ಕೋವಿಡ್‌ ರೋಗಿಗೆ ವೆಂಟಿಲೇಟರ್‌ ಬೇಕಾಗುತ್ತಾ? ತಿಳಿಸುತ್ತೆ ಈ ಸಾಫ್ಟ್‌ವೇರ್‌!

By Suvarna NewsFirst Published Jun 20, 2021, 1:58 PM IST
Highlights

* ಕೋವಿಡ್‌ ರೋಗಿಗೆ ವೆಂಟಿಲೇಟರ್‌ ಬೇಕಾಗುತ್ತಾ? ತಿಳಿಸುತ್ತೆ ಈ ಸಾಫ್ಟ್‌ವೇರ್‌

* ಕೋವಿಡ್‌ ರೋಗಿಗೆ ವೆಂಟಿಲೇಟರ್‌ ಬೇಕಾಗುತ್ತಾ? ತಿಳಿಸುತ್ತೆ ಈ ಸಾಫ್ಟ್‌ವೇರ್‌

* ಕೇಂದ್ರ ಸರ್ಕಾರದಿಂದ ಕೋವಿಡ್‌ ಸೀವಿಯಾರಿಟಿ ಸ್ಕೋರ್‌ ತಂತ್ರಾಂಶ ಬಿಡುಗಡೆ

* ರೋಗಿಯ ವಿವರ ದಾಖಲಿಸಿದರೆ ಆತನ ಪರಿಸ್ಥಿತಿ ಎಲ್ಲಿಗೆ ಹೋಗಬಹುದು ಎಂಬ ಮಾಹಿತಿ ಲಭ್ಯ

ನವದೆಹಲಿ(ಜೂ.20): ಕೋವಿಡ್‌ ರೋಗಿಗಳಿಗೆ ಮುಂದೆ ವೆಂಟಿಲೇಟರ್‌ನ ಅಗತ್ಯ ಬೀಳಲಿದೆಯೇ ಎಂಬುದನ್ನು ಮೊದಲೇ ತಿಳಿಸುವ ಸಾಫ್ಟ್‌ವೇರೊಂದನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕೋವಿಡ್‌ ಸೀವಿಯಾರಿಟಿ ಸ್ಕೋರ್‌ ಹೆಸರಿನ ಈ ಸಾಫ್ಟ್‌ವೇರನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕೋಲ್ಕತಾದ ಫೌಂಡೇಶನ್‌ ಫಾರ್‌ ಇನ್ನೋವೇಶನ್ಸ್‌ ಇನ್‌ ಹೆಲ್ತ್‌ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಈಗಾಗಲೇ ಬಳಕೆಗೂ ಲಭ್ಯವಿದೆ.

ಕೋವಿಡ್‌ ರೋಗಿಯ ರೋಗಲಕ್ಷಣಗಳು, ಆತನ ವಿವಿಧ ಅಂಗಗಳ ಕಾರ್ಯಚಟುವಟಿಕೆಗಳು, ಪರೀಕ್ಷಾ ವರದಿ, ಪೂರ್ವರೋಗಗಳು ಮುಂತಾದವುಗಳನ್ನು ಪರಿಶೀಲಿಸಿ ಈ ಸಾಫ್ಟ್‌ವೇರ್‌ನಲ್ಲಿ ಮೊದಲೇ ಅಳವಡಿಕೆಯಾಗಿರುವ ಅಲ್ಗಾರಿದಮ್‌ ಮೂಲಕ ಮುಂದೆ ಈ ರೋಗಿಗೆ ಐಸಿಯು ಬೆಡ್‌ ಅಥವಾ ವೆಂಟಿಲೇಟರ್‌ನ ಅಗತ್ಯ ಬೀಳಲಿದೆಯೇ ಎಂಬುದನ್ನು ವೈದ್ಯರು ಮೊದಲೇ ತಿಳಿದುಕೊಳ್ಳಬಹುದು. ಹೀಗಾಗಿ ಇದರ ಬಳಕೆಯಿಂದ ಅನಗತ್ಯವಾಗಿ ಐಸಿಯುಗೆ ಮೊದಲೇ ದಾಖಲಾಗುವುದು ಅಥವಾ ವೆಂಟಿಲೇಟರ್‌ ಕಾಯ್ದಿರಿಸುವುದನ್ನು ತಪ್ಪಿಸಬಹುದು. ಆಗ ನಿಜವಾಗಿಯೂ ಇವುಗಳ ಅಗತ್ಯವಿರುವ ರೋಗಿಗಳಿಗೆ ಬೆಡ್‌ ಸಿಗುವುದು ಸುಲಭವಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಸದ್ಯ ಕೋಲ್ಕತಾದಲ್ಲಿರುವ ಮೂರು ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಇದನ್ನು ಬಳಕೆ ಮಾಡಲಾಗುತ್ತಿದೆ. ದೇಶದ ಎಲ್ಲ ಪ್ರಾಥಮಿಕ ಇ-ಆರೋಗ್ಯ ಕ್ಲಿನಿಕ್‌ಗಳಿಗೆ ಸೀಡ್‌ ಯೋಜನೆಯಡಿ ಈ ಸಾಫ್ಟ್‌ವೇರ್‌ ಲಭ್ಯವಾಗುವಂತೆ ಮಾಡಲಾಗಿದೆ. ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಆರೋಗ್ಯ ಕಾರ್ಯಕರ್ತರಿಗೆ ಈ ಸಾಫ್ಟ್‌ವೇರ್‌ ಬಳಸುವ ಬಗ್ಗೆ ತರಬೇತಿ ನೀಡಲಾಗಿದೆ. ಇ-ಕ್ಲಿನಿಕ್‌ ಕೇಂದ್ರದಲ್ಲಿ ಕುಳಿತ ತಜ್ಞ ವೈದ್ಯರು ನಿರಂತರವಾಗಿ ಈ ಸಾಫ್ಟ್‌ವೇರನ್ನು ಗಮನಿಸುತ್ತಿರುತ್ತಾರೆ. ಅವರು ಯಾವ ರೋಗಿಗೆ ತೀವ್ರ ನಿಗಾ ಅಥವಾ ವೆಂಟಿಲೇಟರ್‌ನ ಅಗತ್ಯ ಬೀಳಬಹುದು ಎಂಬುದನ್ನು ಸಂಬಂಧಪಟ್ಟಕೋವಿಡ್‌ ಕೇರ್‌ ಕೇಂದ್ರಕ್ಕೆ ತಿಳಿಸುತ್ತಾರೆ ಎಂದು ಸರ್ಕಾರ ಹೇಳಿದೆ.

ಜನಸಾಮಾನ್ಯರು ತಾವೇ ತಮ್ಮ ವಿವರಗಳನ್ನು ದಾಖಲಿಸಿ ಈ ಸಾಫ್ಟ್‌ವೇರ್‌ನಡಿ ಭವಿಷ್ಯ ತಿಳಿದುಕೊಳ್ಳುವುದು ಸಾಧ್ಯವಿಲ್ಲ. ಇನ್ನು, ಎಷ್ಟುಸಮಯ ಮೊದಲೇ ಈ ತಂತ್ರಾಂಶವು ರೋಗಿಯ ಭವಿಷ್ಯವನ್ನು ತಿಳಿಸುತ್ತದೆ ಎಂಬುದು ಸ್ಪಷ್ಟವಿಲ್ಲ.

ಹೇಗೆ ಕೆಲಸ ಮಾಡುತ್ತದೆ?

- ಸೀಡ್‌ ಯೋಜನೆಯಡಿ ಲಭ್ಯವಿರುವ ಇ-ಕ್ಲಿನಿಕ್‌ ತಂತ್ರಾಂಶದ ಮೂಲಕ ಕೋವಿಡ್‌ ಸೀವಿಯಾರಿಟಿ ಸ್ಕೋರ್‌ ತಂತ್ರಾಂಶವನ್ನು ಬಳಸಬೇಕು.

- ಕೋವಿಡ್‌ ರೋಗಿಯ ಎಲ್ಲ ವಿವರಗಳನ್ನು ಈ ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಬೇಕು.

- ಕಂಟ್ರೋಲ್‌ ರೂಮ್‌ನಲ್ಲಿ ಕುಳಿತ ತಜ್ಞ ವೈದ್ಯರು ಅದನ್ನು ಗಮನಿಸುತ್ತಾರೆ.

- ರೋಗಿಯ ಸ್ಥಿತಿ ಬಿಗಡಾಯಿಸಲಿದೆಯೇ ಎಂಬುದನ್ನು ಸಾಫ್ಟ್‌ವೇರ್‌ ಮೊದಲೇ ಹೇಳುತ್ತದೆ.

- ಅದನ್ನು ವಿಶ್ಲೇಷಿಸಿ ತಜ್ಞ ವೈದ್ಯರು ಸಂಬಂಧಪಟ್ಟಕೋವಿಡ್‌ ಕೇರ್‌ ಕೇಂದ್ರ ಅಥವಾ ಆಸ್ಪತ್ರೆಗೆ ಮಾಹಿತಿ ರವಾನಿಸುತ್ತಾರೆ.

click me!