ರಸ್ತೆಗಳನ್ನು ನಟಿ ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿದ ಮಹಾರಾಷ್ಟ್ರ ಸಚಿವ

By Suvarna News  |  First Published Dec 20, 2021, 12:47 PM IST
  • ರಸ್ತೆಗಳನ್ನು ನಟಿ ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿದ ಮಹಾರಾಷ್ಟ್ರ ಸಚಿವ
  • ಮಹಾರಾಷ್ಟ್ರ ಮಹಿಳಾ ಆಯೋಗದಿಂದ ಸಚಿವ ಹೇಳಿಕೆಗೆ ಆಕ್ಷೇಪ
  • ಕ್ಷಮೆ ಯಾಚಿಸಿದ ಸಚಿವ ಗುಲಾಬ್‌ ರಾವ್ ರಘುನಾಥ್ ಪಾಟೀಲ್
     

ಮುಂಬೈ(ಡಿ.20):  ಮಹಾರಾಷ್ಟ್ರದ ನೀರು ಸರಬರಾಜು ಮತ್ತು ನೈರ್ಮಲ್ಯ ಖಾತೆ ಸಚಿವ ಗುಲಾಬ್‌ ರಾವ್ ರಘುನಾಥ್ ಪಾಟೀಲ್ (Gulabrao Raghunath Patil) ಅವರು ತಮ್ಮ ಜಲಗಾಂವ್ (Jalgaon) ಗ್ರಾಮಾಂತರ ಕ್ಷೇತ್ರದ ರಸ್ತೆಗಳನ್ನು ನಟಿ, ರಾಜಕಾರಣಿ ಹೇಮಾ ಮಾಲಿನಿ (Hema Malini) ಅವರ ಕೆನ್ನೆಗೆ ಹೋಲಿಸಿ ವಿವಾದ ಹುಟ್ಟು ಹಾಕಿದ್ದಾರೆ. ಇವರ ಈ ಹೋಲಿಕೆಗೆ ರಾಜ್ಯ ಮಹಿಳಾ ಆಯೋಗವು ತೀವ್ರ ವಿರೋಧ ವ್ಯಕ್ತಪಡಿಸಿದ ನಂತರ ಅವರು ಕ್ಷಮೆಯಾಚಿಸಿದ್ದಾರೆ. ಉತ್ತರ ಮಹಾರಾಷ್ಟ್ರದಲ್ಲಿರುವ ತಮ್ಮ ಜಿಲ್ಲೆಯಲ್ಲಿ ನಡೆದ ಬೋದ್ವಾಡ್ ನಗರ ಪಂಚಾಯತ್‌ (Bodwad Nagar Panchayat) ಗೆ ಸಂಬಂಧಿಸಿದ ಚುನಾವಣಾ ಸಭೆಯಲ್ಲಿ ಮಾತನಾಡಿದ ಶಿವಸೇನೆಯ ಹಿರಿಯ ನಾಯಕರೂ ಆಗಿರುವ ಸಚಿವ ಗುಲಾಬ್‌ ರಾವ್ ರಘುನಾಥ್ ಪಾಟೀಲ್ ಈ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಸಭೆಯಲ್ಲಿ ಮಾತನಾಡಿದ ಪಾಟೀಲ್‌,  ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ರಸ್ತೆಗಳು ಎಷ್ಟು ಚೆನ್ನಾಗಿವೆ ಎಂಬುದನ್ನು ನೋಡುವಂತೆ ಅವರು ತಮ್ಮ ವಿರೋಧಿಗಳಿಗೆ ಕೇಳಿಕೊಂಡರು. 30 ವರ್ಷಗಳಿಂದ ಶಾಸಕರಾಗಿರುವವರು ನನ್ನ ಕ್ಷೇತ್ರಕ್ಕೆ ಬಂದು ರಸ್ತೆ ನೋಡಬೇಕು, ನನ್ನ ಕ್ಷೇತ್ರದ ರಸ್ತೆಗಳು ಹೇಮಾ ಮಾಲಿನಿ ಅವರ ಕೆನ್ನೆಯಂತೆ ಇಲ್ಲದಿದ್ದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಪಾಟೀಲ್ ಹೇಳಿದ್ದಾರೆ. ಅವರು ಜಲಗಾಂವ್ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಜಿ ಬಿಜೆಪಿ ನಾಯಕ ಏಕನಾಥ್ ಖಾಡ್ಸೆ ಅವರನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದರು.

Tap to resize

Latest Videos

undefined

ನಿಮಿಷದಲ್ಲೇ ನಾನು ಸಿಎಂ ಆಗುವೆ : ಹೇಮಾ ಮಾಲಿನಿ

ಇದೇ ವೇಳೆ ಮಾತನಾಡಿದ ಶಿವಸೇನಾ ಸಂಸದ ಸಂಜಯ್ ರಾವುತ್, ಈ ರೀತಿಯ ಹೋಲಿಕೆ ಈ ಹಿಂದೆಯೂ ನಡೆದಿದೆ. ಇದು ಹೇಮಾ ಮಾಲಿನಿಗೆ ನೀಡಿದ ಗೌರವ ಅಷ್ಟೇ. ಆದ್ದರಿಂದ ಯಾರೂ ಇದನ್ನು ನಕಾರಾತ್ಮಕವಾಗಿ ನೋಡಬೇಡಿ. ಈ ಹಿಂದೆ ಬಿಹಾರ ಸಿಎಂ ಆಗಿದ್ದ ಲಾಲು ಪ್ರಸಾದ್‌ ಯಾದವ್ ಕೂಡ ಇದೇ ಉದಾಹರಣೆಯನ್ನು ನೀಡಿದ್ದರು. ನಾವು ಹೇಮಾ ಮಾಲಿನಿ ಅವರನ್ನು ಗೌರವಿಸುತ್ತೇವೆ ಎಂದರು. 

ಇದಕ್ಕೂ ಮೊದಲು, ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಛಕನ್‌ಕರ್ (Rupali Chakankar) ಅವರು ಸಚಿವರ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಒಂದು ವೇಳೆ  ಸಚಿವರು ತಮ್ಮ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಲು ವಿಫಲವಾದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರು. 
ಮಹಿಳಾ ಆಯೋಗವು ಸಚಿವರ ಈ ಹೇಳಿಕೆಯನ್ನು ಗಮನಿಸಿದೆ. ಸಚಿವರು ಕ್ಷಮೆಯಾಚಿಸದಿದ್ದರೆ, ಅವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಛಕನ್ಕರ್ ಭಾನುವಾರ ತಿಳಿಸಿದ್ದಾರೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಛಕನ್‌ಕರ್ ಎಚ್ಚರಿಕೆಯ ನಂತರ ಸಚಿವ ಗುಲಾಬ್‌ ರಾವ್ ರಘುನಾಥ್ ಪಾಟೀಲ್‌ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದರು.

ನೆಹರು ಮೇಲೆ ಬಿಜೆಪಿಗೆ ಯಾಕೆ ಇಷ್ಟೊಂದು ದ್ವೇಷ? ಕೇಂದ್ರಕ್ಕೆ ಶಿವಸೇನಾ ನಾಯಕ ರಾವತ್ ಪ್ರಶ್ನೆ!

ಧುಲೆ (Dhule) ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾನು ಯಾರನ್ನೂ ನೋಯಿಸುವ ಉದ್ದೇಶದಿಂದ ಈ ಮಾತನ್ನು ಹೇಳಿಲ್ಲ. ನಾನು ನನ್ನ ಹೇಳಿಕೆಗಳಿಗೆ ಕ್ಷಮೆಯಾಚಿಸುತ್ತೇನೆ. ನಾನು ಛತ್ರಪತಿ ಶಿವಾಜಿ ಮಹಾರಾಜರನ್ನು ಆರಾಧಿಸುವ ಶಿವಸೇನೆಗೆ ಸೇರಿದ್ದೇನೆ. ಪಕ್ಷದ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ನಮಗೆ ಮಹಿಳೆಯರಿಗೆ ಗೌರವ ನೀಡುವುದನ್ನು ಕಲಿಸಿದ್ದಾರೆ ಎಂದರು.

ಕಳೆದ ತಿಂಗಳು ರಾಜಸ್ಥಾನದ ಸಚಿವ (Rajasthan minister) ಮತ್ತು ಕಾಂಗ್ರೆಸ್ ನಾಯಕ ರಾಜೇಂದ್ರ ಸಿಂಗ್ ಗುಧಾ (Rajendra Singh Gudha) ಅವರು ತಮ್ಮ ಕ್ಷೇತ್ರದ ರಸ್ತೆಗಳನ್ನು ನಟಿ ಕತೀನಾ ಕೈಫ್ (Katrina Kaif) ಅವರ ಕೆನ್ನೆಗೆ ಹೋಲಿಸಿದ್ದರು. 2019 ರಲ್ಲಿ ಮಧ್ಯಪ್ರದೇಶದ ಮಾಜಿ ಸಚಿವ ಪಿ.ಸಿ .ಶರ್ಮಾ (PC Sharma) ಅವರು ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು.  ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಕೂಡ ಈ ರೀತಿ ಹೇಳಿಕೆ ನೀಡಿ ವಿವಾದಕೀಡಾಗಿದ್ದರು. 

click me!