಲಿ ಆಪ್‌ನ ಗೆಲುವಿನ ಕಾರಣದಿಂದಾಗಿ ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಡಬಲ್‌ ಇಂಜಿನ್‌ ಸರ್ಕಾರ ಚಾಲ್ತಿಗೆ ಬಂದಂತಾಗಲಿದೆ. ದೆಹಲಿಯಲ್ಲಿ 2015ರಿಂದಲೂ ಆಮ್‌ ಅದ್ಮಿ ಪಕ್ಷ ಅಧಿಕಾರದಲ್ಲಿದೆ.  

ನವದೆಹಲಿ (ಡಿ.7): ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 15 ವರ್ಷದ ಪಾರುಪತ್ಯವನ್ನು ಆಮ್‌ ಆದ್ಮಿ ಪಾರ್ಟಿ ಬುಧವಾರ ಕೊನೆ ಮಾಡಿದೆ. ಎಂಸಿಡಿ ಚುನಾವಣೆಯಲ್ಲಿ ಪಕ್ಷ ಭರ್ಜರಿ ಗೆಲುವು ಸಾಧಿಸಿದ ಬಳಿಕ ಮಾತನಾಡಿರುವ ಆಮ್‌ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಪಾಲಿಕೆ ಆಡಳಿತ ಸುಗಮವಾಗಿ ನಡೆಯಲು ಕೇಂದ್ರ ಸರ್ಕಾರದ ಸಹಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದ ಬೇಕು ಎಂದು ಎಂದು ಹೇಳಿದ್ದಾರೆ. ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷ ದೊಡ್ಡ ಮಟ್ಟದ ಗೆಲುವು ಸಾಧಿಸಿದ ಬಳಿಕ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರಿಗೆ 'ಐ ಲವ್‌ ಯು ಟೂ ' ಎಂದು ಹೇಳಿದ ಕೇಜ್ರಿವಾಲ್‌ ಆ ಬಳಿಕ, ಆಪ್‌ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.ಆಮ್‌ ಆದ್ಮಿ ಪಕ್ಷದ ಗೆಲುವಿನೊಂದಿಗೆ ದೆಹಲಿಯಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಇದೇ ಮೊದಲ ಬಾರಿಗೆ ಬಂದಂತಾಗಿದೆ. 2015ರಿಂದಲೂ ದೆಹಲಿಯಲ್ಲಿ ಅಧಿಕಾರ ನಡೆಸುತ್ತಿರುವ ಆಮ್‌ ಆದ್ಮಿ ಪಾರ್ಟಿಗೆ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೋಲು ಕಾಣುತ್ತಿತ್ತು. ಈ ಬಾರಿ ಪಕ್ಷ ಬಿಜೆಪಿಯ 15 ವರ್ಷದ ಪ್ರಭುತ್ವವನ್ನು ಕೊನೆ ಮಾಡಿದೆ. 

ರಾಜ್ಯ ಚುನಾವಣಾ ಆಯೋಗದ ಪ್ರಕಾರ, ಎಎಪಿ 250 ಸ್ಥಾನಗಳೊಂದಿಗೆ ಎಂಸಿಡಿಯಲ್ಲಿ 134 ಸ್ಥಾನಗಳನ್ನು ಪಡೆದುಕೊಂಡಿದೆ, ಇದು ಬಹುಮತಕ್ಕಿಂತ 8 ಹೆಚ್ಚು. ಮತ್ತೊಂದೆಡೆ ಬಿಜೆಪಿ 104, ಕಾಂಗ್ರೆಸ್ 9 ಮತ್ತು ಸ್ವತಂತ್ರ ಅಭ್ಯರ್ಥಿಗಳು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಎಂಸಿಡಿಯಲ್ಲಿ ಆಪ್‌ ಗೆಲುವು ಸಾಧಿಸಿದ ಬೆನ್ನಲ್ಲೇ ಸಿಎಂ ಅರವಿಂದ್ ಕೇಜ್ರಿವಾಲ್ ದೆಹಲಿಯ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಪಕ್ಷದ ಕಛೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ದೆಹಲಿಯನ್ನು ಸ್ವಚ್ಛಗೊಳಿಸುವ ಮತ್ತು ಭ್ರಷ್ಟಾಚಾರವನ್ನು ಕೊನೆಗೊಳಿಸುವ ಜವಾಬ್ದಾರಿಯನ್ನು ದೆಹಲಿಯ ಜನರು ಅವರ ಮಗ ಮತ್ತು ಸಹೋದರನಾದ ನನಗೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಸಹಕಾರವೂ ಬೇಕು. ಪ್ರಧಾನಿಯವರ ಆಶೀರ್ವಾದವೂ ಇದಕ್ಕಾಗಿ ಬೇಕು ಎಂದು ಹೇಳಿದರು.

ದೆಹಲಿಯ ಪ್ರತಿ ಅಭಿವೃದ್ಧಿ ಕಾರ್ಯದಲ್ಲೂ ಬಿಜೆಪಿ ಅಡ್ಡಗಾಲು ಹಾಕುತ್ತಿದೆ ಎಂದು ಆಪ್‌ ಅರೋಪ ಮಾಡುತ್ತಿತ್ತು. ಕೇಂದ್ರ ಸರ್ಕಾರ, ಲೆಫ್ಟಿನೆಂಟ್‌ ಗವರ್ನರ್‌ ಹಾಗೂ ಮಹಾನಗರ ಪಾಲಿಕೆಯ ಆಡಳತವನ್ನು ಬಳಸಿಕೊಂಡು , ದೆಹಲಿಯಲ್ಲಿ ಅಧಿಕಾರ ನಡೆಸುತ್ತಿದೆ ಎಂದು ಅರವಿಂದ್‌ ಕೇಜ್ರಿವಾಲ್‌ ಆರೋಪ ಮಾಡಿದ್ದರು. ದೆಹಲಿ ಅಭಿವೃದ್ದಿಗೆ ನಮಗೆ ಕೇಂದ್ರ ಸರ್ಕಾರದ ಸಹಾಯ ಬೇಕು. ನಮಗೆ ಕೇಂದ್ರದೊಂದಿಗೆ ಪ್ರಧಾನಿ ಮೋದಿ ಅವರ ಆಶೀರ್ವಾದ ಕೂಡ ಬೇಕು ಎಂದು ಕೇಜ್ರಿವಾಲ್‌ ಹೇಳಿದ್ದಾರೆ. ಜನರು ರಚನಾತ್ಮಕ ರಾಜಕೀಯವನ್ನು ಬಯಸುತ್ತಾರೆಯೇ ಹೊರತು ದ್ವೇಷವನ್ನಲ್ಲ ಎಂಬುದು ಈ ಫಲಿತಾಂಶಗಳ ದೊಡ್ಡ ಸಂದೇಶವಾಗಿದೆ ಎಂದು ಅವರು ಹೇಳಿದರು.

ದೆಹಲಿ ಪಾಲಿಕೆ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್ ಕಚೇರಿ ಖಾಲಿ ಖಾಲಿ!

"ನಾನು ಎಲ್ಲಾ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ನಾನು ಈ ಮೂಲಕ ಮನವಿ ಮಾಡುತ್ತೇನೆ. ನಾವು ಇಲ್ಲಿಯವರೆಗೆ ರಾಜಕೀಯದಲ್ಲಿ ತೊಡಗಿದ್ದೇವೆ. ಈಗ ನಾವು ಒಟ್ಟಾಗಿ ಕೆಲಸ ಮಾಡಬೇಕು. ನಮಗೆ ಬಿಜೆಪಿ ಮತ್ತು ಕಾಂಗ್ರೆಸ್ ಸಹಕಾರ ಬೇಕು. ನಾವು ಒಟ್ಟಾಗಿ ದೆಹಲಿಯನ್ನು ಸರಿಪಡಿಸುತ್ತೇವೆ" ಎಂದು ಮುಖ್ಯಮಂತ್ರಿ ಹೇಳಿದರು.

ಮಹಾನಗರ ಪಾಲಿಕೆ ಗೆದ್ದ ಬೆನ್ನಲ್ಲೇ ಆಮ್ ಆದ್ಮಿಗೆ ಎದುರಾಯ್ತು ಸಂಕಷ್ಟ!

ಬಿಜೆಪಿ ವಿರುದ್ಧ ಆಪ್‌ಗೆ ಮೊದಲ ಗೆಲುವು: ದೇಶದ ಈವರೆಗಿನ ಯಾವುದೇ ಚುನಾವಣೆಯಲ್ಲ ಆಮ್‌ ಆದ್ಮಿ ಪಾರ್ಟಿ ಬಿಜೆಪಿಯನ್ನು ಸೋಲಿಸಿದ್ದು ಇದೇ ಮೊದಲಾಗಿದೆ. "ನಾವು ಶಾಲೆಗಳನ್ನು ಸರಿಪಡಿಸಲು ಹಗಲಿರುಳು ಕೆಲಸ ಮಾಡಿದ್ದೇವೆ, ಆಸ್ಪತ್ರೆಗಳನ್ನು ಸರಿಪಡಿಸಲು ನಾವು ಹಗಲಿರುಳು ಶ್ರಮಿಸಿದ್ದೇವೆ, ಇಂದು ಅವರು ನಮಗೆ ದೆಹಲಿಯನ್ನು ಸ್ವಚ್ಛಗೊಳಿಸುವ, ಭ್ರಷ್ಟಾಚಾರವನ್ನು ಕೊನೆಗೊಳಿಸುವ ಜವಾಬ್ದಾರಿಯನ್ನು ನೀಡಿದ್ದಾರೆ... ಹಲವು ಜವಾಬ್ದಾರಿಗಳಿವೆ" ಎಂದು ಕೇಜ್ರಿವಾಲ್ ಗೆಲುವಿನ ಬಳಿಕ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!