Covid-19 Crisis: ಕೊರೋನಾ 2ನೇ ಅಲೆಗಿಂತ 3ನೇ ಅಲೆ ತೀವ್ರತೆ ಕಮ್ಮಿ: ಕೇಂದ್ರ ಸರ್ಕಾರ

By Kannadaprabha News  |  First Published Jan 21, 2022, 2:30 AM IST

ಒಮಿಕ್ರೋನ್‌ ಸೋಂಕಿನ ಅಬ್ಬರ ಪರಿಣಾಮ ದೇಶದಲ್ಲಿ 3ನೇ ಅಲೆ ಆರಂಭವಾಗಿದೆ. ಆದರೂ 3ನೇ ಅಲೆಯಲ್ಲಿ ಈ ಹಿಂದಿನ 2ನೇ ಅಲೆಗಿಂತ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಮತ್ತು ಸಾವಿನ ದರ ಕಡಿಮೆ ಇದೆ ಎಂದು ಕೇಂದ್ರ ಸರ್ಕಾರ ಗುರುವಾರ ಸಮಾಧಾನದ ಸಮಾಚಾರ ನೀಡಿದೆ.


ನವದೆಹಲಿ (ಜ.21): ಒಮಿಕ್ರೋನ್‌ ಸೋಂಕಿನ (Omicron Virus) ಅಬ್ಬರ ಪರಿಣಾಮ ದೇಶದಲ್ಲಿ 3ನೇ ಅಲೆ ಆರಂಭವಾಗಿದೆ. ಆದರೂ 3ನೇ ಅಲೆಯಲ್ಲಿ ಈ ಹಿಂದಿನ 2ನೇ ಅಲೆಗಿಂತ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಮತ್ತು ಸಾವಿನ ದರ ಕಡಿಮೆ ಇದೆ ಎಂದು ಕೇಂದ್ರ ಸರ್ಕಾರ ಗುರುವಾರ ಸಮಾಧಾನದ ಸಮಾಚಾರ ನೀಡಿದೆ. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಕಾರ‍್ಯದರ್ಶಿ ರಾಜೇಶ್‌ ಭೂಷಣ್‌ (Rajesh Bhushan), ‘ಲಸಿಕಾಕರಣ ಚುರುಕುಗೊಳಿಸಿದ ಪರಿಣಾಮ ಗಂಭೀರ ಪ್ರಮಾಣದಲ್ಲಿ ಸೋಂಕು ಪರಿಣಾಮ ಬೀರುತ್ತಿಲ್ಲ. ಸಾವು-ಆಸ್ಪತ್ರೆ ದಾಖಲೀಕರಣ ಕಡಿಮೆ ಇದೆ. ಜನರು ಲಸಿಕೆ (Vaccine) ಪಡೆಯಬೇಕು’ ಎಂದು ಮನವಿ ಮಾಡಿದರು.

2ನೇ ಅಲೆ ವೇಳೆ ಅಂದರೆ ಕಳೆದ ವರ್ಷ ಏ.30, 2021ರಂದು 3.86 ಲಕ್ಷ ಹೊಸ ಕೇಸ್‌ ಪತ್ತೆಯಾಗಿ, 3059 ಸಾವು ದಾಖಲಾಗಿತ್ತು. ಸಕ್ರಿಯ ಕೇಸ್‌ ಸಂಖ್ಯೆ 31.70 ಲಕ್ಷ ಇತ್ತು. ಆಗ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದವರ ಸಂಖ್ಯೆ ಶೇ.2ರಷ್ಟಿತ್ತು. ಆದರೆ ಜ.20, 2022ರಂದು 3.17 ಲಕ್ಷ ಹೊಸ ಕೇಸ್‌ ದೃಢಪಟ್ಟಿವೆ. 380 ಸಾವು ದಾಖಲಾಗಿದೆ. ಸಕ್ರಿಯ ಕೇಸ್‌ 19.24 ಲಕ್ಷದಷ್ಟಿದೆ. ಸದ್ಯ ಪೂರ್ಣ ಪ್ರಮಾಣದ ಲಸಿಕೆ ಪಡೆದವರ ಪ್ರಮಾಣ ಶೇ.72ರಷ್ಟಿದೆ. ಅಂದರೆ 2ನೇ ಅಲೆಗೆ ಹೋಲಿಸಿದರೆ ಸಕ್ರಿಯ ಕೇಸ್‌ ವಿರುದ್ಧ ಸಾವಿನ ಪ್ರಮಾಣ ಈ ಭಾರಿ ಭಾರೀ ಕಡಿಮೆ ಇದೆ ಎಂದು ತಿಳಿಸಿದರು.

Latest Videos

Coronavirus: ಕೊರೋನಾ ಟೆಸ್ಟಿಂಗ್‌ ಕಮ್ಮಿ ಮಾಡಬೇಡಿ: ಕೇಂದ್ರ ಸರ್ಕಾರ

2020ರಲ್ಲಿ ಒಟ್ಟು ಸೋಂಕಿತರ ಪೈಕಿ ಶೇ.10ರಷ್ಟುಸೋಂಕು 0-19 ವರ್ಷದ ಮಕ್ಕಳಲ್ಲಿ ಕಂಡುಬಂದಿತ್ತು. ಶೇ.0.96ರಷ್ಟುಮಕ್ಕಳು ಸಾವನ್ನಪ್ಪಿದ್ದರು. 2021ರಲ್ಲಿ ಸೋಂಕಿನ ಪ್ರಮಾಣ ಶೇ.11ಕ್ಕೆ ಏರಿಕೆಯಾಗಿ, 0.70 ಮಕ್ಕಳು ಸೋಂಕಿಗೆ ಬಲಿಯಾಗಿದ್ದರು. 2020 ಮತ್ತು 2021ರಲ್ಲಿ ಮಕ್ಕಳಲ್ಲಿ ಸೋಂಕಿನ ಪ್ರಮಾಣದಲ್ಲಿ ಅಷ್ಟೇನೂ ವ್ಯತ್ಯಾಸ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ ಇಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಆಸ್ಪತ್ರೆ ದಾಖಲಾಗುವವರ ಪ್ರಮಾಣ ಮತ್ತು ಸಾವಿನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲು ಲಸಿಕೆಯೇ ಕಾರಣ. ಹಾಗಾಗಿ ಇನ್ನೂ ಲಸಿಕೆ ಪಡೆಯದವರು ಶೀಘ್ರವೇ ಲಸಿಕೆ ಪಡೆಯಿರಿ ಎಂದು ಮನವಿ ಮಾಡಿದರು.

ಕೊರೋನಾ ಟೆಸ್ಟಿಂಗ್‌ ಕಮ್ಮಿ ಮಾಡಬೇಡಿ: ಕೆಲವು ರಾಜ್ಯಗಳು ಕೊರೋನಾ ಪರೀಕ್ಷೆಯನ್ನು (Covid Testing) ಕಡಿಮೆಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ಪರೀಕ್ಷೆಯನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಸೋಮವಾರ ಸೂಚಿಸಿದೆ. ಈ ಸಂಬಂಧ ಎಲ್ಲಾ ರಾಜ್ಯ (States) ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ರವಾನಿಸಿರುವ ಕೇಂದ್ರ ಹೆಚ್ಚುವರಿ ಆರೋಗ್ಯ ಕಾರ‍್ಯದರ್ಶಿ ಆರತಿ ಅಹುಜಾ (Arti Ahuja), ತತ್‌ಕ್ಷಣದಿಂದಲೇ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸುವಂತೆ ಸಲಹೆ ನೀಡಿದ್ದಾರೆ.  ಈ ಮೂಲಕ ಕೆಲವು ನಿರ್ದಿಷ್ಟಪ್ರದೇಶಗಳ ಕೋವಿಡ್‌ ಪಾಸಿಟಿವಿಟಿ (Covid Positivity) ಮೇಲೆ ನಿಗಾ ಇಡಲು ಕೋರಿದ್ದಾರೆ. 

Covid-19 Crisis: ಕೋವಿಡ್‌ ಸೋಂಕಿತರಿಗೆ ಸ್ಟಿರಾಯ್ಡ್‌ ಬೇಡ: ಕೇಂದ್ರ ಸರ್ಕಾರ

ವಿಶ್ವ ಆರೋಗ್ಯ ಸಂಸ್ಥೆ ವೇರಿಯಂಟ್‌ ಆಫ್‌ ಕನ್ಸರ್ನ್‌ ಎಂದು ಗುರುತಿಸಿರುವ ಒಮಿಕ್ರೋನ್‌ ವೈರಸ್‌ (Omicron Virus) ದೇಶಾದ್ಯಂತ ಹರಡುತ್ತಿದೆ. ಈ ರೂಪಾಂತರಿ ನಿಗ್ರಹಕ್ಕೆ ಆಕ್ರಮಣಕಾರಿ ಪರೀಕ್ಷೆಯೇ ಪ್ರಮುಖ ಮದ್ದು. ಆದಾಗ್ಯೂ ಕೆಲ ರಾಜ್ಯಗಳಲ್ಲಿ ಕಡಿಮೆ ಪ್ರಮಾಣ ಪರೀಕ್ಷೆ ನಡೆಯುತ್ತಿದೆ ಎಂಬ ವರದಿಗಳು ಕೇಂದ್ರ ಸರ್ಕಾರಕ್ಕೆ ಲಭಿಸಿವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಪರೀಕ್ಷೆಯಿಂದ ವೇಗವಾಗಿ ಹೊಸ ಕೊರೋನಾ ಹಾಟ್‌ಸ್ಪಾಟ್‌, ಕ್ಲಸ್ಟರ್‌ ಗುರುತಿಸಬಹುದು. ಇದರಿಂದ ಸೋಂಕಿತರ ಸಂಪರ್ಕ ಪತ್ತೆ ಹಚ್ಚುವಿಕೆ, ಕ್ವಾರಂಟೈನ್‌ ಮತ್ತಿತರ ಸೋಂಕು ನಿಯಂತ್ರಕ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬಹುದು. ತನ್ಮೂಲಕ ಜಿಲ್ಲೆ ಮತ್ತು ರಾಜ್ಯಗಳು ಸೋಂಕನ್ನು ನಿಗ್ರಹಿಸಬಹುದು ಎಂದು ಅಹುಜಾ ಹೇಳಿದ್ದಾರೆ.

click me!