ಮಾಸ್ಕ್‌ ಧರಿಸದಿದ್ದರೆ ವಿಮಾನದಿಂದ ಹೊರಕ್ಕೆ, ಮಾತು ಕೇಳದವರಿಗೆ ಆಜೀವ ನಿಷೇಧ!

By Kannadaprabha NewsFirst Published Mar 14, 2021, 7:49 AM IST
Highlights

ಮಾಸ್ಕ್‌ ಧರಿಸದಿದ್ದರೆ ವಿಮಾನದಿಂದ ಹೊರಕ್ಕೆ| ಏರ್‌ಲೈನ್ಸ್‌ಗಳಿಗೆ ಡಿಜಿಸಿಎ ಕಟ್ಟುನಿಟ್ಟು ಸೂಚನೆ| ಮಾತು ಕೇಳದವರಿಗೆ ಆಜೀವ ನಿಷೇಧ: ಎಚ್ಚರಿಕೆ

ಮುಂಬೈ(ಮಾ.14): ದೇಶಾದ್ಯಂತ ಕೊರೋನಾ ಪ್ರಕರಣಗಳ ಏರಿಕೆ ಬೆನ್ನಲ್ಲೇ, ವಿಮಾನದಲ್ಲಿ ಸರಿಯಾಗಿ ಮಾಸ್ಕ್‌ ಧರಿಸದ ಪ್ರಯಾಣಿಕರನ್ನು ಹೊರಹಾಕುವಂತೆ ಹಾಗೂ ಮತ್ತಷ್ಟುದುರ್ವರ್ತನೆ ತೋರುವವರನ್ನು ಆಜೀವವಾಗಿ ಪ್ರಯಾಣದಿಂದ ನಿಷೇಧಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ವಿಮಾನಯಾನ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಲ್ಲದೆ ವಿಮಾನ ಮತ್ತು ವಿಮಾನ ನಿಲ್ದಾಣಗಳಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.

ವಿಮಾನಗಳಲ್ಲಿ ಪ್ರಯಾಣಿಕರು ಸೂಕ್ತವಾಗಿ ಮಾಸ್ಕ್‌ ಧರಿಸದೇ ಇರುವುದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ದೆಹಲಿ ಹೈಕೋರ್ಟ್‌, ಎಲ್ಲಾ ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡುವುದರ ಜೊತೆಗೆ ಅವುಗಳನ್ನು ಪಾಲನೆ ಮಾಡದೇ ಇದ್ದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಅದರ ಬೆನ್ನಲ್ಲೇ ಡಿಜಿಸಿಎದಿಂದ ಈ ಪ್ರಕಟಣೆ ಹೊರಬಿದ್ದಿದೆ.

ಸುತ್ತೋಲೆಯಲ್ಲಿ ಏನಿದೆ?

- ನಿಂತಿರುವ ವಿಮಾನದಲ್ಲಿ ಸಿಬ್ಬಂದಿ ಸೂಚನೆ ನೀಡಿದ ಮೇಲೂ ಮಾಸ್ಕ್‌ ಸರಿಯಾಗಿ ಧರಿಸದಿದ್ದರೆ ಅವರನ್ನು ಕೆಳಗಿಳಿಸಬೇಕು.

- ಹಾರಾಟದ ವೇಳೆ ಮಾಸ್ಕ್‌ ಧರಿಸಲು ನಿರಾಕರಿಸಿದರೆ ಅಥವಾ ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದರೆ ಅವರಿಗೆ ಜೀವನಪರ‍್ಯಂತ ವಿಮಾನ ಹಾರಾಟ ನಿಷೇಧಿಸಬಹುದು.

- ಪ್ರಯಾಣದ ಪೂರ್ಣ ಅವಧಿಯಲ್ಲಿ ಸಾಮಾಜಿಕ ಅಂತರ, ಮಾಸ್ಕ್‌ ಕಡ್ಡಾಯ.

- ಮೂಗು ಅಥವಾ ಬಾಯಿಯ ಕೆಳಗೆ ಮಾಸ್ಕ್‌ ಧರಿಸುವುದು ನಿಷಿದ್ಧ.

- ವಿಮಾನ ನಿಲ್ದಾಣದಲ್ಲಿನ ಪೊಲೀಸ್‌ ಸಿಬ್ಬಂದಿ ಮಾರ್ಗಸೂಚಿ ಪಾಲನೆ ಬಗ್ಗೆ ನಿಗಾ ವಹಿಸಬೇಕು. ಮಾಸ್ಕ್‌ ಧರಿಸದ ಪ್ರಯಾಣಿಕರಿಗೆ ಪ್ರವೇಶ ನೀಡಬಾರದು.

- ನಿಯಮ ಉಲ್ಲಂಘಿಸಿದವರನ್ನು ಭದ್ರತಾ ಏಜೆನ್ಸಿಗೆ ಒಪ್ಪಿಸಬೇಕು.

click me!