3ನೇ ಹಂತದ ಡೇಂಜರ್‌ ಝೋನತ್ತ ಭಾರತ, ಸೋಂಕು ದಿಢೀರ್‌ ಹೆಚ್ಚಳ!

By Kannadaprabha NewsFirst Published Mar 22, 2020, 7:03 AM IST
Highlights

3ನೇ ಹಂತದ ಡೇಂಜರ್‌ ಝೋನತ್ತ ಭಾರತ!| ಒಂದೇ ದಿನ 79 ಜನರಿಗೆ ಕೊರೋನಾ| 300ರ ಗಡಿ ದಾಟಿದ ಸೋಂಕಿತರ ಸಂಖ್ಯೆ| ಸೋಂಕು ದಿಢೀರ್‌ ಹೆಚ್ಚಳ| ಈಗಲೇ ತಡೆಯದಿದ್ದರೆ 1 ವಾರದಲ್ಲಿ ಸೋಂಕಿನ ‘ಬಾಂಬ್‌ ಸ್ಫೋಟ’: ದಿಲ್ಲಿಯ ಖ್ಯಾತ ವೈದ್ಯ ಎಚ್ಚರಿಕೆ| ಯಾವ ಹಂತ, ಏನು ಅರ್ಥ?

ನವದೆಹಲಿ(ಮಾ.22): ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆ ಶನಿವಾರ ಹಿಂದೆಂದಿಗಿಂತಲೂ ಅತಿ ಹೆಚ್ಚು ಏರಿಕೆಯಾಗಿದೆ. ಶನಿವಾರ ಒಂದೇ ದಿನ 79 ಪ್ರಕರಣಗಳು ದೃಢಪಟ್ಟಿದ್ದು, ಭಾರತದಲ್ಲಿ ಒಟ್ಟು ಪೀಡಿತರ ಸಂಖ್ಯೆ 315ಕ್ಕೇರಿದೆ. ಅಲ್ಲದೆ, ಕೊರೋನಾ ಪ್ರಕರಣಗಳು ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಅಧಿಕವಾಗುವ ಲಕ್ಷಣ ಗೋಚರವಾಗುತ್ತಿದೆ. ಹೀಗಾಗಿ ದೇಶವು ಕೊರೋನಾದ 2ನೇ ಹಂತವನ್ನು ದಾಟಿ 3ನೇ ಹಂತ ತಲುಪಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ದಿಲ್ಲಿಯ ಗಂಗಾರಾಂ ಆಸ್ಪತ್ರೆಯ ಎದೆರೋಗಗಳ ವಿಭಾಗದ ಮುಖ್ಯಸ್ಥ ಡಾ| ಅರವಿಂದ ಕುಮಾರ್‌ ಅವರು ಈ ಕುರಿತು ಎಚ್ಚರಿಕೆ ನೀಡಿದ್ದು, ‘ಕೊರೋನಾ ವೈರಾಣು ಸೋಂಕು ಸಾಮುದಾಯಿಕವಾಗಿ ವ್ಯಾಪಿಸುತ್ತಿದ್ದು, ದೇಶದಲ್ಲಿ 2ನೇ ಹಂತ ದಾಟಿ 3ನೇ ಹಂತ ಪ್ರವೇಶಿಸಿ ಆಗಿಬಿಟ್ಟಿದೆ. ಇನ್ನೊಂದು ವಾರದಲ್ಲಿ ಕೊರೋನಾ ಪ್ರಕರಣಗಳ ಬಾಂಬ್‌ ನಮ್ಮೆದುರೇ ಸ್ಫೋಟಗೊಳ್ಳಲಿದೆ’ ಎಂದು ಹೇಳಿದ್ದಾರೆ.

ಇಟಲಿ ಹಾಗೂ ಚೀನಾ ರೀತಿ ಕೊರೋನಾ ವೈರಸ್‌ 3ನೇ ಹಂತ ಪ್ರವೇಶಿಸಬಾರದು ಎಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹರಸಾಹಸ ಮಾಡುತ್ತಿವೆ. ಇಂಥದ್ದರ ನಡುವೆಯೇ ಆತಂಕದ ಅಂಕಿ-ಅಂಶಗಳು ಹೊರಬೀಳುತ್ತಿವೆ.

ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲಿ ವರದಿಯಾಗಿದ್ದು, ಸೋಂಕಿತರ ಸಂಖ್ಯೆ 64ಕ್ಕೇರಿದೆ. ನಂತರದ ಸ್ಥಾನದಲ್ಲಿ ಕೇರಳ ಇದ್ದು, ಅಲ್ಲಿ 49 ಮಂದಿ, ದಿಲ್ಲಿಯಲ್ಲಿ 26, ಉತ್ತರ ಪ್ರದೇಶದಲ್ಲಿ 24 ಮಂದಿಗೆ ಕೊರೋನಾ ಖಚಿತವಾಗಿದೆ. ಕರ್ನಾಟಕದಲ್ಲೂ ಪ್ರಕರಣಗಳ ಸಂಖ್ಯೆ ಒಂದೇ ದಿನ 15ರಿಂದ 20ಕ್ಕೇರಿದೆ. ಒಟ್ಟು ನಾಲ್ವರು ಈವರೆಗೆ ಬಲಿಯಾಗಿದ್ದಾರೆ. 20 ರಾಜ್ಯಗಳಿಗೆ ಸೋಂಕು ವ್ಯಾಪಿಸಿದೆ.

ಸಮಾಧಾನದ ವಿಚಾರ ಎಂದರೆ 23 ಜನರು ದೇಶದ ವಿವಿಧೆಡೆ ಈವರೆಗೆ ಗುಣವಾಗಿದ್ದಾರೆ.

‘ಬಾಂಬ್‌’ ಸ್ಫೋಟ- ಡಾ| ಕುಮಾರ್‌:

ಕೊರೋನಾ ಹೆಚ್ಚುತ್ತಿರುವ ಬಗ್ಗೆ ದಿಲ್ಲಿ ಗಂಗಾರಾಂ ಆಸ್ಪತ್ರೆ ಎದೆರೋಗ ವಿಭಾಗದ ಮುಖ್ಯಸ್ಥ ಡಾ| ಅರವಿಂದ ಕುಮಾರ್‌ ಮಾಧ್ಯಮಗಳಿಗೆ ಸಂದರ್ಶನ ನೀಡಿ, ‘ಈಗ ತೋರಿಸುತ್ತಿರುವ ಸಂಖ್ಯೆಗಳು ತುಂಬಾ ಕಮ್ಮಿ. ನಿಜವಾದ ಸಂಖ್ಯೆಗಳು ಹತ್ತು ಹಲವಾರು ಪಟ್ಟು ಅಧಿಕವಾಗಿವೆ. ಸೋಂಕು ಸಮುದಾಯದಲ್ಲಿ ಹರಡುತ್ತಿದೆ. ಈಗ ಇನ್ನೂ ಯಾರಾದರೂ ‘ರೋಗವು 2ನೇ ಸ್ತರದಲ್ಲಿದೆ’ ಎಂದು ಹೇಳಿದರೆ ನೈಜ ದೃಶ್ಯ ನೋಡಲು ಅವರು ಕಣ್ಣು ಮುಚ್ಚಿಕೊಳ್ಳುತ್ತಿದ್ದಾರೆ ಎಂದೇ ಅರ್ಥ. ಈಗಾಗಲೇ ನಾವು 2ನೇ ಸ್ತರದಿಂದ 3ನೇ ಸ್ತರ ತಲುಪಿದ್ದೇವೆ. ಕೆಲವೇ ದಿನಗಳಲ್ಲಿ, ಅಂದರೆ ಬಹುಶಃ ಮುಂದಿನ ವಾರಾಂತ್ಯಕ್ಕೆ ‘ಬಾಂಬ್‌’ ನಮ್ಮೆದರೇ ಸ್ಫೋಟಗೊಳ್ಳಲಿದೆ’ ಎಂದಿದ್ದಾರೆ.

‘ಕಳೆದ 24 ತಾಸಿನಲ್ಲಿ ಸೋಂಕಿತರ ಸಂಖ್ಯೆ ಈ ಹಿಂದಿನ ದಿನಗಳಿಗೆ ಹೋಲಿಸಿದರೆ ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಾಗಿದೆ. ಸ್ಪೇನ್‌, ಇಟಲಿ ಅಥವಾ ಚೀನಾ ಥರದ ಪರಿಸ್ಥಿತಿ ಇಲ್ಲೂ ಸೃಷ್ಟಿಯಾಗಲು ಕೆಲ ದಿನಗಳು ಮಾತ್ರ ಬಾಕಿ ಇದ್ದಂತಿದೆ. ಹೆಚ್ಚು ಪ್ರಕರಣಗಳು ಆದಂತೆ ಹೆಚ್ಚು ಸಾವು ಕೂಡ ಆಗುತ್ತವೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

4 ಹಂತಗಳು

ಹಂತ 1:

ಕೊರೋನಾ ಬಾಧಿತ ದೇಶಗಳಿಂದ ನಮ್ಮ ದೇಶಕ್ಕೆ ಬಂದವರಲ್ಲಿ ಕೊರೋನಾ ಸೋಂಕು ಪತ್ತೆ.

ಹಂತ 2:

ವಿದೇಶಗಳಿಂದ ಬಂದಿರುವವರ ಮೂಲಕ ಸ್ಥಳೀಯ ಜನರಿಗೆ ಕೊರೋನಾ ಸೋಂಕು.

ಹಂತ 3:

ಒಂದು ಇಡೀ ಸಮುದಾಯಕ್ಕೇ ಕೊರೋನಾ ಅಂಟುವುದು. ಹೆಚ್ಚು ಪ್ರದೇಶಗಳು ಬಾಧಿತ

ಹಂತ 4:

ಇಟಲಿ, ಚೀನಾದಂತೆ ಸೋಂಕು ‘ಸಾಂಕ್ರಾಮಿಕ ಪಿಡುಗು’ ಎಂದು ಪರಿವರ್ತನೆಗೊಳ್ಳುವುದು.

click me!