ಆರೋಗ್ಯ ಸಚಿವರ ತುರ್ತು ಸಭೆ ಬಳಿಕ ಕೋವಿಡ್ ನಿಯಮ ಜಾರಿ, ವಿದೇಶಿ ಪ್ರಯಾಣಿಕರಿಗೆ ಪರೀಕ್ಷೆ ಕಡ್ಡಾಯ!

By Suvarna NewsFirst Published Apr 8, 2023, 7:44 PM IST
Highlights

ಭಾರತದಲ್ಲಿ ಸತತ 2ನೇ ದಿನ 6,000ಕ್ಕೂ ಹೆಚ್ಚು ಮಂದಿಯಲ್ಲಿ ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಕೇಂದ್ರ ಆರೋಗ್ಯ ಸಚಿವರು ಈಗಾಗಲೇ ತುರ್ತು ಸಭೆ ನಡೆಸಿ ನಿರ್ದೇಶ ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಒಂದೊಂದೆ ನಿಯಮಗಳು ಜಾರಿಯಾಗುತ್ತಿದೆ. ಇದೀಗ ವಿದೇಶಿ ಪ್ರಯಾಣಿಕರಿಗೆ ಪರೀಕ್ಷೆ ಕಡ್ಡಾಯ ಮಾಡಲಾಗಿದೆ.

ಲಖನೌ(ಏ.08): ಭಾರತ ಸೇರಿದಂತೆ ವಿಶ್ವದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದೆ. ಈ ವರ್ಷದ ಗರಿಷ್ಠ ಪ್ರಕರಣ ಇದೀಗ ದಾಖಲಾಗಿದೆ. ಕಳೆದೆರಡು ದಿನ ಸತತ 6,000ಕ್ಕೂ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗಿದೆ. ಇಂದು 6,155 ಕೋವಿಡ್ ಪ್ರಕರಣ ದಾಖಲಾಗಿದೆ. ಏಪ್ರಿಲ್ 7 ರಂದು ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಆರೋಗ್ಯ ಸಚಿವರ ಜೊತೆ ತುರ್ತು ಸಭೆ ನಡೆಸಿದ್ದಾರೆ. ಈ ವೇಳೆ ಹಲವು ನಿರ್ದೇಶನ ನೀಡಿದ್ದಾರೆ. ಇದರ ಬೆನ್ನಲ್ಲೇ ಕೋವಿಡ್ ಗಣನೀಯ ಏರಿಕೆಯಾಗುತ್ತಿರುವ ರಾಜ್ಯಗಳು ಕಠಿಣ ನಿರ್ಬಂಧ ಜಾರಿಗೊಳಿಸುತ್ತಿದೆ. ಇದೀಗ ಉತ್ತರ ಪ್ರದೇಶ ಸರ್ಕಾರ, ವಿದೇಶದಿಂದ ಆಗಮಿಸುವ ಎಲ್ಲಾ ಪ್ರಯಾಣಿಕರ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. 

ವಿದೇಶಿ ಪ್ರಯಾಣಿಕರ ಮಾದರಿ ಸಂಗ್ರಹಿಸಿ ಜಿನೋಮ್ ಸೀಕ್ವೆನ್ಸ್ ಪರೀಕ್ಷೆಗೆ ಕಳುಹಿಸುವಂತೆ ಉತ್ತರ ಪ್ರದೇಶ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಇದರಿಂದ ವಿದೇಶದಿಂದ ಆಗಮಿಸುವ ಎಲ್ಲಾ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಬೇಕು. ಇನ್ನು ಹೋಮ್ ಕ್ವಾರಂಟೈನ್, ಐಸೋಲೇಶನ್ ಸೇರಿದಂತೆ ಇತರ ನಿಯಮಗಳು ಜಾರಿಯಾಗಿದೆ. 

 

ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕ ಸೇರಿ 7 ರಾಜ್ಯದಲ್ಲಿ ಕೋವಿಡ್ ಆತಂಕ, ಹಾಟ್‌ಸ್ಪಾಟ್ ಗುರುತಿಸಲು ಸೂಚನೆ!

ಭಾರತದ 7 ರಾಜ್ಯಗಳಲ್ಲಿ ಕೋವಿಡ್ ಗಣನೀಯ ಏರಿಕೆಯಾಗುತ್ತಿದೆ. ಈ ಪಟ್ಟಿಯಲ್ಲಿ ಕರ್ನಾಟಕ ರಾಜ್ಯವೂ ಸೇರಿಕೊಂಡಿದೆ. ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಆದರೆ ಎಚ್ಚರಿಕೆ ವಹಿಸಲು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟ ಸೂಚನೆ ನೀಡಿದೆ. ಇಂದು ಬೆಳಗ್ಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ 6155 ಹೊಸ ಪ್ರಕರಣಗಳು ದಾಖಲಾಗಿದ್ದು ದೈನಂದಿನ ಪಾಸಿಟಿವಿಟಿ ಪ್ರಮಾಣವು ಶೇ.5.63ಕ್ಕೆ ಏರಿಕೆಯಾಗಿದೆ. ಸೋಂಕಿಗೆ ದೇಶದಲ್ಲಿ ಒಟ್ಟು 11 ಮಂದಿ ಸಾವನ್ನಪ್ಪಿದ್ದು, ಮೃತರ ಪ್ರಮಾಣವು ಸೋಂಕಿತರ ಶೇ.1.19ರಷ್ಟಿದೆ. ದೇಶದಲ್ಲಿ ಹೊಸ ಪ್ರಕರಣಗಳ ದಾಖಲಾತಿ ಹೆಚ್ಚಿರುವುದರಿಂದ ಸಕ್ರಿಯ ಪ್ರಕರಣಗಳು 31,194ಕ್ಕೆ ಏರಿಕೆಯಾಗಿದೆ. ಗುಣಮುಖರ ಪ್ರಮಾಣವು ಶೇ.98.74ಕ್ಕೆ ಕುಸಿದಿದೆ.

ದೇಶದಲ್ಲಿ ಈವರೆಗೂ 4.47 ಕೋಟಿ ಮಂದಿ ಸೋಂಕಿಗೆ ಗುರಿಯಾಗಿದ್ದು,ಅದರಲ್ಲಿ 4.41 ಕೋಟಿ ಮಂದಿ ಗುಣಮುಖರಾಗಿದ್ದಾರೆ ಹಾಗೂ 5.30 ಲಕ್ಷ ಜನ ಸಾವನ್ನಪ್ಪಿದ್ದಾರೆ. ಇದುವರೆಗೂ 220.66 ಕೋಟಿ ಕೋವಿಡ್‌ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಕೋವಿಡ್ ಹೆಚ್ಚಳ ನಡುವೆ ಡೆಡ್ಲಿ ಮಾಬರ್ಗ್ ವೈರಸ್ ಪತ್ತೆ, ತಾಂಝಾನಿಯಾಗೆ ಪ್ರಯಾಣಕ್ಕೆ ನಿರ್ಬಂಧ!

ಇತ್ತ ಬೆಂಗಳೂರಿನಲ್ಲಿ ಶುಕ್ರವಾರ 144 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.5.49 ದಾಖಲಾಗಿದೆ. ಸೋಂಕಿನಿಂದ 73 ಜನ ಗುಣಮುಖರಾಗಿದ್ದು, ಒಬ್ಬ ವೃದ್ಧ ಮೃತಪಟ್ಟವರದಿಯಾಗಿದೆ. 979 ಸಕ್ರಿಯ ಸೋಂಕು ಪ್ರಕರಣಗಳಿದ್ದು, 67 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 490 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 12 ಮಂದಿ ಮೊದಲ ಡೋಸ್‌, 18 ಮಂದಿ ಎರಡನೇ ಡೋಸ್‌ ಮತ್ತು 460 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. 3659 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
 

click me!