GE-HAL Landmark Deal: ಭಾರತದ ವಾಯುಸೇನೆಯ ಫೈಟರ್‌ ಜೆಟ್‌ಗೆ ಅಮೆರಿಕದ ಇಂಜಿನ್‌!

By Santosh NaikFirst Published Jun 22, 2023, 4:34 PM IST
Highlights

ಭಾರತೀಯ ವಾಯುಪಡೆಗೆ ಫೈಟರ್ ಜೆಟ್ ಎಂಜಿನ್‌ಗಳನ್ನು ಉತ್ಪಾದಿಸಲು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಜನರಲ್ ಎಲೆಕ್ಟ್ರಿಕ್‌ನ ಏರೋಸ್ಪೇಸ್ ಘಟಕ ಗುರುವಾರ ತಿಳಿಸಿದೆ.
 

ನವದೆಹಲಿ (ಜೂ.22): ಮಹತ್ವದ ಬೆಳವಣಿಗೆಯಲ್ಲಿ ಭಾರತದ ಹಿಂದುಸ್ತಾನ್‌ ಏರೋನಾಟಿಕ್ಸ್ ಲಿಮಿಟೆಡ್‌ ಹಾಗೂ ಅಮೆರಿಕದ ಏರ್‌ಸ್ಪೇಸ್‌ ದೈತ್ಯ ಜನಲರ್‌ ಎಲೆಕ್ಟ್ರಿಕ್‌ ನಡುವೆ ಐತಿಹಾಸಿಕ ಒಪ್ಪಂದವಾಗಿದೆ. ಭಾರತೀಯ ವಾಯುಸೇನೆಯ ಫೈಟರ್‌ ಜೆಟ್‌ಗಳಿಗೆ ಇಂಜಿನ್‌ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಎಚ್‌ಎಎಲ್‌ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಅಮೆರಿಕದ ಜನರಲ್ ಎಲೆಕ್ಟ್ರಿಕ್‌ನ ಏರೋಸ್ಪೇಸ್ ಘಟಕ ಗುರುವಾರ ಪ್ರಕಟಿಸಿದೆ. ಅಮೆರಿಕದ ಜಿಇ ಏರೋಸ್ಪೇಸ್ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಫೈಟರ್ ಪ್ಲೇನ್ ಇಂಜಿನ್ ತಯಾರಿಸುವ ಒಪ್ಪಂದಕ್ಕೆ ಸಹಿ ಹಾಕಿವೆ. ಜಿಇ ಈ ಕುರಿತು ಎಂಒಯು ಬಗ್ಗೆ ಮಾಹಿತಿ ನೀಡಿದೆ. ಜಿಇ ಪ್ರಕಾರ, ಭಾರತೀಯ ವಾಯುಪಡೆಯು ಯುದ್ಧ ವಿಮಾನಕ್ಕೆ ಭಾರತದಲ್ಲಿಯೇ ತಯಾರಿಸಲಾಗುವ ತನ್ನ ಎಂಜಿನ್ ಅನ್ನು ಬಳಸಲಿದೆ. ಮೋದಿಯವರ ಅಮೆರಿಕ ಪ್ರವಾಸದ ವೇಳೆ ಸಹಿ ಹಾಕಲಾದ ಈ ಒಪ್ಪಂದವನ್ನು ಜಿಇ ಐತಿಹಾಸಿಕ ಎಂದು ಬಣ್ಣಿಸಿದೆ.  ಇನ್ನು ಅಧ್ಯಕ್ಷ ಜೋ ಬಿಡನ್ ಮತ್ತು ಪ್ರಧಾನಿ ಮೋದಿ ಅವರು ಜಂಟಿ ಹೇಳಿಕೆಯಲ್ಲಿ ಭಾರತಕ್ಕೆ ಸಶಸ್ತ್ರ ಡ್ರೋನ್‌ಗಳ ಮಾರಾಟವನ್ನು ಘೋಷಿಸಲಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ.

ಒಪ್ಪಂದದ ಅನ್ವಯ ಜನಲರ್‌ ಎಲೆಕ್ಟ್ರಿಕ್‌ನ ಏರೋಸ್ಪೇಸ್‌ ಘಟಕ,  ತೇಜಸ್ ಯುದ್ಧ ವಿಮಾನಕ್ಕೆ F404 ಎಂಜಿನ್ ಅನ್ನು ಪೂರೈಸುತ್ತದೆ. ಈ ಎಂಜಿನ್ ಅನ್ನು 83 ತೇಜಸ್ ವಿಮಾನಗಳಲ್ಲಿ ಬಳಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬುಧವಾರವಷ್ಟೇ ಜಿಇ ಏರೋಸ್ಪೇಸ್‌ನ ಮುಖ್ಯವ್ಯವಸ್ಥಾಪಕ ಅಧಿಕಾರಿ ಲ್ವಾರೆನ್ಸ್‌ ಕಲ್ಪ್‌ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲಿಯೇ ಐತಿಹಾಸಿಕ ಡೀಲ್‌ ಘೋಷಣೆಯಾಗಿದೆ.

ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌  ಹಾಗೂ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಏಜೆನ್ಸಿ 2027-28ರ ವೇಳೆಗೆ ಜಂಟಿಯಾಗಿ ತೇಜಸ್‌ ಮಾರ್ಕ್‌-2 ಫೈಟರ್‌ ಜೆಟ್‌ಅನ್ನು ಅಭಿವೃದ್ಧಿ ಮಾಡಲಿದೆ. ಇದರಲ್ಲಿ ಜಿಇ ಏರೋಸ್ಪೇಸ್‌ ಇಂಜಿನ್‌ ಇರಲಿದೆ. ಅದಕ್ಕೂ ಮುನ್ನವೇ ಅಂದರೆ, 2024ರ ಅಂತ್ಯದ ವೇಳೆಗೆ ಜಿಇ 414 ಇಂಜಿನ್‌ ಹೊಂದಿರುವ ತೇಜಸ್‌ ಮಾರ್ಕ್‌-2 ವಿಮಾನದ ಮಾದರಿ ಬಿಡುಗಡೆಯಾಗಲಿದೆ.

ಅದರೊಂದಿಗೆ ಒಪ್ಪಂದದ ಪ್ರಕಾರ ಜಿಇ-414 ಇಂಜಿನ್‌ ಸಂಪೂರ್ಣವಾಗಿ ಭಾರತದಲ್ಲಿಯೇ ನಿರ್ಮಾಣವಾಗಲಿದೆ. ಅದರೊಂದಿಗೆ ಶೇ.100ರಷ್ಟು ಟ್ರಾನ್ಸ್‌ಫರ್‌ ಆಫ್‌ ಟೆಕ್ನಾಲಜಿ ಒಪ್ಪಂದವನ್ನೂ ಇದು ಹೊಂದಿದೆ. ಆದರೆ, ಇದಕ್ಕೆ ಯುಎಸ್‌ ಕಾಂಗ್ರೆಸ್‌ ಒಪ್ಪಿಗೆ ಬೇಕಾಗಲಿದೆ. ಟ್ರಾನ್ಸಫರ್‌ ಆಫ್‌ ಟೆಕ್ನಾಲಜಿ ಎಂದರೆ, ಇಂಜಿನ್‌ ನಿರ್ಮಾಣದ ಸಂಪೂರ್ಣ ತಾಂತ್ರಿಕ ಮಾಹಿತಿಯನ್ನು ಭಾರತದೊಂದಿಗೆ ಹಸ್ತಾಂತರ ಮಾಡಿಕೊಳ್ಳುವುದು. ಇದು ತೇಜಸ್‌ ಮಾರ್ಕ್‌-2 ಟ್ವಿನ್‌ ಇಂಜಿನ್‌ ಸುಧಾರಿತ ಮಲ್ಟಿ ರೋಲ್‌ ಯುದ್ಧವಿಮಾನ ಮಾತ್ರವಲ್ಲದೆ, ಟ್ವಿನ್‌ ಇಂಜಿನ್‌ ಡೆಕ್‌ ಬೇಸ್ಡ್‌ ಫೈಟರ್‌ ಜೆಟ್‌ ಅಂದರೆ ನೌಕಾಸೇನೆಯ ವಿಮಾನಗಳಿಗೂ ಇದರ ಇಂಜಿನ್‌ ಬಳಕೆಯಾಗಲಿದೆ.

"ಭಾರತ ಮತ್ತು HAL ಜೊತೆಗಿನ ನಮ್ಮ ದೀರ್ಘಕಾಲದ ಪಾಲುದಾರಿಕೆಯಿಂದ ಇದು ಐತಿಹಾಸಿಕ ಒಪ್ಪಂದವಾಗಿದೆ" ಎಂದು GE ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು GE ಏರೋಸ್ಪೇಸ್‌ನ ಸಿಇಒ ಎಚ್‌. ಲಾರೆನ್ಸ್ ಕಲ್ಪ್, ಜೂನಿಯರ್ ಹೇಳಿದ್ದಾರೆ.

ಅಮೆರಿಕದಲ್ಲಿ ಮೋದಿಗೆ ಇಂದ್ರದೇವನ ಆಶೀರ್ವಾದ: ಮಳೆಯ ಆರ್ಭಟದ ನಡುವೆಯೂ ರಾಷ್ಟ್ರಗೀತೆಗೆ ‘ನಮೋ’ ಗೌರವ

“ಅಧ್ಯಕ್ಷ ಬಿಡೆನ್ ಮತ್ತು ಪ್ರಧಾನಿ ಮೋದಿಯವರ ಎರಡು ರಾಷ್ಟ್ರಗಳ ನಡುವಿನ ನಿಕಟ ಸಮನ್ವಯದ ದೃಷ್ಟಿಯನ್ನು ಮುನ್ನಡೆಸುವಲ್ಲಿ ಪಾತ್ರ ವಹಿಸಲು ನಾವು ಹೆಮ್ಮೆಪಡುತ್ತೇವೆ. ನಮ್ಮ F414 ಎಂಜಿನ್‌ಗಳು ಯಾವುದಕ್ಕೂ ಸಾಟಿಯಲ್ಲ ಮತ್ತು ಎರಡೂ ದೇಶಗಳಿಗೆ ಪ್ರಮುಖ ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತಾ ಪ್ರಯೋಜನಗಳನ್ನು ನೀಡುತ್ತವೆ, ಏಕೆಂದರೆ ನಮ್ಮ ಗ್ರಾಹಕರು ತಮ್ಮ ಮಿಲಿಟರಿ ಫ್ಲೀಟ್‌ನ ಅಗತ್ಯಗಳನ್ನು ಪೂರೈಸಲು ಉತ್ತಮ ಗುಣಮಟ್ಟದ ಎಂಜಿನ್‌ಗಳನ್ನು ಉತ್ಪಾದಿಸಲು ನಾವು ಸಹಾಯ ಮಾಡುತ್ತೇವೆ, ”ಎಂದು ಅವರು ಹೇಳಿದರು.

 

ಅಮೆರಿಕಾದ ಶ್ವೇತಭವನದಲ್ಲಿ ಪ್ರಧಾನಿ ಮೋದಿಗೆ ವಿಶೇಷ ಔತಣಕೂಟ, ಮೆನುವಿನಲ್ಲಿ ಏನೇನಿದೆ?

click me!