
ನವದೆಹಲಿ (ಮಾ.27) ಮಧ್ಯಪ್ರಾಚ್ಯ ಯುದ್ಧ ಸಂಕಷ್ಟದ ನಡುವೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭಾ ಹಾಗೂ ಲೋಕಸಭೆಯಲ್ಲಿ ಈ ಕುರಿತು ಮಾತನಾಡಿದ್ದರು. ಇದೇ ವೇಳೆ ಲಾಕಡೌನ್ ರೀತಿ ಪರಿಸ್ಥಿತಿ ಎದುರಾಗಿದೆ ಎಂದಿದ್ದರು. ಇದರ ಬೆನ್ನಲ್ಲೇ ದೇಶದಲ್ಲಿ ಲಾಕಡೌನ್ ಮತ್ತೆ ವಕ್ಕರಿಸಲಿದೆ ಅನ್ನೋ ಆತಂಕ, ವದಂತಿ ಹಬ್ಬಿತ್ತು. ಇದೀಗ ದೇಶದಲ್ಲಿ ಮತ್ತೆ ಲಾಕ್‌ಡೌನ್ ಆಗುತ್ತೆ ಅನ್ನೋ ಸುದ್ದಿ ಸುಳ್ಳು. ಇಂತಹ ಯಾವುದೇ ವದಂತಿಗಳನ್ನು ನಂಬಬೇಡಿ ಅಂತ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಲಾಕ್‌ಡೌನ್ ಮಾಡುವಂತಹ ಯಾವುದೇ ಪರಿಸ್ಥಿತಿ ಸದ್ಯಕ್ಕೆ ದೇಶದಲ್ಲಿ ಇಲ್ಲ, ಹರಡುತ್ತಿರುವ ಸುದ್ದಿಗಳು ಆಧಾರರಹಿತ ಎಂದು ಸರ್ಕಾರ ತಿಳಿಸಿದೆ.
ದೇಶದಲ್ಲಿ ಮತ್ತೆ ಲಾಕ್‌ಡೌನ್ ಜಾರಿಯಾಗಲಿದೆ, ಅದರಲ್ಲೂ 'ಎನರ್ಜಿ ಲಾಕ್‌ಡೌನ್' ಆಗಲಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಸ್ಪಷ್ಟನೆ ನೀಡಿದೆ.
ಪಶ್ಚಿಮ ಏಷ್ಯಾ ಯುದ್ಧದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನ ಎರಡೂ ಸದನಗಳಲ್ಲಿ ಮಾತನಾಡಿದ್ದರು. 'ಯುದ್ಧ ದೀರ್ಘಕಾಲ ಮುಂದುವರಿದರೆ, ಅದರ ಪರಿಣಾಮಗಳು ಗಂಭೀರವಾಗಿರುತ್ತವೆ. ಹಿಂದಿನ ಲಾಕ್‌ಡೌನ್ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಕೆಲಸ ಮಾಡಿದಂತೆ, ಈ ಬಿಕ್ಕಟ್ಟನ್ನು ಕೂಡ ಒಟ್ಟಾಗಿ ಎದುರಿಸಬೇಕು' ಎಂದು ಅವರು ಹೇಳಿದ್ದರು.
ಪ್ರಧಾನಿಯವರ ಈ ಹೇಳಿಕೆಯನ್ನೇ ತಪ್ಪಾಗಿ ಅರ್ಥೈಸಿದ ಕೆಲವರು, ದೇಶದಲ್ಲಿ ಮತ್ತೊಂದು ಲಾಕ್‌ಡೌನ್‌ಗೆ ಸಿದ್ಧತೆ ನಡೆಯುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಲು ಶುರುಮಾಡಿದ್ದರು. ಆದರೆ, ಈ ಎಲ್ಲಾ ಊಹಾಪೋಹಗಳನ್ನು ಕೇಂದ್ರ ಪೆಟ್ರೋಲಿಯಂ ಸಚಿವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ದೇಶದಲ್ಲಿ ಯಾವುದೇ ರೀತಿಯ ಲಾಕ್‌ಡೌನ್ ಹೇರುವ ಯೋಚನೆ ಸದ್ಯಕ್ಕೆ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಪೂರೈಕೆಯನ್ನು ಸರ್ಕಾರ ನಿರಂತರವಾಗಿ ಖಚಿತಪಡಿಸುತ್ತಿದೆ. ಹಾಗಾಗಿ, ಜನರು ಆತಂಕಗೊಂಡು ವಸ್ತುಗಳನ್ನು ಖರೀದಿಸುವುದು ಅಥವಾ ವದಂತಿಗಳನ್ನು ನಂಬುವುದು ಬೇಡ. ಸದ್ಯಕ್ಕೆ ಅಂತಹ ಯಾವುದೇ ಪರಿಸ್ಥಿತಿ ದೇಶದಲ್ಲಿ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ