
ದೆಹಲಿ/ಹೈದರಾಬಾದ್: ಆತ ಬಿಡುವಿನ ವೇಳೆ ಐಸ್‌ಕ್ರೀಂ ಮಾರುತ್ತಾ ತನ್ನ ಕಾಲೇಜು ವೆಚ್ಚವನ್ನು ತಾನೇ ಭರಿಸುತ್ತಿದ್ದ. ಆದರೆ ಸಿಟ್ಟು ಹಾಗೂ ಅಸೂಯೆಯಿಂದ ಮಾಡಿದ ದೊಡ್ಡ ತಪ್ಪೊಂದು ಆತನ ಭವಿಷ್ಯವನ್ನೇ ಹಾಳು ಮಾಡಿದೆ. ಹೌದು ಇಲ್ಲೊಬ್ಬ ದ್ವಿತೀಯ ಬಿಕಾಂ ಓದುತ್ತಿದ್ದ 20 ವರ್ಷದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಸ್ನೇಹಿತೆಯೊಬ್ಬಳ ವಿಚಾರಕ್ಕೆ ಆಕ್ರೋಶಗೊಂಡು ಯುವಕನೋರ್ವನ ಕತ್ತಿಗೆ ಬ್ಲೇಡ್ ಹಾಕಿದ್ದೇ ಈಗ ಕಂಬಿ ಹಿಂದೆ ಕೂರೋದಕ್ಕೆ ಕಾರಣವಾಗಿದೆ.
ಹಲವು ಬಾರಿ ಎಚ್ಚರಿಕೆ ಆಮೇಲೆ ಅಟ್ಯಾಕ್:
ಅಕ್ಷತ್ ಶರ್ಮಾ(20) ಬಂಧಿತ ವಿದ್ಯಾರ್ಥಿ ಈತ ಹರ್ಷ ಭಟಿ ಎಂಬ 21 ವರ್ಷದ ಯುವಕನ ಮೇಲೆ ಬ್ಲೇಡ್‌ನಿಂದ ಹಲ್ಲೆ ಮಾಡಿದ್ದ. ಅಂದಹಾಗೆ ಈ ಇಬ್ಬರಿಗೂ ಆಕೆ ಒಳ್ಳೆಯ ಸ್ನೇಹಿತೆಯಾಗಿದ್ದಳು. ಆದರೆ ಹರ್ಷ ಭಟಿ ಜೊತೆಗಿನ ಆಕೆಯ ಸ್ನೇಹದ ಬಗ್ಗೆ ಅಕ್ಷತ್ ಶರ್ಮಾ ಅಸಮಾಧಾನಗೊಂಡಿದ್ದ. ಹೀಗಾಗಿ ಈ ಮೊದಲೇ ಹರ್ಷ ಭಟಿಗೆ ಹಲವು ಬಾರಿ ಆ ಹುಡುಗಿಯ ಜೊತೆ ಸುತ್ತಾಡದಂತೆ ಎಚ್ಚರಿಕೆ ನೀಡಿದ್ದ ಅಕ್ಷತ್ ಶರ್ಮಾ, ಕೊನೆಗೆ ಆತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ದೆಹಲಿಯ ಪಾಂಡವನಗರದಲ್ಲಿ ಈ ಘಟನೆ ನಡೆದಿದೆ.
ಘಟನೆಯಲ್ಲಿ ಹರ್ಷ ಗಂಭೀರ ಗಾಯಗೊಂಡಿದ್ದರು ಬದುಕುಳಿದಿದ್ದಾನೆ ಎಂದು ದೆಹಲಿ ಪೂರ್ವದ ಉಪ ಪೊಲೀಸ್ ಕಮೀಷನರ್ ಅಭಿಷೇಕ್ ಧನಿಯಾ ಹೇಳಿದ್ದಾರೆ. ಹರ್ಷ ಹುಡುಗಿಯ ಜೊತೆ ನಿಂತುಕೊಂಡು ಮಾತನಾಡುತ್ತಿದ್ದಾಗ ಹಠಾತ್ ಎಂಟ್ರಿ ಕೊಟ್ಟ ಅಕ್ಷತ್ ಶರ್ಮಾ ಆತನ ಕತ್ತನ್ನು ಚಾಕುವಿನಿಂದ ಕುಯ್ದಿದ್ದಾನೆ. ಕೂಡಲೇ ಹರ್ಷನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ.
ಆರೋಪಿ ಅಕ್ಷತ್ ಆ ಹುಡುಗಿಯ ಜೊತೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದ ಹಾಗೂ ಆಕೆಯ ಜೊತೆ ಮಾತನಾಡುತ್ತಿದ್ದ ಹರ್ಷಗೆ ಪದೇ ಪದೇ ಎಚ್ಚರಿಕೆ ನೀಡಿದ್ದ. ಆದರೆ ಆತ ನಿರ್ಲಕ್ಷಿಸಿದ್ದರಿಂದ ಕ್ರೋಧಗೊಂಡು ಆತನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಡಿಸಿಪಿ ಹೇಳಿದ್ದಾರೆ. ಎಫ್‌ಐಆರ್ ದಾಖಲಾದ ಬಳಿಕ ಆತನ ಪತ್ತೆಗೆ ಪೊಲೀಸರು ಎರಡು ತಂಡ ರಚಿಸಿದ್ದರು. ಆದರೆ ಪೊಲೀಸರು ಆರೋಪಿ ಅಕ್ಷತ್‌ನ್ನು ಹಿಡಿಯಲು ಮನೆಗೆ ಹೋಗುವ ವೇಳೆ ಆತ ಪರಾರಿಯಾಗಿದ್ದ, ಆದರೂ ಆತ ಮನೆ ಸಮೀಪವೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಒಟ್ಟಿನಲ್ಲಿ ಕೋಪದಲ್ಲಿ ಮಾಡಿದ ಕೆಲಸವೊಂದು ಆತನನ್ನು ಕಂಬಿ ಹಿಂದೆ ಕೂರುವಂತೆ ಮಾಡಿದೆ.
ಮೊಮ್ಮಗಳ ಬರ್ತ್‌ಡೇ ಪಾರ್ಟಿಯಲ್ಲಿ ತೊರೆದು ಹೋದ ಪತ್ನಿಯ ಹತ್ಯೆ
ಹಾಗೆಯೇ ಹೈದರಾಬಾದ್‌ನಲ್ಲಿ ನಡೆದ ಚೂರಿ ಇರಿತ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ತೊರೆದು ಹೋದ ಪತ್ನಿಯನ್ನು ಚೂರಿಯಿಂದ ಇರಿದು ಅಮಾನುಷವಾಗಿ ಹತ್ಯೆ ಮಾಡಿದ್ದಾನೆ. ತೆಲಂಗಾಣದ ಅಬ್ದುಲ್ಲಾಪುರ್ಪೇಟ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಸಮ್ಮಕ್ಕ ಎಂಬುವವರನ್ನು ಅವರ ಪರಿತ್ಯಕ್ತ ಪತಿ 50 ವರ್ಷದ ಶೀನು ಎಂಬಾತ ಮೊಮ್ಮಗಳ ಬರ್ತ್‌ಡೇ ಪಾರ್ಟಿಯಲ್ಲೇ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ.
ಶೀನು ಅವರ ಸೊಸೆ ರಾಜೇಶ್ವರಿ ಎಂಬುವವರ 14 ವರ್ಷದ ಪುತ್ರಿಯ ಹುಟ್ಟುಹಬ್ಬ ಇತ್ತು. ಈ ಹುಟ್ಟುಹಬ್ಬಕ್ಕೆ ಸಮ್ಮಕ್ಕ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಬರ್ತ್‌ಡೇ ಕೇಕ್ ಕತ್ತರಿಸುವುದಕ್ಕೆ ಕೆಲ ನಿಮಿಷಗಳಿರುವಾಗ ಸಂಜೆ 7.15ರ ಸುಮಾರಿಗೆ ಅಲ್ಲಿಗೆ ಬಂದ ಶೀನು, ಅಲ್ಲಿನ ದೃಶ್ಯಗಳನ್ನು ವೀಡಿಯೋ ರೆಕಾರ್ಡ್ ಮಾಡುತ್ತಿದ್ದ ಸಮ್ಮಕ್ಕ ಬಳಿಗೆ ಬಂದವನೇ ಚಾಕುವನ್ನು ಹೊರತೆಗೆದು ಮೂರು ಬಾರಿ ಸಮ್ಮಕ್ಕಳ ಕತ್ತಿಗೆ ಇರಿದಿದ್ದಾನೆ. ಕೂಡಲೇ ಸಮ್ಮಕ್ಕ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ಕೆಲ ನಿಮಿಷಗಳಲ್ಲಿ ಎಲ್ಲವೂ ಮುಗಿದು ಹೋಗಿದೆ. ಸ್ಥಳದಲ್ಲಿ ಬರ್ತ್‌ಡೇ ಸಂಭ್ರಮಕ್ಕಾಗಿ ಬಂದು ಸೇರಿದವರು ಈ ಘಟನೆಯಿಂದ ಗಾಬರಿಗೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರಾಜೇಶ್ವರಿ ಅವರು ತಮ್ಮ ಸೋದರ ಮಾವನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಶೀನು ಹಾಗೂ ಸಮ್ಮಕ್ಕ ಮಧ್ಯೆ ಹಲವು ವರ್ಷಗಳಿಂದಲೂ ದಾಂಪತ್ಯ ಕಲಹವಿತ್ತು. ಸಮ್ಮಕ್ಕ ಶೀನುವಿನ 2ನೇ ಪತ್ನಿಯಾಗಿದ್ದು, ಇಬ್ಬರು ಪತ್ನಿಯರಿಂದಲೂ ಶೀನುವಿಗೆ ಮಕ್ಕಳಿದ್ದಾರೆ. ದಾಳಿಯ ನಂತರ, ಶೀನು ಸ್ಥಳದಿಂದ ಪರಾರಿಯಾಗಿದ್ದು, ಮಧ್ಯಪ್ರವೇಶಿಸಲು ಪ್ರಯತ್ನಿಸಿದವರ ಮೇಲೆ ಚಾಕುವನ್ನು ಝಳಪಿಸಿದ್ದಾನೆ ಎನ್ನಲಾಗಿದೆ. ಆದರೂ ಶುಕ್ರವಾರ ಸಂಜೆ ಹಯಾತ್‌ನಗರದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ