
ನವದೆಹಲಿ (ಜ.18): 15ರಿಂದ 18 ವರ್ಷದೊಳಗಿನವರ ಕೋವಿಡ್ ಲಸಿಕೆ (Covid Vaccination) ಅಭಿಯಾನ ಫೆಬ್ರವರಿ ಅಂತ್ಯಕ್ಕೆ ಮುಗಿಯುವ ನಿರೀಕ್ಷೆ ಇದ್ದು, ಮಾರ್ಚ್‌ನಿಂದ ಕೇಂದ್ರ ಸರ್ಕಾರ 12-14ರೊಳಗಿನ ಮಕ್ಕಳಿಗೆ ಲಸಿಕಾಕರಣ ಆರಂಭಿಸುವ ಸಾಧ್ಯತೆ ಇದೆ. 15ರಿಂದ 18ರೊಳಗಿನ ಹದಿಹರೆಯದವರು ಲಸಿಕಾ ಅಭಿಯಾನದಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದಾರೆ. ಇದೇ ವೇಗದಲ್ಲಿ ಲಸಿಕಾಕರಣ ನಡೆದರೆ, ಆ ವಯೋಮಾನದ ಉಳಿದ ಎಲ್ಲರಿಗೂ ಜನವರಿ ಅಂತ್ಯದೊಳಗೆ ಮೊದಲ ಡೋಸ್ ಲಸಿಕೆ ಪೂರ್ಣಗೊಳ್ಳಲಿದೆ. 28 ದಿನಗಳ ಬಳಿಕ ಎರಡನೇ ಡೋಸ್ ಲಸಿಕೆ ನೀಡಬೇಕಾಗಿದ್ದು, ಫೆಬ್ರವರಿ ಅಂತ್ಯದೊಳಗೆ ಅದು ಕೂಡ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ.
ಈ ಅಭಿಯಾನ ಪೂರ್ಣವಾದ ಬಳಿಕ 12ರಿಂದ 14ವರ್ಷದೊಳಗಿನ ಮಕ್ಕಳಿಗೆ ಮಾರ್ಚ್‌ನಿಂದ ಲಸಿಕೆ ನೀಡುವ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಕೋವಿಡ್ ಲಸಿಕಾಕರಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಕಾರ್ಯಪಡೆ ಮುಖ್ಯಸ್ಥ ಡಾ.ಎನ್.ಕೆ. ಅರೋರಾ (Dr NK Arora) ಅವರು ತಿಳಿಸಿದ್ದಾರೆ. 15ರಿಂದ 18 ವರ್ಷದೊಳಗಿನವರು ದೇಶದಲ್ಲಿ 7.4 ಕೋಟಿ ಮಂದಿ ಇದ್ದಾರೆ. ಆ ಪೈಕಿ 3.45 ಕೋಟಿ ಮಂದಿ ಈಗಾಗಲೇ ಕೋವ್ಯಾಕ್ಸಿನ್ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 12ರಿಂದ 14 ವರ್ಷದೊಳಗಿನವರ ಸಂಖ್ಯೆ ಅಂದಾಜು 7.5 ಕೋಟಿ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.
COVID-19 Vaccination : ಮಕ್ಕಳಿಗೆ ಶೇ. 100 ಲಸಿಕೆ ಪೂರ್ಣಗೊಳಿಸಿದ ಲಕ್ಷದ್ವೀಪ!
2 ಕೋಟಿ ಡೋಸ್ ಮೈಲಿಗಲ್ಲು: 15-18ರ ವಯೋಮಾನದ ಮಕ್ಕಳಿಗೆ ಕೋವಿಡ್ ಲಸಿಕೆ (Covid Vaccine) ವಿತರಣೆ ಆರಂಭಿಸಿದ ಕೇವಲ ಐದು ದಿನದಲ್ಲಿ 2 ಕೋಟಿಗೂ ಹೆಚ್ಚು ಜನರು ಲಸಿಕೆ ಪಡೆದುಕೊಂಡಿದ್ದಾರೆ. ಇದರೊಂದಿಗೆ ಮಹತ್ವದ ಮೈಲಿಗಲ್ಲನ್ನು ಭಾರತ ಸ್ಥಾಪಿಸಿದಂತಾಗಿದೆ. ಈ ಕುರಿತು ಟ್ವೀಟ್ (Tweet) ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ (mansukh mandaviya) ‘ನನ್ನ ಯುವ ಸ್ನೇಹಿತರೇ ಅದ್ಭುತವಾಗಿ ಸಾಗುತ್ತಿದೆ.
15-18ರ ವಯೋಮಾನದ 2 ಕೋಟಿಗೂ ಹೆಚ್ಚಿನ ಮಕ್ಕಳು, ಅಭಿಯಾನ ಆರಂಭಿಸಿದ ಒಂದು ವಾರದೊಳಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ’ ಎಂದು ಹೇಳಿದ್ದಾರೆ. ಜ.3ರಿಂದ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನ ದೇಶದಲ್ಲಿ ಆರಂಭಗೊಂಡಿದ್ದು, ಕೋವ್ಯಾಕ್ಸಿನ್ ಲಸಿಕೆ (Covaxin Vaccine) ನೀಡಲಾಗುತ್ತಿದೆ. ಈ ವಯೋಮಾನದ 7 ಕೋಟಿಗೂ ಹೆಚ್ಚು ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.
12 ವರ್ಷ ಮೇಲ್ಪಟ್ಟವರಿಗೆ ಝೈಕೋವ್-ಡಿ ಲಸಿಕೆ!: ಸದ್ಯ ಝೈಕೋವ್-ಡಿ ಲಸಿಕೆಯನ್ನು (ZyCoV-D vaccine) 12 ವರ್ಷ ಮೇಲ್ಪಟ್ಟಎಲ್ಲಾ ಮಕ್ಕಳಿಗೂ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಮತ್ತೊಂದೆಡೆ ಕೋವ್ಯಾಕ್ಸಿನ್ 2 ವರ್ಷ ಮೇಲ್ಪಟ್ಟಎಲ್ಲಾ ವಯೋಮಾನದ ಮಕ್ಕಳಿಗೂ ನೀಡಬಹುದಾದ ಲಸಿಕೆ ಅಭಿವೃದ್ಧಿಪಡಿಸಿದೆ. ಅದಕ್ಕೆ ಶೀಘ್ರವೇ ಅನುಮೋದನೆ ಸಿಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮಕ್ಕಳಿಗೂ ಲಸಿಕೆ ಅಭಿಯಾನ ಆರಂಭಿಸಲು ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ.
Corona Crisis: ಪರಿಸ್ಥಿತಿ ಬದಲಾಗಬಹುದು, ಆಸ್ಪತ್ರೆ ದಾಖಲು ದರ ಏರಿಕೆ?: ಕೇಂದ್ರ
ಇನ್ನು 60 ವರ್ಷದ ದಾಟಿದವರು ಈಗಾಗಲೇ ಎರಡೂ ಡೋಸ್ ಪಡೆದುಕೊಂಡು 6-9 ತಿಂಗಳು ತುಂಬುತ್ತಾ ಇರುವ ಹಿನ್ನೆಲೆಯಲ್ಲಿ ಅವರಿಗೆ ಬೂಸ್ಟರ್ ಡೋಸ್ ನೀಡಬೇಕಾ ಎಂಬ ಚಿಂತನೆ ಸರ್ಕಾರದ ಮಟ್ಟದಲ್ಲಿದೆ. ಈ ಬಗ್ಗೆಯೂ ತಾಂತ್ರಿಕ ಸಲಹಾ ಸಮಿತಿ ತನ್ನ ಶಿಫಾರಸು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ