ಹತ್ತು ವರ್ಷದ ಹಿಂದೆ ಗಣತಿ ನಡೆದಾಗ ಯುಪಿಯ ಪ್ರತಿ ಹತ್ತು ಹೆಣ್ಣು ಮಕ್ಕಳು 31 ಮಕ್ಕಳನ್ನು ಹೆರುತ್ತಿದ್ದರು. ಅದನ್ನು ಹೊಸ ಕಾನೂನಿನ ಮೂಲಕ 16ಕ್ಕೆ ತರುವುದು ಯೋಗಿ ಗುರಿ.
ನವದೆಹಲಿ (ಜು. 16): ಚುನಾವಣೆಗೆ ಮೊದಲು ಹೇಗಾದರೂ ಮಾಡಿ ಹಿಂದೂ-ಮುಸ್ಲಿಂ ಚರ್ಚೆ ಆಗುವ ರೀತಿ ಬಿಜೆಪಿ ಪ್ರಯತ್ನ ಮಾಡುವುದಕ್ಕೂ, ಅದಕ್ಕೇ ಕಾಯುತ್ತಿದ್ದಾರೆ ಎಂಬಂತೆ ತಥಾಕಥಿತ ಜಾತ್ಯತೀತ ಪಕ್ಷಗಳು ಅದೇ ಬಾವಿಯಲ್ಲಿ ಹೋಗಿ ಬೀಳುವುದಕ್ಕೂ ಸರಿ ಇರುತ್ತದೆ. 4 ವರ್ಷ ಸುಮ್ಮನಿದ್ದ ಯೋಗಿ ಆದಿತ್ಯನಾಥ್ ಜನಸಂಖ್ಯಾ ಕಾನೂನು ತಂದು ಬಿಜೆಪಿ ಮೇಲಿರಬಹುದಾದ ಹಿಂದೂಗಳ ಅಸಮಾಧಾನ ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದ್ದರೆ, ಮುಸ್ಲಿಂ ಮತಗಳ ಮೇಲೆ ಸದಾ ಕಣ್ಣು ನೆಟ್ಟು ಪೈಪೋಟಿ ನಡೆಸುವ ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷಗಳು ಜನಸಂಖ್ಯಾ ಕಾನೂನು ತಂದರೆ ಮುಸ್ಲಿಮರಿಗೆ ತೊಂದರೆ ಜಾಸ್ತಿ ಎಂಬ ಪ್ರಚಾರ ಶುರುಮಾಡಿವೆ.
ಜನಸಂಖ್ಯಾ ಕಾನೂನು ತರುವ ಟೈಮಿಂಗ್ ಬಗ್ಗೆ ಪ್ರಶ್ನೆಗಳು ಇರಬಹುದು. ಆದರೆ 22 ಕೋಟಿ ಜನಸಂಖ್ಯೆ ಇರುವ ರಾಜ್ಯ ಅಭಿವೃದ್ಧಿ ಆಗಬೇಕೆಂದರೆ ಆ ರಾಜ್ಯವನ್ನು ಒಡೆಯಬೇಕು ಮತ್ತು ಅಲ್ಲಿನ ಜನಸಂಖ್ಯೆ ಇಳಿಕೆ ಆಗಬೇಕು. ಇಲ್ಲವಾದಲ್ಲಿ ಯಾರೇ ಬಂದರೂ ಜಾತಿ ಧರ್ಮ ಒಡೆಯುವ ಪುಕ್ಕಟೆ ಭಾಷಣ ಮಾಡಬಹುದೇ ಹೊರತು ಅಭಿವೃದ್ಧಿ ಮಾಡಿ, ಸೌಕರ್ಯ ಕಲ್ಪಿಸಿ, ಉದ್ಯೋಗ ಕೊಡಿಸಲು ಆಗೋದಿಲ್ಲ.
ಮುರುಗೇಶ್ ನಿರಾಣಿ ದಿಲ್ಲಿ ಯಾತ್ರೆಗಳು ಹೆಚ್ಚಾಗುತ್ತಿರುವುದೇಕೆ.?
ಕರ್ನಾಟಕದಲ್ಲಿ ಸರಾಸರಿ 10 ಮಹಿಳೆಯರು 16 ಮಕ್ಕಳಿಗೆ ಜನ್ಮ ನೀಡುತ್ತಿದ್ದರೆ, ಉತ್ತರ ಪ್ರದೇಶದಲ್ಲಿ 10 ಮಹಿಳೆಯರು 24 ಮಕ್ಕಳಿಗೆ ಜನ್ಮ ನೀಡುತ್ತಾರೆ. ಯೋಗಿ ಇವತ್ತು ಕಾನೂನು ತಂದರೂ ನಾಳೆಯೇ ಪರಿಸ್ಥಿತಿ ಸುಧಾರಿಸುವುದಿಲ್ಲ. ಕನಿಷ್ಠ 10ರಿಂದ 15 ವರ್ಷಗಳಾದರೂ ಬೇಕು. ಆದರೆ ಜನಸಂಖ್ಯಾ ಕಾನೂನು ಹುಟ್ಟುಹಾಕುವ ಹಿಂದೂ-ಮುಸ್ಲಿಂ ಚರ್ಚೆಯಿಂದ ಬಿಜೆಪಿಗೆ ತತ್‌ಕ್ಷಣದ ಲಾಭವಿದೆ. ಅದಕ್ಕಾಗಿಯೇ ಸನ್ಯಾಸಿ ಯೋಗಿ ಪಕ್ಕಾ ಸಾಂಸಾರಿಕ ವಿಷಯಕ್ಕೆ ಕೈಹಾಕಿದ್ದಾರೆ.
ಜನಸಂಖ್ಯೆ ಸ್ಫೋಟದ ಸತ್ಯ ಏನು?
1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಜನಸಂಖ್ಯೆ 36 ಕೋಟಿ. ಇವತ್ತು ಅದು 100 ಕೋಟಿ ಜಾಸ್ತಿಯಾಗಿ 136 ಕೋಟಿಯಾಗಿದೆ. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಪ್ರತಿ ವರ್ಷ 2.5 ಕೋಟಿ ಮಕ್ಕಳು ಹುಟ್ಟುತ್ತಾರೆ. ಆದರೆ ಸಾಯುವವರ ಸಂಖ್ಯೆ 86ರಿಂದ 87 ಲಕ್ಷ. ಅಂದರೆ ಭಾರತದಲ್ಲಿ ಪ್ರತಿವರ್ಷ ಜನಸಂಖ್ಯೆ ಸರಾಸರಿ ಒಂದೂವರೆ ಕೋಟಿ ಹೆಚ್ಚುತ್ತದೆ. 2027ರಲ್ಲಿ ಚೀನಾವನ್ನು ಹಿಂದಿಕ್ಕುವ ನಾವು 2050ರ ಹೊತ್ತಿಗೆ 175 ಕೋಟಿಗೂ ಹೆಚ್ಚಿನ ಜನರ ರಾಷ್ಟ್ರ ಆಗಲಿದ್ದೇವೆ.
ಆದರೆ, ಜಗತ್ತಿನ ಒಟ್ಟು ಭೂಮಿಯಲ್ಲಿ ನಮ್ಮ ಬಳಿ ಇರುವುದು 4 ಪ್ರತಿಶತ ಮಾತ್ರ. ಹಾಗಂತ ಜಗತ್ತಿಗೆ ನಮ್ಮ ಜನಸಂಖ್ಯೆಯ ಕೊಡುಗೆ ಸರಾಸರಿ 18 ಪ್ರತಿಶತ. ಅಂದರೆ ಮುಂದಿನ ದಿನಗಳಲ್ಲಿ ನಮ್ಮ ನಗರಗಳನ್ನು ಊಹಿಸಿಕೊಂಡರೂ ಭಯ ಆಗುತ್ತದೆ. ಸಂಜಯ ಗಾಂಧಿ ತುರ್ತು ಪರಿಸ್ಥಿತಿಯಲ್ಲಿ ಮಾಡಿದಂತೆ ಬಲವಂತದ ಶಸ್ತ್ರಚಿಕಿತ್ಸೆ ತರುವುದು ತಪ್ಪು. ಆದರೆ 2ಕ್ಕಿಂತ ಹೆಚ್ಚು ಮಕ್ಕಳನ್ನು ಹೆತ್ತರೆ ಮತ ನೀಡುವ, ಚುನಾವಣೆಗೆ ನಿಲ್ಲುವ, ಸರ್ಕಾರಿ ನೌಕರಿ ಪಡೆಯುವ ಸಬ್ಸಿಡಿ ಸೌಲಭ್ಯ ರದ್ದು ಮಾಡುವ ನೀತಿಯಿಂದ ಏನೂ ತೊಂದರೆ ಇಲ್ಲ.
ಹಿಂದೂ-ಮುಸ್ಲಿಂ ಕನ್ನಡಕ
ಅದು ಹೇಗೋ ಗೊತ್ತಿಲ್ಲ ಭಾರತದಲ್ಲಿ ಜನಸಂಖ್ಯೆ ವಿಷಯ ಚರ್ಚೆಗೆ ಬಂದಾಕ್ಷಣ ಹಿಂದೂ-ಮುಸ್ಲಿಂ ಚರ್ಚೆ ತನ್ನಿಂದ ತಾನೇ ಶುರುವಾಗುತ್ತದೆ. ಸತ್ಯ ಏನಪ್ಪಾ ಎಂದರೆ ಆ ಚರ್ಚೆ ಶುರು ಆಗುವುದರಿಂದ ಹಿಂದುತ್ವವಾದಿ ಮತ್ತು ಸೆಕ್ಯುಲರ್ ಎರಡು ಪಕ್ಷಗಳಿಗೂ ಲಾಭವಿದೆ. ಜನಸಂಖ್ಯೆ ವಿಷಯ ಬಂದಕೂಡಲೇ ಧರ್ಮದ ಕನ್ನಡಕ ಹಾಕಿ ನೋಡುವುದಕ್ಕೆ ಕಾರಣ ಹಿಂದೆ ಹಿಂದೂ-ಮುಸ್ಲಿಂ ಆಧಾರದಲ್ಲಿ ನಡೆದ ದೇಶ ವಿಭಜನೆಯೂ ಇರಬಹದು. ಎರಡನೇ ಮಹಾಯುದ್ಧದ ನಂತರ ಭಾರತದಲ್ಲಿ ಪ್ರತಿ 10 ಹಿಂದೂ ಮಹಿಳೆಯರು 50 ಮಕ್ಕಳಿಗೆ ಜನ್ಮಕೊಡುತ್ತಿದ್ದರೆ, ಪ್ರತಿ ಹತ್ತು ಮುಸ್ಲಿಂ ಮಹಿಳೆಯರು 60 ಮಕ್ಕಳಿಗೆ ಜನ್ಮ ಕೊಡುತ್ತಿದ್ದರು.
ಈಗ ಸರಾಸರಿ 10 ಹಿಂದೂ ಮಹಿಳೆಯರು 21 ಮಕ್ಕಳಿಗೆ ಜನ್ಮ ನೀಡುತ್ತಿದ್ದರೆ, ಪ್ರತಿ 10 ಮುಸ್ಲಿಂ ಮಹಿಳೆಯರು 26 ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. 20 ವರ್ಷಗಳ ಹಿಂದೆ 10 ಮುಸ್ಲಿಂ ಮಹಿಳೆಯರು 36 ಮಕ್ಕಳಿಗೆ ಜನ್ಮ ನೀಡುತ್ತಿದ್ದರು. ಅಂದರೆ ಹಿಂದೂ ಮುಸ್ಲಿಮರ ನಡುವೆ 20 ವರ್ಷಗಳ ಹಿಂದೆ ಫಲವತ್ತತೆಯಲ್ಲಿ ಒಂದು ಪ್ರತಿಶತದ ಅಂತರ ಇತ್ತು. ಅದು ಈಗ ನಿಧಾನಕ್ಕೆ ಅರ್ಧ ಪ್ರತಿಶತಕ್ಕೆ ಇಳಿದಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಸ್ವಾವಲಂಬನೆ ಜನಸಂಖ್ಯೆಯ ತಕ್ಕ ಮಟ್ಟಿಗಿನ ನಿಯಂತ್ರಣಕ್ಕೆ ಕಾರಣ ಹೌದು. ಆದರೆ ಜಗತ್ತಿನ ಸರಾಸರಿಗೆ ಹೋಲಿಸಿದರೆ ಅದು ಸಾಲದು. ಹೀಗಾಗಿ ಕಠಿಣ ಕಾನೂನಿನ ಅವಶ್ಯಕತೆ ಇರದೇ ಹೋದರೂ ಸೌಲಭ್ಯಗಳ ಬಟವಾಡೆಯನ್ನು ಮಕ್ಕಳ ಸಂಖ್ಯೆ ಜೊತೆ ಜೋಡಿಸುವ ಅವಶ್ಯಕತೆ ಅಂತೂ ಇದೆ.
ಶೋಭಾ ಕರಂದ್ಲಾಜೆಗೆ ರಾಜಕೀಯ ಪುನರ್ಜನ್ಮ, ಮೋದಿ ಸಂಪುಟ ಸರ್ಜರಿ ಹಿಂದಿನ ಸತ್ಯಗಳು
ಉತ್ತರ ಪ್ರದೇಶದ ಕಥೆ ವ್ಯಥೆ
ದೇಶದ ಒಟ್ಟು ಭೂಮಿಯಲ್ಲಿ ಉತ್ತರ ಪ್ರದೇಶದ ಬಳಿ 8 ಪ್ರತಿಶತ ಭೂಮಿ ಇದ್ದರೆ, ಜನಸಂಖ್ಯೆ ಅದರ ದುಪ್ಪಟ್ಟಿಗಿಂತ ಜಾಸ್ತಿ ಅಂದರೆ 17 ಪ್ರತಿಶತ ಇದೆ. ಯುರೋಪ್, ದಕ್ಷಿಣ ಅಮೆರಿಕ ಮತ್ತು ಆಫ್ರಿಕಾದ ಯಾವುದೇ ರಾಷ್ಟ್ರದ ಜನಸಂಖ್ಯೆ ಉತ್ತರ ಪ್ರದೇಶದ ಹತ್ತಿರಕ್ಕೂ ಬರೋದಿಲ್ಲ. ಹತ್ತು ವರ್ಷದ ಹಿಂದೆ ಗಣತಿ ನಡೆದಾಗ ಯುಪಿಯ ಪ್ರತಿ ಹತ್ತು ಹೆಣ್ಣು ಮಕ್ಕಳು 31 ಮಕ್ಕಳನ್ನು ಹೆರುತ್ತಿದ್ದರು. ಅದನ್ನು ಹೊಸ ಕಾನೂನಿನ ಮೂಲಕ 16ಕ್ಕೆ ತರುವುದು ಯೋಗಿ ಗುರಿ. ಅದರಿಂದ ನೌಕರಿ, ಆಸ್ಪತ್ರೆ, ಸಬ್ಸಿಡಿ ಮತ್ತು ಮೂಲಭೂತ ಸೌಲಭ್ಯಗಳ ಮೇಲೆ ಬಿದ್ದಿರುವ ಒತ್ತಡ ಕಡಿಮೆ ಆಗುತ್ತದೆ ಎನ್ನುವುದು ಯೋಗಿ ಕೊಡುತ್ತಿರುವ ಕಾರಣ.
ಒಂದು ಅಂದಾಜಿನ ಪ್ರಕಾರ ಉತ್ತರ ಪ್ರದೇಶದಲ್ಲಿ 6 ಕೋಟಿಗೂ ಹೆಚ್ಚು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಬಹುತೇಕ ಇದನ್ನೇ ವಿಷಯ ಮಾಡಿಕೊಂಡು ಯೋಗಿ ಚುನಾವಣೆಯಲ್ಲಿ ಓಡಾಡಲಿದ್ದಾರೆ. ದಿಲ್ಲಿ ಗದ್ದುಗೆ ರಸ್ತೆ ಯುಪಿ ಮೂಲಕ ಹಾದು ಹೋಗುತ್ತೆ ಅನ್ನೋದು ಎಷ್ಟುನಿಜವೋ, ಯುಪಿ ಅಭಿವೃದ್ಧಿ ಆಗದೇ ಭಾರತವನ್ನು ಸೂಚ್ಯಂಕದ ಮೇಲಿನ ಸ್ಥಾನದಲ್ಲಿ ನೋಡಲು ಸಾಧ್ಯವಿಲ್ಲ. ಯುಪಿ ಜನಸಾಂದ್ರತೆಯಿಂದಾಗಿ ದೇಶದ ಉಳಿದ ಮಹಾನಗರಗಳಿಗೆ ಕಾರ್ಮಿಕರು ಸಿಗುತ್ತಿದ್ದಾರೆ ಹೌದು.
ಆದರೆ ಅದರಿಂದ ಯುಪಿಯ ತೆರಿಗೆ ಸಂಗ್ರಹ, ಮೂಲಭೂತ ಸೌಕರ್ಯ ಅಭಿವೃದ್ಧಿ ಮೇಲೇನೂ ಗಣನೀಯ ಪರಿಣಾಮ ಆಗುತ್ತಿಲ್ಲ. ರಾಜಕಾರಣಕ್ಕಾಗಿ ಚುನಾವಣೆಯಲ್ಲಿ ವೋಟಿಗಾಗಿ ಆದರೂ ಸರಿ, ಯೋಗಿ ಆದಿತ್ಯನಾಥ ಯುಪಿಯ ಮೂಲ ಸಮಸ್ಯೆ ಸರಿಪಡಿಸಲು ಕೈಹಾಕಿರುವುದು ಒಳ್ಳೆ ಬೆಳವಣಿಗೆ. ಅಲ್ಲಿನ ಜನಸಂಖ್ಯೆಯ ನಿಯಂತ್ರಣದ ಜೊತೆಗೆ ಅಷ್ಟುದೊಡ್ಡದಾಗಿರುವ ಯುಪಿಯನ್ನು ವಿಭಜಿಸಿ ಆಡಳಿತ ವಿಕೇಂದ್ರೀಕರಿಸಲೂ ಇದು ಸಕಾಲ.
- ಪ್ರಶಾಂತ್ ನಾತು, ಇಂಡಿಯಾ ಗೇಟ್
- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ