*ಸೆಪ್ಟೆಂಬರ್‌ನಲ್ಲಿ ಸಾಂಸ್ಥಿಕ ಚುನಾವಣೆ, ಅಲ್ಲಿವರೆಗೂ ಸುಮ್ಮನಿರಿ
*ನಿಮ್ಮ ವಾದಕ್ಕೆ ವಿರುದ್ಧ ವಾದವೂ ಇದೆ ಎಂದ ಕಾಂಗ್ರೆಸ್ ಅಧ್ಯಕ್ಷೆ
ನವದೆಹಲಿ (ಮಾ. 25): ಮೇಲಿಂದ ಮೇಲೆ ಸೋಲನುಭವಿಸುತ್ತಿರುವ ಕಾಂಗ್ರೆಸ್ ಪಕ್ಷದಲ್ಲಿ ಸಾಂಸ್ಥಿಕವಾಗಿ ಹಾಗೂ ನಾಯಕತ್ವದ ವಿಷಯದಲ್ಲಿ ಯಾವುದೇ ಬದಲಾವಣೆ ಮಾಡುವುದಕ್ಕೆ ಇನ್ನು ಮೂರು ತಿಂಗಳು ಕಾಯಬೇಕು. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಆಂತರಿಕ ಚುನಾವಣೆಯ ನಂತರವೇ ಬದಲಾವಣೆಯಾಗಲಿದೆ ಎಂದು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಹೇಳಿದ್ದಾರೆ.ನಾಯಕತ್ವ ಬದಲಾವಣೆಗೆ ಬಹಿರಂಗವಾಗಿ ಆಗ್ರಹಿಸುತ್ತಿರುವ ಜಿ-23 ನಾಯಕರಿಗೆ ಸೋನಿಯಾ ಈ ಸ್ಪಷ್ಟಸಂದೇಶ ನೀಡಿದ್ದಾರೆ ಎನ್ನಲಾಗಿದ್ದು, ಅದರೊಂದಿಗೆ ಪಕ್ಷದಲ್ಲಿ ಪಂಚರಾಜ್ಯಗಳ ಪರಾಭವದ ನಂತರ ಕ್ಷಿಪ್ರವಾಗಿ ಪ್ರಮುಖ ಬದಲಾವಣೆಗಳು ಆಗಲಿವೆ ಎಂಬ ನಿರೀಕ್ಷೆ ಹುಸಿಯಾಗಿದೆ.
ನನಗೂ ಆತಂಕವಿದೆ-ಸೋನಿಯಾ: ಪಂಚರಾಜ್ಯ ಮುಖಭಂಗದ ನಂತರ ಸೋನಿಯಾ ಜಿ-23 ನಾಯಕರ ಪೈಕಿ ಮೂರು ಜನರ ಎರಡನೇ ತಂಡವನ್ನು ಮಂಗಳವಾರ ಭೇಟಿಯಾಗಿದ್ದರು. ಈ ವೇಳೆ ನಾಯಕರು ಪಕ್ಷ ತನ್ನ ಬೆಂಬಲ ಕಳೆದುಕೊಳ್ಳುತ್ತಿದೆ ಎಂಬ ಆತಂಕವನ್ನು ತೋಡಿಕೊಂಡರು.
ಇದನ್ನೂ ಓದಿ: ಸೋನಿಯಾ ಗಾಂಧಿ-ಗುಲಾಂ ನಬಿ ಅಜಾದ್ ಭೇಟಿ ಅಂತ್ಯ, ನಾಯಕತ್ವದ ಬಗ್ಗೆ ಪ್ರಶ್ನೆಯಿಲ್ಲ ಎಂದ ಆಜಾದ್!
ಅವರ ಮಾತನ್ನು ತಾಳ್ಮೆಯಿಂದ ಆಲಿಸಿದ ಸೋನಿಯಾ, ಪಕ್ಷದ ಸಾಧನೆಯ ಬಗ್ಗೆ ತಮಗೂ ಕಳವಳವಿದೆ ಎಂದು ಹೇಳಿದರು ಎನ್ನಲಾಗಿದೆ. ಆದರೆ, ಯಾವುದೇ ಬದಲಾವಣೆಯಾಗಬೇಕಿದ್ದರೂ ಸೆಪ್ಟೆಂಬರ್‌ನಲ್ಲಿ ನಡೆಯುವ ಪಕ್ಷದ ಸಾಂಸ್ಥಿಕ ಚುನಾವಣೆಯವರೆಗೆ ಕಾಯಬೇಕು ಎಂದು ಹೇಳಿದರು ಎನ್ನಲಾಗಿದೆ.
ಸಾಂಸ್ಥಿಕ ಚುನಾವಣೆ ಚರ್ಚೆಗೆ ನಾಳೆ ಕಾಂಗ್ರೆಸ್ ಉಸ್ತುವಾರಿ, ಪ್ರ.ಕಾರ್ಯದರ್ಶಿಗಳ ಸಭೆ: ಪಕ್ಷದ ಸಾಂಸ್ಥಿಕ ಚುನಾವಣೆ, ಬೆಲೆ ಏರಿಕೆ ಸೇರಿದಂತೆ ಇತರೆ ವಿಷಯಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ಸಂಘಟಿಸುವ ಕುರಿತು ಚರ್ಚಿಸುವ ಸಲುವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳ ಸಭೆಯನ್ನು ಮಾ.26ರಂದು ಕರೆಯಲಾಗಿದೆ. ಈ ಸಭೆಯಲ್ಲಿ ಹಾಜರಿರುವಂತೆ ರಾಜ್ಯ ಘಟಕಗಳ ಅಧ್ಯಕ್ಷರಿಗೂ ಸೂಚಿಸಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಪಕ್ಷದ ಸಂಘಟನಾ ಪ್ರಧಾನ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ವಹಿಸಲಿದ್ದಾರೆ.
ಕಾಂಗ್ರೆಸ್ಸಲ್ಲಿ ನಾಯಕತ್ವ ಬದಲಾವಣೆ ಇಲ್ಲ: ಸತೀಶ್: ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಮಾಡಲು ಆಗಲ್ಲ. ಯಾಕಂದರೆ ಸೋನಿಯಾ ಗಾಂಧಿ ಇಲ್ಲ ಎಂದರೆ ಕಾಂಗ್ರೆಸ್ ನಡೆಯಲ್ಲ. ಸೋನಿಯಾ ಗಾಂಧಿ ಅಧ್ಯಕ್ಷ ಸ್ಥಾನ ಅಲಂಕರಿಸಬೇಕೆಂಬುದು ಬಹಳ ಜನರ ಅಭಿಪ್ರಾಯವಾಗಿದ್ದರಿಂದ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸಲಾಗುತ್ತಿದೆ ಎಂದು ಕೆಪಿಸಿಸಿ ಕಾಯಾರ್ಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಕರ್ನಾಟಕದಲ್ಲಿ ನಮ್ಮದೆಯಾದ ವೋಟ್ ಬ್ಯಾಂಕ್ ಇದೆ. ಕರ್ನಾಟಕವನ್ನು ಗೋವಾ ಹಾಗೂ ಉತ್ತರ ಪ್ರದೇಶಕ್ಕೆ ಹೋಲಿಸಲು ಆಗಲ್ಲ. ಈ ಚುನಾವಣೆಯಿಂದ ನಾವು ಪಾಠ ಕಲಿತ್ತಿದ್ದು, ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಯುವಕರ ಮನದಲ್ಲಿ ದ್ವೇಷ ತುಂಬುತ್ತಿದೆ: Facebook, ಸೋಶಿಯಲ್ ಮೀಡಿಯಾ ಬಗ್ಗೆ ಸಂಸತ್ತಿನಲ್ಲಿ ಸೋನಿಯಾ ಗುಡುಗು!
ದಂಗೆ ಮಾಡಿಸೋದೆ ಬಿಜೆಪಿ: ಈಗ ಬಿಜೆಪಿಯವರು ಹೊಸದೊಂದು ಅಪಪ್ರಚಾರ ಪ್ರಾರಂಭಿಸಿದ್ದಾರೆ ಅದುವೇ ದಿ ಕಾಶ್ಮಿರ ಫೈಲ್ಸ್ ಚಿತ್ರ. ಇದು ಬಿಜೆಪಿಯವರ ಅಜೆಂಡಾ ಆಗಿದೆ. ರಾಜ್ಯದಲ್ಲಿರುವ ಜನರಿಗೆ ನೀರು, ಉತ್ತಮ ರಸ್ತೆ, ಉದ್ಯೋಗ ನೀಡದೇ ಕೇವಲ .10 ಶಾಲು ಹಾಕಿಕೊಂಡು ಧಂಗೆ ಮಾಡೋದೆ ಬಿಜೆಪಿಯವರ ಮುಖ್ಯ ಕೆಲಸವಾಗಿದೆ ಎಂದು ಕಿಡಿಕಾರಿದರು.
ಬಿಜೆಪಿಗರಿಂದ ಅಪಪ್ರಚಾರ: ಅಪಪ್ರಚಾರಕ್ಕೆ ಬಿಜೆಪಿ ಹೆಚ್ಚಿನ ಮಹತ್ವ ನೀಡುತ್ತದೆ. ಉದಾಹರಣೆಗೆ ಶಿವಮೊಗ್ಗ ಪ್ರಕರಣವನ್ನು ಹೈಲೆಟ್ ಮಾಡಿದ್ದಾರೆ. ಉಡುಪಿಯಲ್ಲಿ ಹಾಗೂ ವಿಜಯಪುರದಲ್ಲಿ ನಮ್ಮವರು(ಕಾಂಗ್ರೆಸ್) ಕೂಡಾ ಸತ್ತಿದ್ದು, ಅದು ಬೆಳಕಿಗೆ ಬರಲಿಲ್ಲ. ಬಿಜೆಪಿಯ ಕಾರ್ಯಕರ್ತರು ಸತ್ತರೆ ಹಿಂದೂ ಅಂತಾ ಬಿಂಬಿಸಲಾಗುತ್ತೆ. ನಮ್ಮವರೂ ಸತ್ತಾಗ ಕುರುಬರು ಹಾಗೂ ದಲಿತರು ಎಂದು ಬಿಂಬಿಸಲಾಗುತ್ತದೆ ಎಂದು ದೂರಿದರು.