ಬಿನ್ ಲಾಡೆನ್ ಮುಗಿಸಲು ನೆರವಾದ ಬೆಲ್ಜಿಯಂ ನಾಯಿಗಳು ಈಗ ಮುಂಬೈ ಶ್ವಾನ ದಳಕ್ಕೆ! ಇವುಗಳ ಸ್ಪೆಷಾಲಿಟಿ ಏನು?

Published : Oct 29, 2026, 01:39 PM IST
Belgian Malinois dogs

ಸಾರಾಂಶ

ಆಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಪತ್ತೆಗೆ ನೆರವಾಗಿದ್ದ ಬೆಲ್ಜಿಯಂ ಮಾಲಿನೋಯಿಸ್ ತಳಿಯ ಶ್ವಾನಗಳನ್ನು ಮುಂಬೈ ಪೊಲೀಸ್ ಇಲಾಖೆ ತನ್ನ ಶ್ವಾನದಳಕ್ಕೆ ಸೇರ್ಪಡೆಗೊಳಿಸುತ್ತಿದೆ. ವಿಐಪಿ ಭದ್ರತೆ ಮತ್ತು ಸ್ಫೋಟಕ ಪತ್ತೆಗಾಗಿ ಆರು ಹೊಸ ಶ್ವಾನಗಳನ್ನು ಸೇರಿಸಲಾಗುತ್ತಿದ್ದು, ಭವಿಷ್ಯದಲ್ಲಿ ಇತರ ತಳಿಗಳನ್ನು ನಿವೃತ್ತಿಗೊಳಿಸಿ ಕೇವಲ ಈ ಶ್ವಾನಗಳನ್ನು ಮಾತ್ರ ಉಳಿಸಿಕೊಳ್ಳಲು ಇಲಾಖೆ ಚಿಂತಿಸಿದೆ.

ನವದೆಹಲಿ: ಆಲ್ ಖೈದಾ ಮುಖ್ಯಸ್ಥ ಒಸಾಮಾ ಬಿಲ್ ಲಾಡೆನ್‌ನನ್ನು ಪಾಕಿಸ್ತಾನದ ರಹಸ್ಯ ಮನೆಯಲ್ಲಿ ಪತ್ತೆ ಹಚ್ಚಿ ಆತನನ್ನು ಮುಗಿಸಲು ನೆರವಾಗಿದ್ದ ಬೆಲ್ಜಿಯಂ ತಳಿ ಶ್ವಾನಗಳು ಇದೀಗ ಮುಂಬೈ ಪೊಲೀಸ್‌ ಇಲಾಖೆಯ ಶ್ವಾನದಳಕ್ಕೆ ಸೇರ್ಪಡೆಯಾಗಲಿದೆ. 2019ರಲ್ಲಿ ಮುಂಬೈ ಪೊಲೀಸರು 5 ಬೆಲ್ಜಿಯಂ ಮಾಲಿನೋಯಿಸ್‌ ನಾರಿ ಮರಿಗಳನ್ನು ತಮ್ಮ ಶ್ವಾನದಳಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದರು. ಅದಾಗಿ 7 ವರ್ಷಗಳ ಬಳಿಕ ಈ ಸಂಖ್ಯೆಗಳ ವಿಸ್ತರಣೆಗೆ ಮುಂದಾಗಿದೆ. ವಿಐಪಿ ಚಲನವಲನಗಳು ಮತ್ತು ಪ್ರಮುಖ ಸಾರ್ವಜನಿಕ ಕಾರ್ಯಕ್ರಮಗಳ ಮೊದಲು ಸ್ಫೋಟಕ ಪತ್ತೆ ಮತ್ತು ಭದ್ರತಾ ತಪಾಸಣೆಗಳನ್ನು ಬಲಪಡಿಸಲು ಆರು ಹೆಚ್ಚುವರಿ ನಾಯಿಗಳನ್ನು ಸೇರಿಸಿಕೊಳ್ಳಲು ಇಲಾಖೆ ನಿರ್ಧರಿಸಿದೆ. ಪೊಲೀಸರು ತಂಡದಲ್ಲಿರುವ ಇತರ ಎಲ್ಲಾ ತಳಿಯ ನಾಯಿಗಳನ್ನು ನಿವೃತ್ತಿಗೊಳಿಸಿ ಬೆಲ್ಜಿಯನ್ ಮಾಲಿನೋಯಿಸ್‌ ನಾಯಿಗಳನ್ನು ಮಾತ್ರ ಉಳಿಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಏಳು ವರ್ಷಗಳ ನಂತರ ಪಡೆಯ ವಿಸ್ತರಣೆ

ಮುಂಬೈ ಪೊಲೀಸರು ಮೊದಲ ಬಾರಿಗೆ 2019ರ ಜನವರಿಯಲ್ಲಿ ಐದು ಬೆಲ್ಜಿಯನ್ ಮಾಲಿನೋಯಿಸ್ ತಳಿಯ ನಾಯಿಮರಿಗಳನ್ನು ತಮ್ಮ ಶ್ವಾನದಳಕ್ಕೆ ಸೇರಿಸಿಕೊಂಡಿದ್ದರು. ಆ ಸಮಯದಲ್ಲಿ ಪಡೆ ಯಲ್ಲಿ ಲ್ಯಾಬ್ರಡಾರ್ ಮತ್ತು ಡೋಬರ್‌ಮ್ಯಾನ್ ತಳಿಗಳ ನಾಯಿಗಳೇ ಹೆಚ್ಚಾಗಿದ್ದವು. ಇದೀಗ ಏಳು ವರ್ಷಗಳ ನಂತರ, ಈ ತಳಿಯ ಕಾರ್ಯಕ್ಷಮತೆಯನ್ನು ಮನಗಂಡು ಪಡೆ ಮತ್ತಷ್ಟು ವಿಸ್ತರಣೆಗೆ ಮುಂದಾಗಿದೆ.

ಹೊಸದಾಗಿ ಸೇರ್ಪಡೆಯಾಗಿರುವ ಆರು ನಾಯಿಗಳಲ್ಲಿ ಒಂದು ನಾಯಿ ಈಗಾಗಲೇ ತನ್ನ ಕಠಿಣ ತರಬೇತಿಯನ್ನು ಪೂರ್ಣಗೊಳಿಸಿ ಸೇವೆಗೆ ಸಿದ್ಧವಾಗಿದೆ. ಇನ್ನುಳಿದ ಐದು ನಾಯಿಗಳು ಪ್ರಸ್ತುತ ಪುಣೆಯ ಶಿವಾಜಿನಗರದಲ್ಲಿರುವ ಪ್ರಸಿದ್ಧ ತರಬೇತಿ ಕೇಂದ್ರದಲ್ಲಿ ಅತ್ಯಾಧುನಿಕ ಭದ್ರತಾ ಶಿಕ್ಷಣ ಪಡೆಯುತ್ತಿವೆ.

ವಿಶೇಷ ತರಬೇತಿ ಮತ್ತು ಭದ್ರತಾ ಕಾರ್ಯಾಚರಣೆ

ಈ ಶ್ವಾನಗಳಿಗೆ ಮುಖ್ಯವಾಗಿ ಸ್ಫೋಟಕಗಳನ್ನು ಪತ್ತೆಹಚ್ಚುವುದು, ತೆರೆದ ಮೈದಾನಗಳನ್ನು ಶೋಧಿಸುವುದು, ಅನುಮಾನಾಸ್ಪದ ಬ್ಯಾಗ್ ಹಾಗೂ ಕೊಠಡಿಗಳನ್ನು ಪರಿಶೀಲಿಸುವ ವಿಶೇಷ ತರಬೇತಿ ನೀಡಲಾಗುತ್ತಿದೆ. ಗಣ್ಯರು ಅಥವಾ ವಿಐಪಿಗಳು ಆಗಮಿಸುವ ಮುನ್ನ ಪ್ರವೇಶ ದ್ವಾರಗಳು, ವಾಹನಗಳು, ವೇದಿಕೆ ಹಾಗೂ ಸಮಾರಂಭದ ಸ್ಥಳಗಳನ್ನು ಪರಿಶೀಲಿಸಿ ಯಾವುದೇ ಸಂಭಾವ್ಯ ಬೆದರಿಕೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಇವು ಸಹಾಯ ಮಾಡುತ್ತವೆ. ಸಾಮಾನ್ಯ ತಪಾಸಣೆಗಳ ಸಮಯದಲ್ಲಿ ಕಣ್ಣಿಗೆ ಕಾಣಿಸದ ಅಥವಾ ಅಡಗಿಸಿಟ್ಟ ಸ್ಫೋಟಕ ವಸ್ತುಗಳನ್ನು ತ್ವರಿತವಾಗಿ ಪತ್ತೆ ಹಚ್ಚುವ ಸಾಮರ್ಥ್ಯ ಇವುಗಳಿಗಿದೆ.

ಬೆಲ್ಜಿಯನ್ ಮಾಲಿನೋಯಿಸ್ ತಳಿಯ ವಿಶೇಷತೆಗಳೇನು?

ಜಾಗತಿಕವಾಗಿ ಅತ್ಯಂತ ಶ್ರೇಷ್ಠ ಕರ್ತವ್ಯನಿರತ ನಾಯಿ ತಳಿ ಎಂದು ಹೆಸರು ಪಡೆದಿರುವ ಬೆಲ್ಜಿಯನ್ ಮಾಲಿನೋಯಿಸ್, ತನ್ನ ಅಸಾಧಾರಣ ಚುರುಕುತನ, ದೈಹಿಕ ಸಹಿಷ್ಣುತೆ, ಜಾಗರೂಕತೆ, ಚಾಣಾಕ್ಷತನ ಮತ್ತು ಆಜ್ಞೆಗಳಿಗೆ ತಕ್ಷಣವೇ ಸ್ಪಂದಿಸುವ ಗುಣಕ್ಕೆ ಪ್ರಸಿದ್ಧವಾಗಿದೆ. ದೀರ್ಘಕಾಲದ ಹುಡುಕಾಟದ ಕಾರ್ಯಾಚರಣೆಗಳಲ್ಲಿ ಮತ್ತು ನಿರಂತರ ದೈಹಿಕ ಚಟುವಟಿಕೆಗಳ ಅಗತ್ಯವಿರುವ ಸಂದರ್ಭಗಳಲ್ಲಿ ಈ ನಾಯಿಗಳು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತವೆ.

ಸಂಪೂರ್ಣ 'ಮಾಲಿನೋಯಿಸ್ ಪಡೆಯತ್ತ' ಮುಂಬೈ ಪೊಲೀಸ್ ಆಲೋಚನೆ

ಪ್ರಸ್ತುತ ಮುಂಬೈ ಪೊಲೀಸ್ ಶ್ವಾನದಳದಲ್ಲಿ ಬೆಲ್ಜಿಯನ್ ಮಾಲಿನೋಯಿಸ್, ಲ್ಯಾಬ್ರಡಾರ್, ಜರ್ಮನ್ ಶೆಫರ್ಡ್ ಮತ್ತು ಡೋಬರ್‌ಮ್ಯಾನ್ ಸೇರಿದಂತೆ ಒಟ್ಟು 30 ನಾಯಿಗಳಿವೆ. ಆದರೆ ಮುಂಬರುವ ದಿನಗಳಲ್ಲಿ ಇತರ ತಳಿಯ ನಾಯಿಗಳನ್ನು ಹಂತ ಹಂತವಾಗಿ ನಿವೃತ್ತಿಗೊಳಿಸಿ, ಶ್ವಾನದಳವನ್ನು ಸಂಪೂರ್ಣವಾಗಿ ಬೆಲ್ಜಿಯನ್ ಮಾಲಿನೋಯಿಸ್ ನಾಯಿಗಳಿಂದಲೇ ರೂಪಿಸಲು ಇಲಾಖೆ ಗಂಭೀರವಾಗಿ ಚಿಂತನೆ ನಡೆಸುತ್ತಿದೆ.

ಈ ನಿರ್ಧಾರ ಕಾರ್ಯರೂಪಕ್ಕೆ ಬಂದರೆ, ವಿಶೇಷ ಭದ್ರತಾ ಮತ್ತು ಸ್ಫೋಟಕ ಪತ್ತೆ ಕರ್ತವ್ಯಗಳಿಗಾಗಿ ಒಂದೇ ಒಂದು ಶ್ರೇಷ್ಠ ತಳಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗುವ ಮಹತ್ವದ ಬದಲಾವಣೆಗೆ ಮುಂಬೈ ಪೊಲೀಸ್ ಶ್ವಾನಪಡೆ ಸಾಕ್ಷಿಯಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

1.5 ಲಕ್ಷ ರೂ ಫೀಸ್ ಕೇಳಿದ ವಕೀಲ, ಕೇವಲ ₹2432 ರೂ.ನಲ್ಲಿ ಎಐ ಮೂಲಕ ಕೆಲಸ ಮುಗಿಸಿದ ಟೆಕ್ಕಿ
ಊಟದ ಬಳಿಕ ಸ್ಪೂನ್ ಎಸೆಯಬೇಡಿ ತಿನ್ನಿ, 88 ವಿಫಲ ಪ್ರಯತ್ನ ನಂತರ ಯಶಸ್ಸು ಸಾಧಿಸಿದ ಎಡಿಬೈಟ್