
ನವದೆಹಲಿ (ನ.20): ತಾನು ಇಂಗ್ಲಂಡ್ ಮೂಲದ ಹಣಕಾಸು ಏಜೆನ್ಸಿಯೊಂದಕ್ಕೆ ಸಲಹಾಗಾರನಾಗಿ ಸೇರಿರುವುದನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ದೃಢಪಡಿಸಿದ್ದಾರೆ.
ಬದಲಾಗುತ್ತಿರುವ ಭೌಗೋಳಿಕ- ರಾಜಕೀಯ ಸನ್ನಿವೇಶ ಮತ್ತು ನಿಯಮಾವಳಿಗಳ ಹಿನ್ನೆಲೆಯಲ್ಲಿ ಕಂಪನಿಯ ಕ್ಲೈಂಟ್‌ಗಳಿಗೆ ತರೂರ್, ಅಗತ್ಯ ಸಲಹೆ-ಮಾರ್ಗದರ್ಶನವನ್ನು ನೀಡಲಿದ್ದಾರೆ, ಎಂದು CTD ಅಡ್ವೈಸರ್ಸ್ ಈ ಸಂದರ್ಭದಲ್ಲಿ ಹೇಳಿದೆ.
ಕಾರ್ಪೊರೇಟ್ ಡಿಪ್ಲೊಮೆಸಿ, ಪರಿಣಾಮಕಾರಿ ಸಂಧಾನ ಮತ್ತು ತಂತ್ರಗಾರಿಕೆ, ವಾಣಿಜ್ಯ ಕ್ಷೇತ್ರದ ಇಂದಿನ ಪ್ರಬಲ ಸಾಧನಗಳು. ಬ್ರೆಕ್ಸಿಟ್ ಅನಿಶ್ಚಿತತೆ, ಭಾರತ-ಚೀನಾ ಸಂಬಂಧ, ಮುಂತಾದ ವಿಚಾರಗಳು ಸರ್ಕಾರಗಳಿಗೆ ಮಾತ್ರವಲ್ಲ, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಗ್ರಾಹಕರನ್ನೂ ಕೂಡಾ ಅತಂತ್ರತೆಗೆ ತಳ್ಳಿದೆ. ಇಂತಹ ಸನ್ನಿವೇಶದಲ್ಲಿ ಸೂಕ್ತವಾದ ಸಲಹೆಯ ಅಗತ್ಯವಿದೆ ಎಂದು ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ | ತರೂರ್ ಫೋಟೋಸ್ ವೈರಲ್: ಕಾಲೇಜು ಮಸ್ತಿ, ರೊಮ್ಯಾಂಟಿಕ್ ಲುಕ್ ರಿವೀಲ್!...
ಇಂಗ್ಲಂಡ್‌ನ ಮಾಜಿ ಸುರಕ್ಷತಾ ಸಲಹಾಗಾರ ಸರ್ ಮಾರ್ಕ್ ಲ್ಯಾಲ್‌ಗ್ರ್ಯಾಂಟ್, ಬ್ರಿಟಿಷ್ ಸೇನಾ ಗುಪ್ತಚರ ವಿಭಾಗದ ಮಾಜಿ ಮುಖ್ಯಸ್ಥ ಕ್ರಿಸ್ ನಿಕೊಲಸ್, ಪಾಲ್ಸ್ ಆಫ್ ಇಸ್ರೇಲ್ ಸಂಸ್ಥೆಯ ಗೌರಾವಾಧ್ಯಕ್ಷ ಲಾರ್ಡ್ ಸ್ಟುವರ್ಟ್ ಪೋಲಾಕ್ ಜೊತೆ ಸೇರಿ ತರೂರ್ ಕೆಲಸ ಮಾಡಲಿದ್ದಾರೆ.
ಬ್ರಿಟಿಷ್ ಬ್ಯಾಂಕರ್ ಶೊಯೆಬ್ ಬಾಜ್ವಾ ಕಳೆದ ವರ್ಷ ಸ್ಥಾಪಿಸಿರುವ ಲಂಡನ್ ಮೂಲದ CTD ಅಡ್ವೈಸರ್ಸ್ ಸಂಸ್ಥೆಯು, ಅಂತರಾಷ್ಟ್ರೀಯ ವ್ಯವಹಾರಕ್ಕೆ ಪೂರಕವಾದ ಸೇವೆಯನ್ನು ನೀಡುತ್ತಿದೆ. ಖಾಸಗಿ ಈಕ್ವಿಟಿ ಕಂಪನಿಗಳು, ಕಾರ್ಪೊರೆಟ್ ಸಂಸ್ಥೆಗಳು, ಹಣಕಾಸು ಸಂಸ್ಥೆಗಳಿಗೆ CTDಯು ಸಂದರ್ಭಾನುಸಾರ ಸೂಕ್ತವಾದ ಸಲಹೆಯನ್ನು ನೀಡುತ್ತದೆ.
ಶಶಿ ತರೂರ್ ರಾಜಕಾರಣಿಯಷ್ಟೇ ಅಲ್ಲ, ಬರಹಗಾರನಾಗಿಯೂ ಗುರುತಿಸಿಕೊಂಡಿದ್ದಾರೆ. ವಿಶ್ವಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಅನುಭವವಿರುವ ತರೂರ್, ತಿರುವನಂತಪುರಂನ್ನು ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿದ್ದಾರೆ. ಈ ಹಿಂದೆ ಕೇಂದ್ರ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ | ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಿದ ಶಶಿ ತರೂರ್!...
ಯಾರಿದು ಶೊಯೆಬ್ ಬಾಜ್ವಾ?
ಈ ಹಿಂದೆ ಡೊಯೆಚ್ ಬ್ಯಾಂಕ್ ಇಂಟೆಲಿಜೆನ್ಸ್ ವಿಭಾಗದ ಮುಖ್ಯಸ್ಥರಾಗಿದ್ದ ಶೊಯೆಬ್ ಬಾಜ್ವಾರ ತಂದೆ ಸಲೀಂ ನಾಸಿರ್ ಬಾಜ್ವಾ ಪಾಕಿಸ್ತಾನದವರು. ಬ್ರಿಟಿಷ್ ಸೆಕ್ಯೂರಿಟಿ ಸರ್ವಿಸಸ್ ನಲ್ಲಿ ಸೇವೆ ಸಲ್ಲಿಸಿದ ಬಳಿಕ ಅವರು ಪಾಕಿಸ್ತಾನಕ್ಕೆ ಮರಳಿದ್ದರು. ಕಳೆದ ಮೇಯಲ್ಲಿ ನಿಧನ ಹೊಂದಿದ್ದಾರೆ.
ಹಿತಾಸಕ್ತಿ ಸಂಘರ್ಷ?
ವಿದೇಶಿ ಕಂಪನಿಗೆ ಹಣಕಾಸು ಮತ್ತು ಆರ್ಥಿಕ ವಿಚಾರಗಳಲ್ಲಿ ಸಲಹೆ-ಮಾರ್ಗದರ್ಶನ ನೀಡುವ ಹೊಸ ಹೊಣೆಗಾರಿಕೆ ಸಂಸದ ಶಶಿ ತರೂರ್ ಮೇಲಿದೆ. ಶಶಿ ತರೂರ್ ಈ ನಡೆಯು ಹಿತಾಸಕ್ತಿ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ ಎಂಬ ಆರೋಪಗಳು ಕೇಳಿಬಂದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ