ಮಳೆಯಿಂದಾಗಿ ಜಲಾವೃತವಾದ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಚಲಿಸುತ್ತಿದ್ದ ದಂಪತಿ ಸ್ಕೂಟರ್ ಸಮೇತ ಮ್ಯಾನ್‌ಹೋಲ್ ಒಳಗೆ ಬಿದ್ದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ವರದಿಗಳ ಪ್ರಕಾರ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ವೈದ್ಯರ ಭೇಟಿಗೆ ಹೋದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಅನಾರೋಗ್ಯದ ಹಿನ್ನೆಲೆ ಪೊಲೀಸ್ ಅಧಿಕಾರಿ ಹಾಗೂ ಅವರ ಪತ್ನಿ ವೈದ್ಯರ ಬಳಿ ಚಿಕಿತ್ಸೆಗಾಗಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ನೀರು ತುಂಬಿರುವ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ದಂಪತಿಗಳು ತೆರೆದ ಮ್ಯಾನ್‌ಹೋಲ್‌ಗೆ ಬೀಳುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಸ್ಥಳೀಯ ಪತ್ರಕರ್ತರೊಬ್ಬರು ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ಅಲಿಗಢದಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಸ್ಕೂಟರ್‌ನ್ನು ರಸ್ತೆ ಬದಿ ಪಾರ್ಕಿಂಗ್ ಮಾಡಲು ಅವರು ರಸ್ತೆಯ ಬದಿಗೆ ಬರುತ್ತಿದ್ದ ವೇಳೆ ನೀರಿನಿಂದ ತುಂಬಿದ್ದರಿಂದ ಮ್ಯಾನ್ ಹೋಲ್ ತೆರೆದಿರುವುದು ಕಾಣದೇ ಸೀದಾ ಮ್ಯಾನ್‌ಹೋಲ್‌ಗೆ ಬಿದ್ದಿದ್ದಾರೆ. ದಂಪತಿ ಮ್ಯಾನ್‌ಹೋಲ್‌ಗೆ ಬೀಳುತ್ತಿದ್ದಂತೆ ಅಲ್ಲೇ ಇದ್ದ ಅನೇಕರು ಓಡಿ ಹೋಗಿ ದಂಪತಿಯನ್ನು ಮೇಲೆತ್ತಿದ್ದಾರೆ.
ಇನ್ನು ವಿಡಿಯೋ ನೋಡಿದ ನೆಟ್ಟಿಗರು ಇದನ್ನು ಭೂಗತ ಪಾರ್ಕಿಂಗ್ ವ್ಯವಸ್ಥೆ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೆ ಕೆಲವರು ಇದನ್ನು ಪ್ರಧಾನಮಂತ್ರಿ ಈಜುಕೊಳ ಎಂದು ಕಾಮೆಂಟ್ ಮಾಡಿದ್ದಾರೆ. ಹಲವೆಡೆ ರಸ್ತೆ ಮಧ್ಯೆ ತೆರೆದಿರುವ ಮ್ಯಾನ್‌ಹೋಲ್‌ಗಳಿಂದಾಗಿ ಈ ಹಿಂದೆಯೂ ಹಲವು ಅನಾಹುತಗಳು ನಡೆದಿವೆ. ಕಳೆದ ಎಪ್ರಿಲ್‌ನಲ್ಲಿ ಮಹಿಳೆಯೊಬ್ಬರು ತಮ್ಮ ಫೋನ್‌ನಲ್ಲಿ ಮಾತನಾಡುತ್ತಾ ಹೋಗುತ್ತಿರುವ ವೇಳೆ ರಸ್ತೆ ಮಧ್ಯೆ ಇದ್ದ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದಂತಹ ಘಟನೆ ನಡೆದಿತ್ತು.
ಫೋನ್‌ನಲ್ಲಿ ಮಾತನಾಡುತ್ತಾ ಮ್ಯಾನ್‌ಹೋಲ್ ಒಳಗೆ ಬಿದ್ದ ಮಹಿಳೆ
ಈ ಆಘಾತಕಾರಿ ಘಟನೆಯ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ (social media) ನಂತರ ವೈರಲ್ ಆಗಿತ್ತು. ಬಿಹಾರದ (Bihar) ಪಾಟ್ನಾದಲ್ಲಿ (Patna) ವಾರ್ಡ್-56ರ ವ್ಯಾಪ್ತಿಯ ಮಲಿಯಾ ಮಹಾದೇವ್ ಜಲ್ಲಾ ರಸ್ತೆಯಲ್ಲಿ (Malia Mahadev Jalla Road) ಶುಕ್ರವಾರ ಈ ಘಟನೆ ನಡೆದಿತ್ತು. ಮಹಿಳೆ ತನ್ನ ಫೋನ್‌ನಲ್ಲಿ ಮಾತನಾಡುತ್ತಾ ಜನನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ, ಅದೇ ರಸ್ತೆಯಲ್ಲಿ ವಾಹನಗಳು ಜನರೊಂದಿಗೆ ಚಲಿಸುತ್ತಿವೆ. ಮಹಿಳೆಯ ಮುಂದೆ ಒಂದು ಆಟೋ ರಿಕ್ಷಾ ಹೋಗಿದೆ. ಆ ಆಟೋದ ಹಿಂದೆಯೇ ಬೇರೆಲ್ಲೋ ನೋಡುತ್ತಾ ಫೋನ್‌ನಲ್ಲಿ ಮಾತನಾಡುತ್ತಾ ಮಹಿಳೆ ಹೋಗಿದ್ದು, ಮ್ಯಾನ್‌ಹೋಲ್ ಗಮನಿಸದೇ ಅದರೊಳಗೆ ಬಿದ್ದಿದ್ದಾಳೆ.
9 ತಿಂಗಳ ಮಗುವಿನೊಂದಿಗೆ ಮ್ಯಾನ್‌ಹೋಲ್‌ಗೆ ಬಿದ್ದ ಮಹಿಳೆ: ಭಯಾನಕ ವಿಡಿಯೋ
ಕೂಡಲೇ ಸಮೀಪದಲ್ಲಿ ನಡೆದಾಡುತ್ತಿದ್ದ ಜನರು ಆಕೆಯನ್ನು ರಕ್ಷಿಸಲು ಧಾವಿಸಿ ಬಂದಿದ್ದಾರೆ ಮತ್ತು ಆಕೆಯ ಸುತ್ತಲೂ ಗುಂಪು ಜಮಾಯಿಸಿದೆ. ಕೆಲವರು ಅವಳತ್ತ ಕೈ ಚಾಚಿ ಅವಳನ್ನು ಮೇಲಕ್ಕೆ ಎಳೆದುಕೊಳ್ಳುವಲ್ಲಿ ಯಶಸ್ವಿಯಾದರು. ಮಹಿಳೆಯನ್ನು ಮೇಲೆಳೆದ ನಂತರ ಅಲ್ಲಿದ್ದವರು ಮ್ಯಾನ್‌ಹೋಲ್ ಅನ್ನು ದೊಡ್ಡ ಹೆಂಚಿನ ತುಂಡಿನಿಂದ ಮುಚ್ಚಿದ್ದು, ಇನ್ನೊಮ್ಮೆ ಇಂತಹ ಅನಾಹುತ ಆಗದಂತೆ ಮುಂಜಾಗೃತೆ ವಹಿಸಿದರು.
ವರದಿಗಳ ಪ್ರಕಾರ ಒಳಚರಂಡಿ ಕಾಮಗಾರಿಗಾಗಿ ಮ್ಯಾನ್‌ಹೋಲ್ ತೆರೆಯಲಾಗಿತ್ತು. ಆದರೆ ಕಾಮಗಾರಿ ಮುಗಿದ ನಂತರ ಮುಚ್ಚದೇ ಬೇಜಾವಾಬ್ದಾರಿ ತೋರಿದ್ದರಿಂದ ಈ ಅನಾಹುತ ಸಂಭವಿಸಿದೆ. ಸ್ಥಳೀಯರು ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಪುರಸಭೆ (municipality) ಯಾವುದೇ ಕ್ರಮ ಕೈಗೊಂಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ