
ನವದೆಹಲಿ(ಮಾ.08): ಈ ಹಿಂದೆ ಕೆಲವು ರಾಜ್ಯಗಳಲ್ಲಿ ಸರ್ಕಾರ ರಚನೆ ಅವಕಾಶವಿದ್ದರೂ, ಉದಾಸೀನ ಧೋರಣೆಯ ಕಾರಣ ಅವಕಾಶ ಕಳೆದುಕೊಂಡ ಕಾಂಗ್ರೆಸ್, ಇದೀಗ ಪಂಚರಾಜ್ಯ ಚುನಾವಣೆಯ ವೇಳೆ ಅಂಥ ತಪ್ಪು ಮಾಡದಿರಲು ನಿರ್ಧರಿಸಿದೆ. ಈ ಕಾರಣಕ್ಕಾಗಿಯೇ ಫಲಿತಾಂಶ ಪ್ರಕಟವಾಗುವ ಮುನ್ನವೇ, ತಾನು ಹೆಚ್ಚಿನ ಸ್ಥಾನ ಗೆಲ್ಲುವ ಸಾಧ್ಯತೆ ಇರುವ ಉತ್ತರಾಖಂಡ, ಗೋವಾಕ್ಕೆ ಪಕ್ಷದ ಹಿರಿಯ ನಾಯಕರನ್ನು ರವಾನಿಸಿದೆ.
ಮಾ.10ರಂದು ಈ ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದ್ದು, ತನ್ನ ಗೆದ್ದ ಅಭ್ಯರ್ಥಿಗಳನ್ನು ತಕ್ಷಣವೇ ತನ್ನ ಆಡಳಿರುವ ರಾಜಸ್ಥಾನಕ್ಕೆ ವರ್ಗಾಯಿಸಲು ಕಾಂಗ್ರೆಸ್ ನಿರ್ಧರಿಸಿದೆ. ಈ ಮೂಲಕ ಉಭಯ ರಾಜ್ಯಗಳಲ್ಲಿ ಬಿಜೆಪಿ ಸೇರಿದಂತೆ ಇತರೆ ಯಾವುದೇ ಪಕ್ಷಗಳು ತನ್ನ ನಾಯಕರನ್ನು ಸೆಳೆಯದಂತೆ ತಂತ್ರ ರೂಪಿಸಿದೆ.
ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಮತ್ತು ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಭಾಘೇಲ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಗೋವಾ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಉತ್ತರಾಖಂಡ ಮತ್ತು ಗೋವಾದಲ್ಲಿ ಸರ್ಕಾರ ರಚಿಸುವ ಸಾಧ್ಯತೆ ಇದೆ. ಹಾಗಾಗಿ ಶಾಸಕರ ಕಳ್ಳಬೇಟೆ ತಡೆಯಲು ಕಾಂಗ್ರೆಸ್ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲು ತಯಾರಿದೆ ಎಂದು ರಾಜಸ್ಥಾನದ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಸೋಮವಾರ ಜೈಪುರ್‌ಗೆ ಭೇಟಿ ನೀಡಿ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.
ಈ ಹಿಂದೆ ಮಣಿಪುರ, ಗೋವಾದಲ್ಲಿಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೂ, ಬಿಜೆಪಿ ಕೆಲವು ಶಾಸಕರನ್ನು ತನ್ನತ್ತ ಸೆಳೆಯಲು ಯಶಸ್ವುಯಾಗಿದ್ದ ಕಾರಣ ಕಾಂಗ್ರೆಸ್ ಅಧಿಕಾರದಿಂದ ವಂಚಿತವಾಗಿತ್ತು. ಇಂತಹ ಸಮಸ್ಯೆಯನ್ನು ಮತ್ತೊಮ್ಮೆ ಎದುರಿಸಲು ತಯಾರಿಲ್ಲದ ಕಾಂಗ್ರೆಸ್ ಫಲಿತಾಂಶದ ನಂತರ ತನ್ನ ಶಾಸಕರನ್ನು ರಕ್ಷಿಸಿಕೊಳ್ಳುವ ಯೋಜನೆ ರೂಪಿಸುತ್ತಿದೆ.
ಪಂಚರಾಜ್ಯ ಸಮರದಲ್ಲಿ ಯಾರಿಗೆ ಗದ್ದುಗೆ?
ಸೋಮವಾರ ಮುಕ್ತಾಯಗೊಂಡ ಪಂಚರಾಜ್ಯ ಚುನಾವಣೆಗಳ ಫಲಿತಾಂಶ ಏನಾಗಬಹುದು ಎಂಬ ಕುತೂಹಲದ ಮಧ್ಯೆಯೇ ಪ್ರಕಟವಾಗಿರುವ ಚುನಾವಣೋತ್ತರ ಸಮೀಕ್ಷೆಗಳು ಉತ್ತರ ಪ್ರದೇಶದಲ್ಲಿ ಬಿಜೆಪಿ ದಾಖಲೆಯ 2ನೇ ಬಾರಿ ಅಧಿಕಾರಕ್ಕೆ ಬರಲಿದೆ ಎಂಬ ಸ್ಪಷ್ಟಭವಿಷ್ಯ ನುಡಿದಿವೆ. ಇದೇ ವೇಳೆ, ಪಂಜಾಬ್‌ನಲ್ಲಿ ಇದೇ ಮೊದಲ ಬಾರಿ ಕಾಂಗ್ರೆಸ್ ಹಾಗೂ ಅಕಾಲಿದಳದ ಹೊರತಾದ ಪಕ್ಷವೊಂದು ಉದಯಿಸಲಿದ್ದು, ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಜಯ ಸಾಧಿಸಿ ಅಧಿಕಾರಕ್ಕೇರಲಿದೆ, ದಿಲ್ಲಿ ಹೊರಗೆ ಮೊದಲ ಬಾರಿ ಅಧಿಕಾರಕ್ಕೆ ಬಂದು ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಲಿದೆ ಎಂದು ಹೇಳಿವೆ.
ಆದರೆ, ಗೋವಾ, ಉತ್ತರಾಖಂಡ ಹಾಗೂ ಮಣಿಪುರದಲ್ಲಿ ಸಮೀಕ್ಷೆಗಳು ಭಿನ್ನ-ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿವೆ. ಈ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ, ಎಲ್ಲ ಸಮೀಕ್ಷೆಗಳು ಏಕ ಸ್ವರದಲ್ಲಿ ‘ಬಿಜೆಪಿ ಜಯಿಸಲಿದೆ’ ಎಂದು ಹೇಳಿಲ್ಲ. ಕೆಲವು ಸಮೀಕ್ಷೆಗಳು ‘ಬಿಜೆಪಿ ಗೆಲ್ಲಲಿದೆ’ ಎಂದು ಹೇಳಿದ್ದರೆ, ಕೆಲವು ‘ಅತಂತ್ರ ವಿಧಾನಸಭೆ’ ಸುಳಿವು ನೀಡಿವೆ. ಹೀಗಾಗಿ ಈ ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ನಿಜ ಆಗುತ್ತವೆಯೇ ಎಂಬುದನ್ನು ಗುರುವಾರದವರೆಗೆ ಜನರು ಚಾತಕಪಕ್ಷಿಯಂತೆ ಕಾಯುವಂತೆ ಮಾಡಿವೆ.
ಲೋಕಸಭೆ ಚುನಾವಣೆ ದೃಷ್ಟಿಯಿಂದ ಮಹತ್ವದ್ದು:
ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ ಈ ಚುನಾವಣೆ ಬಿಜೆಪಿ ಹಾಗೂ ಇತರ ವಿಪಕ್ಷಗಳ ಪಾಲಿಗೆ ಮಹತ್ವದ್ದಾಗಿದೆ. ಹೀಗಾಗಿ ದೇಶದ ದೊಡ್ಡ ರಾಜ್ಯ ಉತ್ತರಪ್ರದೇಶದ ದಿಗ್ವಿಜಯವು ಬಿಜೆಪಿಗೆ ಹಾಗೂ ವೈಯಕ್ತಿಕವಾಗಿ ವಾರಾಣಸಿ ಸಂಸದರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರೀ ಬಲ ಕೊಡಬಹುದು ಎನ್ನಲಾಗಿದೆ.
ಪಂಜಾಬ್‌ನಲ್ಲಿ ಪರಿಸ್ಥಿತಿ ಅಷ್ಟುಆಶಾದಾಯಕವಾಗಿಲ್ಲ ಎಂದು ಬಿಜೆಪಿ ಇತ್ತೀಚೆಗೆ ಒಪ್ಪಿತ್ತು. ಆದರೆ ಅಲ್ಲಿನ ಸೋಲು ಈಗಾಗಲೇ ಹಲವು ರಾಜ್ಯಗಳನ್ನು ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಮರ್ಮಾಘಾತವಾಗಬಹುದು ಎನ್ನಲಾಗಿದೆ. ‘ದಿಲ್ಲಿ ಪಕ್ಷ’ ಎಂಬ ಹಣೆಪಟ್ಟಿಅಂಟಿಸಿಕೊಂಡ ಆಪ್‌ಗೆ ಇದು ಬಲ ತರುವ ಚುನಾವಣೆಯಾಗಲಿದೆ ಎನ್ನಲಾಗಿದೆ.
ಆದರೆ, ಬಿಜೆಪಿ ಪಾಲಿಗೆ ಆ ಪಕ್ಷ ಅಧಿಕಾರದಲ್ಲಿರುವ ಗೋವಾ, ಮಣಿಪುರ, ಉತ್ತರಾಖಂಡವೂ ಅಷ್ಟೇ ಮುಖ್ಯ. ಇಲ್ಲಿ ಕೆಲವು ಸಮೀಕ್ಷೆಗಳು ‘ಬಿಜೆಪಿ ಅಧಿಕಾರಕ್ಕೆ ಬರಲಿದೆ’ ಎಂದಿದ್ದರೂ ಕೆಲವು ಸಮೀಕ್ಷೆಗಳು ‘ಅತಂತ್ರ ವಿಧಾನಸಭೆ’ ಸೃಷ್ಟಿಯ ಸುಳುಹು ನೀಡಿವೆ. ಆ ಪೈಕಿ ಕೆಲವು ಸಮೀಕ್ಷೆಗಳು ಬಿಜೆಪಿ ದೊಡ್ಡ ಪಕ್ಷವಾಗುವ ಭವಿಷ್ಯ ನುಡಿದಿವೆ. ಕೆಲವು ಸಮೀಕ್ಷೆಗಳು ಕಾಂಗ್ರೆಸ್ ಕೂಡ ಇಲ್ಲಿ ದೊಡ್ಡ ಪಕ್ಷವಾಗಬಹುದು ಎಂದಿವೆ. ಹೀಗಾಗಿ ಇಂಥ ಸ್ಥಿತಿ ಸೃಷ್ಟಿಯಾದರೆ ಯಾರ ಬೆಂಬಲವನ್ನು ಪಡೆಯಬೇಕು ಎಂದು ಚರ್ಚಿಸಲು ‘ರೆಸಾರ್ಟ್ ರಾಜಕೀಯ’ ಈಗಿನಿಂದಲೇ ಆರಂಭಾವಾಗುವ ಸಾಧ್ಯತೆ ಹೆಚ್ಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ