ಎವರ್‌ ಗ್ರೀನ್ 25 ಭಾರತೀಯ ನಾವಿಕರಿಗೆ ತನಿಖೆ ಭೀತಿ!

By Suvarna NewsFirst Published Mar 31, 2021, 4:18 PM IST
Highlights

ಎವರ್‌ ಗ್ರೀನ್ 25 ಭಾರತೀಯ ನಾವಿಕರಿಗೆ ತನಿಖೆ ಭೀತಿ| ಹಡಗು ಕಂಪನಿಯಿಂದ ಪ್ರಶಂಸೆ, ಆದರೆ ಈಜಿಪ್ಟ್‌ನಲ್ಲಿ ತನಿಖೆ

ನವದೆಹಲಿ/ ಸೂಯೆಜ್‌ (ಮಾ.31): ಜಗತ್ಪ್ರಸಿದ್ಧ ಸೂಯೆಜ್‌ ಕಾಲುವೆಯಲ್ಲಿ ಒಂದು ವಾರದ ಕಾಲ ಸಿಲುಕಿ ಸೋಮವಾರ ಬಿಡುಗಡೆಗೊಂಡ ಎವರ್‌ ಗಿವನ್‌ ಕಂಟೇನರ್‌ ಹಡಗಿನಲ್ಲಿರುವ ಎಲ್ಲಾ 25 ಸಿಬ್ಬಂದಿ ಭಾರತೀಯರಾಗಿದ್ದು, ಅವರಿಗೀಗ ತನಿಖೆಯ ಭೀತಿ ಎದುರಾಗಿದೆ.

ಜಪಾನ್‌ ಕಂಪನಿ ಒಡೆತನದ, ಜರ್ಮನ್‌ ಕಂಪನಿಯ ಮೇಲ್ವಿಚಾರಣೆಯಲ್ಲಿರುವ ಈ ಹಡಗು ಸೂಯೆಜ್‌ ಕಾಲುವೆಯಲ್ಲಿ ಅಡ್ಡ ನಿಂತಿದ್ದರಿಂದ ನೂರಾರು ಹಡಗುಗಳ ಸಂಚಾರಕ್ಕೆ ಸಮಸ್ಯೆಯಾಗಿ, ಸಾವಿರಾರು ಕೋಟಿ ರು. ನಷ್ಟವಾಗಿದೆ. ಹಡಗು ಏಕೆ ಅಲ್ಲಿ ಸಿಲುಕಿಕೊಂಡಿತು ಎಂಬ ಬಗ್ಗೆ ಸೂಯೆಜ್‌ ಕಾಲುವೆ ಪ್ರಾಧಿಕಾರ ಮಂಗಳವಾರ ತನಿಖೆ ಆರಂಭಿಸಿದೆ. ಎವರ್‌ ಗಿವನ್‌ ಹಡಗು ಇನ್ನೂ ಕೆಲ ದಿನ ಈಜಿಪ್ಟ್‌ನ ಸಮುದ್ರದಲ್ಲೇ ಇರಬೇಕಾಗುತ್ತದೆ. ಮಂಗಳವಾರ ಹಡಗು ತಜ್ಞ ತನಿಖಾಧಿಕಾರಿಗಳು ಈ ಹಡಗನ್ನು ಹತ್ತಿ ತನಿಖೆ ಆರಂಭಿಸಿದ್ದಾರೆ. ಹೀಗಾಗಿ ಅವರು ಹಡಗಿನಲ್ಲಿರುವ 25 ಭಾರತೀಯ ಸಿಬ್ಬಂದಿಯನ್ನು ವಶಕ್ಕೆ ತೆಗೆದುಕೊಳ್ಳಬಹುದು, ಅವರ ಮೇಲೆ ಪ್ರಕರಣ ದಾಖಲಿಸಬಹುದು, ಅವರನ್ನೇ ಘಟನೆಗೆ ಹೊಣೆಗಾರರನ್ನಾಗಿ ಮಾಡಬಹುದು ಅಥವಾ ಹಡಗಿನ ಕಂಪನಿಯೇ ಈ ಸಿಬ್ಬಂದಿಯನ್ನು ‘ಹರಕೆಯ ಕುರಿ’ ಮಾಡಬಹುದು ಎಂಬ ಆತಂಕ ಎದುರಾಗಿದೆ.

ಈ ನಡುವೆ, ಹಡಗಿನ ತಾಂತ್ರಿಕ ನಿರ್ವಹಣೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ ಜರ್ಮನಿಯ ಬಿಎಸ್‌ಎಂ ಕಂಪನಿಯು ಹಡಗು ಬಿಡುಗಡೆಯಾಗುವಲ್ಲಿ ಸತತವಾಗಿ ಒಂದು ವಾರ ಶ್ರಮಿಸಿದ ಭಾರತೀಯ ಸಿಬ್ಬಂದಿಗೆ ಪ್ರಶಂಸೆ ವ್ಯಕ್ತಪಡಿಸಿದೆ. ಇನ್ನು, ತನಿಖೆಯಿಂದ ಭಾರತೀಯ ಸಿಬ್ಬಂದಿಗೇನಾದರೂ ಸಮಸ್ಯೆಯಾದರೆ ಅದನ್ನು ಪರಿಹರಿಸಲು ತಾನು ಎಲ್ಲಾ ನೆರವು ನೀಡುವುದಾಗಿ ಭಾರತದ ನಾವಿಕರ ಸಂಘ ಪ್ರಕಟಿಸಿದೆ.

ಸೂಯೆಜ್‌ ಕಾಲುವೆಯಲ್ಲಿ ಹಡಗು ಸಿಲುಕಿಕೊಳ್ಳಲು ಕಾರಣವೇನೆಂದು ಪತ್ತೆಯಾದರೆ ಅದಕ್ಕೆ ಕಾರಣವಾದವರು ನಷ್ಟಅನುಭವಿಸಿದ ಇತರ ಹಡಗುಗಳ ಕಂಪನಿಗಳಿಗೆ, ಈಜಿಪ್ಟ್‌ ಸರ್ಕಾರಕ್ಕೆ ಹಾಗೂ ಸೂಯೆಜ್‌ ಕಾಲುವೆ ಪ್ರಾಧಿಕಾರಕ್ಕೆ ಭಾರಿ ಪ್ರಮಾಣದಲ್ಲಿ ಪರಿಹಾರ ನೀಡಬೇಕಾಗಿ ಬರಬಹುದು ಎನ್ನಲಾಗಿದೆ.

click me!