ಸಲಿಂಗಿಗಳ ಕಳವಳ ನಿವಾರಣೆಗಾಗಿ ಸಂಪುಟ ಕಾರ್ಯದರ್ಶಿ ಮಟ್ಟದಲ್ಲಿ ಸಮಿತಿ

By Kannadaprabha News  |  First Published May 4, 2023, 7:57 AM IST

ವಿವಾಹ ಕಾನೂನುಬದ್ಧಗೊಳಿಸುವ ತಂಟೆಗೆ ಹೋಗದೆ, ಸಲಿಂಗ ಜೋಡಿಗಳು ಎದುರಿಸುತ್ತಿರುವ ನೈಜ ಮಾನವೀಯ ಕಳವಳಗಳ ನಿವಾರಣೆಗಾಗಿ ತೆಗೆದುಕೊಳ್ಳಬೇಕಿರುವ ಆಡಳಿತಾತ್ಮಕ ಕ್ರಮಗಳ ಕುರಿತಂತೆ ಪರಿಶೀಲನೆ ನಡೆಸಲು ಸಂಪುಟ ಕಾರ್ಯದರ್ಶಿ ನೇತೃತ್ವದ ಸಮಿತಿಯೊಂದನ್ನು ರಚನೆ ಮಾಡುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.


ನವದೆಹಲಿ: ವಿವಾಹ ಕಾನೂನುಬದ್ಧಗೊಳಿಸುವ ತಂಟೆಗೆ ಹೋಗದೆ, ಸಲಿಂಗ ಜೋಡಿಗಳು ಎದುರಿಸುತ್ತಿರುವ ನೈಜ ಮಾನವೀಯ ಕಳವಳಗಳ ನಿವಾರಣೆಗಾಗಿ ತೆಗೆದುಕೊಳ್ಳಬೇಕಿರುವ ಆಡಳಿತಾತ್ಮಕ ಕ್ರಮಗಳ ಕುರಿತಂತೆ ಪರಿಶೀಲನೆ ನಡೆಸಲು ಸಂಪುಟ ಕಾರ್ಯದರ್ಶಿ ನೇತೃತ್ವದ ಸಮಿತಿಯೊಂದನ್ನು ರಚನೆ ಮಾಡುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಜಂಟಿ ಬ್ಯಾಂಕ್‌ ಖಾತೆ ತೆರೆಯುವುದು, ಭವಿಷ್ಯ ನಿಧಿಗೆ ಜೀವನ ಸಂಗಾತಿಯನ್ನು ನಾಮನಿರ್ದೇಶನಗೊಳಿಸುವುದು, ಗ್ರಾಚ್ಯುಟಿ, ಪಿಂಚಣಿ ಯೋಜನೆಗಳಂತಹ ಸಾಮಾಜಿಕ ಕಲ್ಯಾಣ ಸವಲತ್ತುಗಳನ್ನು ವಿವಾಹ ಕಾನೂನುಬದ್ಧಗೊಳಿಸುವ ಪ್ರಸ್ತಾಪವಿಲ್ಲದೆ ಸಲಿಂಗ ಜೋಡಿಗಳಿಗೆ ಮಂಜೂರು ಮಾಡಬಹುದೇ ಎಂದು ಏ.27ರಂದು ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರವನ್ನು ಕೇಳಿತ್ತು.

Tap to resize

Latest Videos

ಸಮಗ್ರ ಅಧಿಕಾರ ಬಳಸಿ ಸಲಿಂಗ ವಿವಾಹಕ್ಕೆ ಮನ್ನಣೆ ನೀಡಿ: ಸುಪ್ರೀಂಕೋರ್ಟ್‌ಗೆ ಸಲಿಂಗಿಗಳ ಪರ ವಕೀಲರ ಮನವಿ

ಇದಕ್ಕೆ ಬುಧವಾರದ ವಿಚಾರಣೆ ವೇಳೆ ಮಾಹಿತಿ ನೀಡಿರುವ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ (Tushar Mehta), ಸರ್ಕಾರದಿಂದ ಈ ಕುರಿತಂತೆ ಸೂಚನೆ ಬಂದಿದೆ. ಈ ವಿಚಾರವಾಗಿ ಒಂದಕ್ಕಿಂತ ಹೆಚ್ಚು ಸಚಿವಾಲಯಗಳ ನಡುವೆ ಸಮನ್ವಯ ಸಾಧಿಸಬೇಕಾಗಿದೆ. ಇದಕ್ಕಾಗಿ ಸಂಪುಟ ಕಾರ್ಯದರ್ಶಿಗಿಂತ ಕಡಿಮೆ ಇಲ್ಲದ ಅಧಿಕಾರಿಯ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗುತ್ತದೆ ಎಂದು ಪಂಚಸದಸ್ಯ ಸಾಂವಿಧಾನಿಕ ಪೀಠಕ್ಕೆ ಮಾಹಿತಿ ನೀಡಿದರು. ಈ ವೇಳೆ, ಅರ್ಜಿದಾರರು ತಮ್ಮ ಸಲಹೆಗಳನ್ನು ಸಲ್ಲಿಸಬಹುದು ಎಂದು ನ್ಯಾಯಪೀಠ ಹೇಳಿತು.

ಜನಾಭಿಪ್ರಾಯ ಆಧರಿಸಿ ತೀರ್ಪು ನೀಡಲ್ಲ: ಸಿಜೆಐ ಚಂದ್ರಚೂಡ್‌

ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂದು ಕೋರಿರುವ ಅರ್ಜಿಯ ವಿಚಾರಣೆ ವೇಳೆ ನಾವು ಸಂವಿಧಾನ ಏನು ಹೇಳುತ್ತದೆಯೋ ಅದನ್ನೂ ಪರಿಗಣಿಸುತ್ತೇವೆಯೇ ಹೊರತೂ, ಬಹುಜನರು ಏನು ಹೇಳುತ್ತಾರೆ ಎಂದಾಗಲೀ ಅಥವಾ ಸಣ್ಣ ಗುಂಪೊಂದು ಏನು ಹೇಳುತ್ತದೆ ಎಂದು ಪರಿಗಣಿಸುವುದಿಲ್ಲ ಎಂದು ಸುಪ್ರೀಂಕೋರ್ಟ್‌ (Supreme court) ಸ್ಪಷ್ಟಪಡಿಸಿದೆ.

ಬುಧವಾರದ ವಿಚಾರಣೆ ವೇಳೆ ವಿವಾಹಕ್ಕೆ ಮಾನ್ಯತೆ ಕೋರಿ ಅರ್ಜಿ ಸಲ್ಲಿಸಿರುವವರ ಪರ ವಾದ ಮಂಡಿಸಿದ ಸೌರಭ್‌ ಕಿರ್ಪಾಲ್‌ (Sourabh kirpal) ಮತ್ತು ಮೇನಕಾ ಗುರುಸ್ವಾಮಿ (Menaka Guruswami), ‘ನಾವು ಹಲವು ಕಾರ್ಯಕ್ರಮಗಳಲ್ಲಿ, ವಿಚಾರಗೋಷ್ಠಿಗಳಲ್ಲಿ ಹಲವು ಸಲಿಂಗಿಗಳನ್ನು ಭೇಟಿ ಮಾಡಿ ಮಾತನಾಡಿದ್ದೇವೆ. ಅದರಲ್ಲಿ ಶೇ.99ರಷ್ಟು ಮಂದಿ ಮದುವೆಯಾಗಲು ಬಯಸಿದ್ದಾರೆ. ನಾವು ಅನುಭವಿಸಿದ್ದನ್ನು ಇವರೂ ಅನುಭವಿಸುವುದು ಬೇಡ ಎಂದು ಪೀಠದ ಎದುರು ಹೇಳಿದರು.

ಧರ್ಮಗಳ ವಿವಾಹ ಕಾಯ್ದೆ ಅನ್ವಯ ಸಲಿಂಗ ವಿವಾಹ ವಿಚಾರಣೆ ನಡೆಸಲ್ಲ: ಸುಪ್ರೀಂ

ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ( D.Y. Chandrachud), ‘ಈ ರೀತಿಯ ವಾದ ಮಂಡನೆಯಲ್ಲಿ ಒಂದು ಸಮಸ್ಯೆಯಿದೆ. ಈ ರೀತಿಯ ವಾದ ನಡೆಸಲು ಕಾರಣವಾಗಿರುವ ಭಾವನೆಯೂ ನಮಗೆ ಅರ್ಥವಾಗುತ್ತದೆ. ಆದರೆ ಸಾಂವಿಧಾನಿಕ ಮಟ್ಟದಲ್ಲಿ ಇದು ಪ್ರಮುಖ ಸಮಸ್ಯೆಯಾಗಲಿದೆ. ಹಾಗಾಗಿ ನಾವು ಜನಪ್ರಿಯ ನೀತಿಗಳನ್ನು ಅನುಸರಿಸಲು ಆಗದು. ಸಂವಿಧಾನ ಏನು ಹೇಳುತ್ತದೋ ಅದನ್ನು ಮಾಡಬೇಕು. ಇದರೊಳಗೆ ನಮ್ಮನ್ನು ಎಳೆಯಬೇಡಿ’ ಎಂದು ಹೇಳಿದರು.

click me!