
ಲಖನೌ(ಜ.19): ದೇಶಾದ್ಯಂತ ಕೊರೋನಾ ವೈರಸ್ ವಿರುದ್ಧ ಲಸಿಕೆ ಅಭಿಯಾನ ಆರಂಭವಾದ ಮೊದಲ ದಿನ ಲಸಿಕೆ ಪಡೆದಿದ್ದ ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯೊಂದರ ವಾರ್ಡ್ ಬಾಯ್ ಭಾನುವಾರ ರಾತ್ರಿ ಸಾವನ್ನಪ್ಪಿರುವುದು ವಿವಾದಕ್ಕೆ ಕಾರಣವಾಗಿದೆ. ಇದು ಹೃದಯದ ತೊಂದರೆಯಿಂದ ಸಂಭವಿಸಿದ ಸಾವು, ಕೊರೋನಾ ಲಸಿಕೆಗೂ ಇದಕ್ಕೂ ಸಂಬಂಧವಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ಆದರೆ ಇದು ಲಸಿಕೆಯ ಅಡ್ಡ ಪರಿಣಾಮದಿಂದಲೇ ಉಂಟಾದ ಸಾವು ಎಂದು ವಾರ್ಡ್ ಬಾಯ್‌ನ ಕುಟುಂಬ ಆರೋಪಿಸಿದೆ.
ಮೊರಾದಾಬಾದ್ ಜಿಲ್ಲೆಯ ಸರ್ಕಾರಿ ದೀನದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 46 ವರ್ಷದ ಆರೋಗ್ಯ ಕಾರ್ಯಕರ್ತ ಮಹಿಪಾಲ್ ಶನಿವಾರ ಕೊರೋನಾ ಲಸಿಕೆ ಪಡೆದಿದ್ದರು. ಭಾನುವಾರ ಸಂಜೆ ವೇಳೆಗೆ ಅವರಿಗೆ ತೀವ್ರ ಅನಾರೋಗ್ಯ ಕಾಣಿಸಿಕೊಂಡಿದ್ದು, ರಾತ್ರಿ ವೇಳೆಗೆ ಮೃತಪಟ್ಟಿದ್ದಾರೆ. ನಂತರ ಮೂವರು ತಜ್ಞ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ, ‘ಸಾವಿಗೆ ಹೃದಯದ ಸಮಸ್ಯೆ ಮತ್ತು ಶ್ವಾಸಕೋಶದ ಅನಾರೋಗ್ಯ ಕಾರಣ’ ಎಂದು ವರದಿ ನೀಡಿದ್ದಾರೆ. ಮಹಿಪಾಲ್‌ನ ಹೃದಯ ಊದಿಕೊಂಡಿತ್ತು ಎಂದು ಮುಖ್ಯ ವೈದ್ಯಾಧಿಕಾರಿ ಡಾ| ಮಿಲಿಂದ್ ಚಂದ್ರ ಗರ್ಗ್ ತಿಳಿಸಿದ್ದಾರೆ.
ಘಟನೆಯ ಕುರಿತು ಮೊರದಾಬಾದ್ ಜಿಲ್ಲಾಧಿಕಾರಿ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಕಾರ್ಯಾಲಯ ಮಹಿಪಾಲ್‌ನ ಸಾವಿಗೆ ಕೊರೋನಾ ಲಸಿಕೆ ಕಾರಣವಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಹಿಪಾಲ್‌ನ ಪುತ್ರ, ‘ನನ್ನ ತಂದೆಗೆ ನೆಗಡಿ, ಕೆಮ್ಮು ಇತ್ತು. ಹೃದಯ ಅಥವಾ ಶ್ವಾಸಕೋಶದ ಅನಾರೋಗ್ಯದಂತಹ ಯಾವುದೇ ರೋಗವಿರಲಿಲ್ಲ. ಕೊರೋನಾ ಸಮಯದಲ್ಲೂ ಅವರು ಚೆನ್ನಾಗಿ ಕೆಲಸ ಮಾಡಿದ್ದರು. ಆದರೆ, ಲಸಿಕೆ ಪಡೆದುಕೊಂಡ ನಂತರ ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿತು’ ಎಂದು ಹೇಳಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ