
ದೆಹಲಿಯಲ್ಲಿ ಕಾರ್ ಬಾಂಬ್ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ 8 ರಿಂದ 12ಕ್ಕೆ ಏರಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ತೀವ್ರಗೊಂಡಿದ್ದು, ಒಂದೊಂದೇ ಸ್ಫೋಟಕ ಸತ್ಯಗಳು ಹೊರ ಬೀಳುತ್ತಿವೆ. ಭಯೋತ್ಪಾದಕ ಕೃತ್ಯಗಳಿಗೆ ಹೊಸ ತಿರುವು ಅಥವಾ ಭಯೋತ್ಪಾದನ ಚಟುವಟಿಕೆಗಳಲ್ಲೇ ಹೊಸ ಬದಲಾವಣೆ ಎನ್ನಲಾಗುತ್ತಿರುವ ವೈಟ್ ಕಾಲರ್ ಟೆರರ್ ಘಟಕ ಅಂದರೆ ಸುಶಿಕ್ಷಿತ, ಉನ್ನತ ವ್ಯಾಸಂಗ ಮಾಡಿ ಉತ್ತಮ ವೇತನದೊಂದಿಗೆ ಉದ್ಯೋಗದಲ್ಲಿರುವವರನ್ನೆ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸುವ ಉಗ್ರ ಸಂಘಟನೆ ಜೈಷ್ ಎ ಮೊಹಮ್ಮದ್‌ನ ಹೊಸ ಪ್ಲಾನ್ ಬಹಿರಂಗವಾಗಿದೆ. ರೆಡ್‌ಪೋರ್ಟ್ ಬಳಿ ನಡೆದ ಈ ಸ್ಫೋಟದ ಹಿಂದೆ ಇವರೇ ಇರುವುದು ಸಾಬೀತಾಗಿದೆ. ಜೈಷ್ ಎ ಮೊಹಮ್ಮದ್‌ನ ಹೊಸ ಪ್ಲಾನ್ ಆಗಿರುವ ಈ ವೈಟ್ ಕಾಲರ್ ಟೆರರ್ ಘಟಕದಲ್ಲಿ ವೈದ್ಯರು, ಉನ್ನತ ಉದ್ಯೋಗದಲ್ಲಿರುವ ಸುಶಿಕ್ಷಿತರು ಮಹಿಳಾ ಸದಸ್ಯರು ಇರುವುದು ಸಾಬೀತಾಗಿದ್ದು, ಇವರಿಗೆ ಪಾಕಿಸ್ತಾನದ ಹ್ಯಾಂಡಲರ್‌ಗಳ ಜೊತೆ ನೇರ ಸಂಪರ್ಕವಿದೆ.
ತನಿಖೆಯಿಂದ ಈ ಜಾಲವು ವೈದ್ಯಕೀಯ ಉದ್ಯೋಗಿಗಳು ಮತ್ತು ಶಿಕ್ಷಣ ಸಂಸ್ಥೆಗಳ ಸೋಗಿನಲ್ಲಿ ಈ ಉಗ್ರ ಘಟಕ ಕಾರ್ಯನಿರ್ವಹಿಸುತ್ತಿದ್ದು, ಹರಿಯಾಣದ ಫರಿದಾಬಾದ್, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಮತ್ತು ಉತ್ತರ ಪ್ರದೇಶದ ಸಹರಾನ್‌ಪುರ ಸೇರಿದಂತೆ ಹಲವಾರು ಪ್ರದೇಶಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ತಿಳಿದು ಬಂದಿದೆ. ಸ್ಫೋಟಕ್ಕೆ 37 ದಿನಗಳ ಮೊದಲು ಅಕ್ಟೋಬರ್ 4 ರಂದು ಸಹರಾನ್‌ಪುರದಲ್ಲಿ ನಡೆದ ವಿವಾಹವೊಂದರಲ್ಲಿ ಈ ಸ್ಫೊಟಕ್ಕೆ ಯೋಜನೆ ರೂಪುಗೊಂಡಿದೆ. ನಂತರ ಈ ಜಾಲವೂ ಸೈನಿಕರಿಗೆ ಬೆದರಿಕೆ ಹಾಕುವ ಪೋಸ್ಟರ್‌ಗಳನ್ನು ತಯಾರಿಸಲು ಪ್ರಾರಂಭಿಸಿತು.
ಅಕ್ಟೋಬರ್ 19 ರಂದು ಕಾಶ್ಮೀರದಲ್ಲಿ ಜೈಶ್ ಸಂಘಟನೆಯ ಪೋಸ್ಟರ್‌ಗಳು ಕಾಣಿಸಿಕೊಂಡ ನಂತರ ಭದ್ರತಾ ಸಂಸ್ಥೆಗಳಿಗೆ ಈ ವೈಟ್ ಕಾಲರ್ ಮಾಡ್ಯೂಲ್ ಸಕ್ರಿಯಗೊಳ್ಳುವ ಬಗ್ಗೆ ಸುಳಿವು ಸಿಕ್ಕಿತು. ತನಿಖೆಯಲ್ಲಿ ಈ ಜಾಲದ ಪ್ರಮುಖ ಮಹಿಳಾ ಸದಸ್ಯೆ ಡಾ. ಶಾಹೀನ್ ಸಯೀದ್ ಎಂದು ತಿಳಿದು ಬಂದಿದೆ. ಆಕೆ ಜೈಶ್ ಮುಖ್ಯಸ್ಥ ಮಸೂದ್ ಅಜರ್‌ನ ಸಹೋದರಿ ಸಾದಿಯಾ ಅಜರ್ ಜೊತೆ ಸಂಪರ್ಕ ಹೊಂದಿದ್ದಳು. ಅಕ್ಟೋಬರ್ 4 ರಿಂದ ಈ ವೈಟ್ ಕಾಲರ್ ಘಟಕ ಸಕ್ರಿಯಗೊಂಡಿದೆ.
ಡಾ ಆದಿಲ್ ಮದುವೆಯಲ್ಲಿ ಭಾಗಿಯಾಗಿದ್ದ ವಿಶೇಷ ಏಜೆಂಟ್‌ಗಳು
ಸಹರಾನ್‌ಪುರದಲ್ಲಿ ನಡೆದ ಮದುವೆಯೊಂದರಲ್ಲಿ ಪ್ಲಾನ್ ನಡೆದಿದೆ. ಡಾ ಆದಿಲ್ ಎಂಬಾತ ಸಹರಾನ್‌ಪುರದಲ್ಲಿ ಡಾ ರುಕೈಯಾಳನ್ನು ಮದುವೆಯಾದ ಕಾರ್ಯಕ್ರಮದಲ್ಲೇ ಈ ಸ್ಫೋಟಕ್ಕೆ ಯೋಜನೆ ರೂಪಿಸಲಾಗಿದೆ. ಈ ಮದುವೆಯಲ್ಲಿ ಈ ಉಗ್ರ ಸಂಘಟನೆಯ ವಿಶೇಷ ಏಜೆಂಟ್‌ಗಳು ಎನಿಸಿಕೊಂಡವರು ಭಾಗವಹಿಸಿದ್ದರು. ಅವರ ಗುರುತನ್ನು ಈಗ ಭದ್ರತಾ ಏಜೆನ್ಸಿಗಳು ತನಿಖೆ ನಡೆಸುತ್ತಿವೆ. ಈ ಮದುವೆಯ ಮರುದಿನವೇ ಮಾಡ್ಯೂಲ್ ತನ್ನ ಕೆಲಸವನ್ನು ಪ್ರಾರಂಭಿಸಿತು. ಸೈನಿಕರನ್ನು ಬೆದರಿಸುವ ಪೋಸ್ಟರ್‌ಗಳನ್ನು ಹಾಕುವುದು, ಶಸ್ತ್ರಾಸ್ತ್ರಗಳನ್ನು ಪೂರೈಸುವುದು ಮತ್ತು ಹಣವನ್ನು ವ್ಯವಸ್ಥೆ ಮಾಡುವುದು ಇದರ ಉದ್ದೇಶವಾಗಿತ್ತು. ಡಾ. ಆದಿಲ್ ಲಾಜಿಸ್ಟಿಕ್ಸ್ ಮತ್ತು ಹಣಕಾಸು ಮಾರ್ಗಗಳನ್ನು ನಿರ್ವಹಿಸಿದ್ದ. ವೈದ್ಯಕೀಯ ವೃತ್ತಿಯ ಸೋಗಿನಲ್ಲಿ ಭಯೋತ್ಪಾದನ ಚಟುವಟಿಕೆಗೆ ಹಣಕಾಸು ಮತ್ತು ಸಾರಿಗೆ ವ್ಯವಸ್ಥೆ ರೂಪಿಸುವುದು ನೆಟ್‌ವರ್ಕ್‌ನ ಯೋಜನೆಯಾಗಿತ್ತು.
ಪೋಸ್ಟರ್ ನೀಡಿದ ಮೊದಲ ಸುಳಿವು
ಇದಾದ ನಂತರ ಅಕ್ಟೋಬರ್ 19 ರಂದು ಕಾಶ್ಮೀರದ ನೌಗಮ್ ಪ್ರದೇಶದಲ್ಲಿ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಪೋಸ್ಟರ್‌ಗಳು ಕಾಣಿಸಿಕೊಂಡಾಗ ಪೊಲೀಸರು ತನಿಖೆ ಚುರುಕುಗೊಳಿಸಿದರು. ಆದರೆ ಅಕ್ಟೋಬರ್ 27 ರಂದು, ಮತ್ತೆ 25 ಕ್ಕೂ ಹೆಚ್ಚು ಪೋಸ್ಟರ್‌ಗಳನ್ನು ಹಾಕಲಾಯಿತು. ಇದಾದ ನಂತರ 50 ಅಧಿಕಾರಿಗಳ ತಂಡವು 60 ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡಿದಾಗ. ಅಕ್ಟೋಬರ್ 31 ರಂದು, ಡಾ. ಆದಿಲ್ ಪೋಸ್ಟರ್‌ಗಳನ್ನು ಹಾಕಲಾದ ಪ್ರದೇಶಗಳಲ್ಲಿ ಓಡಾಡುತ್ತಿರುವುದು ದೃಶ್ಯಗಳಲ್ಲಿ ಕಂಡುಬಂದಿತ್ತು.
ಆದಿಲ್‌ಗೆ ಪಾಕಿಸ್ತಾನಿ ಹ್ಯಾಂಡಲರ್‌ಗಳ ಜೊತೆ ನೇರ ಸಂಪರ್ಕ:
ಆತನ ಫೋನ್ ಸಂಪರ್ಕಗಳನ್ನು ಪರಿಶೀಲಿಸಿದಾಗ ಆತ ಪಾಕಿಸ್ತಾನಿ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದಾನೆ ಎಂಬುದು ತಿಳಿದು ಬಂದಿದ್ದು, ನವೆಂಬರ್ 6 ರಂದು ಆತನನ್ನು ಸಹ್ರಾನ್ಪುರದಲ್ಲಿ ಬಂಧಿಸಲಾಯಿತು. ಆತನಿಂದ ಎಕೆ-47, ಗ್ರೆನೇಡ್‌ಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಯ್ತು. ವಿಚಾರಣೆಯ ಸಮಯದಲ್ಲಿ, ಆತ ಫರಿದಾಬಾದ್‌ನಲ್ಲಿ ಬೋಧನೆ ಮಾಡುತ್ತಿದ್ದ ಡಾ. ಮುಜಮ್ಮಿಲ್ ಬಳಿ ದೊಡ್ಡ ಪ್ರಮಾಣದ ಸ್ಫೋಟಕಗಳಿವೆ ಎಂದು ಆತ ಬಹಿರಂಗಪಡಿಸಿದ್ದ. ಇದಾದ ನಂತರವೇ ನವೆಂಬರ್ 9 ರಂದು, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಫರಿದಾಬಾದ್ ತಲುಪಿ ಮುಜಮ್ಮಿಲ್‌ನನ್ನು ಬಂಧಿಸಿದರು.
ಒಟ್ಟಿಗೆ ಎಂಬಿಬಿಎಸ್ ಓದಿ ಉಗ್ರವಾದಕ್ಕೆ ತಿರುಗಿದ ಸ್ನೇಹಿತರು
ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕೊಯಿಲ್ ಗ್ರಾಮದ ಇಬ್ಬರು ಯುವಕರಾದ ಡಾ. ಮುಜಮ್ಮಿಲ್ ಮತ್ತು ಡಾ. ಉಮರ್ ನಬಿ ಒಟ್ಟಿಗೆ ಅಧ್ಯಯನ ಮಾಡಿ ವೈದ್ಯರಾದವರು. ಆದರೆ ಉತ್ತಮ ವೇತನ ಬರುತ್ತಿದ್ದ ವೈದ್ಯಕೀಯ ವೃತ್ತಿ ಬಿಟ್ಟು ಬೇರೆ ದಾರಿ ಹಿಡಿದರು. ಇಬ್ಬರ ಮನೆಗಳು ಕೇವಲ 800 ಮೀಟರ್ ಅಂತರದಲ್ಲಿದ್ದವು. ಈಗ ಮುಜಮ್ಮಿಲ್ ಬಂಧಿತನಾಗಿದ್ದರೆ ಉಮರ್ ದೆಹಲಿ ಸ್ಫೋಟದಲ್ಲಿ ಸಾವನ್ನಪ್ಪಿದ್ದಾನೆ. ಹಳ್ಳಿಯಲ್ಲಿರುವ ಇವರಿಬ್ಬರ ಕುಟುಂಬಗಳು ಘಟನೆಯಿಂದ ಆಘಾತಕ್ಕೀಡಾಗಿದ್ದಾರೆ. ಉಮರ್ ಅವರ ಸೋದರ ಮಾವ ಮಾತನಾಡಿ, ಶುಕ್ರವಾರ ಮಧ್ಯಾಹ್ನ ಕೊನೆಯ ಬಾರಿಗೆ ಆತ ಕರೆ ಮಾಡಿದ್ದ, ನಾಲ್ಕು ದಿನಗಳ ನಂತರ ಮನೆಗೆ ಹಿಂತಿರುಗುವುದಾಗಿ ಹೇಳಿದ್ದ ಎಂದು ಹೇಳಿದರು. ಈ ನಡುವೆ ವೈದ್ಯರೆಂದು ನಾವು ಹೆಮ್ಮೆಪಡುತ್ತಿದ್ದವರು ಇಂದು ಅವರಿಂದ ನಾಚಿಕೆಪಡುವಂತಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಮಸೂದ್ ಅಜರ್ ಸೋದರಿ ಜೊತೆ ನೇರ ಸಂಪರ್ಕ ಹೊಂದಿದ್ದ ಶಾಹೀನ್ ಸಯೀದ್
ಮತ್ತೊಂದೆಡೆ ಬಂಧಿತಳಾದ ವೈದ್ಯೆ ಲಕ್ನೋದ ಡಾ. ಶಾಹೀನ್ ಸಯೀದ್ ಈ ಜಾಲದ ಪ್ರಮುಖ ಸದಸ್ಯೆ. ಅವರು ಜೈಶ್ ಮುಖ್ಯಸ್ಥ ಮಸೂದ್ ಅಜರ್‌ನ ಸಹೋದರಿ ಸಾದಿಯಾ ಅಜರ್ ಜೊತೆ ನೇರ ಸಂಪರ್ಕದಲ್ಲಿದ್ದಳು. ಮಹಿಳಾ ಭಯೋತ್ಪಾದಕ ವಿಭಾಗ 'ಜಮಾತ್-ಉಲ್-ಮೊಮಿನಾತ್' ನೊಂದಿಗೆ ಸಂಬಂಧ ಹೊಂದಿದ್ದಳು. ಈ ವಿಭಾಗವನ್ನು ಸಾದಿಯಾ ತನ್ನ ಪತಿ ಯೂಸುಫ್ ಅಹ್ಮದ್ ಮರಣದ ನಂತರ ರಚಿಸಿದ್ದಳು. ಶಾಹೀನ್ ಕೃತ್ಯ ಬೆಳಕಿಗೆ ಬಂದ ನಂತರ ಆಕೆಯನ್ನು ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದಿಂದ ಬಂಧಿಸಿ ಶ್ರೀನಗರಕ್ಕೆ ಕರೆದೊಯ್ಯಲಾಯಿತು.
ಶಾಹೀನ್ ಅಲಹಾಬಾದ್ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದಿದ್ದು, ಮತ್ತು ಕಾನ್ಪುರ ವೈದ್ಯಕೀಯ ಕಾಲೇಜಿನಲ್ಲಿ 7 ವರ್ಷಗಳ ಕಾಲ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾಳೆ. 2021ರಲ್ಲಿ ಆಕೆ ತನ್ನ ಕೆಲಸವನ್ನು ತೊರೆದು ಕಣ್ಮರೆಯಾಗಿದ್ದಳು. ನಂತರ ಡಾ. ಮುಜಮ್ಮಿಲ್ ಜೊತೆ ಸಂಪರ್ಕಕ್ಕೆ ಬಂದ ಆಕೆ ಪಾಕಿಸ್ತಾನಿ ಹ್ಯಾಂಡ್ಲರ್‌ನ ಸೂಚನೆಯ ಮೇರೆಗೆ ಇಲ್ಲಿನ ಮುಸ್ಲಿಂ ಮಹಿಳೆಯರ ಮನಪರಿವರ್ತನೆ ಮಾಡಿ ಉಗ್ರ ಸಂಘಟನೆಗೆ ಸೇರ್ಪಡಿಸಲು ಮುಂದಾಗಿದ್ದಳು. ಈಗ ಉತ್ತರ ಪ್ರದೇಶದ ಎಟಿಎಸ್ ಆಕೆಯ ಸಹೋದರ ಡಾ. ಪರ್ವೇಜ್ ನನ್ನು ಲಕ್ನೋದಿಂದ ಬಂಧಿಸಿದೆ. ಆತನೂ ಇಂಟಿಗ್ರಲ್ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿದ್ದ.
ಇದನ್ನೂ ಓದಿ: ದೆಹಲಿ ಸ್ಫೋಟದ ನಂತರ ತೀವ್ರಗೊಂಡ ವಾಹನ ತಪಾಸಣೆ: ಕಾರಲ್ಲಿ 1 ಕೋಟಿ ಮೊತ್ತದ ದಾಖಲೆ ಇಲ್ಲದ ನಗದು ಪತ್ತೆ
ಇದನ್ನೂ ಓದಿ: ಮಹಾರಾಷ್ಟ್ರದ ವ್ಯಕ್ತಿಯ ಮದ್ವೆಯಾಗಿದ್ದ ಟೆರರಿಸ್ಟ್ ವೈದ್ಯೆ ಶಾಹೀನ್, ಸೋದರನೂ ವೈದ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ