
ದೇಶದ ಮಹಾನಗರಗಳು ಮಾತ್ರವಲ್ಲದೇ ಜಿಲ್ಲಾಮಟ್ಟದ ಸಣ್ಣ ಸಣ್ಣ ನಗರಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಜನ ಉದ್ಯೋಗಸ್ಥ ಮಹಿಳೆಯರು ತಮ್ಮ ಪುಟ್ಟ ಮಕ್ಕಳನ್ನು ಪ್ಲೇ ಹೋಮ್‌ಗಳಲ್ಲಿ ಕಿಂಡರ್‌ಗಾಟನ್‌ಗಳಲ್ಲಿ ಬಿಟ್ಟು ಹೋಗುತ್ತಾರೆ. ಇದಕ್ಕೆ ವಾರ್ಷಿಕವಾಗಿ ಪೋಷಕರು ಅಲ್ಲಿರುವ ವ್ಯವಸ್ಥೆಗೆ ತಕ್ಕಂತೆ ಸಾವಿರದಿಂದ ಲಕ್ಷದವರೆಗೆ ವೆಚ್ಚ ಮಾಡುತ್ತಾರೆ. ಪುಟ್ಟ ಕಂದಮ್ಮಗಳನ್ನು ಬಿಟ್ಟು ಹೋಗುವ ವೇಳೆ ತಾಯಿಗೆ ಕೊರಗು ಕಾಡಿದರೂ ಅಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಒಂದೇ ಒಂದು ಭರವಸೆಯಿಂದ ಬೇಜಾರಾದರೂ ಪೋಷಕರು ಮಕ್ಕಳನ್ನು ಅಲ್ಲಿ ಬಿಟ್ಟು ಹೋಗುತ್ತಾರೆ. ಏಕೆಂದರೆ ಮಹಾನಗರಗಳಲ್ಲಿ ಗಂಡ ಹೆಂಡತಿ ಇಬ್ಬರು ದುಡಿದರೂ ಸಾಕಾಗುವುದಿಲ್ಲ, ಎಲ್ಲರೂ ಉದ್ಯೋಗವಿಲ್ಲದೇ ಬದುಕುವಷ್ಟು ಆರ್ಥಿಕ ಶ್ರೀಮಂತರೂ ಅಲ್ಲ ಹೀಗಾಗಿ ಅನಿವಾರ್ಯವಾಗಿ ಪೋಷಕರು ತಮ್ಮ ಹಾಲುಗಲ್ಲದ ಕಂದನನ್ನು ಅಲ್ಲಿ ಬಿಟ್ಟು ಹೋಗುವ ಅನಿವಾರ್ಯತೆ ಇರುತ್ತದೆ. ಆದರೆ ಅಷ್ಟೊಂದು ಪೋಷಕರು ನಂಬಿದ ಶಿಕ್ಷಕರೇ ಮಕ್ಕಳ ಮೇಲೆ ದೌರ್ಜನ್ಯವೆಸಗಿದರೆ ಮಾತು ಬಾರದ ಮಕ್ಕಳು ಹೇಳುವುದಾದರು ಯಾರ ಬಳಿ. ಪ್ಲೇಹೋಮ್ ಒಂದರಲ್ಲಿ ಮಕ್ಕಳನ್ನು ನೋಡಬೇಕಾದ ಕೇರ್ ಟೇಕರ್ ಒಬ್ಬರೇ ಪುಟ್ಟ ಕಂದನ ಕೆನ್ನೆಗೆ ಥಳಿಸಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪ್ಲೇ ಹೋಮ್ ಒಂದರಲ್ಲಿ ನಡೆದಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಘಟನೆಯ ಬಗ್ಗೆ ಈಗ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹಾಡನ್ನು ಹಾಡುವಾಗ ಚಪ್ಪಾಳೆ ತಟ್ಟಿ ಹಾಡಲಿಲ್ಲ ಎಂಬ ಕಾರಣಕ್ಕೆ ಈ ಪುಟ್ಟ ಕಂದನ ಕೆನ್ನೆಗೆ ಬಾರಿಸಿ ಹಲ್ಲೆ ಮಾಡಲಾಗಿದೆ. ಥಾಣೆಯ ಉಲ್ಲಾಸ್‌ನಗರದ ಪ್ಲೇಹೋಮೊಂದರಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ವೈರಲ್ ಆದ ವೀಡಿಯೋದಲ್ಲಿ ಶಿಕ್ಷಕಿ ಎರಡೆರಡು ಬಾರಿ ಮಗುವಿನ ಕೆನ್ನೆಗೆ ಬಾರಿಸುವುದನ್ನು ಕಾಣಬಹುದಾಗಿದೆ. ಘಟನೆಗೆ ಸಂಬಂಧಿಸಿದಂತೆ ಈಗ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಾಗಿದೆ. ಮಗುವಿನ ಮೇಲೆ ಶಿಕ್ಷಕಿ ಹಲ್ಲೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ ಈ ಘಟನೆ ಆಗಸ್ಟ್ 7 ರಂದು ಉಲ್ಲಾಸ್ನಗರದ ಕ್ಯಾಂಪ್ ಸಂಖ್ಯೆ 4ರಲ್ಲಿ ಇರುವ ಎಕ್ಸ್‌ಲೆನ್ಸ್ ಕಿಡ್ಸ್ ವರ್ಲ್ಡ್ ಹೆಸರಿನ ಶಾಲೆಯಲ್ಲಿ ನಡೆದಿದೆ. ದಾಶ್ ಮೆಂಗಾನಿ ಎಂದು ಗುರುತಿಸಿದ ಮಗುವಿನ ಮೇಲೆ ಶಿಕ್ಷಕಿ ಹಲ್ಲೆ ಮಾಡಿದ್ದಾಳೆ.
ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಬಳಿಕ ಘಟನೆ ಬೆಳಕಿಗೆ
ತರಗತಿಯಲ್ಲಿ ಶಿಕ್ಷಕಿ ಮಕ್ಕಳಿಗೆ ಕೆಲ ಶೈಕ್ಷಣಿಕ ಚಟುವಟಿಕೆಯನ್ನು ನೀಡಿದ್ದು, ಈ ವೇಳೆ ಮಗು ಸರಿಯಾಗಿ ಸ್ಪಂದಿಸದೇ ಇದ್ದಾಗ ಆ ಶಿಕ್ಷಕಿ ಮಗುವಿಗೆ ಸಮಾಧಾನವಾಗಿ ಹೇಳುವ ಬದಲು ಕೆನ್ನೆಗೆ ಬಾರಿಸಿದ್ದಾಳೆ. ಹೀಗೆ ಪುಟ್ಟ ಕಂದನ ಮೇಲೆ ಹಲ್ಲೆ ಮಾಡಿದ ಶಿಕ್ಷಕಿಯನ್ನು ಗಾಯತ್ರಿ ಪಾತ್ರಾ ಎಂದು ಗುರುತಿಸಲಾಗಿದೆ. ಇತರ ಮಕ್ಕಳೊಂದಿಗೆ ಹಾಡುತ್ತಾ ಚಪ್ಪಾಳೆ ತಟ್ಟುವುದಕ್ಕೆ ಮಗು ವಿಫಲವಾದಾಗ ಆ ಶಿಕ್ಷಕಿ ಮಗುವಿನ ಕೆನ್ನೆಗೆ ಹೊಡೆದಿದ್ದಾಳೆ. ಘಟನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕವೇ ಪೋಷಕರಿಗೆ ವಿಚಾರ ತಿಳಿದಿದೆ. ದೂರು ನೀಡಿದವರ ಹಿರಿಯ ಪುತ್ರಿ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿ ಪೋಷಕರಿಗೆ ವಿಷಯ ತಿಳಿಸಿದ ಬಳಿಕವಷ್ಟೇ ಶಿಕ್ಷಕಿ ತಮ್ಮ ಮಗುವಿನ ಮೇಲೆ ಹೀಗೆ ಹಲ್ಲೆ ಮಾಡಿರುವುದು ಪೋಷಕರ ಗಮನಕ್ಕೆ ಬಂದಿದೆ.
ತನ್ನ ಮಗುವಿನ ಮೇಲೆ ಶಿಕ್ಷಕಿ ಹೀಗೆ ಹಲ್ಲೆ ಮಾಡುತ್ತಿರುವುದನ್ನು ನೋಡಿದ ತಾಯಿ ವನಿಷಾ ಆಘಾತಗೊಂಡಿದ್ದು, ವೀಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳೀಯ ವಿಠಲವಾಡಿ ಪೊಲೀಸ್ ಠಾಣೆಯಲ್ಲಿ ಮಗುವಿನ ತಾಯಿ ವನಿಷಾ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಘಟನೆಯ ಬಗ್ಗೆ ಮಗುವಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಇಷ್ಟು, ಸಣ್ಣ ವಿಷಯಕ್ಕೆ ಅಂತಹ ಚಿಕ್ಕ ಮಗುವಿನ ಮೇಲೆ ಹಲ್ಲೆ ನಡೆಸುವುದು ಅಮಾನವೀಯ ಮತ್ತು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ವಿಠಲವಾಡಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್ ಕೋಲಿ, ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಕವಿತೆ ಪಠಣ ಮಾಡುವಾಗ ಚಪ್ಪಾಳೆ ತಟ್ಟದಿದ್ದಕ್ಕಾಗಿ ಶಿಕ್ಷಕಿ ಮಗುವಿಗೆ ಕಪಾಳಮೋಕ್ಷ ಮಾಡಿರುವುದು ಪ್ರಾಥಮಿಕವಾಗಿ ಕಂಡುಬಂದಿದೆ ಎಂದು ಹೇಳಿದರು. ಮಗುವಿನ ತಾಯಿಯ ದೂರಿನ ಆಧಾರದ ಮೇಲೆ ನಾವು ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕೋಲಿ ಹೇಳಿದರು. ಒಟ್ಟಿನಲ್ಲಿ ಇಂತಹ ಘಟನೆಗಳು ಪ್ಲೇ ಹೋಮ್‌ಗೆ ತಮ್ಮ ಮಕ್ಕಳನ್ನು ಕಳುಹಿಸುವ ಪೋಷಕರ ಭಯವನ್ನು ಜಾಸ್ತಿ ಮಾಡಿದೆ.
ಇದನ್ನೂ ಓದಿ: 15 ದಿನದ ಮಗುವಿನ ತುಟಿಗೆ ಗಮ್ ಅಂಟಿಸಿ ಕಾಡಲ್ಲಿ ಬಿಟ್ಟ ಕಟುಕರು
ಇದನ್ನೂ ಓದಿ: ನೆಟ್‌ಫ್ಲಿಕ್ಸ್ ಸಿರೀಸ್, ಶಾರುಖ್ ಖಾನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಮೀರ್ ವಾಂಖೆಡೆ
ಇದನ್ನೂ ಓದಿ: ಶಿಕ್ಷಣಾಧಿಕಾರಿಗೇ ಮುಖ್ಯ ಶಿಕ್ಷಕನ ಬೆಲ್ಟ್ ಟ್ರೀಟ್‌ಮೆಂಟ್: ಸೊಂಟದಲ್ಲಿದ್ದ ಬೆಲ್ಟ್ ಬಿಚ್ಚಿ ಥಳಿಸಿದ ಹೆಡ್‌ಮಾಸ್ಟರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ