
ನವದೆಹಲಿ (ಆಗಸ್ಟ್ 27, 2023): ಸೆಪ್ಟೆಂಬರ್ 9-10ರಂದು ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಮುನ್ನ ದೆಹಲಿಯಾದ್ಯಂತ ಹಲವಾರು ಮೆಟ್ರೋ ನಿಲ್ದಾಣಗಳ ಗೋಡೆಗಳು ಖಲಿಸ್ತಾನ್ ಪರ ಗೀಚುಬರಹದಿಂದ ವಿರೂಪಗೊಂಡಿರುವುದು ಕಂಡುಬಂದಿದೆ. ಈ ಬಗ್ಗೆ ದೆಹಲಿ ಪೊಲೀಸರು ಭಾನುವಾರ ಮಾಹಿತಿ ನೀಡಿದ್ದಾರೆ.
ದೆಹಲಿಯ ಪಂಜಾಬಿ ಬಾಗ್, ಶಿವಾಜಿ ಪಾರ್ಕ್, ಮಾದಿಪುರ್, ಪಶ್ಚಿಮ ವಿಹಾರ್, ಉದ್ಯೋಗನಗರ ಮತ್ತು ಮಹಾರಾಜ ಸೂರಜ್ಮಲ್ ಸ್ಟೇಡಿಯಂ ಸೇರಿದಂತೆ ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ 'ದೆಹಲಿ ಬನೇಗಾ ಖಲಿಸ್ತಾನ್' ಮತ್ತು ‘ಖಲಿಸ್ತಾನ್ ಜನಾಭಿಪ್ರಾಯ ಜಿಂದಾಬಾದ್' ಎಂಬ ಘೋಷಣೆಗಳನ್ನು ಕಪ್ಪು ಬಣ್ಣದಲ್ಲಿ ಬರೆದಿರುವುದು ಅಥವಾ ಸ್ಪ್ರೇ ಮಾಡಿರುವುದು ಕಂಡುಬಂದಿದೆ. ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (SFJ) ಕಾರ್ಯಕರ್ತರು ಶಿವಾಜಿ ಪಾರ್ಕ್ ಮತ್ತು ಪಂಜಾಬಿ ಬಾಗ್ ಸೇರಿದಂತೆ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಹಾಜರಿದ್ದರು ಮತ್ತು ಖಲಿಸ್ತಾನ್ ಪರ ಘೋಷಣೆಗಳನ್ನು ಬರೆದರು ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಮೆಟ್ರೋ ರೈಲು ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಪೊಲೀಸರಿಂದ ತೀವ್ರ ತಪಾಸಣೆ, ಗಾಬರಿಯಾದ ಪ್ರಯಾಣಿಕರು!
ಈ ಮಧ್ಯೆ, ನಂಗ್ಲೋಯ್‌ನಲ್ಲಿರುವ ಸರ್ಕಾರಿ ಸರ್ವೋದಯ ಬಾಲ ವಿದ್ಯಾಲಯದ ಗೋಡೆಯ ಮೇಲೂ ಭಾರತ ವಿರೋಧಿ ಗೀಚುಬರಹದಿಂದ ವಿರೂಪಗೊಳಿಸಿರುವುದು ಕಂಡುಬಂದಿದೆ. ಈ ಹಿನ್ನೆಲೆ ದೆಹಲಿ ಪೊಲೀಸರ ಸ್ಪೆಷಲ್ ಸೆಲ್ ಈ ವಿಷಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಮತ್ತು ವಿವಿಧ ಸ್ಥಳಗಳಲ್ಲಿ ಭದ್ರತೆ ನಿಯೋಜಿಸಲಾಗಿದೆ. ಇನ್ನು, ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ ಬರೆಯಲಾದ ಎಲ್ಲಾ ಗೀಚುಬರಹಗಳನ್ನು ತೆಗೆದುಹಾಕಲಾಗಿದೆ ಎಂದು ಡಿಸಿಪಿ (ಮೆಟ್ರೋ) ಮಾಹಿತಿ ನೀಡಿದ್ದಾರೆ.
ಆರೋಪಿಗಳನ್ನು ಪತ್ತೆ ಹಚ್ಚಿ ಆದಷ್ಟು ಬೇಗ ಬಂಧಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಇನ್ನೊಂದೆಡೆ, ಕಾನೂನುಬಾಹಿರವಾದ ಸಿಖ್ಸ್ ಫಾರ್ ಜಸ್ಟಿಸ್ (SFJ) ಹಲವಾರು ದೆಹಲಿ ಮೆಟ್ರೋ ನಿಲ್ದಾಣಗಳ ಗೋಡೆಗಳನ್ನು ಖಲಿಸ್ತಾನ್ ಪರ ಗೀಚುಬರಹದಿಂದ ವಿರೂಪಗೊಳಿಸಿರುವ ದೃಶ್ಯಗಳನ್ನು ಬಿಡುಗಡೆ ಮಾಡಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಹಾಗೂ, ದೆಹಲಿಯಲ್ಲಿ ಜಿ 20 ಶೃಂಗಸಭೆ ನಡೆಯುವ ದಿನವಾದ ಸೆಪ್ಟೆಂಬರ್ 10 ರಂದು ಕೆನಡಾದ ಸರ್ರೆಯಲ್ಲಿ ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆ ನಡೆಯಲಿದೆ ಎಂದು ಅದರ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನು ವಿಡಿಯೋದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಡೆಲ್ಲಿ ಮೆಟ್ರೋ ಹಾಗೂ ಪ್ಲಾಟ್‌ಫಾರ್ಮ್ ಮೇಲೆ ಬಾಲಿವುಡ್ ಹಾಡಿಗೆ ಕುಣಿದ ಯುವತಿ: ದಯವಿಟ್ಟು ನಿಲ್ಲಿಸಿ ಎಂದ ನೆಟ್ಟಿಗರು!
ಇನ್ನೊಂದು ಘೋಷವಾಕ್ಯ, ‘ದೆಹಲಿ ಬನೇಗಾ ಖಲಿಸ್ತಾನ್’. ದೆಹಲಿ ಪೊಲೀಸರು ಈ ವಿಷಯದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆರಂಭಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 5 ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳಲ್ಲಿ ಯಾರೋ ಒಬ್ಬರು 'ದೆಹಲಿ ಬನೇಗಾ ಖಲಿಸ್ತಾನ್' ಮತ್ತು 'ಖಲಿಸ್ತಾನ್ ಜಿಂದಾಬಾದ್' ಎಂದು ಬರೆದಿದ್ದಾರೆ. ಇದರ ವಿರುದ್ಧ ದೆಹಲಿ ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ,'' ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಜಿ 20 ಶೃಂಗಸಭೆಯಲ್ಲಿ 30 ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು ಮತ್ತು ಆಹ್ವಾನಿತ ಅತಿಥಿ ದೇಶಗಳು ಹಾಗೂ 14 ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ