ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರವು 'ಡ್ರೈ ಡೇ'ಗಳ ಸಂಖ್ಯೆಯನ್ನು 21 ದಿನಗಳಿಗೆ ಹೆಚ್ಚಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಹಿಂದಿನ ಅಬಕಾರಿ ನೀತಿ ಅಡಿಯಲ್ಲಿ, ಡ್ರೈ ಡೇಗಳ ಸಂಖ್ಯೆಯನ್ನು ಕೇವಲ 3 ದಿನಕ್ಕೆ ಕಡಿತಗೊಳಿಸಲಾಗಿತ್ತು.
ದಸರಾ, ದೀಪಾವಳಿ, ಈದ್ ಮಿಲಾದ್ ಮತ್ತು ವಾಲ್ಮೀಕಿ ಜಯಂತಿಯಂದು ಮದ್ಯದಂಗಡಿಗಳನ್ನು (Wine Shops) ಮುಚ್ಚುವುದರೊಂದಿಗೆ ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರವು 'ಡ್ರೈ ಡೇ'ಗಳ (Dry Days) ಸಂಖ್ಯೆಯನ್ನು 21 ದಿನಗಳಿಗೆ ಹೆಚ್ಚಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಹಿಂದಿನ ಅಬಕಾರಿ ನೀತಿ (Liquor Policy) (2021-22) ಅಡಿಯಲ್ಲಿ, ಡ್ರೈ ಡೇಗಳ ಸಂಖ್ಯೆಯನ್ನು ಜನವರಿ 26, ಆಗಸ್ಟ್ 25 ಮತ್ತು ಅಕ್ಟೋಬರ್ 2 - ಹೀಗೆ ಕೇವಲ 3 ದಿನಕ್ಕೆ ಕಡಿತಗೊಳಿಸಲಾಗಿತ್ತು. ಅಕ್ಟೋಬರ್ 5 ರಂದು ಅಂದರೆ ಇಂದು ದಸರಾ (Dasara) (ವಿಜಯದಶಮಿ), ಈದ್-ಮಿಲಾದ್-ಉನ್-ನಬಿ, ಅಕ್ಟೋಬರ್ 9 ರಂದು ಮಹರ್ಷಿ ವಾಲ್ಮೀಕಿ ಜಯಂತಿ, ಅಕ್ಟೋಬರ್ 24 ರಂದು ದೀಪಾವಳಿ, ನವೆಂಬರ್ 8 ರಂದು ಗುರುನಾನಕ್ ಜಯಂತಿ ಮತ್ತು ನವೆಂಬರ್ 24 ರಂದು ಗುರು ತೇಗ್ ಬಹದ್ದೂರ್ ಅವರ ಹುತಾತ್ಮ ದಿನ - ಈ ಎಲ್ಲಾ ದಿನಗಳಲ್ಲಿ ಮದ್ಯದಂಗಡಿಗಳನ್ನು ಮುಚ್ಚಲಾಗುವುದು ಎಂದು ಅಬಕಾರಿ ಇಲಾಖೆ (Excise Department) ಸೋಮವಾರ ಆದೇಶದಲ್ಲಿ ತಿಳಿಸಿದೆ.
ಇನ್ನು, ಡ್ರೈ ಡೇಗಳ ದಿನ ಮದ್ಯ ಪರವಾನಗಿದಾರರಿಗೆ ಯಾವುದೇ ಪರಿಹಾರವನ್ನು ನೀಡಲಾಗುವುದಿಲ್ಲ. ಅವರು ತಮ್ಮ ವ್ಯಾಪಾರದ ಆವರಣದಲ್ಲಿ ಪ್ರಮುಖವಾದ ಸ್ಥಳಗಳಲ್ಲಿ ಡ್ರೈ ಡೇ ಆದೇಶವನ್ನು ಅಥವಾ ಮದ್ಯ ದೊರೆಯುವುದಿಲ್ಲ ಎಂದು ಪ್ರದರ್ಶಿಸಬೇಕು ಎಂದೂ ಅರವಿಂದ್ ಕೇಜ್ರಿವಾಲ್ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. "ಹಳೆಯ ಅಬಕಾರಿ ಆಡಳಿತದಲ್ಲಿ ಡ್ರೈ ಡೇಗಳ ಸಂಖ್ಯೆ 21 ಆಗಿತ್ತು. ಈ ಸಂಖ್ಯೆಯನ್ನು ನಿಗದಿಪಡಿಸುವುದು ಸರ್ಕಾರದ ವಿವೇಚನೆಯಾಗಿದೆ. ಸಾಂಪ್ರದಾಯಿಕವಾಗಿ ಪ್ರತಿ 3 ತಿಂಗಳಿಗೊಮ್ಮೆ ಡ್ರೈ ದಿನಗಳ ಪಟ್ಟಿಯನ್ನು ನೀಡಲಾಗುತ್ತದೆ," ಎಂದು ಅಧಿಕಾರಿ ಹೇಳಿದರು. ಆದರೂ, ಮದ್ಯವನ್ನು ಪೂರೈಸುವ ಹೋಟೆಲ್‌ಗಳು, ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳು ತೆರೆದಿರುತ್ತವೆ ಎಂದು ಅವರು ಹೇಳಿದರು.
ಇದನ್ನು ಓದಿ: Delhi Liquor Policy Case: 'ಸ್ಟಿಂಗ್ ಆಪರೇಷನ್' ವಿಡಿಯೋ ಹಂಚಿಕೊಂಡ ಬಿಜೆಪಿ
ಇನ್ನು, ಹೋಟೆಲ್‌ಗಳು, ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನ ಮತ್ತು ಗಾಂಧಿ ಜಯಂತಿ - ಈ 3 ರಾಷ್ಟ್ರೀಯ ರಜಾದಿನಗಳಲ್ಲಿ ಮದ್ಯವನ್ನು ಪೂರೈಸಲು ಅನುಮತಿಸುವುದಿಲ್ಲ ಎಂದೂ ತಿಳಿದುಬಂದಿದೆ. ದೆಹಲಿಯ ಎಎಪಿ ಸರ್ಕಾರವು ತನ್ನ ಅಬಕಾರಿ ನೀತಿ 2021-22 ಅನ್ನು ಈ ವರ್ಷ ಜುಲೈನಲ್ಲಿ ಹಿಂಪಡೆದಿದೆ. ಅಬಕಾರಿ ನೀತಿಯ ಅನುಷ್ಠಾನದಲ್ಲಿ ಅಕ್ರಮದ ಆರೋಪಗಳು ಕೇಳಿಬಂದಿದ್ದು, ಸಿಬಿಐ ತನಿಖೆಯೂ ನಡೆಯುತ್ತಿದೆ.
ಇದರ ನಂತರ ನವೆಂಬರ್ 17, 2021 ರ ಮೊದಲು ಕಾರ್ಯನಿರ್ವಹಿಸುತ್ತಿದ್ದ ಹಳೆಯ ಅಬಕಾರಿ ನೀತಿಗೆ ಸರ್ಕಾರವು ಮರಳಿದ್ದು, ಅದರ ಅಡಿಯಲ್ಲಿ 21 ಡ್ರೈ ದಿನಗಳು ಇದ್ದವು. ಈ ಮಧ್ಯೆ, ದೆಹಲಿಯ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿಯು ತನ್ನ ನೀತಿಯಲ್ಲಿ ಡ್ರೈ ಡೇಗಳ ಸಂಖ್ಯೆಯನ್ನು ಕಡಿಮೆ ಮಾಡಿದ ಬಗ್ಗೆ ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಜೊತೆಗೆ ನಗರದಲ್ಲಿ ಮದ್ಯದ ವ್ಯಾಪಾರವನ್ನು ತನ್ನ ಉದಾರ ನೀತಿಗಳೊಂದಿಗೆ ಉತ್ತೇಜಿಸಿದ್ದಕ್ಕಾಗಿ ದೂಷಿಸಿದೆ.
ಇದನ್ನೂ ಓದಿ: ದೆಹಲಿ ಅಬಕಾರಿ ಹಗರಣ, 15 ಆರೋಪಿಗಳ ಪೈಕಿ ಉಪ ಮುಖ್ಯಮಂತ್ರಿ ಸಿಸೋಡಿಯಾ ನಂ.1!
ಸಾಮಾನ್ಯವಾಗಿ, ಮದ್ಯದ ಕಂಪನಿಗಳು ಅಕ್ಟೋಬರ್ ತಿಂಗಳಲ್ಲಿ ಹಬ್ಬದ ಸೀಸನ್‌ಗಾಗಿ ಎದುರು ನೋಡುತ್ತವೆ. ಏಕೆಂದರೆ, ಇದು ವ್ಯಾಪಾರಕ್ಕೆ ಉತ್ತೇಜನ ನೀಡುತ್ತದೆ. ಆದರೆ, ದಸರಾ ಹಬ್ಬ, ದೀಪಾವಳಿ ಸೇರಿ ಈ ತಿಂಗಳ ಅನೇಕ ದಿನಾಂಕಗಳಂದು ಮದ್ಯದಂಗಡಿ ಬಂದ್ ಆಗಿರುವುದು ಮದ್ಯ ಪ್ರಿಯರಿಗೆ ಮಾತ್ರವಲ್ಲದೆ, ಮದ್ಯದ ಕಂಪನಿಗಳಿಗೂ ಬೇಸರದ ವಿಷಯವಾಗಿದೆ ಎನ್ನಬಹುದು.