
ನವದೆಹಲಿ(ಏ.02) ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಸೇರಿರುವ ನಾಯಕರ ಪೈಕಿ ಆಮ್ ಆದ್ಮಿ ಪಾರ್ಟಿ ನಾಯಕ ಸಂಜಯ್ ಸಿಂಗ್ ಜಾಮೀನು ಪಡೆದ ಮೊದಲ ನಾಯಕ ಏನಿಸಿಕೊಂಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದಡಿ ಜೈಲುಪಾಲಾಗಿದ್ದ ಸಂಜಯ್ ಸಿಂಗ್‌ಗೆ ಸುಪ್ರೀಂ ಕೋರ್ಟ್ ಜಾಮೀನುನ ನೀಡಿದೆ. ಇದು ಹೋರಾಟಕ್ಕೆ ಸಿಕ್ಕ ಗೆಲುವು, ಸತ್ಯಕ್ಕೆ ಸಂದ ಜಯ ಎಂದು ಆಪ್ ಹೇಳಿದೆ.
ಸಂಜಯ್ ಸಿಂಗ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಜಸ್ಟೀಸ್ ಸಂಜೀವ್ ಖನ್ನ, ದೀಪಾಂಕರ್ ದತ್ತಾ, ಪಿಬಿ ವರೇಲಾ ಪೀಠ ಈ ಆದೇಶ ನೀಡಿದೆ. ಜಿಲ್ಲಾ ನ್ಯಾಯಲಯ ವಿಧಿಸಿರುವ ಷರತ್ತುಗಳ ಅನ್ವಯದಲ್ಲಿ ಸಂಜಯ್ ಸಿಂಗ್‌ಗೆ ಜಾಮೀನು ನೀಡಲಾಗುತ್ತದೆ. ಜಾಮೀನು ಅವಧಿಯಲ್ಲಿ ಸಂಜಯ್ ಸಿಂಗ್ ತಮ್ಮ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕೇಜ್ರಿವಾಲ್, ಹೇಮಂತ್ ಸೊರೆನ್ ತಕ್ಷಣ ಬಿಡುಗಡೆಗೊಳಿಸಿ, 5 ಬೇಡಿಕೆ ಮುಂದಿಟ್ಟ ಪ್ರಿಯಾಂಕಾ ಗಾಂಧಿ!
ಜಾಮೀನು ಅರ್ಜಿಯ ಜೊತೆಗೆ ಸಂಜಯ್ ಸಿಂಗ್, ಇಡಿ ಬಂಧನ ಹಾಗೂ ರಿಮಾಂಡ್ ವಿರುದ್ಧ 2ನೇ ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಬರೋಬ್ಬರಿ 6 ತಿಂಗಳ ಬಳಿಕ ಸಂಜಯ್ ಸಿಂಗ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅಕ್ಟೋಬರ್ 4, 2023ರಲ್ಲಿ ಸಂಜಯ್ ಸಿಂಗ್ ಅವರನ್ನು ಬಂಧಿಸಲಾಗಿತ್ತು. ದೆಹಲಿಯ ನಿವಾಸದಲ್ಲಿ ಇಡಿ ಅಧಿಕಾರಿಗಳು ಸಂಜಯ್ ಸಿಂಗ್ ಬಂಧಿಸಿದ್ದರು.
ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಅನ್ನೋ ಆರೋಪದಲ್ಲಿ ಹುರುಳಿಲ್ಲ. ಸಂಜಯ್ ಸಿಂಗ್ ಅವರು ಹಣ ಪಡೆದು ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಇಡಿ ಆರೋಪಿಸಿದೆ. ಆದರೆ ಸಂಜಯ್ ಸಿಂಗ್ ಅವರಿಂದ ಯಾವುದೇ ಹಣ ವಶಕ್ಕೆ ಪಡೆದಿಲ್ಲ. ಇಷ್ಟೇ ಅಲ್ಲ ಸಂಜಯ್ ಸಿಂಗ್ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿರುವ ಹಣ ಎಲ್ಲಿದೆ? ಇದು ಪತ್ತೆಯಾಗಿಲ್ಲ ಎಂದು ಸಂಜಯ್ ಸಿಂಗ್ ಪರ ವಕೀಲ ಅಭಿಷೇಕ್ ಮನು ಸಿಂಗ್ವಿ ವಾದಿಸಿದ್ದಾರೆ.
ಅಬಕಾರಿ ಹಗರಣದಲ್ಲಿ ಮದ್ಯ ಉದ್ಯಮಿ ದಿನೇಶ್ ಅರೋರಾ ಹೆಸರು ಮತ್ತೆ ಮತ್ತೆ ಪ್ರಸ್ತಾಪವಾಗುತ್ತಿದೆ. ಸಂಜಯ್ ಸಿಂಗ್ ಅವರಿಗೆ ದಿನೇಶ್ ಅರೋರಾ 3 ಕೋಟಿ ರೂಪಾಯಿ ನೀಡಿದ್ದಾರೆ. ದೆಹಲಿ ಅಬಕಾರಿ ಹಗರಣದ ಭಾಗವಾಗಿ ಈ ಮೊತ್ತ ನೀಡಲಾಗಿದೆ ಎಂದು ಇಡಿ ಆರೋಪಿಸಿತ್ತು.
ದೆಹಲಿ ಸಿಎಂ ಕೇಜ್ರಿವಾಲ್ ಬಂಧನಕ್ಕೆ ವಿಶ್ವಸಂಸ್ಥೆ ಆಕ್ಷೇಪ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ