ಮುಂಬೈ(ಡಿ.20): ಮಹಾರಾಷ್ಟ್ರದ ರಾಜಧಾನಿ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಫಿ ಪ್ಲಾಸ್ಕ್‌ನಿಂದ ಕಾಫಿಯ ಬದಲು ಚಿನ್ನ ಹೊರಬಂದ ಸ್ವಾರಸ್ಯಕಾರಿ ಘಟನೆ ನಡೆದಿದೆ. ಶಾರ್ಜಾ (Sharjah) ದಿಂದ ಆಗಮಿಸಿದ್ದ ಕೀನ್ಯಾ(Kenya) ಮೂಲದ ಮಹಿಳೆಯರು (Kenyan women) ಈ ಚಿನ್ನವನ್ನು ಭಾರತಕ್ಕೆ ಕಳ್ಳ ಸಾಗಣೆ ಮಾಡಿ ತಂದಿದ್ದು, ತಪಾಸಣೆ ವೇಳೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Mumbai international airport) ದ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಶಾರ್ಜಾದಿಂದ ಬಂದ ಈ ಕೀನ್ಯಾ ಮಹಿಳೆಯರ ಬಳಿ ಸುಮಾರು 3.8 ಕೆಜಿ ಮೌಲ್ಯದ ಅಘೋಷಿತ ಬಂಗಾರವಿತ್ತು. ಜೊತೆಗೆ ಕೆಲವು ಖಾಸಗಿ ವಸ್ತುಗಳನ್ನು ಇವರಿಂದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇಷ್ಟು ಚಿನ್ನವನ್ನು ವಶಪಡಿಸಿಕೊಳ್ಳುವ ಮುನ್ನ ಅಧಿಕಾರಿಗಳು ಒಟ್ಟು 18 ಮಂದಿ ಕೀನ್ಯಾದ ಮಹಿಳೆಯರನ್ನು ವಿಮಾನ ನಿಲ್ದಾಣದಲ್ಲಿ ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಾರ್ ರೂಪದಲ್ಲಿ, ವೈರ್‌ಗಳು ಹಾಗೂ ಪೌಡರ್ ರೂಪದಲ್ಲಿ ಬಂಗಾರವನ್ನು ಕಾಫಿ ಪೌಡರ್ (coffee powder) ಬಾಟಲ್‌ಗಳ ಒಳಗೆ ಸೀಲ್ ಮಾಡಲಾಗಿತ್ತು. ಇವಿಷ್ಟಲ್ಲದೇ ಒಳ ಉಡುಪುಗಳ ಲೈನಿಂಗ್ ಒಳಗೆ, ಚಪ್ಪಲಿಯೊಳಗೆ ಹಾಗೂ ಮಸಾಲಾ ಬಾಟಲ್‌ನ ಒಳಗೆ ಚಿನ್ನವನ್ನು ಇಟ್ಟು ಮಹಿಳೆಯರು ಇದನ್ನು ಭಾರತಕ್ಕೆ ತಂದಿದ್ದಾರೆ. ಇವರ ಬಳಿಯಿಂದ ಸುಮಾರು ಕೆಲವು ಕೋಟಿ ಮೌಲ್ಯದ ಒಟ್ಟು 3.8 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಂಬೈ( Mumbai) ಏರ್‌ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 18 ಮಹಿಳೆಯರಲ್ಲಿ ಹೆಚ್ಚು ಮೊತ್ತದ ಚಿನ್ನ ಸಾಗಣೆ ಮಾಡುತ್ತಿದ್ದ ಓರ್ವ ಮಹಿಳೆಯನ್ನು ಹೊರತುಪಡಿಸಿ ಮತ್ತೆಲ್ಲರನ್ನು ಬಿಡುಗಡೆಗೊಳಿಸಲಾಗಿದೆ.
ಚಿನ್ನ ಕಳ್ಳ ಸಾಗಣೆ ಕೇಸ್: ಕೇರಳ ಸಿಎಂ ಪಿಣರಾಯಿಗೆ ಉರುಳು?
ಭಾರತಕ್ಕೆ ಹೀಗೆ ಆರಬ್ ರಾಷ್ಟ್ರಗಳಿಂದ ಚಿನ್ನ ಕಳ್ಳ ಸಾಗಣೆ ಮಾಡುತ್ತಿರುವುದು ಇದೇ ಮೊದಲೆನಲ್ಲಾ ಏರ್‌ಪೋರ್ಟ್‌ನಲ್ಲಿ ಚಿನ್ನ ಜಪ್ತಿ ಆಗುವುದು ಇತ್ತೀಚೆಗೆ ಸಾಮಾನ್ಯವೆನಿಸಿದೆ. ಕೆಲವರು ಅಲ್ಲಿ ಮಾತ್ರೆಗಳ ತರ ಚಿನ್ನವನ್ನು ನುಂಗಿ ಇಲ್ಲಿ ಬಂದು ಆಪರೇಷನ್ ಮಾಡಿ ಚಿನ್ನ ತೆಗೆದುಕೊಳ್ಳಬಹುದು ಎಂಬ ಯೋಚನೆಯಲ್ಲಿ ಚಿನ್ನವನ್ನು ನುಂಗಿ ಬಂದವರು ಕೂಡ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಜನ ಚಾಪೆ ಕೆಳಗೆ ನುಗ್ಗಿದರೆ ಅಧಿಕಾರಿಗಳು ರಂಗೋಲಿ ಕೆಳಗೆ ನುಗ್ಗುವಷ್ಟು ಚಾಣಾಕ್ಷರಾಗಿರುವುದರಿಂದಲೇ ಏನೇ ಮಾಡಿದರೂ ಏರ್‌ಪೋರ್ಟ್‌ಗೆ ತಲುಪಿದಾಗ ಸಿಕ್ಕಿ ಬೀಳಲೇ ಬೇಕು ಹಾಗಿದ್ದು, ಇದೆಲ್ಲವನ್ನು ತಿಳಿದಿದ್ದರೂ ಬೇರೆಯವರ ಅನುಭವದಿಂದ ಜನ ಬುದ್ಧಿ ಕಲಿಯುತ್ತಿಲ್ಲ ಎಂಬುದು ಈ ನಿದರ್ಶನಗಳನ್ನು ನೋಡಿದಾಗ ತಿಳಿಯುತ್ತದೆ.
ಭಟ್ಕಳ: ಮಾಸ್ಕ್‌ನಲ್ಲಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿ ಬಂಧನ
ಈ ಹಿಂದೆ ಅಂದರೆ ಕಳೆದ ವರ್ಷ ಕೇರಳದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿರುವ ಚಿನ್ನ ಸಾಗಣೆ ಪ್ರಕರಣದ ಕಿಂಗ್‌ಪಿನ್ ಸ್ವಪ್ನಾ ಸುರೇಶ್ ಹಾಗೂ ಇತರ ಆರೋಪಿಗಳು ಕಳೆದ ಒಂದು ವರ್ಷದಿಂದ ರಾಜತಾಂತ್ರಿಕ ಮಾರ್ಗದ ಮೂಲಕ 300 ಕೆ.ಜಿ.ಯಷ್ಟುಚಿನ್ನವನ್ನು ಕಳ್ಳಸಾಗಣೆ ಮಾಡಿದ್ದರು ಎಂಬ ಸಂಗತಿ ತನಿಖೆಯ ವೇಳೆ ಬೆಳಕಿಗೆ ಬಂದಿತ್ತು.
ಕಳೆದ ವರ್ಷ ಜುಲೈನಲ್ಲಿ ಸ್ವಪ್ನಾ ಸುರೇಶ್ (swapna suresh) ರಾಜತಾಂತ್ರಿಕ ವಿಧಾನವನ್ನು ದುರ್ಬಳಕೆ ಮಾಡಿಕೊಂಡು ಚಿನ್ನ ಕಳ್ಳಸಾಗಣೆ ಮಾಡುವ ಕಾರ್ಯವನ್ನು ಆರಂಭಿಸಿದ್ದಳು. ಮೊದಲ ಕಂತಿನಲ್ಲಿ ಚಿನ್ನ ತಿರುವನಂತಪುರಂಗೆ ಯಶಸ್ವಿಯಾಗಿ ಬಂದು ತಲುಪಿತ್ತು. ಆ ಬಳಿಕ ಇದೇ ವಿಧಾನವನ್ನು ಬಳಸಿಕೊಂಡು 13 ಬಾರಿ ಚಿನ್ನ ಕಳ್ಳಸಾಗಣೆ ಮಾಡಲಾಗಿತ್ತು. ಆದರೆ, ಇತ್ತೀಚೆಗೆ ಬ್ಯಾಗನ್ನು ತಪಾಸಣೆಗೆ ಒಳಪಡಿಸಿದ ಸಂದರ್ಭದಲ್ಲಿ 30 ಕೆ.ಜಿ. ಚಿನ್ನ ಕಳ್ಳ ಸಾಗಣೆ ಪ್ರಕರಣ ಬೆಳಕಿಗೆ ಬಂದಿತ್ತು.
ತಿರುವನಂತಪುರಂ ವಿಮಾನ ನಿಲ್ದಾಣದ ಮೂಲಕ ಕಳೆದ ಜುಲೈನಿಂದ ಸುಮಾರು 300 ಕೆ.ಜಿ.ಯಷ್ಟು ಚಿನ್ನವನ್ನು ಸ್ವಪ್ನಾ ಸುರೇಶ್ ಮತ್ತು ಇತರ ಆರೋಪಿಗಳ ತಂಡ ಕಳ್ಳಸಾಗಣೆ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 15 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.