
ಭುವನೇಶ್ವರ: ಅರ್ನಬ್ ಚಂಡಮಾರುತ ದಾಳಿ ವೇಳೆ ಒಡಿಶಾದಾದ್ಯಂತ 900ಕ್ಕೂ ಹೆಚ್ಚು ಮಕ್ಕಳು ಜನಿಸಿವೆ. ಮುಂಜಾಗ್ರತಾ ಕ್ರಮವಾಗಿ ಅವಧಿ ತುಂಬಿದ್ದ 2245 ಗರ್ಭಿಣಿಯನ್ನು ವಿವಿಧ ಆಸ್ಪತ್ರೆಗಳಿಗೆ ಮೊದಲೇ ದಾಖಲಿಸಲಾಗಿತ್ತು. ಈ ಪೈಕಿ 931 ಮಹಿಳೆಯರಿಗೆ ಬುಧವಾರ ಹೆರಿಗೆ ಆಗಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ತೀವ್ರ ಸ್ವರೂಪದ ‘ಅರ್ನಬ್’ (ಸಮುದ್ರ) ಚಂಡಮಾರುತ ಬುಧವಾರ ಆಂಧ್ರದ ವಿಶಾಖಪಟ್ಟಣ ಕರಾವಳಿಗೆ ಅಪ್ಪಳಿಸಿದೆ. ಆಂಧ್ರ, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್‌ನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ.
ಚಂಡಮಾರುತದ ಪರಿಣಾಮ ಒಡಿಶಾದಲ್ಲೂ ಕಾಣಿಸಿಕೊಂಡಿದ್ದು, ಈಗಾಗಲೇ ಭಾರೀ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಒಡಿಶಾದ 8 ಜಿಲ್ಲೆಗಳಲ್ಲಿ ಈಗಾಗಲೇ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಾರ್ಖಂಡ್‌ನಲ್ಲೂ ಭಾರೀ ಮಳೆಯ ನಿರೀಕ್ಷೆ ಇದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಆಂಧ್ರದಲ್ಲಿ 89 ಸಾವಿರ ಮಂದಿಯನ್ನು ಈಗಾಗಲೇ ಸ್ಥಳಾಂತರಿಸಲಾಗಿದ್ದರೆ, ಒಡಿಶಾದಲ್ಲಿ 48 ಸಾವಿರ ಮಂದಿಯನ್ನು ಸ್ಥಳಾಂತರಿಸಲಾಗುತ್ತಿದೆ. ಆಂಧ್ರ ಮತ್ತು ಒಡಿಶಾದಲ್ಲಿ ಹಲವು ರೈಲುಗಳು ಹಾಗೂ ವಿಮಾನ ಸೇವೆ ವ್ಯತ್ಯಯಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ಹವಾಮಾನ ಇಲಾಖೆ ಪ್ರಕಾರ ಬಾಪಟ್ಲಾ ಮತ್ತು ವಿಶಾಖಪಟ್ಟಣದ ನಡುವಿನ ಯಾನಂ ಸಮೀಪ ಗಂಟೆಗೆ 125-135 ಕಿ.ಮೀ. ವೇಗದೊಂದಿಗೆ ಚಂಡಮಾರುತ ಅಪ್ಪಳಿಸುವ ನಿರೀಕ್ಷೆ ಇದೆ. ಚಂಡಮಾರುತ ಹಿನ್ನೆಲೆಯಲ್ಲಿ ಆಂಧ್ರದ ಶ್ರೀಕಾಕುಲಂ ಸೇರಿ 20 ಜಿಲ್ಲೆಗಳು ಹಾಗೂ ಒಡಿಶಾದ 8 ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಇದೆ.
ಈಗಾಗಲೇ ರಾಜ್ಯದ 20 ಜಿಲ್ಲೆಗಳಲ್ಲಿ 2,131 ಚಂಡಮಾರುತ ಕೇಂದ್ರಗಳನ್ನು ತೆರೆಯಲಾಗಿದ್ದು, ಮೊಬೈಲ್ ಮೂಲಕ ಚಂಡಮಾರುತದ ಕುರಿತು ಮಾಹಿತಿ ವ್ಯವಸ್ಥೆ ಮಾಡಲಾಗಿದೆ. 30 ಸಾವಿರಕ್ಕೂ ಹೆಚ್ಚು ಮೀನುಗಾರಿಕಾ ಬೋಟ್‌ಗಳನ್ನು ಸುರಕ್ಷಿತಗೊಳಿಸಲಾಗಿದ್ದು, 1,087 ವೈದ್ಯಕೀಯ ತಂಡಗಳನ್ನು ಚಂಡಮಾರುತ ಪೀಡಿತ ಪ್ರದೇಶಗಳಿಗೆ ನಿಯೋಜಿಸಲಾಗಿದೆ.
8,281 ತುರ್ತು ಬೆಡ್‌ಗಳು, 1,274 ಆ್ಯಂಬುಲೆನ್ಸ್‌ಗಳನ್ನು ತುರ್ತು ಸಂದರ್ಭಕ್ಕಾಗಿ ಸಿದ್ಧವಾಗಿಟ್ಟುಕೊಳ್ಳಲಾಗಿದ್ದು, ಆಸ್ಪತ್ರೆಗಳಲ್ಲಿ ಹಾವು ಕಚ್ಚಿದಾಗ ನೀಡುವ 21,536 ಡೋಸ್‌ನಷ್ಟು ಔಷಧ ಸಂಗ್ರಹಿಸಿಟ್ಟುಕೊಳ್ಳಲಾಗಿದೆ. 20 ಜಿಲ್ಲೆಗಳ 1,351 ಗರ್ಭಿಣಿಯರನ್ನು ಸುರಕ್ಷಿತವಾಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಕುಡಿವ ನೀರಿನ ಟ್ಯಾಂಕರ್‌ಗಳು, ಜನರೇಟರ್‌ಗಳ, ಆರ್‌ಒ ಪ್ಲಾಂಟ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ