ಕೋವಿಡ್‌ ಹೆಚ್ಚಳದಿಂದ ಪಂಜಾಬ್‌ ಅಂಗನವಾಡಿ ಬಂದ್‌!

By Kannadaprabha NewsFirst Published Mar 14, 2021, 8:48 AM IST
Highlights

ಕೊರೋನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆ| ಕೋವಿಡ್‌ ಹೆಚ್ಚಳದಿಂದ ಪಂಜಾಬ್‌ ಅಂಗನವಾಡಿ ಬಂದ್‌

ಚಂಡೀಗಢ(ಮಾ.14): ಕೊರೋನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಪಂಜಾಬಿನ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮುಂದಿನ ಆದೇಶದವರೆಗೆ ಮುಚ್ಚುವಂತೆ ಸಾಮಾಜಿಕ ಭದ್ರತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಅರುಣ್‌ ಚೌಧರಿ ಶನಿವಾರ ಸೂಚನೆ ನೀಡಿದ್ದಾರೆ.

ಹಾಗೆಯೇ ಅಂಗನವಾಡಿಗಳಿಂದ ಪೌಷ್ಟಿಕಾಂಶ ಆಹಾರ ಪಡೆಯುತ್ತಿದ್ದ ಫಲಾನುಭವಿಗಳಿಗೆ ಕಾರ‍್ಯಕರ್ತೆಯರು ಮತ್ತು ಸಹಾಯಕಿಯರ ಮೂಲಕ ಅವರ ಮನೆಬಾಗಿಲಿಗೇ ಆ ಎಲ್ಲಾ ವಸ್ತುಗಳನ್ನು ತಲುಪಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಪಂಜಾಬ್‌ನಲ್ಲಿ ಶುಕ್ರವಾರ 1,414 ಹೊಸ ಕೋವಿಡ್‌ ಪ್ರಕರಣಗಳು ದೃಢವಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1.94 ಲಕ್ಷಕ್ಕೆ ಏರಿಕೆಯಾಗಿದೆ. ಇದೇ ವೇಳೆ ಶುಕ್ರವಾರ 34 ಮಂದಿ ಸಾವಿನೊಂದಿಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 6030 ತಲುಪಿದೆ. ಕಳೆದ ಫೆ.1ರಿಂದ ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳನ್ನು ಪುನರ್‌ ಆರಂಭ ಮಾಡಲಾಗಿತ್ತು.

click me!