ಸೆಪ್ಟೆಂಬರ್‌ಗೆ ಭಾರತಕ್ಕೆ ಮತ್ತೊಂದು ಲಸಿಕೆ

By Kannadaprabha NewsFirst Published Mar 28, 2021, 9:01 AM IST
Highlights

ಶೀಘ್ರ ಭಾರತದಲ್ಲಿ ಮತ್ತೊಂದು ಹೊಸ ಲಸಿಕೆ  ಬಿಡುಗಡೆ ಮಾಡಲಾಗುತ್ತದೆ. ಪುಣೆಯ ಸೀರಂ ಇನ್ಸ್ಟಿಟ್ಯೂಟ್ ಮತ್ತೊಂದು ಲಸಿಕೆ ಬಿಡುಗಡೆಗೆ ಸಿದ್ಧವಾಗುತ್ತಿದೆ. 

ನವದೆಹಲಿ (ಮಾ.28):  ಈಗಾಗಲೇ ಕೊರೋನಾ ವೈರಸ್‌ ಸೋಂಕು ನಿಯಂತ್ರಣಕ್ಕಾಗಿ ‘ಕೋವಿಶೀಲ್ಡ್‌’ ಲಸಿಕೆ ಬಿಡುಗಡೆ ಮಾಡಿ ಮೆಚ್ಚುಗೆಗೆ ಪಾತ್ರವಾಗಿರುವ ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌, ಈಗ ಮತ್ತೊಂದು ಲಸಿಕೆ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳತೊಡಗಿದೆ. ‘ಕೋವೋವ್ಯಾಕ್ಸ್‌’ ಎಂಬ ಲಸಿಕೆಯ ಕ್ಲಿನಿಕಲ್‌ ಪ್ರಯೋಗ ಭಾರತದಲ್ಲಿ ಆರಂಭವಾಗಿದೆ. ಸೆಪ್ಟೆಂಬರ್‌ಗೆ ಈ ಲಸಿಕೆ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದು ಸೀರಂ ಮುಖ್ಯಸ್ಥ ಆದರ್‌ ಪೂನಾವಾಲಾ ಹೇಳಿದ್ದಾರೆ.

2020ರ ಅಕ್ಟೋಬರ್‌ನಲ್ಲಿ ಅಮೆರಿಕದ ಲಸಿಕೆ ತಯಾರಕ ಕಂಪನಿ ನೋವೋವ್ಯಾಕ್ಸ್‌ ಜತೆ ಸೀರಂ ಒಪ್ಪಂದ ಮಾಡಿಕೊಂಡಿತ್ತು. ಈಗಾಗಲೇ ಬ್ರಿಟನ್‌ನಲ್ಲಿ ಇದರ ಪ್ರಯೋಗ ಯಶಸ್ವಿಯಾಗಿ ಮುಗಿದಿದೆ.

ಲಸಿಕೆ ಹಾಕಿಸಿದ್ರೂ ಬರುತ್ತಾ ಕೊರೋನಾ? ಇಲ್ಲಿದೆ ವ್ಯಾಕ್ಸಿನ್ ಹಿಂದಿನ ರಹಸ್ಯ ..

‘ಪ್ರಯೋಗದಲ್ಲಿ ಆಫ್ರಿಕಾ ಹಾಗೂ ಬ್ರಿಟನ್‌ ತಳಿಯ ಕೊರೋನಾ ವೈರಸ್‌ ಮೇಲೂ ಕೋವೋವ್ಯಾಕ್ಸ್‌ ಪರಿಣಾಮಕಾರಿ ಎನ್ನಿಸಿಕೊಂಡಿದ್ದು, ಶೇ.89ರಷ್ಟುಪರಿಣಾಮಕಾರಿ ಎನ್ನಿಸಿಕೊಂಡಿದೆ. ಈ ವರ್ಷ ಸೆಪ್ಟೆಂಬರ್‌ಗೆ ಇದನ್ನು ಭಾರತದಲ್ಲಿ ಬಿಡುಗಡೆ ಮಾಡುವ ವಿಶ್ವಾಸವಿದೆ’ ಎಂದು ಪೂನಾವಾಲಾ ಟ್ವೀಟ್‌ ಮಾಡಿದ್ದಾರೆ.

ಈ ಮುನ್ನ ಜೂನ್‌ನಲ್ಲಿ ಈ ಲಸಿಕೆ ಭಾರತದಲ್ಲಿ ಬಿಡುಗಡೆ ಆಗಬಹುದು ಎಂದು ಅವರು ಜನವರಿಯಲ್ಲಿ ತಿಳಿಸಿದ್ದರು.

ಈಗಾಗಲೇ ಬ್ರಿಟನ್‌ನ ಆಕ್ಸ್‌ಫರ್ಡ್‌ ವಿವಿ ಹಾಗೂ ಆಸ್ಟ್ರಾಜೆನೆಕಾ ಕಂಪನಿಗಳು ಸಿದ್ಧಪಡಿಸಿರುವ ಕೋವಿಶೀಲ್ಡ್‌ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸುತ್ತಿರುವ ಸೀರಂ, ಭಾರತ ಹಾಗೂ ವಿದೇಶಗಳಿಗೆ ಪೂರೈಸುತ್ತಿದೆ.

click me!