ಯಾರು ಯಾರಿಗೆ ಗೌರವ?| ನೀವು ಏನು ಮಾಡಬಹುದು?| ಜನತಾ ಕರ್ಫ್ಯೂ ಬೆಂಬಲಿಸೋಣ, ನಿಸ್ವಾರ್ಥ ಸೇವಾಕರ್ತರನ್ನು ಗೌರವಿಸೋಣ!
ನವದೆಹಲಿ(ಮಾ.22): ಮಾರಕ ಕೊರೋನಾವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಯಲು ಮಾಚ್‌ರ್ 22ರಂದು ‘ಜನತಾ ಕರ್ಫ್ಯೂ’ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಅದರಂತೆ ಇಂದು (ಭಾನುವಾರ) ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಜನರು ಮನೆಯಿಂದ ಹೊರಗೆ ಬರದೆ ಸ್ವಯಂ ಗೃಹಬಂಧನ ವಿಧಿಸಿಕೊಳ್ಳಲು ಮನವಿ ಮಾಡಿದ್ದಾರೆ. ‘ತೀರಾ ಅಗತ್ಯವಿಲ್ಲದ ಹೊರತು ಮನೆಯಿಂದ ಹೊರಗೆ ಅಡ್ಡಾಡಬೇಡಿ. ತುರ್ತು ಸೇವೆಗಳು ಮತ್ತು ಅಗತ್ಯ ಸೇವೆಗಳನ್ನು ಒದಗಿಸುವವರು ಮಾತ್ರ ಹೊರಗೆ ಬನ್ನಿ. ಈ ಜನತಾ ಕಫä್ರ್ಯ ನಮಗೆ ನಾವೇ ಮಾಡಿಕೊಳ್ಳುವ ಪರೀಕ್ಷೆಯಿದ್ದಂತೆ. ಕೊರೋನಾವೈರಸ್‌ನಂತಹ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತ ಎಷ್ಟುಸನ್ನದ್ಧವಾಗಿದೆ ಎಂಬುದು ಇದರಿಂದ ತಿಳಿಯುತ್ತದೆ’ ಎಂದು ಮೋದಿ ಹೇಳಿದ್ದಾರೆ.
ಜನತಾ ಕಫä್ರ್ಯ ಅಂಗವಾಗಿ ಭಾನುವಾರ ಹೆಚ್ಚುಕಮ್ಮಿ ಇಡೀ ದೇಶ ಸ್ತಬ್ಧವಾಗಲಿದೆ. ತುರ್ತು ಸೇವೆಗಳನ್ನು ಹೊರತುಪಡಿಸಿ ಇನ್ನಾವ ಸೇವೆಗಳೂ ಲಭ್ಯವಿರುವುದಿಲ್ಲ. ಇದೊಂದು ರೀತಿಯಲ್ಲಿ ಭಾರತ ಬಂದ್ ಇದ್ದಂತೆ. ಜನರು ಒಬ್ಬರನ್ನೊಬ್ಬರು ಭೇಟಿಯಾಗುವುದನ್ನು ತಪ್ಪಿಸಿದರೆ ಕೊರೋನಾವೈರಸ್ ಹರಡುವುದನ್ನು ಕಡಿಮೆ ಮಾಡಲು ಸಾಧ್ಯವಿದೆ. ಹೀಗಾಗಿ ಯಾರೂ ಹೊರಗೆ ಬರದೆ ಮನೆಯಲ್ಲೇ ಇರುವುದರಿಂದ ತಕ್ಕಮಟ್ಟಿಗೆ ಸೋಂಕು ಹರಡುವಿಕೆ ಕಡಿಮೆ ಕೂಡ ಆಗಬಹುದು. ವೈದ್ಯರು ಈಗಾಗಲೇ ‘ನಿಮಗಾಗಿ ನಾವು ಇಲ್ಲಿದ್ದೇವೆ. ನಮಗಾಗಿ ನೀವು ಮನೆಯಲ್ಲಿರಿ’ ಎಂದು ಪ್ರಚಾರಾಂದೋಲನ ನಡೆಸುತ್ತಿದ್ದಾರೆ. ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೂ ಜನರಿಂದ ಕೊರೋನಾ ಸೋಂಕು ಹರಡುವ ಭೀತಿಯಿರುವುದರಿಂದ ಜನರು ವಿವೇಕದಿಂದ ವರ್ತಿಸಿ ಸೋಂಕಿನಿಂದ ದೂರವುಳಿದರೆ ವೈದ್ಯರಿಗೆ ಎದುರಾಗುವ ಅಪಾಯ ಕಡಿಮೆಯಾಗುತ್ತದೆ. ದೇಶದ ಆರೋಗ್ಯಕ್ಕಾಗಿ ಜೀವದ ಹಂಗು ತೊರೆದು ಹಗಲು-ರಾತ್ರಿ ಕೆಲಸ ಮಾಡುತ್ತಿರುವ ಆರೋಗ್ಯ ಸಿಬ್ಬಂದಿಯನ್ನು ಗೌರವಿಸಲು ಇದು ಸೂಕ್ತ ವಿಧಾನ.
ಜನತಾ ಕರ್ಫ್ಯೂ: ದೇಶವಿಂದು ಸ್ತಬ್ಧ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯಷ್ಟೇ ಅಲ್ಲ, ಪೌರಕಾರ್ಮಿಕರು, ಸರ್ಕಾರಿ ನೌಕರರು, ಸಾರಿಗೆ ಸಿಬ್ಬಂದಿ, ಪೊಲೀಸರು, ಔಷಧ ತಯಾರಕರು ಮತ್ತು ವಿತರಕರೂ ಸೇರಿದಂತೆ ಇನ್ನೂ ಹಲವು ಜನವರ್ಗದವರು ಕೊರೋನಾವೈರಸ್‌ನ ಭೀತಿಯ ನಡುವೆಯೂ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಜನರೆಲ್ಲರೂ ಮನೆಯಲ್ಲೇ ಉಳಿದು, ಸೋಂಕು ಹರಡುವಿಕೆಯನ್ನು ತಮ್ಮತಮ್ಮ ಕೈಲಾದ ಮಟ್ಟಿಗೆ ಕಡಿಮೆ ಮಾಡಿದರೆ ಈ ಎಲ್ಲ ನಿಸ್ವಾರ್ಥ ಸೇವಾಕರ್ತರಿಗೂ ಗೌರವ ಸಲ್ಲಿಸಿದಂತೆ. ಆದ್ದರಿಂದ ಎಲ್ಲರೂ ಇಂದು ಬೆಳಿಗ್ಗೆಯಿಂದ ರಾತ್ರಿಯವರೆಗೆ ನಮ್ಮ ಮನೆಯಲ್ಲೇ ಇದ್ದು ಜನತಾ ಕಫä್ರ್ಯವನ್ನು ಬೆಂಬಲಿಸೋಣ.
ಯಾರು ಯಾರಿಗೆ ಗೌರವ?
- ವೈದ್ಯಕೀಯ ಸಿಬ್ಬಂದಿ
ವೈದ್ಯರು, ನರ್ಸ್‌ಗಳೂ ಸೇರಿದಂತೆ ಆರೋಗ್ಯ ಸೇವೆಯ ಎಲ್ಲಾ ಸಿಬ್ಬಂದಿ ತಮಗೆ ಕೊರೋನಾ ಸೋಂಕು ತಗಲುವ ಭೀತಿಯಿದ್ದರೂ ವೃತ್ತಿಧರ್ಮ ಪಾಲಿಸಲು ಸೋಂಕುಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ತನ್ಮೂಲಕ ವೈದ್ಯೋ ನಾರಾಯಣೋ ಹರಿಃ ಎಂಬ ಮಾತನ್ನು ಅಕ್ಷರಶಃ ನಿಜವಾಗಿಸುತ್ತಿದ್ದಾರೆ.
- ಔಷಧ ತಯಾರಕರು, ವಿತರಕರು
ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ಅಗತ್ಯವಾಗಿ ಬೇಕಿರುವುದು ಔಷಧ ಹಾಗೂ ವೈದ್ಯಕೀಯ ಸಲಕರಣೆಗಳು. ಹೀಗಾಗಿ ಕೊರೋನಾ ಭೀತಿಯಿದ್ದರೂ ಔಷಧ ತಯಾರಕ ಕಾರ್ಖಾನೆಗಳು ಹಾಗೂ ಔಷಧಗಳನ್ನು ಜನರಿಗೆ ತಲುಪಿಸುವ ಮೆಡಿಕಲ್ ಸ್ಟೋರ್‌ಗಳು ತೆರೆದೇ ಇವೆ. ಅಲ್ಲಿ ಸಾವಿರಾರು ಜನರು ಕಾರ್ಯನಿರ್ವಹಿಸುತ್ತಿದ್ದಾರೆ.
- ಪೌರಕಾರ್ಮಿಕರು
ನಗರಗಳ ರಸ್ತೆ, ಬೀದಿಗಳನ್ನು ಪ್ರತಿದಿನ ಸ್ವಚ್ಛಗೊಳಿಸುವ ಪೌರಕಾರ್ಮಿಕರು, ಸ್ವಚ್ಛತಾ ಸಿಬ್ಬಂದಿ ಮತ್ತು ಕಸ ಸಂಗ್ರಹಿಸುವವರು ಕಾರ್ಯ ಸ್ಥಗಿತಗೊಳಿಸಿದರೆ ವೈರಸ್ ಸೋಂಕು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ. ಹೀಗಾಗಿ ಸೋಂಕು ತಗಲುವ ಭೀತಿಯಿದ್ದರೂ ಇವರೆಲ್ಲ ಎಂದಿನಂತೆ ಕೆಲಸ ಮಾಡುತ್ತಿದ್ದಾರೆ.
- ಸರ್ಕಾರಿ ನೌಕರರು
ಸರ್ಕಾರಿ ನೌಕರರು ಹಾಗೂ ಬ್ಯಾಂಕಿಂಗ್ ವಲಯದ ನೌಕರರು ರಜೆ ತೆಗೆದುಕೊಂಡರೆ ದೇಶದ ಜನಜೀವನವೇ ಅಸ್ತವ್ಯವಸ್ತವಾಗುತ್ತದೆ. ಹೀಗಾಗಿ ಇವರೆಲ್ಲ ವೈರಸ್ ಭೀತಿಯ ನಡುವೆಯೂ ಕೆಲಸ ಮಾಡುತ್ತಿದ್ದಾರೆ. ಇವರಿಗೆ ವರ್ಕ್ ಫ್ರಂ ಹೋಮ್ ಆಯ್ಕೆ ಸಿಗುವುದಿಲ್ಲ.
- ಪೊಲೀಸರು, ಸೈನಿಕರು
ವೈರಸ್ ಸೋಂಕು ಹರಡುವ ಭೀತಿಯ ನಡುವೆಯೂ ಸಿವಿಲ್ ಹಾಗೂ ಸಂಚಾರ ಪೊಲೀಸರು ಮತ್ತು ಗಡಿ ಕಾಯುವ ಸೈನಿಕರು ತಮ್ಮ ಕರ್ತವ್ಯದಲ್ಲಿ ಎಂದಿನಂತೆ ನಿರತರಾಗಿದ್ದಾರೆ. ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆಗೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಇವರ ಸೇವೆ ಬಹಳ ಮುಖ್ಯ.
- ಸಾರಿಗೆ ಸಿಬ್ಬಂದಿ
ಜನಸಂಚಾರ ಈಗ ವಿರಳವಾಗಿದ್ದರೂ ತುರ್ತು ಸಂದರ್ಭದಲ್ಲಿ ಪ್ರಯಾಣ ಅನಿವಾರ್ಯ. ಹೀಗಾಗಿ ಸರ್ಕಾರದ ಸಾರಿಗೆ ಸೇವೆಗಳು ಮತ್ತು ಖಾಸಗಿ ಸಮೂಹ ಸಾರಿಗೆ ಸೇವೆಗಳ ಸಿಬ್ಬಂದಿ ಈಗಲೂ ಕಾರ್ಯನಿರ್ವಹಿಸುತ್ತಿದೆ. ರೈಲು, ಬಸ್, ಟ್ಯಾಕ್ಸಿ, ಆಟೋರಿಕ್ಷಾ ಚಾಲಕರು ಜನರ ಸಂಚಾರ ಅಗತ್ಯಗಳನ್ನು ಪೂರೈಸುತ್ತಿದ್ದಾರೆ.
ಜನತಾ ಕರ್ಫ್ಯೂ: ದೇಶವಿಂದು ಸ್ತಬ್ಧ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ಪತ್ರಕರ್ತರು, ಪತ್ರಿಕಾ ವಿತರಕರು
ಕೊರೋನಾವೈರಸ್‌ನಿಂದ ಜನರ ಸ್ವಯಂ ರಕ್ಷಣೆ ಮತ್ತು ರೋಗದ ಹರಡುವಿಕೆಯ ಬಗ್ಗೆ ಕ್ಷಣಕ್ಷಣದ ಮಾಹಿತಿ ತಿಳಿಸುವಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಬಹಳ ಮುಖ್ಯ. ಹೀಗಾಗಿ ಸುದ್ದಿ ಸಂಗ್ರಹಿಸುವ ಪತ್ರಕರ್ತರು ಹಾಗೂ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸುವ ವಿತರಕರು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದಾರೆ.
ನೀವು ಏನು ಮಾಡಬಹುದು?
ಇಡೀ ದಿನ ಮನೆಯಿಂದ ಹೊರಗೆ ಹೋಗದಿರುವುದು ಬಹಳ ಜನರಿಗೆ ಕಷ್ಟಅನ್ನಿಸಬಹುದು. ಅದರಲ್ಲೂ ವೀಕೆಂಡ್‌ನಲ್ಲಿ ಹೊರಗೆ ಸುತ್ತಾಡುವವರಿಗೆ ಭಾನುವಾರ ಮನೆಯಲ್ಲೇ ಇದ್ದರೆ ಟೈಂಪಾಸ್ ಆಗುವುದಿಲ್ಲ. ಹೀಗಾಗಿ ಬೆಳಗ್ಗೆಯಿಂದ ರಾತ್ರಿಯವರೆಗೆ ಏನು ಮಾಡಬಹುದು ಎಂಬ ಕೆಲ ಟಿಫ್ಸ್ ಇಲ್ಲಿವೆ.
- ಇಷ್ಟುದಿನ ಕೆಲಸದ ಬ್ಯುಸಿಯಲ್ಲಿ ಕೊರೋನಾವೈರಸ್‌ನ ಅಪಾಯ, ಹರಡುವಿಕೆ, ಸ್ವಯಂ ರಕ್ಷಣೆ ಇತ್ಯಾದಿಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಸಾಧ್ಯವಾಗಿರದೆ ಇದ್ದರೆ ಪತ್ರಿಕೆ, ಟೀವಿ ಹಾಗೂ ಇಂಟರ್ನೆಟ್ ಮೂಲಕ ತಿಳಿದುಕೊಳ್ಳಿ.
- ವೀಕೆಂಡ್‌ನಲ್ಲಿ ಸ್ನೇಹಿತರ ಜೊತೆಗೆ ಹೊರಗೆ ಕಾಲ ಕಳೆಯುವವರು ನೀವಾಗಿದ್ದರೆ ಈ ಬಾರಿ ಮನೆಯಲ್ಲಿ ಹೆಂಡತಿ-ಮಕ್ಕಳಿಗೆ ನಿಮ್ಮ ಸಂಪೂರ್ಣ ಸಮಯ ನೀಡಿ, ಅವರೊಂದಿಗೆ ಖುಷಿಯಾಗಿ ಕಾಲ ಕಳೆಯಿರಿ.
- ಬಹಳ ದಿನದಿಂದ ಓದಬೇಕು ಎಂದುಕೊಂಡಿದ್ದ ಪುಸ್ತಕ ಓದಲು ಅಥವಾ ನೋಡಬೇಕು ಅಂದುಕೊಂಡಿದ್ದ ಸಿನಿಮಾ (ಮನೆಯಲ್ಲೇ) ನೋಡಲು ಇದು ಹೇಳಿಮಾಡಿಸಿದ ಸಮಯ.
- ಮನೆಯವರೆಲ್ಲ ಸೇರಿಕೊಂಡು ಇಡೀ ಮನೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿ. ಇದು ಕೊರೋನಾವೈರಸ್ ಮಾತ್ರವಲ್ಲ, ಎಲ್ಲಾ ರೀತಿಯ ಸೋಂಕು ಹರಡುವುದನ್ನೂ ತಡೆಯುತ್ತದೆ.
ಸಂಜೆ 5 ಗಂಟೆಗೆ ಚಪ್ಪಾಳೆ ತಟ್ಟಿ
ಜನತಾ ಕರ್ಫ್ಯೂ ಅಂಗವಾಗಿ ಪ್ರಧಾನಿ ಮೋದಿ ಅವರು ಸಂಜೆ 5 ಗಂಟೆಗೆ ಎಲ್ಲರೂ ತಮ್ಮ ಮನೆಯ ಬಾಲ್ಕನಿ ಅಥವಾ ಬಾಗಿಲಿನಲ್ಲಿ ನಿಂತು 5 ನಿಮಿಷ ಚಪ್ಪಾಳೆ ಹೊಡೆಯುವಂತೆ ಕೋರಿದ್ದಾರೆ. ಚಪ್ಪಾಳೆಯ ಜೊತೆಗೆ ಇನ್ನೂ ಹಲವು ರೀತಿಯಲ್ಲಿ ಕೊರೋನಾವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಮಂತಾದವರಿಗೆ ನಿಮ್ಮ ಬೆಂಬಲ ಸೂಚಿಸಬಹುದು.
- ಶಿಳ್ಳೆ ಹೊಡೆಯಬಹುದು
- ಹಾಡು ಹಾಡಬಹುದು
- ಕೇಕೆ ಹಾಕಬಹುದು
- ಜಾಗಟೆ ಬಡಿಯಬಹುದು
- ಶಂಖ ಊದಬಹುದು
- ಪಾತ್ರೆ ಸದ್ದು ಮಾಡಬಹುದು
- ವಾದ್ಯ ನುಡಿಸಬಹುದು
ಜನತಾ ಕರ್ಫ್ಯೂ ಉದ್ದೇಶ ಏನು?
- ಜನರು ಸಾಮಾಜಿಕವಾಗಿ ಬೆರೆತರೆ ಕೊರೋನಾವೈರಸ್ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಹೀಗಾಗಿ ಜನರು ಮನೆಯಲ್ಲೇ ಇರುವಂತೆ ಮಾಡುವುದು.
- ಇಡೀ ದೇಶದ ಜನರು ಮನೆಯೊಳಗೇ ಒಂದಿಡೀ ದಿನ ಇರಲು ಸಾಧ್ಯವೇ ಎಂದು ಪರೀಕ್ಷಿಸಿ, ಅಗತ್ಯಬಿದ್ದರೆ ಈ ಪ್ರಯೋಗವನ್ನು ವಿಸ್ತರಿಸುವುದು.
- ಜೀವದ ಹಂಗು ತೊರೆದು ಕೊರೋನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೆ ನೆರವಾಗುವುದು ಮತ್ತು ಧನ್ಯವಾದ ಹೇಳುವುದು.
- ದೇಶವು ಕೊರೋನಾವೈರಸ್ ಹರಡುವಿಕೆಯ 3ನೇ ಹಂತಕ್ಕೆ ಪ್ರವೇಶಿಸುತ್ತಿರುವುದರಿಂದ ಈ ಸಮಯದಲ್ಲಿ ಹೆಚ್ಚು ಸುರಕ್ಷಿತವಾಗಿದ್ದುಕೊಂಡು ಸೋಂಕು ತಡೆಗೆ ಪ್ರಯತ್ನಿಸುವುದು.
- ತುರ್ತುಸ್ಥಿತಿಯಲ್ಲಿ ಮನೆಯೊಳಗೇ ಇದ್ದುಕೊಂಡು ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯವಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದು.