* ಕೋವ್ಯಾಕ್ಸಿನ್ 77.8% ಪರಿಣಾಮಕಾರಿ
* ಭಾರತ್ ಬಯೋಟೆಕ್‌ನಿಂದ 3ನೇ ಹಂತದ ಅಧ್ಯಯನ ವರದಿ ಬಿಡುಗಡೆ
* ಅಪಾಯಕಾರಿ ಡೆಲ್ಟಾವೈರಸ್ ವಿರುದ್ಧ ಈ ಲಸಿಕೆ 65.2% ಪರಿಣಾಮಕಾರಿ
ಹೈದರಾಬಾದ್(ಜು.04): 3ನೇ ಹಂತದ ಅಧ್ಯಯನ ವರದಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಟೀಕೆಗೊಳಗಾಗಿದ್ದ ಭಾರತ್ ಬಯೋಟೆಕ್ ಕಂಪನಿ ತನ್ನ ಕೋವ್ಯಾಕ್ಸಿನ್ ಲಸಿಕೆಯ ಅಂತಿಮ ದಕ್ಷತಾ ವರದಿಯನ್ನು ಕೊನೆಗೂ ಬಿಡುಗಡೆ ಮಾಡಿದ್ದು, ಕೋವಿಡ್‌ನಿಂದ ಈ ಲಸಿಕೆ ಒಟ್ಟಾರೆ ಶೇ.77.8ರಷ್ಟು ರಕ್ಷಣೆ ನೀಡುತ್ತದೆ ಎಂದು ತಿಳಿಸಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿ, ಕೇಂದ್ರ ಸರ್ಕಾರದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹಾಗೂ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿದ ದೇಸಿ ಲಸಿಕೆ ಕೋವ್ಯಾಕ್ಸಿನ್ ಈಗಾಗಲೇ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ವಿತರಣೆಯಾಗುತ್ತಿದೆ. ಇದೀಗ ಈ ಲಸಿಕೆಯ 3ನೇ ಹಂತದ ಅಧ್ಯಯನ ವರದಿಯನ್ನು ಭಾರತ್ ಬಯೋಟೆಕ್ ಕಂಪನಿ ಬಿಡುಗಡೆ ಮಾಡಿದೆ.
ಕೊರೋನಾ ಸೋಂಕು ತಗಲಿದರೆ ಅದರ ಲಕ್ಷಣಗಳು ಕಾಣಿಸಿಕೊಳ್ಳದಂತೆ ಕೋವ್ಯಾಕ್ಸಿನ್ ಲಸಿಕೆಯು ಶೇ.63.6ರಷ್ಟುರಕ್ಷಣೆ ನೀಡುತ್ತದೆ. ಡೆಲ್ಟಾರೂಪಾಂತರಿ ತಳಿಯಿಂದ ಶೇ.65.2ರಷ್ಟುರಕ್ಷಣೆ ನೀಡುತ್ತದೆ. ಸೋಂಕು ತಗಲಿದರೆ ಅದು ತೀವ್ರ ಪ್ರಮಾಣಕ್ಕೆ ತಿರುಗದಂತೆ ಶೇ.93.4ರಷ್ಟುರಕ್ಷಣೆ ನೀಡುತ್ತದೆ. ಒಟ್ಟಾರೆ ಶೇ.77.8ರಷ್ಟುದಕ್ಷವಾಗಿ ಕೊರೋನಾ ವಿರುದ್ಧ ಹೋರಾಡುತ್ತದೆ. ಲಸಿಕೆ ತೆಗೆದುಕೊಳ್ಳುವುದರಿಂದ ಶೇ.0.5ಕ್ಕಿಂತ ಕಡಿಮೆ ಜನರಲ್ಲಿ ಗಂಭೀರ ಅಡ್ಡ ಪರಿಣಾಮ ಉಂಟಾಗಬಹುದು ಎಂದು ಕಂಪನಿ ತಿಳಿಸಿದೆ.
ನವೆಂಬರ್ 2020ರಿಂದ ಜನವರಿ 2021ರ ನಡುವೆ ದೇಶದ 25,798 ಜನರ ಮೇಲೆ ಕೋವ್ಯಾಕ್ಸಿನ್‌ನ 3ನೇ ಹಂತದ ಪ್ರಯೋಗ ನಡೆಸಲಾಗಿದೆ. ಇದು ದೇಶದಲ್ಲಿ ನಡೆದ ಯಾವುದೇ ಕೊರೋನಾ ಲಸಿಕೆಯ ಅತಿ ವಿಸ್ತೃತ ಅಧ್ಯಯನ ಎಂದು ಹೇಳಲಾಗಿದೆ. ಲಸಿಕೆಯ ಎರಡೂ ಡೋಸ್ ತೆಗೆದುಕೊಂಡ ಎರಡು ವಾರಗಳ ನಂತರ ಕೊರೋನಾ ಸೋಂಕು ತಗಲಿದ 130 ಜನರನ್ನೂ ಅಧ್ಯಯನಕ್ಕೆ ಒಳಪಡಿಸಲಾಗಿದೆ. ‘ಕೋವ್ಯಾಕ್ಸಿನ್‌ನ ಸುರಕ್ಷತೆ ಹಾಗೂ ದಕ್ಷತೆಯ ಪ್ರಯೋಗ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಭಾರತ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ನಿರೂಪಿಸಿದೆ’ ಎಂದು ಭಾರತ್ ಬಯೋಟೆಕ್‌ನ ಚೇರ್ಮನ್ ಕೃಷ್ಣ ಎಲ್ಲಾ ಹೇಳಿದ್ದಾರೆ.
‘ಕೋವ್ಯಾಕ್ಸಿನ್ ಎಲ್ಲಾ ಮಾದರಿಯ ಕೊರೋನಾ ರೂಪಾಂತರಿಗಳ ವಿರುದ್ಧವೂ ಕೆಲಸ ಮಾಡುತ್ತದೆ ಎಂಬುದು ಅಧ್ಯಯನದಲ್ಲಿ ಸಾಬೀತಾಗಿದೆ. ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ ಈ ಲಸಿಕೆ ಒಟ್ಟಾರೆ ಶೇ.77.8ರಷ್ಟುದಕ್ಷವಾಗಿ ಕೆಲಸ ಮಾಡುತ್ತದೆ’ ಎಂದು ಐಸಿಎಂಆರ್ ಚೇರ್ಮನ್ ಬಲರಾಂ ಭಾರ್ಗವ ತಿಳಿಸಿದ್ದಾರೆ.
ಕೋವ್ಯಾಕ್ಸಿನ್‌ನ 3ನೇ ಹಂತದ ಟ್ರಯಲ್ ವರದಿ ಇನ್ನೂ ವೈಜ್ಞಾನಿಕ ವಿಮರ್ಶೆಗೆ ಒಳಪಟ್ಟಿಲ್ಲ.