ಕೊರೋನಾ ಚೇತರಿಕೆ: ಜಗತ್ತಿನಲ್ಲೇ ಭಾರತ ನಂ.1, ಅಮೆರಿಕವೂ ಹಿಂದಕ್ಕೆ!

By Kannadaprabha News  |  First Published Sep 20, 2020, 8:09 AM IST

ಕೊರೋನಾದಿಂದ ಚೇತರಿಕೆ: ಜಗತ್ತಿನಲ್ಲೇ ಭಾರತ ನಂ.1| ಅಮೆರಿಕವನ್ನೂ ಹಿಂದಿಕ್ಕಿದ ಭಾರತ, 42 ಲಕ್ಷ ಮಂದಿ ಗುಣಮುಖ


ನವದೆಹಲಿ(ಸೆ.20): ಕೊರೋನಾ ವಿರುದ್ಧದ ಹೋರಾಟದಲ್ಲಿ ಮಹತ್ವದ ಮೈಲುಗಲ್ಲು ದಾಟಿರುವ ಭಾರತ ಇದೀಗ ಈ ಮಹಾಮಾರಿಯಿಂದ ಗುಣಮುಖ ಹೊಂದಿದವರ ಸಂಖ್ಯೆಯಲ್ಲಿ ಜಗತ್ತಿನಲ್ಲೇ ನಂ.1 ಸ್ಥಾನ ಪಡೆದಿದೆ. ಭಾರತದಲ್ಲಿ ಇಲ್ಲಿಯವರೆಗೆ ಕೊರೋನಾದಿಂದ 42,08,431 ಜನರು ಗುಣಮುಖ ಹೊಂದಿದ್ದು, ಈ ವಿಷಯದಲ್ಲಿ ಇಲ್ಲಿಯವರೆಗೆ ನಂ.1 ಇದ್ದ ಅಮೆರಿಕವನ್ನೂ ನಮ್ಮ ದೇಶ ಮೀರಿಸಿದೆ. ಅಮೆರಿಕದಲ್ಲಿ ಕೊರೋನಾದಿಂದ ಇಲ್ಲಿಯವರೆಗೆ ಗುಣಮುಖರಾದವರ ಸಂಖ್ಯೆ 42 ಲಕ್ಷಕ್ಕಿಂತ ಕೊಂಚ ಕಡಿಮೆಯಿದೆ.

‘ಭಾರತದಲ್ಲೀಗ ಕೊರೋನಾವನ್ನು ಗೆದ್ದು ಗುಣಮುಖರಾಗುವವರ ಪ್ರಮಾಣ ಶೇ.80ರಷ್ಟಿದೆ. ಕೊರೋನಾದಿಂದ ಸಾವನ್ನಪ್ಪುವವರ ಪ್ರಮಾಣ ಮತ್ತಷ್ಟುಇಳಿಕೆಯಾಗಿ ಶೇ.1.61ಕ್ಕೆ ತಲುಪಿದೆ. ಜಗತ್ತಿನಲ್ಲೇ ನಮ್ಮ ದೇಶದಲ್ಲಿ ಇಲ್ಲಿಯವರೆಗೆ ಕೊರೋನಾದಿಂದ ಅತಿಹೆಚ್ಚು ಜನರು ಗುಣಮುಖ ಹೊಂದಿದ್ದಾರೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

Latest Videos

undefined

ಜಗತ್ತಿನಲ್ಲಿ ಕೊರೋನಾದಿಂದ ಗುಣಮುಖರಾದವರ ಒಟ್ಟು ಸಂಖ್ಯೆಯಲ್ಲಿ ಭಾರತೀಯರ ಸಂಖ್ಯೆ ಶೇ.19ರಷ್ಟಿದೆ. ಅಂದರೆ ಈ ಮಹಾಮಾರಿಯ ವಿರುದ್ಧ ಭಾರತದ ಹೋರಾಟ ಪರಿಣಾಮಕಾರಿಯಾಗಿದ್ದು, ನಾವು ಸರಿಯಾದ ದಿಸೆಯಲ್ಲಿ ಸಾಗುತ್ತಿದ್ದೇವೆ ಎಂದು ಸಚಿವಾಲಯ ಹೇಳಿದೆ.

ಕೊರೋನಾದಿಂದ ಗುಣಮುಖರಾದವರವರಲ್ಲಿ 15 ರಾಜ್ಯಗಳ ಜನರ ಪ್ರಮಾಣ ಶೇ.90ರಷ್ಟಿದೆ. ಅತಿಹೆಚ್ಚು ಕೊರೋನಾ ಸೋಂಕಿತರಿರುವ 5 ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮತ್ತು ಉತ್ತರ ಪ್ರದೇಶದಲ್ಲೇ ಅತಿಹೆಚ್ಚು ಜನರು ಗುಣಮುಖರಾಗಿದ್ದಾರೆ. ಕಾಲಕಾಲಕ್ಕೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳು ಫಲ ನೀಡಿವೆ. ಸರಿಯಾದ ಸಮಯಕ್ಕೆ ರೋಗಿಗಳನ್ನು ಗುರುತಿಸುವುದು, ಅತಿಹೆಚ್ಚು ಸೋಂಕು ಪತ್ತೆ ಪರೀಕ್ಷೆ ನಡೆಸುವುದು, ಚಿಕಿತ್ಸೆಯ ಮೇಲೆ ಸರಿಯಾಗಿ ನಿಗಾ ಇಡುವುದು ಹಾಗೂ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವುದರಿಂದಾಗಿ ಭಾರತ ಈ ಹಂತಕ್ಕೆ ತಲುಪಲು ಸಾಧ್ಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಈಗಲೂ ಅಮೆರಿಕವೇ ಮೊದಲ ಸ್ಥಾನದಲ್ಲಿದ್ದು, ಅಲ್ಲಿ ಸುಮಾರು 70 ಲಕ್ಷ ಕೊರೋನಾ ಸೋಂಕಿತರಿದ್ದಾರೆ. ಭಾರತದಲ್ಲಿ ಇವರ ಸಂಖ್ಯೆ 60 ಲಕ್ಷಕ್ಕಿಂತ ಕಡಿಮೆಯಿದೆ.

click me!