- ಆನಂದ್ ಶರ್ಮಾ, ಮನೀಶ್ ತಿವಾರಿ ಜೊತೆ ಚರ್ಚೆ
- ಇನ್ನೂ ಕೆಲ ಬಂಡಾಯ ನಾಯಕರ ಭೇಟಿ ಸಾಧ್ಯತೆ
- ಪಕ್ಷವನ್ನು ಬಲಿಷ್ಠಪಡಿಸಲು ಸಲಹೆ
ನವದೆಹಲಿ(ಮಾ.23): ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡ ಬಳಿಕ ಜಿ-23 ಬಂಡಾಯ ನಾಯಕರು ಪಕ್ಷದಲ್ಲಿ ನಾಯಕತ್ವ ಬದಲಾವಣೆಗೆ ಆಗ್ರಹಿಸುತ್ತಿರುವ ಬೆನ್ನಲ್ಲೇ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ತಮ್ಮ ನಿವಾಸದಲ್ಲಿ ಕೆಲ ಜಿ-23 ಬಂಡಾಯ ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಈ ವೇಳೆ ರಾಜ್ಯಸಭಾ ಉಪ ನಾಯಕ ಆನಂದ್ ಶರ್ಮಾ ಮತ್ತು ಲೋಕಸಭಾ ಸಂಸದ ಮನೀಶ್ ತಿವಾರಿ ಮತ್ತು ವಿವೇಕ್ ಟಂಖಾ ಉಪಸ್ಥಿತರಿದ್ದು, ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆಸಿದರು. ಜಿ-23 ನಾಯಕರು ಪಕ್ಷವನ್ನು ಬಲಿಷ್ಠಪಡಿಸಲು ಸಲಹೆ ನೀಡಿದರು.
ಇದಕ್ಕೂ ಮೊದಲು ಜಿ-23 ಸದಸ್ಯರಲ್ಲಿ ಒಬ್ಬರಾದ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರೊಂದಿಗೆ ಸೋನಿಯಾ ಸಭೆ ನಡೆಸಿ ಚರ್ಚಿಸಿದ್ದರು. ಮುಂದಿನ ದಿನಗಳಲ್ಲಿ ಉಳಿದ ಜಿ-23 ಭಿನ್ನಮತೀಯ ನಾಯಕರನ್ನೂ ಸೋನಿಯಾ ಗಾಂಧಿ ಭೇಟಿ ಮಾಡಲಿದ್ದಾರೆ. ಈ ಮೂಲಕ ಪಕ್ಷದಲ್ಲಿ ಭುಗಿಲೆದ್ದಿರುವ ಆಂತರಿಕ ಭಿನ್ನಾಭಿಪ್ರಾಯ ಶಮನಕ್ಕೆ ಸತತ ಪ್ರಯತ್ನಿಸುತ್ತಿದ್ದಾರೆ.
Congress vs CPI ವಿರೋಧದ ನಡುವೆ CPI(M) ಸೆಮಿನಾರ್ ಹಾಜರಾಗಲು ಶಶಿ ತರೂರ್ ಸ್ಪಷ್ಟನೆ, ಕಾಂಗ್ರೆಸ್‌ನಲ್ಲಿ ಜಟಾಪಟಿ!
ಜಿ-23 ನಾಯಕರು ತಣ್ಣಗೆ: ನಾಯಕತ್ವ ಪಟ್ಟು ಸಡಿಲ?
ಪಂಚರಾಜ್ಯ ಚುನಾವಣೆಯ ಹೀನಾಯ ಸೋಲಿನ ಬಳಿಕ ಭಿನ್ನಮತೀಯ ಕಾಂಗ್ರೆಸ್ ನಾಯಕರು (ಜಿ-23) ಪಕ್ಷದಲ್ಲಿ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಬೆನ್ನಲ್ಲೇ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಶನಿವಾರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಸಭೆಯ ಬಳಿಕ ಅವರು ತಣ್ಣಗಾದಂತಿದ್ದು, ‘ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ’ ಎಂದು ಹೇಳಿದ್ದಾರೆ.
ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಆಜಾದ್, ‘ಇತ್ತೀಚಿನ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನ ತ್ಯಜಿಸುವಂತೆ ಸೋನಿಯಾ ಗಾಂಧಿ ಅವರನ್ನು ಕೇಳಿಲ್ಲ. ಪಕ್ಷದಲ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್‌ಗೆ ಮತ್ತೊಂದು ಸಂಕಷ್ಟ, ಗುಲಾಂ ನಬಿ ಆಜಾದ್ ರಾಜಕೀಯಕ್ಕೆ ಗುಡ್‌ಬೈ?
ಇದೇ ವೇಳೆ ‘ಕಾಂಗ್ರೆಸ್ ಅಧ್ಯಕ್ಷರೊಂದಿಗೆ ನಡೆದ ಸಭೆ ಉತ್ತಮವಾಗಿತ್ತು. ಇದು ನಿಮಗೆಲ್ಲಾ ಸುದ್ದಿಯಾಗಿರಬಹುದು. ಆದರೆ ನಮಗೆ ಇದೊಂದು ಸಾಮಾನ್ಯ ಸಭೆಯಾಗಿತ್ತು. ಮುಂಬರುವ ಚುನಾವಣೆಗೆ ಕಾಂಗ್ರೆಸ್ ಎಷ್ಟುಒಗ್ಗಟ್ಟಿನಿಂದ ತಯಾರಿ ನಡೆಸಬಹುದು ಎಂಬ ಬಗ್ಗೆ ಚರ್ಚೆ ನಡೆಯಿತು’ ಎಂದು ತಿಳಿಸಿದರು. ಈ ಮೂಲಕ ಕಾಂಗ್ರೆಸ್ ನಾಯಕತ್ವದ ಬಗ್ಗೆ ಪ್ರಶ್ನೆ ಎತ್ತಿದ್ದ ಜಿ-23 ಬಂಡಾಯ ನಾಯಕರು ಮತ್ತೆ ತಣ್ಣಗಾಗಿದ್ದಾರೆ ಎಂಬ ಸುಳಿವು ನೀಡಿದ್ದಾರೆ.
ಜಿ-23 ನಾಯಕರ ಸಭೆ: ಸೋನಿಯಾ ಆಪ್ತ ತರೂರ್ ಭಾಗಿ!
ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಗಾಂಧಿ ಕುಟುಂಬ ದೂರ ಇರಬೇಕು ಎಂದು ಆಗ್ರಹಿಸುತ್ತಿರುವ ಪಕ್ಷದ ಜಿ-23 ನಾಯಕರು ಬುಧವಾರ ಮತ್ತೆ ಸಭೆ ನಡೆಸಿದ್ದಾರೆ. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ನಂತರ ಈ ಬಂಡಾಯ ಶಾಸಕರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.
ಬುಧವಾರ ಸಾಯಂಕಾಲ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರ ಮನೆಯಲ್ಲಿ ಜಿ-23 ನಾಯಕರು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಶಶಿ ತರೂರ್, ಕಪಿಲ್ ಸಿಬಲ್, ಆನಂದ ಶರ್ಮಾ, ಮನೀಶ್ ತಿವಾರಿ, ಭೂಪೇಂದ್ರ ಹೂಡಾ, ಪೃಥ್ವಿರಾಜ್ ಚೌಹಾಣ್, ಪಿ.ಜೆ.ಕುರಿಯನ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.ಗಾಂಧಿ ಕುಟುಂಬದ ವಿಷಯಕ್ಕೆ ಬಂದಾಗ ಅವರ ಪರವಾಗಿ ನಿಲ್ಲುತ್ತಿದ್ದ ಶಶಿ ತರೂರ್ ಸಹ ಈ ಸಭೆಯಲ್ಲಿ ಭಾಗವಹಿಸಿದ್ದು ಕುತೂಹಲ ಮೂಡಿಸಿದೆ. ಅಲ್ಲದೆ, ಈವರೆಗೆ ಅತ್ಯಾಪ್ತರಾಗಿದ್ದ ಮಣಿಶಂಕರ್ ಅಯ್ಯರ್ ಕೂಡ ಇದ್ದುದು ವಿಶೇಷ.