ಕೇರಳ, ಮಹಾರಾಷ್ಟ್ರದಲ್ಲೇ 3ನೇ ಅಲೆಯೂ ಆರಂಭ!

By Kannadaprabha News  |  First Published Jul 17, 2021, 7:08 AM IST
  • ದೇಶದಲ್ಲಿ ಶೀಘ್ರದಲ್ಲೇ 3ನೇ ಕೊರೋನಾ ಅಲೆ ಏಳಲಿದೆ ಎಂಬ ತಜ್ಞರ ಎಚ್ಚರಿಕೆ ಸೂಚನೆ
  • 2ನೇ ಅಲೆ ಆರಂಭದ ಮಾದರಿಯಲ್ಲೇ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಈಗ ಕೊರೋನಾ ಸ್ಥಿತಿ ಕಳವಳಕಾರಿಯಾಗಿದೆ
  • ಪ್ರಧಾನಿ ನರೇಂದ್ರ ಮೊದಿ ಎಚ್ಚರಿಕೆಯ ಕರೆಗಂಟೆ

 ನವದೆಹಲಿ (ಜು.17):  ದೇಶದಲ್ಲಿ ಶೀಘ್ರದಲ್ಲೇ 3ನೇ ಕೊರೋನಾ ಅಲೆ ಏಳಲಿದೆ ಎಂಬ ತಜ್ಞರ ಎಚ್ಚರಿಕೆ ಸೂಚನೆ ಬೆನ್ನಲ್ಲೇ ಅದೇ ಧಾಟಿಯಲ್ಲಿ ಎಚ್ಚರಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘2ನೇ ಅಲೆ ಆರಂಭದ ಮಾದರಿಯಲ್ಲೇ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಈಗ ಕೊರೋನಾ ಸ್ಥಿತಿ ಕಳವಳಕಾರಿಯಾಗಿದೆ. ಹೀಗಾಗಿ ಸಂಭವನೀಯ 3ನೇ ಅಲೆ ತಡೆಯಲು ಸರ್ಕಾರಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ರಾಜ್ಯಗಳಿಗೆ ಸೂಚಿಸಿದ್ದಾರೆ.

ಮೋದಿ ಅವರ ಈ ಎಚ್ಚರಿಕೆ ಜನರಿಗೆ 3 ಸಂಗತಿಗಳನ್ನು ನೆನಪಿಸಿದೆ. ದೇಶದಲ್ಲಿ ಮೊದಲ ಕೊರೋನಾ ಪ್ರಕರಣ ಕೇರಳದಲ್ಲಿ ವರದಿಯಾಗಿತ್ತು. ಆಗ ಮೊದಲನೇ ಅಲೆ ಆರಂಭವಾಗಿತ್ತು. ನಂತರ ಈ ವರ್ಷದ ಫೆಬ್ರವರಿಯಲ್ಲಿ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೇಸುಗಳು ಮೊದಲು ಹೆಚ್ಚಾಗಿ ದೇಶದಲ್ಲಿ 2ನೇ ಅಲೆ ಅಬ್ಬರ ಶುರುವಾಗಿತ್ತು. ಈಗಲೂ ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ದೇಶದಲ್ಲೇ ಅತ್ಯಧಿಕ ಕೇಸು ದಾಖಲು ಆರಂಭವಾಗಿದೆ. ಹೀಗಾಗಿ ಇದು 3ನೇ ಅಲೆ ಆರಂಭದ ಸಂಕೇತ ಎಂಬ ಆತಂಕಕ್ಕೆ ಕಾರಣವಾಗಿದೆ.

Latest Videos

undefined

ಸೋಂಕು ನಿಯಂತ್ರಣಕ್ಕೆ ಬರದಿದ್ದರೆ ಹೊಸ ತಳಿ ಆತಂಕ: ಸಿಎಂ ಸಭೆಯಲ್ಲಿ ಮೋದಿ ಎಚ್ಚರಿಕೆ!

ಇದನ್ನೇ ಉದ್ದೇಶಿಸಿ ಹೇಳಿಕೆ ನೀಡಿರುವ ಮೋದಿ, ‘ಕೊರೋನಾ ಎರಡನೇ ಅಲೆ ಏಳುವ ಮುನ್ನ ಮೊದಲಿಗೆ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಜನವರಿ ಹಾಗೂ ಫೆಬ್ರವರಿ ಮಾಹೆಯಲ್ಲಿ ಸೋಂಕು ಏರಿಕೆ ಕಂಡಿತ್ತು. ಈಗಲೂ ಕೂಡ ಅದೇ ಪರಿಸ್ಥಿತಿ ಇದ್ದು, ಈ ಎರಡೂ ರಾಜ್ಯಗಳಲ್ಲಿ ಅಧಿಕ ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಬೇಕು. ‘4 ಟಿ’ ಸೂತ್ರ ಪಾಲಿಸಿ 3ನೇ ಅಲೆ ತಡೆಯಬೇಕು’ ಎಂದು ಸಂದೇಶ ನೀಡಿದ್ದಾರೆ.

ಸಿಎಂಗಳಿಗೆ ತಾಕೀತು:

ಕೊರೋನಾ ಪರಿಸ್ಥಿತಿ ಅವಲೋಕನಕಕ್ಕೆ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಒಡಿಶಾ, ಮಹಾರಾಷ್ಟ್ರ ಹಾಗೂ ಕೇರಳದ ಮುಖ್ಯಮಂತ್ರಿಗಳ ಜೊತೆ ಮೋದಿ ಶುಕ್ರವಾರ ವಿಡಿಯೋ ಕಾನ್ಫರೆನ್ಸಿಂಗ್‌ ನಡೆಸಿ, ಈ ರಾಜ್ಯಗಳಲ್ಲಿ ಕೊರೋನಾ ನಿಗ್ರಹಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.

ಈ ವೇಳೆ ಮಾತನಾಡಿದ ಅವರು, ‘ಯುರೋಪ್‌, ಅಮೆರಿಕ ಹಾಗೂ ಏಷ್ಯಾದ ಅನೇಕ ರಾಷ್ಟ್ರಗಳಲ್ಲಿ ಕೊರೋನಾ ವೈರಸ್‌ ಕೇಸುಗಳು ಹೆಚ್ಚುತ್ತಿವೆ. ನಮ್ಮ ದೇಶದಲ್ಲೂ ಹಲವು ರಾಜ್ಯಗಳಲ್ಲಿ ಸೋಂಕು ನಿಧಾನವಾಗಿ ಏರಿಕೆಯಾಗುತ್ತಿದೆ. ಇದು ಕಳವಳಕಾರಿ ವಿಚಾರ. 3ನೇ ಅಲೆ ತಡೆಯಲು ಟೆಸ್ಟ್‌, ಟ್ರ್ಯಾಕ್‌, ಟ್ರೀಟ್‌ ಮತ್ತು ಟೀಕಾ (ಲಸಿಕೆ) ಎಂಬ 4ಟಿ ಸೂತ್ರವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು’ ಎಂದರು.

ಮಹಾರಾಷ್ಟ್ರ, ಕೇರಳದ ಬಗ್ಗೆ ವಿಶೇಷ ಆತಂಕ:

‘ ತಮಿಳುನಾಡು, ಆಂಧ್ರ, ಕರ್ನಾಟಕ, ಒಡಿಶಾ, ಮಹಾರಾಷ್ಟ್ರ ಮತ್ತು ಕೇರಳದ ಅನೇಕ ಜಿಲ್ಲೆಗಳಲ್ಲಿ ಸೋಂಕು ಇದೆ. ವಿಶೇಷವಾಗಿ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕಳವಳಕಾರಿ ಸ್ಥಿತಿಯಿದೆ. ಈ ರಾಜ್ಯಗಳಲ್ಲೇ ಕಳೆದ ವಾರ ದೇಶದಲ್ಲಿ ಪತ್ತೆಯಾದ ಒಟ್ಟು ಕೋವಿಡ್‌ ಕೇಸುಗಳ ಪೈಕಿ ಶೇ.80ರಷ್ಟುಕೇಸುಗಳು ಹಾಗೂ ಸಂಭವಿಸಿದ ಒಟ್ಟು ಸಾವಿನ ಪೈಕಿ ಶೇ.84ರಷ್ಟುಸಾವು ಸಂಭವಿಸಿದೆ. ಇದಕ್ಕೆ ಕಡಿವಾಣ ಹಾಕಲೇಬೇಕು’ ಎಂದರು.

ಇತ್ತೀಚೆಗಷ್ಟೇ ರಾಜ್ಯಗಳಿಗೆ ಕೊರೋನಾ ನಿಗ್ರಹಕ್ಕೆ 23,000 ಕೋಟಿ ರು.ಗಳ ಆರೋಗ್ಯ ಪ್ಯಾಕೇಜ್‌ ಬಿಡುಗಡೆ ಮಾಡಿದ್ದೇವೆ. 332 ಆಕ್ಸಿಜನ್‌ ಪ್ಲಾಂಟ್‌ಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡಿದ್ದೇವೆ. ಅವುಗಳಲ್ಲಿ 53 ಪ್ಲಾಂಟ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿವೆ. ಇನ್ನುಳಿದ ಘಟಕಗಳು ಬೇಗ ಕಾರ್ಯಾರಂಭ ಮಾಡುವಂತೆ ಮುಖ್ಯಮಂತ್ರಿಗಳು ನೋಡಿಕೊಳ್ಳಬೇಕು. ರಾಜ್ಯಗಳಲ್ಲಿ ತುರ್ತು ನಿಗಾ ಘಟಕ (ಐಸಿಯು)ದ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲು ಹಾಗೂ ಕೊರೋನಾ ಪರೀಕ್ಷೆಯ ಸಂಖ್ಯೆ ಹೆಚ್ಚಿಸಲು ಸಾಕಷ್ಟುಆರ್ಥಿಕ ನೆರವನ್ನು ಕೇಂದ್ರ ಸರ್ಕಾರ ನೀಡುತ್ತಿದೆ ಎಂದು ಮೋದಿ ಹೇಳಿದರು.

ಮಂಗಳವಾರವಷ್ಟೇ ಅವರು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದರು.

ಮೋದಿ ಹೇಳಿದ್ದೇನು?

1. 2ನೇ ಅಲೆಗೆ ಮುನ್ನ ಜನವರಿ, ಫೆಬ್ರವರಿಯಲ್ಲಿ ಇದೇ ಟ್ರೆಂಡ್‌ ಕಾಣಿಸಿತ್ತು, ಎಚ್ಚರವಾಗಿರಿ

2. ಕೊರೋನಾ ಮಹಾಮಾರಿ ಇನ್ನೂ ಹೋಗಿಲ್ಲ ಎಂದು ಜನರಿಗೆ ಆಗಾಗ ಎಚ್ಚರಿಕೆ ನೀಡುತ್ತಿರಿ

3. 3ನೇ ಅಲೆ ತಡೆಯುವಲ್ಲಿ ರಾಜ್ಯಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಬಹಳ ಮುಖ್ಯ

4. ಟೆಸ್ಟ್‌, ಟ್ರ್ಯಾಕ್‌, ಟ್ರೀಟ್‌ ಮತ್ತು ಟೀಕಾ (ಲಸಿಕೆ) ಎಂಬ 4ಟಿ ಸೂತ್ರ ಕಟ್ಟುನಿಟ್ಟಾಗಿ ಪಾಲಿಸಿ

5. ಇನ್ನು ಮುಂದೆ ಮೈಕ್ರೋ ಕಂಟೇನ್ಮೆಂಟ್‌ ವಲಯಗಳನ್ನು ಸೃಷ್ಟಿಸಲು ಹೆಚ್ಚು ಗಮನ ನೀಡಿ

click me!