ಕೊರೋನಾ ವೈರಸ್ ನಿಯಂತ್ರಣಕ್ಕೆ ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಆಯಾ ರಾಜ್ಯಗಳಲ್ಲಿ ಕರ್ಫ್ಯೂ, ಸೆಮಿ ಲಾಕ್‌ಡೌನ್, ಲಾಕ್‌ಡೌನ್, ನೈಟ್ ಕರ್ಫ್ಯೂ ಸೇರಿದಂತೆ ಹಲವು ನಿರ್ಬಂಧಗಳು ಜಾರಿಯಲ್ಲಿದೆ. ಆದರೆ ಕೊರೋನಾ ಕೇಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಒಂದೇ ದಿನ ಅತೀ ಹಚ್ಚು ಕೇಸ್ ದಾಖಲಾಗದ ಕುಖ್ಯಾತಿಗೆ ಭಾರತ ಗುರಿಯಾಗಿದೆ
ನವದೆಹಲಿ(ಮೇ.01): ಕೊರೋನಾ 2ನೇ ಅಲೆ ಅದ್ಯಾವ ಮಟ್ಟಿಗೆ ಇದೆ ಅನ್ನೋದು ಬಹುತೇಕ ಎಲ್ಲರ ಅನುಭವಕ್ಕೆ ಬಂದಿದೆ. ಪ್ರತಿ ಗ್ರಾಮಕ್ಕೂ ಕೊರೋನಾ ಲಗ್ಗೆ ಇಟ್ಟಿದೆ. ನಗರ, ಜಿಲ್ಲೆ, ತಾಲೂಕ ಕೇಂದ್ರಗಳಲ್ಲಿರುವ ಆಸ್ಪತ್ರೆಗಳು ಭರ್ತಿಯಾಗಿದೆ. ಸಮಸ್ಯೆಗಳ ನಡುವೆ ಪ್ರತಿ ದಿನ ಕೊರೋನಾ ಸಂಖ್ಯೆ ಉಲ್ಭಣಿಸುತ್ತಲೇ ಇದೆ. ಇದೀಗ ವಿಶ್ವದಲ್ಲೇ ಒಂದೇ ದಿನ ಅತ್ಯಂತ ಗರಿಷ್ಠ ಪ್ರಕರಣ ಭಾರತದಲ್ಲಿ ದಾಖಲಾಗಿದೆ.
ಕೊರೋನಾ 2 ಅಲೆ ನಡುವೆ ಮೂರನೇ ಅಲೆ ಅಪ್ಪಳಿಸುವ ಸೂಚನೆ: ಮಕ್ಕಳೇ ಟಾರ್ಗೆಟ್?
ಶನಿವಾರದ(ಮೇ.01) ಹೆಲ್ತ್ ಬುಲೆಟಿನ್ ವರದಿಯಲ್ಲಿ ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ಬರೋಬ್ಬರಿ 4 ಲಕ್ಷಕ್ಕೂ ಹೆಚ್ಚು ಕೊರೋನಾ ಕೇಸ್ ಪತ್ತೆಯಾಗಿದೆ. ಇದು ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಈ ರೀತಿ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ದೇಶದ ಗತಿ ಏನು?ಜನರ ಪಾಡೇನು ಅನ್ನೋ ಆತಂಕ ಮನೆ ಮಾಡಿದೆ.
ಭಾರತದಲ್ಲಿ ಒಂದೇ ದಿನ 4,01,993 ಕೊರೋನಾ ಹೊಸ ಪ್ರಕರಣ ದಾಖಲಾಗೋ ಮೂಲಕ ವಿಶ್ವದಲ್ಲೇ ಅತೀ ಹೆಚ್ಚು ಕೇಸ್ ದಾಖಲಾದ ಕುಖ್ಯಾತಿಗೆ ಗುರಿಯಾಗಿದೆ. ಇನ್ನು ಕೊರೋನಾಗೆ ಬಲಿಯಾಗುತ್ತಿರುವವರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡಿದೆ. ಇದೀಗ ಒಂದೇ ದಿನ ಭಾರತದಲ್ಲಿ ಕೊರೋನಾಗೆ 3,523 ಮಂದಿ ಬಲಿಯಾಗಿದ್ದಾರೆ.
ಒಂದು ಸಮಾಧಾನಕರ ವಿಚಾರ ಅಂದರೆ ಕೊರೋನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ. ಶನಿವಾರ ಬಿಡುಗಡೆಯಾದ ಹೆಲ್ತ್ ಬುಲೆಟಿನ್ ವರದಿಯಲ್ಲಿ 2,99,988 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 1,56,84,406 ಆಗಿದೆ.
ಭಾರತದಲ್ಲಿ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 1,91,64,969 ಆಗಿದೆ. ಇದರಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 32,68,710 . ಇನ್ನು ಒಟ್ಟು ಸಾವಿನ ಸಂಖ್ಯೆ 2,11,853.
ಕೊರೋನಾ ಕಟ್ಟು ನಿಟ್ಟಿನ ಮಾರ್ಗಸೂಚಿ ಜೊತೆಗೆ ಕೇಂದ್ರ ಸರ್ಕಾರ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಿದೆ. ಇಂದಿನಿಂದ(ಮೇ.01) 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಲಭ್ಯವಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ ಲಸಿಕೆ ಸ್ಟಾಕ್ ಇಲ್ಲದ ಕಾರಣ ಹಲವು ರಾಜ್ಯಗಳು ಮೇ. 3ನೇ ವಾರದಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸಜ್ಜಾಗಿದೆ. ಸದ್ಯ 15,49,89,635 ಮಂದಿ ಲಸಿಕೆ ಪಡೆದಿದ್ದಾರೆ.