ಮಗಳ PPF ಅಕೌಂಟ್‌ನಿಂದ 8 ಲಕ್ಷ ಹಣ ತೆಗೆದ ಅಪ್ಪ, ಕೋರ್ಟ್‌ ಮೆಟ್ಟಿಲೇರಿ ಬಡ್ಡಿ ಸಮೇತ ವಾಪಾಸ್‌ ಪಡೆದ ಪುತ್ರಿ!

Published : Aug 10, 2026, 07:01 PM IST
Delhi High Court

ಸಾರಾಂಶ

ಮಗಳ ಸಾರ್ವಜನಿಕ ಭವಿಷ್ಯ ನಿಧಿ (PPF) ಖಾತೆಯಿಂದ ಹಣ ಹಿಂಪಡೆದು, ಅದನ್ನು ಜೀವನಾಂಶಕ್ಕೆ ಸರಿದೂಗಿಸಲು ಯತ್ನಿಸಿದ ತಂದೆಗೆ ದೆಹಲಿ ಹೈಕೋರ್ಟ್ ತಪರಾಕಿ ನೀಡಿದೆ. ಮಗಳ ಹೂಡಿಕೆಯ ಹಣಕ್ಕೆ ಆಕೆಯೇ ಸಂಪೂರ್ಣ ಹಕ್ಕುದಾರಳು ಮತ್ತು ಜೀವನಾಂಶ ನೀಡುವುದು ತಂದೆಯ ಪ್ರತ್ಯೇಕ ಕಾನೂನುಬದ್ಧ ಜವಾಬ್ದಾರಿ ಎಂದಿದೆ.

ನವದೆಹಲಿ (ಆ.10): ತಂದೆಯಾದವನು ತನ್ನ ಮಗಳ ಸಾರ್ವಜನಿಕ ಭವಿಷ್ಯ ನಿಧಿ (PPF) ಖಾತೆಯಲ್ಲಿದ್ದ ಹಣವನ್ನು ಹಿಂಪಡೆದು, ಅದನ್ನು ಆಕೆಗೆ ನೀಡಬೇಕಾದ ಜೀವನಾಂಶದ (Maintenance) ವೆಚ್ಚಕ್ಕೆ ಸರಿದೂಗಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಗಳ ಪಿಪಿಎಫ್ ಖಾತೆಯ ಸಂಪೂರ್ಣ ಮೊತ್ತವನ್ನು ಬಡ್ಡಿ ಸಮೇತ ಹಿಂತಿರುಗಿಸುವಂತೆ ಕೋರ್ಟ್ ತಂದೆಗೆ ಆದೇಶಿಸಿದೆ.ತಂದೆ ಮತ್ತು ಮಗಳ ನಡುವಿನ ಈ ಅಪರೂಪದ ಆರ್ಥಿಕ ಹಾಗೂ ಕಾನೂನು ಸಮರವು ಪೋಷಕರ ಆರ್ಥಿಕ ಗಡಿ ಮತ್ತು ಮಕ್ಕಳ ಹಕ್ಕುಗಳ ಕುರಿತು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಪ್ರಕರಣದ ಹಿನ್ನೆಲೆ ಏನು?

ಸುಧೀರ್ ಕವಾತ್ರ ಎಂಬುವವರು 1999 ರಲ್ಲಿ ತಮ್ಮ ಮಗಳು ಶ್ಯಾಮ್ಲಿ ಕವಾತ್ರ ಹೆಸರಿನಲ್ಲಿ ಪಿಪಿಎಫ್ ಖಾತೆಯನ್ನು ತೆರೆದಿದ್ದರು. ಆದರೆ, 2017 ರಲ್ಲಿ ಈ ಖಾತೆಯು ಮುಕ್ತಾಯದ (Maturity) ಅವಧಿಗೆ ಬಂದಾಗ ಶ್ಯಾಮ್ಲಿ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಆಕೆಗೆ ಭಾರಿ ಆಘಾತ ಕಾದಿತ್ತು. ಏಕೆಂದರೆ, ತಂದೆ ಸುಧೀರ್ ಕವಾತ್ರ ಅವರು 2016 ರಲ್ಲೇ ಬ್ಯಾಂಕ್‌ಗೆ ಮುಚ್ಚಳಿಕೆ ಪತ್ರ ನೀಡುವ ಮೂಲಕ, ಮಗಳ ಶಿಕ್ಷಣ ಮತ್ತು ಯೋಗಕ್ಷೇಮದ ನೆಪ ಹೇಳಿ ಖಾತೆಯಲ್ಲಿದ್ದ ಬರೋಬ್ಬರಿ ₹8 ಲಕ್ಷಕ್ಕೂ ಹೆಚ್ಚಿನ ಸಂಪೂರ್ಣ ಮೊತ್ತವನ್ನು ಡ್ರಾ ಮಾಡಿ ಖಾತೆಯನ್ನೇ ಮುಚ್ಚಿದ್ದರು.

ಪೋಷಕರ ನಡುವಿನ ವೈಮನಸ್ಸಿನಿಂದಾಗಿ ಶ್ಯಾಮ್ಲಿ ತಮ್ಮ ತಾಯಿಯೊಂದಿಗೆ ವಾಸಿಸುತ್ತಿದ್ದರು. ಪ್ರಸ್ತುತ ಕಾಲೇಜು ವಿದ್ಯಾರ್ಥಿನಿಯಾಗಿರುವ ಶ್ಯಾಮ್ಲಿ, ಶಿಕ್ಷಣ ವೆಚ್ಚ ಭರಿಸಲು ಕಷ್ಟಪಡುತ್ತಿದ್ದು, ತಂದೆಯು ತಾಯಿಗೆ ಆರ್ಥಿಕ ಸಂಕಷ್ಟ ತಂದೊಡ್ಡುವ ಉದ್ದೇಶದಿಂದಲೇ ಈ ಹಣವನ್ನು ಅಕ್ರಮವಾಗಿ ಹಿಂಪಡೆದಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಜಿಲ್ಲಾ ನ್ಯಾಯಾಲಯದ ತೀರ್ಪು ಎತ್ತಿಹಿಡಿದ ಹೈಕೋರ್ಟ್

ಈ ಪ್ರಕರಣವನ್ನು ಮೊದಲು ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಲಯವು, ಮಗಳ ಸಂಪೂರ್ಣ ಮೊತ್ತವನ್ನು ಶೇ. 8 ರಷ್ಟು ಬಡ್ಡಿಯೊಂದಿಗೆ ಹಿಂತಿರುಗಿಸುವಂತೆ ತಂದೆಗೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ತಂದೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರಿದ್ದ ಪೀಠವು ಆಗಸ್ಟ್ 3 ರಂದು ತೀರ್ಪು ನೀಡಿ, ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. ಮಗಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ಹೂಡಿಕೆ ಮಾಡಿದ ಹಣವನ್ನು ತಂದೆಯು ತನ್ನ ಪ್ರತ್ಯೇಕ ಕಾನೂನುಬದ್ಧ ಜವಾಬ್ದಾರಿಯಾದ 'ಜೀವನಾಂಶ' ನೀಡುವುದಕ್ಕೆ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ದೆಹಲಿ ಹೈಕೋರ್ಟ್ ತೀರ್ಪಿನಲ್ಲಿ ಏನಿದೆ?

ವಿಚಾರಣೆ ವೇಳೆ ತಂದೆ ಸುಧೀರ್, ಮಗಳ ಯೋಗಕ್ಷೇಮಕ್ಕಾಗಿ ಈಗಾಗಲೇ ಸುಮಾರು ₹6 ಲಕ್ಷ ಜೀವನಾಂಶ ನೀಡಿದ್ದೇನೆ ಮತ್ತು ಉತ್ತರಾಖಂಡ ಹೈಕೋರ್ಟ್ ಆದೇಶದಂತೆ ಹೆಂಡತಿಗೂ ಹೆಚ್ಚುವರಿ ಜೀವನಾಂಶ ನೀಡುತ್ತಿದ್ದು, ಈ ಹಣವನ್ನು ಮಗಳೇ ಬಳಸುತ್ತಿದ್ದಾಳೆ ಎಂದು ವಾದಿಸಿದ್ದರು.

ಆದರೆ ಈ ವಾದವನ್ನು ತಳ್ಳಿಹಾಕಿದ ನ್ಯಾಯಪೀಠವು, 'ಮಗುವಿನ ಹೆಸರಿನಲ್ಲಿ ಮಾಡಿದ ಹೂಡಿಕೆಗೆ ಆ ಮಗುವೇ ಸಂಪೂರ್ಣ ಹಕ್ಕುದಾರಳು. ತಂದೆಯು ಕೇವಲ 'ಪಾಲಕ' (Guardian) ಅಥವಾ ವಿಶ್ವಸನೀಯ ಸಾಮರ್ಥ್ಯದಲ್ಲಿ ಮಾತ್ರ ಆ ಹಣವನ್ನು ಹೊಂದಿರಬಹುದೇ ಹೊರತು, ಮಗುವಿಗೆ ನೀಡಬೇಕಾದ ಜೀವನಾಂಶದ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಆ ಹಣವನ್ನು ಬಳಸುವಂತಿಲ್ಲ' ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಾಲಯವು ತನ್ನ ಆದೇಶದಲ್ಲಿ, ಚಿಕ್ಕವಯಸ್ಸಿನಲ್ಲಿ ಪೋಷಕರು ಮಕ್ಕಳ ಹೆಸರಿನಲ್ಲಿ ಪ್ರತಿವರ್ಷ ಉಳಿತಾಯ ಮಾಡಿ ಹೂಡಿಕೆ ಮಾಡುವುದು ಅವರ ಭವಿಷ್ಯದ ಬಳಕೆಗಾಗಿ. ಆದರೆ, ಜೀವನಾಂಶ ಎಂಬುದು ಮಗುವಿನ ದೈನಂದಿನ ಪಾಲನೆ-ಪೋಷಣೆಯ ವೆಚ್ಚವಾಗಿದ್ದು, ಅದು ಪೋಷಕರ ಸ್ವತಂತ್ರ ಕಾನೂನುಬದ್ಧ ಜವಾಬ್ದಾರಿಯಾಗಿದೆ. ಕೇವಲ ವೈವಾಹಿಕ ಭಿನ್ನಾಭಿಪ್ರಾಯಗಳ ಕಾರಣಕ್ಕಾಗಿ ಮಗುವಿನ ಹೂಡಿಕೆಯ ಹಣವನ್ನು ತಂದೆಯು ತನ್ನ ಕಾನೂನುಬದ್ಧ ಜವಾಬ್ದಾರಿ ತೀರಿಸಲು ಬಳಸುವುದು ಮಗುವಿನ ಹಣವನ್ನು ದುರ್ಬಳಕೆ ಮಾಡಿದಂತೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಅಲ್ಲದೆ, ಹೆಂಡತಿಯ ಜೀವನಾಂಶದ ಹಕ್ಕು ಪ್ರತ್ಯೇಕ ಕಾನೂನುಬದ್ಧ ಹಕ್ಕಾಗಿದ್ದು, ಮಗಳಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಹಣವನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪತಿಯ ಚಿತಾಭಸ್ಮ ಹೊತ್ತು ಜಪಾನ್‌ನಿಂದ ಭಾರತಕ್ಕೆ: ಮಿಯಾಕೋ ಪ್ರೀತಿಯ ಕಥೆ ಕಣ್ಣೀರಾಗಿಸುವಂತಿದೆ!
ಕಣ್ಣೆದುರೇ 100 'ಮಕ್ಕಳ' ಮಾರಣಹೋಮ: ನಾವೇ ಬೆಳೆಸಿದ ಮಗುವದು, ಪ್ಲೀಸ್​ ಕೊಲ್ಲಬೇಡಿ ಎಂದ್ರೂ ಕೇಳದ ಅಧಿಕಾರಿಗಳು