ಎರಡು ಡೋಸ್‌ ಲಸಿಕೆ: ಸಾವಿನಿಂದ 98% ರಕ್ಷಣೆ!

By Suvarna NewsFirst Published Jul 4, 2021, 8:34 AM IST
Highlights

* ಸಾವಿನ ವಿರುದ್ಧ ‘ಲಸಿಕೆ ರಕ್ಷಣೆ’

* 2 ಡೋಸ್‌ ಲಸಿಕೆಯಿಂದ ಶೇ.98 ರಕ್ಷಣೆ

* 1 ಡೋಸ್‌ ಲಸಿಕೆಯಿಂದ ಶೇ.92ರಷ್ಟುರಕ್ಷಣೆ

* ಅಧ್ಯಯನ ಆಧರಿಸಿ ಕೇಂದ್ರದ ಹೇಳಿಕೆ

ನವದೆಹಲಿ(ಜು.04): ಕೊರೋನಾ ಲಸಿಕೆಯ ಒಂದು ಡೋಸ್‌ ಸಾವಿನ ಅಪಾಯದಿಂದ ಶೇ.92ರಷ್ಟುರಕ್ಷಣೆ ನೀಡಲಿದೆ. 2 ಡೋಸ್‌ ಲಸಿಕೆಯಿಂದ ರಕ್ಷಣೆಯ ಪ್ರಮಾಣ ಶೇ.98ಕ್ಕೆ ಏರಿಕೆ ಆಗಲಿದೆ ಎಂದು ಅಧ್ಯಯನವೊಂದನ್ನು ಆಧರಿಸಿ ಕೇಂದ್ರ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ.

ಪಂಜಾಬ್‌ ಸರ್ಕಾರದ ಸಹಯೋಗದೊಂದಿಗೆ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸ್ನಾತಕೋತ್ತರ ಸಂಸ್ಥೆ ಪಂಜಾಬ್‌ ಪೊಲೀಸರ ಮೇಲೆ ನಡೆಸಿದ ಅಧ್ಯಯನದ ಮಾಹಿತಿಯನ್ನು ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್‌ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ಅಧ್ಯಯನದ ಪ್ರಕಾರ, ಲಸಿಕೆ ಪಡೆಯದಿದ್ದವರಲ್ಲಿ 1000ಕ್ಕೆ ಶೇ.3ರಷ್ಟುಜನ ಕೊರೋನಾದಿಂದ ಸಾವಿಗೀಡಾಗಿದ್ದಾರೆ. ಆದರೆ, ಒಂದು ಡೋಸ್‌ ಲಸಿಕೆ ಪಡೆದವರ ಪೈಕಿ 1000ಕ್ಕೆ ಸಾವಿನ ಪ್ರಮಾಣ ಶೇ.0.25ರಷ್ಟುದಾಖಲಾಗಿದೆ. ಎರಡು ಡೋಸ್‌ ಪಡೆದುಕೊಂಡವರಲ್ಲಿ ಸಾವಿನ ಪ್ರಮಾಣ 1,000ಕ್ಕೆ ಶೇ.0.05ರಷ್ಟುಮಾತ್ರ ದಾಖಲಾಗಿದೆ.

ಲಸಿಕೆ ಪಡೆಯದ 4,868 ಪೊಲೀಸ್‌ ಸಿಬ್ಬಂದಿಯ ಪೈಕಿ 15 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಅಂದರೆ, ಲಸಿಕೆ ಪಡೆಯದೇ ಇದ್ದರಲ್ಲಿ ಸಾವಿನ ಪ್ರಮಾಣ ಶೇ.3.08ರಷ್ಟುದಾಖಲಾಗಿದೆ. ಮೊದಲ ಡೋಸ್‌ ಪಡೆದಿದ್ದ 35,856 ಪೊಲೀಸ್‌ ಸಿಬ್ಬಂದಿಗಳ ಪೈಕಿ 9 ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಅಂದರೆ, ಸಾವಿನ ಪ್ರಮಾಣ 1000ಕ್ಕೆ ಶೇ.0.25ರಷ್ಟುದಾಖಲಾಗಿದೆ. 2 ಡೋಸ್‌ ಲಸಿಕೆ ಪಡೆದುಕೊಂಡಿದ್ದ 42,720 ಸಿಬ್ಬಂದಿಯ ಪೈಕಿ ಇಬ್ಬರು ಮಾತ್ರ ಕೊರೋನಾದಿಂದ ಸಾವಿಗೀಡಾಗಿದ್ದಾರೆ. ಅಂದರೆ ಸಾವಿನ ಪ್ರಮಾಣ ಸಾವಿರಕ್ಕೆ ಶೇ.0.05 ರಷ್ಟುಇದೆ. ಒಟ್ಟಾರೆಯಾಗಿ 1 ಡೋಸ್‌ ಲಸಿಕೆ ಸಾವಿನ ವಿರುದ್ಧ ಶೇ.92ರಷ್ಟುಮತ್ತು 2 ಡೋಸ್‌ ಲಸಿಕೆ ಶೇ.98ರಷ್ಟುರಕ್ಷಣೆ ಒದಗಿಸಲಿದೆ ಎಂದು ಅಧ್ಯಯನ ತಿಳಿಸಿದೆ.

click me!