Bharath Jodo Yatra: ರೇಷ್ಮೆ ಸೀರೆ ನೆಲದಲ್ಲಿ ರಾಹುಲ್‌ ನಡಿಗೆ: ಪಾದಯಾತ್ರೆ ಇಂದು ಆಂಧ್ರ ಪ್ರವೇಶ

By Kannadaprabha News  |  First Published Oct 14, 2022, 9:30 AM IST

Rahul Gandhi Bharath Jodo Yatra: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮೋಹಕ ಜರಿಯಂಚಿನ ರೇಷ್ಮೆ ಸೀರೆಗೆ ಹೆಸರುವಾಸಿಯಾದ ಮೊಳಕಾಲ್ಮುರು ನೆಲದಲ್ಲಿ ಗುರುವಾರ ಹೆಜ್ಜೆ ಹಾಕಿದರು. 


ಚಿತ್ರದುರ್ಗ (ಅ. 14):  ಭಾರತವನ್ನು ಒಟ್ಟುಗೂಡಿಸುವ ಸ್ಲೋಗನ್‌ನೊಂದಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಮ್ಮಿಕೊಂಡಿರುವ ಪಾದಯಾತ್ರೆ ಮೋಹಕ ಜರಿಯಂಚಿನ ರೇಷ್ಮೆ ಸೀರೆಗೆ ಹೆಸರುವಾಸಿಯಾದ ಮೊಳಕಾಲ್ಮುರು ನೆಲದಲ್ಲಿ ಗುರುವಾರ ಹೆಜ್ಜೆ ಹಾಕಿದರು. ಜಿಲ್ಲೆಯಾದ್ಯಂತ ಬುಧವಾರ ರಾತ್ರಿ ಭಾರೀ ಮಳೆಯಾಗಿದ್ದು ಆ ಕಾರಣಕ್ಕೆ ಪಾದಯಾತ್ರೆಗೆ ಹಿನ್ನೆಡೆಯಾಗುವ ಆತಂಕಗಳು ಕಾಂಗ್ರೆಸ್ಸಿಗರ ಮನದಲ್ಲಿ ಮೂಡಿತ್ತು. ಗುರುವಾರ ಮುಂಜಾನೆಯೂ ಮಳೆ ತನ್ನ ಇರುವಿಕೆ ತೋರಿತ್ತು. ಹಾಗಾಗಿ 6.30ಕ್ಕೆ ಆರಂಭವಾಗಬೇಕಿದ್ದ ಪಾದಯಾತ್ರೆ 7.10 ಶುರುವಾಯಿತು. ಜಿನುಗುವ ಮಳೆ ಹನಿಗಳ ನಡುವೆಯೇ ರಾಹುಲ್‌ ಬಿರು ಹೆಜ್ಜೆ ಹಾಕಿದರು.

ಬೀದರ್‌-ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಬರುವ ಬಿ.ಜಿ.ಕೆರೆಯಿಂದ ಪಾದಯಾತ್ರೆ ಆರಂಭವಾದಾಗ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿ ಬೀಳ್ಕೊಟ್ಟರು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಪಾದಯಾತ್ರೆ ಹೆದ್ದಾರಿ ಬಿಟ್ಟು ಕಿರಿದಾದ ಹಾದಿಯಲ್ಲಿ ಸಾಗಿತು. 30 ಅಡಿ ಅಗಲದ ರಸ್ತೆಯಲ್ಲಿ ರಾಹುಲ್‌ ಹೆಜ್ಜೆ ಹಾಕಿದಾಗ ಮಾಜಿ ಸಿಎಂ ಸಿದ್ದರಾಮಯ್ಯ ಕೂಡಿಕೊಂಡರು.

Tap to resize

Latest Videos

undefined

ಮೊಳಕಾಲ್ಮುರು ವಿಧಾನಸಭೆ ಕ್ಷೇತ್ರದಲ್ಲಿ ಕಣ್ಣಾಯಿಸಿದಷ್ಟುದೂರ ಶೇಂಗಾ ಫಸಲು ತೂಗುತ್ತಿದೆ. ನಳನಳಿಸುವ ಶೇಂಗಾ ಜಮೀನುಗಳ ನಡುವೆ ರಾಹಲ್‌ ನಡಿಗೆ ಶುರುವಾದಾಗ ಗ್ರಾಮೀಣರ ಕುತೂಹಲ ಇಮ್ಮಡಿಸಿತು. ರಸ್ತೆಯ ಇಕ್ಕೆಲಗಳಲ್ಲಿ, ಮಹಡಿ ಮೇಲೆ ನಿಂತು ರಾಹುಲ್‌ ನಡಿಗೆ ವೀಕ್ಷಿಸಿದರು. ಬಿ.ಜಿ.ಕೆರಯಲ್ಲಿ ಅಲ್ಲಿನ ಮಹಿಳೆಯರು ರಾಹುಲ್‌ಗೆ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆ ನೀಡಲು ಮುಂದಾದರು. ಪ್ರತಿಮೆ ವೀಕ್ಷಿಸಿದ ರಾಹುಲ್‌ ಸ್ವೀಕರಿಸಿದೇ ಮುನ್ನಡೆದರು.

Bharat Jodo Yatra: ಪಾದಯಾತ್ರೆಯಲ್ಲಿ ಕನ್ನಡದ ಸ್ವಾಭಿಮಾನಿ ಕಿಚ್ಚು ಹೊತ್ತಿಸಿದ ರಾಹುಲ್‌ ಗಾಂಧಿ

ಪಾದಯಾತ್ರೆ ಕೊಂಡ್ಲಹಳ್ಳಿಗೆ ಬಂದಾಗ ಅಲ್ಲೂ ಕೂಡಾ ಮಹಿಳೆಯರು ರಾಹುಲ್‌ಗೆ ರೇಷ್ಮೆ ಸೀರೆ ಹಾಗೂ ಶಾಲು ನೀಡಲು ಮುಂದಾದರಾದರೂ ರಾಹುಲ್‌ ಸ್ವೀಕರಿಸಲಿಲ್ಲ. ಕೈ ಸನ್ನೆ ಮಾಡಿ ತಾವೇ ಇಟ್ಟುಕೊಳ್ಳುವಂತೆ ತಿಳಿಸಿ ಮುಂದಕ್ಕೆ ಹೋದರು. ಕೊಂಡ್ಲಹಳ್ಳಿ ಹಾಗೂ ಮೊಳಕಾಲ್ಮೂರಿನಲ್ಲಿ ನೇಕಾರ ಕುಟುಂಬಗಳು ಜಾಸ್ತಿಯಿದ್ದು ಸೊಗಸಾದ ಕೈಮಗ್ಗದ ರೇಷ್ಮೆ ಸೀರೆ ನೇಯುತ್ತಾರೆ. ಈ ಕಾರಣಕ್ಕಾಗಿಯೇ ರಾಹುಲ್‌ಗೆ ಉಡುಗೊರೆ ನೀಡಲು ರೇಷ್ಮೆ ಸೀರೆ ತಂದಿದ್ದರು.

ರಾಹುಲ್‌ಗೆ ಎಸ್‌ಪಿಜಿ ಬಿಗಿ ಭದ್ರತೆ ಇರುವುದರಿಂದ ಯಾವುದೇ ವಸ್ತು ಸ್ವೀಕರಿಸುವ ಮುನ್ನ ಎಸ್‌ಪಿಜಿಯಿಂದ ತಪಾಸಣೆ ಮಾಡಲಾಗುತ್ತದೆ. ಅವರು ತಪಾಸಣೆ ಮಾಡದ ಯಾವ ವಸ್ತುವನ್ನೂ ರಾಹುಲ್‌ ಬಳಿಗೆ ಒಯ್ಯಲು ಬಿಡುತ್ತಿಲ್ಲ. ಕೊಂಡ್ಲಹಳ್ಳಿಯಲ್ಲಿ ರಸ್ತೆ ಎರಡು ಬದಿಯಲ್ಲಿ ಮಹಿಳೆಯರು ಕೈಯಲ್ಲಿ ಆರತಿ ಹಿಡಿದು ರಾಹುಲ್‌ ನಿರೀಕ್ಷೆಯಲ್ಲಿದ್ದುದು ವಿಶೇಷವಾಗಿ ಕಂಡಿತು.

ಸೀತಾಫಲ ಹಣ್ಣಿಗೆ ಮೊಳಕಾಲ್ಮೂರು ಹೆಸರುವಾಸಿ: ಸುತ್ತುವರಿದಿರುವ ಗುಡ್ಡಗಳಲ್ಲಿ ಸೀತಾಫÜಲ ಗಿಡಗಳಿದ್ದು ಅಗ್ಗದ ದರದಲ್ಲಿ ಹೇರಳ ಹಣ್ಣು ದೊರೆಯುತ್ತವೆ. ಪಾದಯಾತ್ರಿಗಳು ಸೀತಾಫಲ ಹಣ್ಣು ತಿನ್ನುತ್ತಾ ಬಾಯಿ ಸಿಹಿ ಮಾಡಿಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಬೆಳಗ್ಗೆ 7.10 ಕ್ಕೆ ಆರಂಭವಾದ ಪಾದಯಾತ್ರೆಯ ಮೊದಲ ಸೆಷನ್‌ 11 ಗಂಟೆಗೆ ಮುಗಿಯಿತು. ರಾಹುಲ್‌ ಗಾಂಧಿ ಈ ವೇಳೆಗೆ ಬರೋಬ್ಬರಿ ಹದಿಮೂರು ಕಿ.ಮೀ ಸಾಗಿ ಬಂದಿದ್ದರು. ಕೋನಸಾಗರ ಗ್ರಾಮದ ಹೊರ ವಲಯದಲ್ಲಿ ವಿಶ್ರಾಂತಿಗೆ ಅವಕಾಶ ಮಾಡಿಕೊಡಲಾಗಿತ್ತು. ಸಂಜೆ ನಾಲ್ಕರ ನಂತರ ನಡಿಗೆ ಶುರುವಾಗಿ ರಾತ್ರಿ ಏಳರ ಸುಮಾರಿಗೆ ಮೊಳಕಾಲ್ಮೂರು ತಲುಪಿ ಬಹಿರಂಗ ಅಧಿವೇಶನದಲ್ಲಿ ಮುಗಿಯಿತು.

ಉತ್ಸಾಹದ ಹೆಜ್ಜೆ : ಪಾದಯಾತ್ರೆ ವಿಷಯದಲ್ಲಿ ಸಮಯ ಪಾಲನೆಯಲ್ಲಿ ರಾಹುಲ್‌ ಸಿದ್ದ ಹಸ್ತರು. ಯಾರನ್ನು ಕಾಯದೇ ಮುಂಜಾನೆ 6.30ಕ್ಕೆ ರೆಡಿಯಾಗುತ್ತಾರೆ. ಮಳೆ ಕಾರಣಕ್ಕೆ ತಡವಾಗುತ್ತಿದೆ. ಬಿರು ನಡಿಗೆಗೆ ಹೆಸರಾದ ರಾಹುಲ್‌ , ಸಿದ್ದರಾಮಯ್ಯ ಜೊತೆ ಗೂಡಿದಾಗ ತುಸು ನಿಧಾನರಾಗುತ್ತಾರೆ. ಬೆಳಿಗ್ಗೆ ಹನ್ನೊಂದಕ್ಕೆ ಟಿಫಿನ್‌ ಬ್ರೇಕ್‌ ಬಿಟ್ಟರೆ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಊಟ ಮಾಡುತ್ತಾರೆ. ನಂತರ ಸಂವಾದ ಇರುತ್ತೆ. ಗುರುವಾರ ಸಂವಾದ ನಡೆಯಲಿಲ್ಲ. ಸಂಜೆ ನಡೆದ ಬಹಿರಂಗ ಅಧಿವೇಶದಲ್ಲಿ ಪಕ್ಕಾ ಕನ್ನಡಪರ ಹೋರಾಟಗಾರನಂತೆ ಮಾತನಾಡಿದ ರಾಹುಲ್‌ ಗಡಿ ಪ್ರದೇಶ ಮೊಳಕಾಲ್ಮುರುವಿನಲ್ಲಿ ಕರತಾಡನ ಸ್ವೀಕರಿಸಿದರು.

ಭಾರತ್ ಜೋಡೋ ಯಾತ್ರೆಲಿ ರಾಹುಲ್ ಫುಶ್ಅಪ್ಸ್: ಸಾಧ್ಯ ಇಲ್ಲ ಅಂತ ಕೈ ಚೆಲ್ಲಿದ DKS: ವಿಡಿಯೋ ವೈರಲ್

ಇಂದು ಆಂಧ್ರ ಪ್ರವೇಶಿಸಲಿರುವ ಪಾದಯಾತ್ರೆ: ಭಾರತ್‌ ಜೋಡೋ ಪಾದಯಾತ್ರೆ ಅಕ್ಟೋಬರ್‌ 14 ರ ಶುಕ್ರವಾರ ಆಂಧ್ರ ಪ್ರದೇಶಕ್ಕೆ ಪ್ರವೇಶ ಮಾಡಲಿದೆ. ಶುಕ್ರವಾರ ಬೆಳಿಗ್ಗೆ 6.30 ಕ್ಕೆ ಮೊಳಕಾಲ್ಮುರು ತಾಲೂಕಿನ ರಾಂಪುರದಿಂದ ಪಾದಯಾತ್ರೆ ಆರಂಭವಾಗಲಿದ್ದು 11 ಗಂಟೆಗೆ ಕುಂಟು ಮಾರಮ್ಮ ದೇವಸ್ಥಾನ ಟೋಲ್‌ ಮೂಲಕ ಆಂಧ್ರಕ್ಕೆ ಹೆಜ್ಜೆ ಇಡಲಿದೆ. ನಂತರ ಏಳು ಗಂಟೆಗೆ ಓಬಳಾಪುರಂ ಗ್ರಾಮದ ಹಲಕುಂದಿ ಮಠದ ಹತ್ತಿರ ಬಹಿರಂಗ ಅಧಿವೇಶನ ನಡೆದು ರಾತ್ರಿ ಬಳ್ಳಾರಿಯಲ್ಲಿ ಪಾದಯಾತ್ರಿಗಳು ತಂಗಲಿದ್ದಾರೆ.

click me!