‘ಕರ್ನಾಟಕ ಆಕ್ರಮಿತ ಪ್ರದೇಶ’ ಎಂದ ಉದ್ಧವ್ ಹೇಳಿಕೆಗೆ ವ್ಯಾಪಕ ಆಕ್ರೋಶ| ಮಹಾ ಉದ್ಧಟತನ ವಿರುದ್ಧ ಕನ್ನಡಿಗರು ಕೆಂಡಾಮಂಡಲ| ಠಾಕ್ರೆ ಬೆಳಗಾವಿ ಗಡಿ ಕ್ಯಾತೆಗೆ ರಾಜ್ಯದಲ್ಲಿ ಪಕ್ಷಾತೀತ ಖಂಡನೆ| ರಾಜ್ಯದ ಒಂದಿಂಚೂ ನೆಲವನ್ನೂ ಬಿಡಲ್ಲ ಎಂದು ಘೋಷಣೆ| ರಾಜ್ಯದ ಹಲವೆಡೆ ಮಹಾರಾಷ್ಟ್ರ ಸಿಎಂ ವಿರುದ್ಧ ಪ್ರತಿಭಟನೆ
ಬೆಂಗಳೂರು(ಜ.19): ಕರ್ನಾಟಕದ ಮರಾಠಿಗರಿರುವ ಪ್ರದೇಶಗಳನ್ನು ಮಹಾರಾಷ್ಟ್ರದಲ್ಲಿ ವಿಲೀನಗೊಳಿಸಲು ಬದ್ಧ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆಗೆ ಕನ್ನಡಿಗರು ತೀವ್ರ ಕೆಂಡಾಮಂಡಲರಾಗಿದ್ದಾರೆ. ಈ ಉದ್ಧಟತನದ ಹೇಳಿಕೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆದಿಯಾಗಿ ಅನೇಕ ಮುಖಂಡರು ಪಕ್ಷಾತೀತವಾಗಿ ಖಂಡಿಸಿದ್ದು, ರಾಜ್ಯದ ಒಂದಿಂಚೂ ನೆಲವನ್ನೂ ಬಿಡಲು ಸಾಧ್ಯವಿಲ್ಲ ಎಂಬ ಒಕ್ಕೊರಲಿನ ಸಂದೇಶ ರವಾನಿಸಿದ್ದಾರೆ. ಮಾತ್ರವಲ್ಲದೆ ರಾಜಧಾನಿ ಬೆಂಗಳೂರು, ಬೆಳಗಾವಿ ಸೇರಿದಂತೆ ವಿವಿಧೆಡೆಗಳಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಉದ್ಧವ್ ಠಾಕ್ರೆ ವಿರುದ್ಧ ಅತೀವ ಆಕ್ರೋಶ ವ್ಯಕ್ತಪಡಿಸಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಬೆಳಗಾವಿ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲೇ ಗಡಿ ಕ್ಯಾತೆ ತೆಗೆದಿದ್ದ ಉದ್ಧವ್ ಠಾಕ್ರೆ, ಬೆಳಗಾವಿ ಸೇರಿದಂತೆ ಕರ್ನಾಟಕದ ಹಲವು ‘ಕರ್ನಾಟಕ ಅಕ್ರಮಿತ’ ಪ್ರದೇಶಗಳನ್ನು ಮಹಾರಾಷ್ಟ್ರದಲ್ಲಿ ವಿಲೀನಗೊಳಿಸಲು ಬದ್ಧವಿರುವುದಾಗಿ ಹೇಳಿದ್ದರು. ಅಲ್ಲದೆ ಗಡಿ ಹೋರಾಟಗಾರರನ್ನು ‘ಹುತಾತ್ಮ’ರು ಎಂದು ಕರೆದಿದ್ದರು. ಇದು ಕನ್ನಡಿಗರನ್ನು ಕೆರಳಿಸಿದ್ದು ಮುಖ್ಯಮಂತ್ರಿ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಸಚಿವರಾದ ಮಾಧುಸ್ವಾಮಿ, ರಮೇಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ರೇವಣ್ಣ ಸೇರಿದಂತೆ ಅನೇಕ ಶಾಸಕರು, ರಾಜಕೀಯ ಪಕ್ಷಗಳ ಮುಖಂಡರು ಪಕ್ಷಭೇದವಿಲ್ಲದೆ ಖಂಡಿಸಿದ್ದಾರೆ.
ಮಹಾರಾಷ್ಟ್ರ ಅನಗತ್ಯ ಗೊಂದಲವನ್ನುಂಟು ಮಾಡುತ್ತಿದ್ದು, ಉದ್ಧವ್ ಠಾಕ್ರೆ ಗಡಿಯಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬೆಳಗಾವಿ ಯಾವತ್ತಿದ್ದರೂ ಕರ್ನಾಟಕದ ಅಂಗ ಎಂದು ಅಭಿಪ್ರಾಯಪಟ್ಟಿರುವ ರಾಜ್ಯ ನಾಯಕರು, ಗಡಿ ವಿಚಾರಕ್ಕೆ ಸಂಬಂಧಿಸಿ ಮಹಾಜನ್ ವರದಿಯೇ ಅಂತಿಮವಾಗಿದ್ದು, ಈ ವಿಚಾರದಲ್ಲಿ ರಾಜಿಯೇ ಇಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಉದ್ಧವ್ ಹೇಳಿಕೆಗೆ ಕನ್ನಡಪರ ಸಂಘಟನೆಗಳಿಂದಲೂ ಆಕ್ರೋಶ ವ್ಯಕ್ತವಾಗಿದ್ದು, ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕನ್ನಡ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಸಾ.ರಾ.ಗೋವಿಂದು, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿಮಾತನಾಡಿ, ಉದ್ಧವ್ ಠಾಕ್ರೆ ರಾಜಕೀಯ ಕಾರಣಕ್ಕಾಗಿ, ಅಧಿಕಾರದ ಅಸ್ತಿತ್ವಕ್ಕಾಗಿ ಪದೇ ಪದೇ ಇಂತಹ ಹೇಳಿಕೆ ನೀಡುವುದನ್ನು ಕನ್ನಡಿಗರು ಸಹಿಸುವುದಿಲ್ಲ. ಕನ್ನಡಿಗರನ್ನು ಕೆಣಕಿದರೆ ನಮ್ಮ ತಾಕತ್ತು ಏನೆಂಬುದನ್ನು ತೋರಿಸುತ್ತೇವೆ ಎಂದು ಗುಡುಗಿದ್ದಾರೆ.
ಬೆಳಗಾವಿ ನಗರ, ಗೋಕಾಕ, ವಿಜಯಪುರ, ಬಾಗಲಕೋಟೆ, ಚಾಮರಾಜನಗರಗಳಲ್ಲೂ ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿ ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಉದ್ಧವ್ ಠಾಕ್ರೆ ಭಾವಚಿತ್ರಕ್ಕೆ ಚಪ್ಪಲಿಯೇಟು ಕೊಟ್ಟು ಪ್ರತಿಭಟಿಸಿದರೆ, ಬಳ್ಳಾರಿ, ಹೊಸಪೇಟೆ, ಮುಂಡರಗಿಗಳಲ್ಲಿ ಪ್ರತಿಭಟನಾ ಮೆರವಣಿಗೆಗಳು ನಡೆದಿವೆ.