ಅತೀ ವಿರಳವೆನಿಸಿದ ರಣಹದ್ದುಗಳ ಕಳ್ಳಸಾಗಣೆ : ಓರ್ವನ ಬಂಧನ

By Suvarna News  |  First Published Jan 20, 2022, 7:36 PM IST
  • ರಣಹದ್ದುಗಳ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಗಳ ಬಂಧನ
  • ಮಹಾರಾಷ್ಟ್ರದ ಮಾಲೆಗಾಂವ್‌ಗೆ ಸಾಗಿಸಲಾಗುತ್ತಿತ್ತು
  • ಫರೀದ್ ಅಹ್ಮದ್‌ ಬಂಧಿತ ಆರೋಪಿ

ಭೋಪಾಲ್‌(ಜ.20):  ಮಧ್ಯಪ್ರದೇಶದ ಖಾಂಡ್ವಾ ರೈಲು ನಿಲ್ದಾಣದಲ್ಲಿ 7 ಅಪರೂಪದ ಜಾತಿಯ ರಣಹದ್ದುಗಳನ್ನು ಜಪ್ತಿ ಮಾಡಲಾಗಿದ್ದು, ಇವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವು ಅಪರೂಪದ ಈಜಿಪ್ಟಿಯನ್‌ ರಣಹದ್ದುಗಳಾಗಿದ್ದು,  ಉತ್ತರಪ್ರದೇಶದ ಕಾನ್ಪುರದಿಂದ ಮಹಾರಾಷ್ಟ್ರದ ಮಾಲೆಗಾಂವ್‌ಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. 

ಇವು ಅಳಿವಿನಂಚಿನಲ್ಲಿರುವ ಜಾತಿಯ ರಣಹದ್ದುಗಳಾಗಿವೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ದುರ್ವಾಸನೆ ಬರುವುದನ್ನು ಕಂಡು ಟಿಕೆಟ್ ಪರಿವೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ರೈಲು ಮಧ್ಯಪ್ರದೇಶದ ಖಾಂಡ್ವಾ ರೈಲು ನಿಲ್ದಾಣಕ್ಕೆ ಬಂದ ತಕ್ಷಣ, ರೈಲ್ವೆ ಟಿಕೆಟ್ ಪರಿವೀಕ್ಷಕರು ಆರ್‌ಪಿಎಫ್‌ಗೆ ಮಾಹಿತಿ ನೀಡಿದರು. ಖಾಂಡ್ವಾ ರೈಲು ನಿಲ್ದಾಣದಲ್ಲಿ ಆರ್‌ಪಿಎಫ್ ಮತ್ತು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. 

Tap to resize

Latest Videos

Smuggling Attempt Busted : ಚೆನ್ನೈ ಏರ್‌ಪೋರ್ಟ್‌ನಲ್ಲಿ 1364 ಜೀವಂತ ನಕ್ಷತ್ರ ಆಮೆಗಳ ಜಪ್ತಿ

ರೈಲಿನಲ್ಲಿ ವ್ಯಕ್ತಿಯೊಬ್ಬ ಬಿಳಿ ರಣಹದ್ದುಗಳನ್ನು ಹೊತ್ತೊಯ್ಯುತ್ತಿದ್ದ ಬಗ್ಗೆ ಆರ್‌ಪಿಎಫ್‌ನಿಂದ ನಮಗೆ ಮಾಹಿತಿ ಸಿಕ್ಕಿತು. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಅಲ್ಲಿಗೆ ಆಗಮಿಸಿ ಜಂಟಿಯಾಗಿ ರೈಲಿನ ಮೇಲೆ ದಾಳಿ ನಡೆಸಿದರು. ಬಳಿಕ ಆರೋಪಿ ಫರೀದ್ ಅಹ್ಮದ್‌ (Fareed Ahmed) ನಿಂದ ಏಳು ಬಿಳಿ ರಣಹದ್ದುಗಳು ಅಥವಾ ಈಜಿಪ್ಟ್ ರಣಹದ್ದುಗಳನ್ನು ವಶಪಡಿಸಿಕೊಂಡು ನಂತರ ಬಂಧಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆಯ ಎಸ್‌ಡಿಒ ಆರ್.ಎಸ್.ಸೋಲಂಕಿ (RS Solanki) ತಿಳಿಸಿದ್ದಾರೆ.

Heroin Seized: ಮಾದಕ ವಸ್ತು ಕಳ್ಳಸಾಗಣೆಗೆ ಭಾರತವೇ ಹೆದ್ದಾರಿ: ಹೆರಾಯಿನ್‌ ಜಪ್ತಿ 4 ವರ್ಷದಲ್ಲಿ ಶೇ.37000 ಏರಿಕೆ!

ಇವುಗಳನ್ನು ಎಲ್ಲಿಂದ ಹಿಡಿದು ತರಲಾಗಿತ್ತು ಎಂಬ ಬಗ್ಗೆ ವಿವರಗಳಿಗಾಗಿ ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ರಣಹದ್ದುಗಳನ್ನು ಬಯಲಿಗೆ ಬಿಡಲಾಗುವುದು. ಯುಪಿಯ ಕಾನ್ಪುರದಿಂದ ಮಹಾರಾಷ್ಟ್ರದ ಮಾಲೆಗಾಂವ್‌ಗೆ ರಣಹದ್ದುಗಳನ್ನು ಕೊಂಡೊಯ್ಯಲಾಗುತ್ತಿತ್ತು. ಮಧ್ಯಪ್ರದೇಶದಲ್ಲಿ ರಣಹದ್ದುಗಳ ಕಳ್ಳಸಾಗಣೆ ನಡೆದಿರುವ ಮೊದಲ ಪ್ರಕರಣ ಇದಾಗಿದೆ. ಎಲ್ಲಾ ರಣಹದ್ದುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ.

ಕೆಲ ದಿನಗಳ ಹಿಂದೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಭಾರಿ ಪ್ರಮಾಣದ ಕಳ್ಳ ಸಾಗಣೆ ಜಾಲವನ್ನು ಏರ್‌ಪೋರ್ಟ್‌ನ ಕಸ್ಟಮ್ಸ್‌ ಅಧಿಕಾರಿಗಳು ಬೇಧಿಸಿದ್ದರು. ಲಕ್ಷಾಂತರ ರೂಪಾಯಿ ಮೊತ್ತದ ಕಡಲಾಮೆ ಅಥವಾ ನಕ್ಷತ್ರ ಆಮೆಗಳನ್ನು ಜಪ್ತಿ ಮಾಡಲಾಗಿತ್ತು. ಒಟ್ಟು 1364 ಜೀವಂತ ನಕ್ಷತ್ರ ಆಮೆಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬಿಳಿ ಬಣ್ಣದ ಥರ್ಮಕೋಲ್‌ ಬಾಕ್ಸ್‌ಗಳಲ್ಲಿ ಇವುಗಳನ್ನು ತುಂಬಿಡಲಾಗಿತ್ತು. ಇದನ್ನು ತೆರೆದು ನೋಡಿದ ಕಸ್ಟಮ್ ಅಧಿಕಾರಿಗಳು ಇಷ್ಟು ಪ್ರಮಾಣದ ನಕ್ಷತ್ರ ಆಮೆಗಳನ್ನು ನೋಡಿ ಅಚ್ಚರಿ ಗೊಂಡಿದ್ದಾರೆ. ಈ ನಕ್ಷತ್ರ ಆಮೆಗಳನ್ನು 230  ಕಿ.ಲೋ ತೂಕದ ಜೀವಂತ ಏಡಿಗಳು ಎಂದು ಮೊದಲಿಗೆ ಹೇಳಲಾಗಿತ್ತು. 

ಜನವರಿ  4 ರಂದು ಚೆನ್ನೈ(Chennai) ಏರ್‌ ಕರ್ಗೋ ಕಸ್ಟಮ್ಸ್‌  ಅಧಿಕಾರಿಗಳು ಚೆನ್ನೈ ವಿಮಾನ ನಿಲ್ದಾಣದ ಸಮೀಪವಿರುವ ಮೀನಂಬಾಕ್ಕಂ (Meenambakkam) ನಲ್ಲಿರುವ ಏರ್ ಕಾರ್ಗೋ ರಫ್ತು ಶೆಡ್‌ನಲ್ಲಿ ವನ್ಯಜೀವಿ ಪ್ರಭೇದಗಳನ್ನು ಹೊಂದಿರುವ ಡಬ್ಬಿಗಳಿರುವ ಬಗ್ಗೆ ಶಂಕಿಸಿ ಅವುಗಳ ರವಾನೆಯನ್ನು ತಡೆದಿದ್ದಾರೆ. ಈ ನಕ್ಷತ್ರ ಆಮೆಗಳನ್ನು ಮಲೇಷ್ಯಾಕ್ಕೆ ಕಳುಹಿಸಲು ನಿರ್ಧರಿಸಲಾಗಿತ್ತು ಎಂದು ತಿಳಿದು ಬಂದಿದೆ. 

ಶಿಪ್ಪಿಂಗ್ ಬಿಲ್‌ನಲ್ಲಿ, ಈ ನಕ್ಷತ್ರ ಆಮೆಗಳಿದ್ದ ಸರಕುಗಳನ್ನು 230 ಕಿಲೋ ತೂಕದ ಜೀವಂತ ಏಡಿಗಳು ಎಂದು ಘೋಷಿಸಲಾಗಿತ್ತು. ಸಬ್ಜೆಕ್ಟ್ ಶಿಪ್‌ಮೆಂಟ್ ಎಂಬುದು ರಿಸ್ಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (RMS) ಅನ್ನು ಸುಗಮಗೊಳಿಸುವಂತಾದ್ದಾಗಿದ್ದು, ಇದರ ಪ್ರಕಾರ ಇಲ್ಲಿ ಸರಕುಗಳನ್ನು ತಪಾಸಣೆಗೆ ಒಳಪಡಿಸುವುದಿಲ್ಲ. ಅದಾಗ್ಯೂ ಶಂಕೆ ಬಂದ ಹಿನ್ನೆಲೆಯಲ್ಲಿ ಚೆನ್ನೈ ಏರ್‌ಪೋರ್ಟ್‌ನ ಕಾರ್ಗೋ ಇಂಟೆಲಿಜೆನ್ಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಸರಕುಗಳನ್ನು ಪರಿಶೀಲಿಸಿದರು. ಈ ವೇಳೆ 13 ಪ್ಯಾಕೇಜ್‌ಗಳಲ್ಲಿ 7 ಪ್ಯಾಕೇಜ್‌ಗಳಲ್ಲಿ 1,364 ಜೀವಂತ ಭಾರತೀಯ ನಕ್ಷತ್ರ ಆಮೆಗಳು ಇರುವುದು ಅವರಿಗೆ ತಿಳಿದು ಬಂದಿದೆ.

click me!