ಕಾರು ಬಾಂಬ್‌ ಸ್ಪೋಟದ ಸಾವಿನ ಸಂಖ್ಯೆ 12ಕ್ಕೆ ಏರಿಕೆ, ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ

Published : Nov 12, 2025, 08:55 AM ISTUpdated : Nov 12, 2025, 03:30 PM IST
Delhi car blast fsl explosives recovered investigation

ಸಾರಾಂಶ

ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ ಮೃತರ ಕುಟುಂಬಕ್ಕೆ ದೆಹಲಿ ಸರ್ಕಾರವು ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವ ಭರವಸೆ ನೀಡಿದೆ.

ನವದೆಹಲಿ (ನ.12): ಸೋಮವಾರ ಸಂಜೆ ರಾಷ್ಟ್ರ ರಾಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 12ಕ್ಕೇರಿಕೆಯಾಗಿದೆ. ಸೋಮವಾರ ತಡರಾತ್ರಿ ತನಕ 9 ಜನ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಈ ಪೈಕಿ ಮತ್ತೆ ಮೂವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪಾಕ್‌ ಸೇನೆಯ ಆಸ್ತಿಯಿಂದ ಭಯೋತ್ಪಾದಕ ಕೃತ್ಯ

ಪಾಕಿಸ್ತಾನಿ ಪತ್ರಕರ್ತ ತಹಾ ಸಿದ್ದಿಕಿ ಇತ್ತೀಚೆಗೆ ದೆಹಲಿ ಮತ್ತು ಇಸ್ಲಾಮಾಬಾದ್‌ನಲ್ಲಿ ನಡೆದ ಸ್ಫೋಟಗಳನ್ನು ಪಾಕಿಸ್ತಾನ ಸೇನೆಯ 'ಆಸ್ತಿ' ಎಂದು ಕರೆಯಲಾಗುವ ಆತ್ಮಹತ್ಯಾ ಬಾಂಬರ್‌ಗಳ ಕೃತ್ಯ ಎಂದಿದ್ದಾರೆ. ಅವರ ಹೇಳಿಕೆಗೆ ಆನ್‌ಲೈನ್‌ನಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ನವೆಂಬರ್ 10 ರಂದು ಭಾರತದ ಕೆಂಪು ಕೋಟೆ ಬಳಿ ನಡೆದ ಸ್ಫೋಟದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದರೆ, ಮರುದಿನ ನವೆಂಬರ್ 11 ರಂದು ಇಸ್ಲಾಮಾಬಾದ್‌ನಲ್ಲಿ ನಡೆದ ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿದರು. ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟದ ಬಗ್ಗೆ ಭಾರತದಲ್ಲಿನ ಅಧಿಕಾರಿಗಳು ಎಲ್ಲಾ ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ.

ಮೃತರ ಕುಟುಂಬಕ್ಕೆ ₹10 ಲಕ್ಷ, ಗಾಯಾಳುಗಳಿಗೆ ₹5 ಲಕ್ಷ ಪರಿಹಾರ ಪ್ರಕಟ

ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ರು. ಪರಿಹಾರಧನ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮಂಗಳವಾರ ಘೋಷಿಸಿದ್ದಾರೆ. ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಅವರು, ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರು., ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದವರಿಗೆ 5 ಲಕ್ಷ ರು., ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರು. ಪರಿಹಾರಧನ ನೀಡಲಾಗುತ್ತದೆ. ಎಲ್ಲಾ ಗಾಯಾಳುಗಳಿಗೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಯನ್ನು ನೀಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಇದು ಕೆಂಪುಕೋಟೆ ಬಳಿ ಸಂಭವಿಸಿದ 3ನೇ ಸ್ಫೋಟ

ನ.10ರ ಸಂಜೆ ದೆಹಲಿಯ ಕೆಂಪುಕೋಟೆ ಬಳಿ ನಡೆದ ಭೀಕರ ಸ್ಪೋಟ, 12 ಜನರ ಸಾವು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಬಿಗಿ ಭದ್ರತೆಯಿರುವ ಈ ಸ್ಥಳ ಹಿಂದೆಯೂ 2 ಸಲ ಭೀಕರ ದುರಂತಕ್ಕೆ ಸಾಕ್ಷಿಯಾಗಿತ್ತು. 1997ರ ನ.30ರಂದು ಅವಳಿ ಸ್ಫೋಟ ಸಂಭವಿಸಿತ್ತು. ಆಗ ಮೂವರು ಮೃತಪಟ್ಟಿದ್ದು, 70 ಮಂದಿ ಗಾಯಗೊಂಡಿದ್ದರು. ಅದಾಗಿ ಮೂರು ವರ್ಷಗಳ ಬಳಿಕ ಅಂದರೆ 2000ರ ಜೂ.18 ರಂದು ಎರಡು ಪ್ರಬಲ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಎಂಟು ವರ್ಷದ ಬಾಲಕಿ ಸೇರಿ ಇಬ್ಬರು ಸಾವನ್ನಪ್ಪಿದ್ದರು. 12 ಮಂದಿ ಗಾಯಗೊಂಡಿದರು.

ಸ್ಫೋಟ ಬೆನ್ನಲ್ಲೇ ಶಂಕಿತ ಉಗ್ರಗೆ ಜಾಮೀನು ನಕಾರ

ಸುಪ್ರೀಂ ಕೋರ್ಟ್ ಮಂಗಳವಾರ ನಿಷೇಧಿತ ಐಸಿಸ್ ಜತೆಗೆ ನಂಟಿದ್ದ ವ್ಯಕ್ತಿಯೊಬ್ಬನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಈ ವೇಳೆ 'ಉಗ್ರವಾದದ ವಿರುದ್ಧ ಸಂದೇಶ ಕಳುಹಿಸಲು ಇದು ಸುಸಂದರ್ಭ' ಎಂದು ಕೆಂಪುಕೋಟೆ ಸ್ಪೋಟ ಉಲ್ಲೇಖಿಸಿ ಉಗ್ರರಿಗೆ ಎಚ್ಚರಿಕೆ ನೀಡಿದೆ. ಮಂಗಳವಾರ ನ್ಯಾ । ವಿಕ್ರಮ್ ನಾಥ್ ಮತ್ತು ನ್ಯಾ| ಸಂದೀಪ್ ಮೆಹ್ರಾ ಅವರಿದ್ದ ದ್ವಿಸದಸ್ಯ ಪೀಠದ ಮುಂದೆ ಐಸಿಸ್ ನಂಟಿನ ಆರೋಪ ಹೊತ್ತಿದ್ದಹಾಗೂ ಯುಎಪಿಎ, ಭಾರತೀಯ ದಂಡ ಸಂಹಿತೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ 2023ರಲ್ಲಿ ಜೈಲು ಸೇರಿದ್ದು ಸೈಯ್ಯದ್ ಮಾಮೂರ್ ಎಂಬಾತನ ಜಾಮೀನು ಅರ್ಜಿ ವಿಚಾರಣೆಗೆ ಬಂದಿತ್ತು. ಈ ವೇಳೆ, 'ದೇಶದಲ್ಲಿ ಭಯೋತ್ಪಾದಕ ಜಾಲ ವಿಸ್ತರಿಸುತ್ತಿರುವ ಅರೋಪ ನಿಮ್ಮ ಮೇಲಿದೆ' ಎಂದು ಹೇಳಿದ ಪೀಠ ಅರ್ಜಿ ವಜಾ ಮಾಡಿತು.

ಸಚಿವ ಅಮಿತ್ ಶಾ ವಿರುದ್ಧ ವಿಪಕ್ಷ ನಾಯಕರ ವಾಗ್ದಾಳಿ

ಕೆಂಪುಕೋಟೆ ಬಳಿಯ ಸ್ಫೋಟಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಂಗಳವಾರ ಟಿಎಂಸಿ ಸಂಸದರಾದ ಮಹುವಾ ಮೊಯಿತ್ರಾ ಹಾಗೂ ಅಭಿಷೇಕ್ ಬ್ಯಾನರ್ಜಿ ಸೇರಿ ಹಲವರು ಕಿಡಿಕಾರಿದ್ದಾರೆ. 'ದೇಶಕ್ಕೆ ಸಮರ್ಥ ಗೃಹ ಸಚಿವರ ಅಗತ್ಯವಿದೆ' ಎಂದು ಹೇಳಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮಹುವಾ, 'ದೇಶಕ್ಕೆ ಪೂರ್ಣಪ್ರಮಾಣದ ದ್ವೇಷ ಅಭಿ ಯಾನ ನಡೆಸುವ ಗೃಹಮಂತ್ರಿ ಬೇಕಿಲ್ಲ. ದೇಶದ ಗಡಿಗಳು, ನಗರಗಳು ಎರಡನ್ನೂ ರಕ್ಷಿಸುವುದು ಅಮಿತ್ ಶಾ ಕರ್ತವ್ಯವಲ್ಲವೇ? ಅವರೇಕೆ ಎಲ್ಲ ವಿಷಯಗಳಲ್ಲಿ ಅದ್ಭುತ ವಾಗಿ ವಿಫಲರಾಗುತ್ತಿದ್ದಾರೆ' ಎಂದು ವ್ಯಂಗ್ಯವಾಡಿದ್ದಾರೆ.

ಖೇರಾ ಕಿಡಿ: ಇದೇ ವೇಳೆ, ಕಾಂಗ್ರೆಸ್ ವಕ್ತಾರ ಪವನ್ ಖೇರಾ ಕೂಡ ಕೇಂದ್ರ ಸರ್ಕಾರದ ಬಗ್ಗೆ ಕಿಡಿಕಾರಿದ್ದಾರೆ. 'ಸ್ಫೋಟ ಸಂಭವಿಸಿ 1 ದಿನವಾದರೂ ಯಾವುದೇ ಸ್ಪಷ್ಟತೆ ಹೊರಬಿದ್ದಿಲ್ಲ. ಕೇಂದ್ರ ಗೃಹ ಸಚಿವರು, ದಿಲ್ಲಿ ಪೊಲೀಸರು, ಗೃಹ ಕಾರ್ಯದರ್ಶಿಗಳು ಪತ್ರಿಕಾಗೋಷ್ಠಿ ಕರೆದು ಎಲ್ಲ ಸಂದೇಹ ಪರಿಹರಿಸಬೇಕು' ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ