
ನವದೆಹಲಿ(ಮೇ.31) ನಾಲ್ಕನೇ ಹಂತದ ಲಾಕ್‌ಡೌನ್ ಅಂತ್ಯವಾಗುವ ಮುನ್ನಾ ದಿನ ದೇಶದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮೇರೆ ಮೀರಿದೆ. ಶನಿವಾರ ಒಂದೇ ದಿನ ದಾಖಲೆಯ 8406 ಮಂದಿಯಲ್ಲಿ ಹೊಸದಾಗಿ ಸೋಂಕು ಕಂಡುಬಂದಿದ್ದರೆ, ಇದೇ ವೇಳೆ ಕೊರೋನಾಗೆ ತುತ್ತಾಗಿದ್ದ ಬರೋಬ್ಬರಿ 316 ಮಂದಿ ಸಾವಿಗೀಡಾಗಿದ್ದಾರೆ. ಒಂದೇ ದಿನ ಇಷ್ಟೊಂದು ಸಂಖ್ಯೆಯಲ್ಲಿ ಜನರು ಮೃತಪಟ್ಟಿರುವುದು ಕೂಡ ದಾಖಲೆ.
ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,76,792ಕ್ಕೇರಿದ್ದರೆ, ಮೃತರ ಸಂಖ್ಯೆ 5000ದ ಗಡಿ ದಾಟಿ 5100ಕ್ಕೆ ಹೆಚ್ಚಳವಾಗಿದೆ. ಈ ಸಂಖ್ಯೆಗಳು ತೀವ್ರ ಆತಂಕಕ್ಕೆ ಕಾರಣವಾಗಿವೆ.
ಕೊರೋನಾದಿಂದ ಅತಿ ಹೆಚ್ಚು ನಲುಗಿರುವ ಮಹಾರಾಷ್ಟ್ರದಲ್ಲಿ ವೈರಸ್ ಇನ್ನಷ್ಟು ಪ್ರತಾಪ ಮೆರೆದಿದೆ. ಶನಿವಾರ ಒಂದೇ ದಿನ 2940 ಮಂದಿಯಲ್ಲಿ ಹೊಸದಾಗಿ ಸೋಂಕು ಕಂಡುಬಂದಿದ್ದು, 99 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 65,168ಕ್ಕೆ ಹೆಚ್ಚಳವಾಗಿದ್ದರೆ, ಮೃತರ ಸಂಖ್ಯೆ 2197ಕ್ಕೇರಿದೆ.
ಮತ್ತೊಂದೆಡೆ ಗುಜರಾತಿನಲ್ಲಿ ಶನಿವಾರ 27 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಆ ರಾಜ್ಯದಲ್ಲಿ ಮೃತರ ಸಂಖ್ಯೆ 1000ದ ಗಡಿ ದಾಟಿ 1007ಕ್ಕೆ ಹೆಚ್ಚಳವಾಗಿದೆ. 412 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 16356ಕ್ಕೆ ಏರಿಕೆಯಾಗಿದೆ.
ತಮಿಳುನಾಡಿನಲ್ಲಿ ದಾಖಲೆಯ 938 ಪ್ರಕರಣಗಳು ವರದಿಯಾಗಿದ್ದು, ಒಟ್ಟು ವೈರಸ್‌ಪೀಡಿತರ ಸಂಖ್ಯೆ 21184ಕ್ಕೆ ಹೆಚ್ಚಳವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ