
ಹೋಗಿ ವಿಷ್ಣುನನ್ನೇ ಕೇಳು: ಹಿಂದೂ ದೇವರ ವಿಗ್ರಹ ವಿರೂಪದ ಕುರಿತು ಸಿಜೆಐ ಗವಾಯಿ ಹೇಳಿಕೆ ವಿವಾದ
ನವದೆಹಲಿ: ಮಧ್ಯಪ್ರದೇಶದ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿರುವ ಖಜುರಾಹೋ ದೇಗುಲದಲ್ಲಿ ವಿಷ್ಣುವಿನ ವಿರೂಪಗೊಂಡಿದ್ದ ವಿಗ್ರಹ ಸರಿಪಡಿಸುವಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಿರಸ್ಕರಿಸಿದ ಮುಖ್ಯ ನ್ಯಾ। ಬಿ.ಆರ್.ಗವಾಯಿ ಅವರು ನೀನು ವಿಷ್ಣುವಿನ ಪರಮಭಕ್ತನಲ್ಲವೇ ಹೋಗಿ ವಿಷ್ಣುವನ್ನೇ ಕೇಳು. ಹೋಗಿ ಪ್ರಾರ್ಥನೆ ಮಾಡು ಎಂದು ಅರ್ಜಿದಾರನಿಗೆ ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. ರಾಕೇಶ್ ದಲಾಲ್ ಎಂಬುವರು 7 ಅಡಿ ಎತ್ತರದ ತಲೆ ತುಂಡಾಗಿರುವ ವಿಗ್ರಹ ಸರಿಪಡಿಸುವಂತೆ ಸರ್ಕಾರಗಳಿಗೆ ಮನವಿ ಕೊಟ್ಟು ಸಾಕಾಗಿದೆ. ವಿರೂಪಗೊಂಡ ವಿಗ್ರಹವು ಮೂಲಭೂತ ಹಕ್ಕಿಗೆ ಧಕ್ಕೆಯಾಗಿದೆ. ಹೀಗಾಗಿ ಅನುಮತಿ ಕೊಡಬೇಕು ಎಂದು ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆ ವೇಳೆ ಸಿಜೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸುಪ್ರೀಂಕೋರ್ಟ್ ಸಿಜೆಯ ಈ ಅಸಡ್ಡೆ ಮಾತಿಗೆ ಆಕ್ರೋಶ ವ್ಯಕ್ತವಾಗಿದೆ.
ಮಾಲಿನ್ಯದ ಕಾರಣ ದಿಲ್ಲಿ ಕೆಂಪು ಕೋಟೆ ಇದೀಗ ಕಪ್ಪುಕೋಟೆ: ಕಳವಳ
ನವದೆಹಲಿ: ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿರುವ ದೆಹಲಿಯ ಕೆಂಪುಕೋಟೆಯ ಹೊಳಪು ವಾಯುಮಾಲಿನ್ಯದಿಂದ ಮಾಸುತ್ತಿದೆ ಎಂದು ಕೇಂದ್ರ ಸರ್ಕಾರದ ವರದಿ ಕಳವಳ ವ್ಯಕ್ತಪಡಿಸಿದೆ. ವಾಯುಮಾಲಿನ್ಯ ಏರಿಕೆಯಿಂದಾಗಿ ಕೆಂಪುಕೋಟೆಯ ಕೆಂಪು ಮರಳುಗಲ್ಲುಗಳ ಮೇಲೆ ಕಪ್ಪಾದ ಪದರ ಸೃಷ್ಟಿಯಾಗುತ್ತಿದೆ. ಈ ಪದರವು ಕಲ್ಲಿನ ಹೊಳಪು ಕೊಗ್ಗಿಸಿ ಕಲ್ಲಿನ ಮೇಲೆ ರಾಸಾಯನಿಕ ಅಡ್ಡ ಪರಿಣಾಮ ಬೀರುತ್ತಿದೆ ಎಂದು ವರದಿ ಹೇಳಿದೆ. ಕೇಂದ್ರ ವಿಜ್ಞಾನ ಮತ್ತು ಇಲಾಖೆ ಮತ್ತು ಇಟಲಿಯ ವಿದೇಶಾಂಗ ಇಲಾಖೆಯು ಜಂಟಿಯಾಗಿ ವರದಿಯನ್ನು ತಯಾರಿಸಿವೆ.
ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಟ್ರಂಪ್ ₹1.2 ಲಕ್ಷ ಕೋಟಿ ಕೇಸು
ವಾಷಿಂಗ್ಟನ್: ತಮ್ಮ ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟಿಸಿದೆ ಎಂದು ಆರೋಪಿಸಿ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 1.27 ಲಕ್ಷ ಕೋಟಿ ರು. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಬಗ್ಗೆ ತಮ್ಮ ಟ್ರುಥ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಟೈಮ್ಸ್ ಪತ್ರಿಕೆ ಡೆಮಾಕ್ರಟಿಕ್ ಪಕ್ಷದ ಮುಖವಾಣಿಯಂತೆ ವರ್ತಿಸುತ್ತಿದೆ. ಕಮಲಾ ಹ್ಯಾರಿಸ್ ಪರವಾಗಿರುವ ಪತ್ರಿಕೆ ಪಕ್ಷಪಾತ ಧೋರಣೆ ಹೊಂದಿದೆ. ಪತ್ರಿಕೆಗೆ ಬಹಳ ಸಮಯದಿಂದ ನನ್ನ ವಿರುದ್ಧ ಸುಳ್ಳು ಹೇಳಲು, ನಿಂದಿಸಲು, ಮಾನಹಾನಿ ಮಾಡಲು ಅವಕಾಶ ನೀಡಲಾಗಿದೆ. ಇದು ನಮ್ಮ ದೇಶದ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಪತ್ರಿಕೆಗಳಲ್ಲಿ ಒಂದು’ ಎಂದು ಕಿಡಿಕಾರಿದ್ದಾರೆ.
ಎಲ್ಲಾ ಕೇಸಿಗೂ ವನತಾರಾ ರೀತಿ ಶೀಘ್ರ ನ್ಯಾಯದಾನ ಸಾಧ್ಯವೇ?: ಕೈ ವ್ಯಂಗ್ಯ
ನವದೆಹಲಿ: ವನತಾರಾ ಪ್ರಕರಣದಂತೆ ಎಲ್ಲ ಪ್ರಕರಣಗಳನ್ನು ಸುಪ್ರೀಂಕೋರ್ಟ್ ಇಷ್ಟು ತ್ವರಿತ ಮತ್ತು ಸ್ಪಷ್ಟವಾಗಿ ಇತ್ಯರ್ಥಪಡಿಸುತ್ತದೆಯೇ? ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಂಗಳವಾರ ಪ್ರಶ್ನಿಸಿದ್ದಾರೆ. ಜತೆಗೆ, ದೀರ್ಘ ವಿಳಂಬಗಳಿಗೆ ಹೆಸರಾಗಿರುವ ಭಾರತೀಯ ನ್ಯಾಯಾಂಗ ವ್ಯವಸ್ಥೆ ಈಗ ಹೆಚ್ಚಿನ ವೇಗದಲ್ಲಿ ಚಲಿಸುತ್ತಿದೆ ಎಂದು ಅಣಕವಾಡಿದ್ದಾರೆ. ಆ.17ಕ್ಕೆ ವನತಾರಾ ವಿರುದ್ಧ ಅರ್ಜಿ ಸಲ್ಲಿಕೆಯಾಗಿತ್ತು. ಸೆ.15ಕ್ಕೆ ಮುಚ್ಚಿದ ಲಕೋಟೆಯಲ್ಲಿ ಎಸ್‌ಐಟಿ ಸಲ್ಲಿಸಿದ ವರದಿ ಆಧರಿಸಿ ವನತಾರಾವನ್ನು ನ್ಯಾಯಾಲಯ ದೋಷಮುಕ್ತ ಮಾಡಿದೆ. ಈ ಮುಚ್ಚಿದ ಲಕೋಟೆ ವ್ಯವಹಾರವಿಲ್ಲದೆ ಎಲ್ಲ ಪ್ರಕರಣಗಳ ಶೀಘ್ರ ಇತ್ಯರ್ಥ ಸಾಧ್ಯವೇ? ಎಂದು ರಮೇಶ್ ಕೇಳಿದ್ದಾರೆ. ಗುಜರಾತ್‌ನ ಜಾಮ್‌ನಗರದಲ್ಲಿರುವ ವನತಾರಾ ಪ್ರಾಣಿ ಸಂಗ್ರಹಾಲಯ ಮತ್ತು ಪುನರ್ವಸತಿ ಕೇಂದ್ರದ ವಿರುದ್ಧ ಸಲ್ಲಿಕೆಯಾದ ಅರ್ಜಿಯನ್ನು ವಿಶೇಷ ತನಿಖಾ ತಂಡದ(ಎಸ್‌ಐಟಿ) ವರದಿ ಆಧರಿಸಿ ವಜಾ ಮಾಡಿದ ಒಂದು ದಿನದ ನಂತರ ರಮೇಶ್ ಸುಪ್ರೀಂಗೆ ಸವಾಲೆಸೆದಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅನೈತಿಕತೆ ತಡೆಯಲು ವೈ-ಫೈ ಸೇವೆಯನ್ನೇ ಬಂದ್ ಮಾಡಿದ ತಾಲಿಬಾನ್
ಇದನ್ನೂ ಓದಿ: ಬೆಟ್ಟಿಂಗ್ ಆ್ಯಪ್ ಪ್ರಚಾರ: ಉತ್ತಪ್ಪ, ಯುವಿ, ಸೋನು ಸೂದ್‌ಗೆ ಇಡಿ ಸಮನ್ಸ್: ಭೂವಂಚನೆ ಕೇಸಲ್ಲಿ ಯೂಸುಫ್ ಪಠಾಣ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ