ನಂದಿಗ್ರಾಮದಲ್ಲಿಂದು ದೀದಿ ಭವಿಷ್ಯ ನಿರ್ಧಾರ: ಮಾಜಿ ಆಪ್ತನ ವಿರುದ್ಧವೇ ಮಮತಾ ಸ್ಪರ್ಧೆ!

By Kannadaprabha NewsFirst Published Apr 1, 2021, 7:22 AM IST
Highlights

ನಂದಿಗ್ರಾಮದಲ್ಲಿಂದು ದೀದಿ ಭವಿಷ್ಯ ನಿರ್ಧಾರ| ಬಂಗಾಳ, ಅಸ್ಸಾಂನಲ್ಲಿ 2ನೇ ಹಂತದ ಎಲೆಕ್ಷನ್‌| ಮಾಜಿ ಆಪ್ತನ ವಿರುದ್ಧವೇ ಮಮತಾ ಸ್ಪರ್ಧೆ

ಕೋಲ್ಕತಾ(ಏ.01): ತೀವ್ರ ಕುತೂಹಲ ಕೆರಳಿಸಿರುವ ಪಂಚರಾಜ್ಯ ಚುನಾವಣೆಯ 2ನೇ ಹಂತದಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಗುರುವಾರ ಮತದಾನ ನಡೆಯಲಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್‌ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಹಾಗೂ ಅವರ ಮಾಜಿ ಆಪ್ತನಾದ ಬಿಜೆಪಿಯ ಸುವೇಂದು ಅಧಿಕಾರಿ ನಡುವಿನ ಜಿದ್ದಾಜಿದ್ದಿನ ಕಣಕ್ಕೆ ಸಾಕ್ಷಿಯಾಗಿರುವ ಮತ್ತು ಇಡೀ ದೇಶದ ಗಮನ ಸೆಳೆದಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೂ ಗುರುವಾರವೇ ಚುನಾವಣೆ ನಡೆಯಲಿದೆ. ಇದರೊಂದಿಗೆ ಇಬ್ಬರ ಭವಿಷ್ಯವೂ ತೀರ್ಮಾನವಾಗಲಿದೆ.

ಪಶ್ಚಿಮ ಬಂಗಾಳದ 294 ಕ್ಷೇತ್ರಗಳ ಪೈಕಿ 2ನೇ ಹಂತದಲ್ಲಿ 30 ಸ್ಥಾನಗಳಿಗೆ ಚುನಾವಣೆ ನಿಗದಿ ಆಗಿದೆ. 24 ಪರಗಣ, ಬಂಕುರಾ, ಪಶ್ಚಿಮ ಮಿಡ್ನಾಪುರ, ಪೂರ್ವ ಮಿಡ್ನಾಪುರ ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ. 171 ಅಭ್ಯರ್ಥಿಗಳು ಕಣದಲ್ಲಿದ್ದು, 76 ಲಕ್ಷ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಗುರುವಾರದ ನಂತರ ಪಶ್ಚಿಮ ಬಂಗಾಳದಲ್ಲಿ ಇನ್ನೂ 6 ಹಂತದ ಚುನಾವಣೆಗಳು ಬಾಕಿ ಉಳಿಯಲಿವೆ.

ಅಸ್ಸಾಂನ 126 ವಿಧಾನಸಭಾ ಕ್ಷೇತ್ರಗಳ ಪೈಕಿ 2ನೇ ಹಂತದಲ್ಲಿ 39 ಕ್ಷೇತ್ರಗಳಿಗೆ ಚುನಾವಣೆ ನಿಗದಿ ಆಗಿದ್ದು, 345 ಮಂದಿ ಕಣದಲ್ಲಿ ಇದ್ದಾರೆ. ಅಸ್ಸಾಂನಲ್ಲಿ ಮಾ.27ರಂದು ಮೊದಲ ಹಂತದಲ್ಲಿ 47 ಕ್ಷೇತ್ರಗಳಿಗೆ ಚುನಾವಣೆ ನೆರವೇರಿತ್ತು. ಉಳಿದ 79 ಕ್ಷೇತ್ರಗಳಿಗೆ 3ನೇ ಹಂತದಲ್ಲಿ ಚುನಾವಣೆ ನಡೆಯಲಿದೆ.

click me!